DSC 8237

ತುಮಕೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ…!

DISTRICT NEWS ತುಮಕೂರು

ಆದ್ಯತೆಯ ಮೇರೆಗೆ ತ್ವರಿತ ಗತಿಯಲ್ಲಿ ಮಂಜೂರಾತಿ ಪತ್ರ ವಿತರಿಸಿ : ಜಿಲ್ಲಾಧಿಕಾರಿ

ತುಮಕೂರು(ಕ.ವಾ)ಜು.16: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಸಂಪೂರ್ಣವಾಗಿ ಜನರ ಕಾರ್ಯಕ್ರಮ. ಸರ್ಕಾರದ ಒಂದು ಯೋಜನೆ ಯಶಸ್ವಿಯಾಗುವುದು ಸರ್ಕಾರ ಮತ್ತು ಜನರ ಒಗ್ಗೂಡುವಿಕೆಯೊಂದಿಗೆ ಮಾತ್ರ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ತುಮಕೂರು ತಾಲ್ಲೂಕು ದೇವಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಂತಿಹಳ್ಳಿ ಗ್ರಾಮದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಮನವಿಗಳಿಗೆ ಸ್ಪಂದಿಸಿ ನೊಂದವರಿಗೆ ಅಭಯ ನೀಡಿದರು.
ನಿವೇಶನ ರಹಿತ, ವಸತಿರಹಿತ ಅರ್ಹ ಫಲಾನುಭವಿಗಳಿಗೆ 15 ದಿನದೊಳಗೆ ಆದ್ಯತೆಯ ಮೇಲೆ ನಿವೇಶನ, ವಸತಿ ಮಂಜೂರಾತಿ ಪತ್ರ ವಿತರಿಸಬೇಕು ಎಂದು ದೇವಲಾಪುರ ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು.
ದೇವಲಾಪುರ ಗ್ರಾಮದಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ 3 ತಿಂಗಳಿಂದ ಕೆಟ್ಟು ನಿಂತಿರುವ ಬಗ್ಗೆ ಗ್ರಾಮಸ್ಥರೊಬ್ಬರು ದೂರಿದಾಗ ಸ್ಪಂದಿಸಿದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣಮೂರ್ತಿಯವರು ಎಇಇ, ಪಿಡಿಓ ಅವರೊಂದಿಗೆ ಮಾತನಾಡಿ, ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಧನಿಗೂಡಿಸಿದ ಜಿಲ್ಲಾಧಿಕಾರಿಗಳು ನೀರಿನ ಗುಣಮಟ್ಟವನ್ನು ಪರಿಶೀಲಿಸುವಂತೆ ಸೂಚಿಸಿದರು.
ದೇವಲಾಪುರ ಗ್ರಾಮದ ವಸಂತ ಎಂಬ ಮಹಿಳೆ ಮನೆಯಾಗಲೀ, ಹೊಲವಿಲ್ಲದೇ ಕೂಲಿ ಮಾಡಿ ಬದುಕುತ್ತಿದ್ದವೆ. ದಯವಿಟ್ಟು ಮನೆ ಕೊಡಿ ಎಂದು ಮನವಿ ಮಾಡಿದಾಗ ಸ್ಪಂದಿಸಿದ ಉಪವಿಭಾಗಾಧಿಕಾರಿ ವಿ. ಅಜಯ್ ಅವರು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಆಶ್ರಯ ಯೋಜನೆಯಡಿ ಮನೆ ಕಲ್ಪಿಸಿಕೊಡುವುದಾಗಿ ಹೇಳಿದರು.
ಬಿಟ್ಟನಕುರಿಕೆ ಗ್ರಾಮದ ಸರ್ವೆನಂಬರ್ 28 ರಲ್ಲಿ 40ಕ್ಕೂ ಹೆಚ್ಚು ದಲಿತ ಕುಟುಂಬಗಳು ಮೂವತ್ತಕ್ಕಿಂತ ಹೆಚ್ಚು ವರ್ಷಗಳಿಂದ ವಾಸಿಸುತ್ತಿದ್ದಾರೆ. ಆ ಕುಟುಂಬಗಳು ಅಲ್ಲಿಯೇ ಇರಲು ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

DSC 8253


ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶದನ್ವಯ ಕೆರೆ-ಗೋಕಟ್ಟೆಗಳಲ್ಲಿ ಮನೆಗಳನ್ನು ನಿರ್ಮಿಸುವುದಕ್ಕೆ ಅವಕಾಶವಿರುವುದಿಲ್ಲ ಎಂದ ಅವರು, ಈ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಸ್ಥಳಾವಕಾಶ ಇರುವ ಕಡೆ ನಿವೇಶನಗಳನ್ನು ಮಾಡಿ ಅನುದಾನವನ್ನು ಒದಗಿಸಲಾಗುವುದು.ಅಲ್ಲಿಯವರೆಗೆ ಜನರಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ಧೈರ್ಯ ನೀಡಿದರು.
ಬಿಟ್ಟನಕುರಿಕೆ ಗ್ರಾಮದ ದಿಲೀಪ್ ಎಂಬುವರು ಸಾಗುವಳಿ ಚೀಟಿ ಇದ್ದರೂ ಖಾತೆ ವಿಳಂಬವಾಗುತ್ತಿದೆ ಎಂದು ದೂರಿದಾಗ ಸಮಸ್ಯೆಯನ್ನು ಬಗೆಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಬಿಟ್ಟನಕುರಿಕೆ ಗ್ರಾಮದಲ್ಲಿ ಶಾಲೆಯ ಮುಂಭಾಗ ಕೊಳಚೆ ತುಂಬಿಕೊಂಡಿದ್ದು ದುರ್ನಾತ ಬರುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದಾಗ ಪಿಡಿಓ ಅವರಿಗೆ ಗಮನಹರಿಸುವಂತೆ ಸೂಚಿಸಿದರು.
ವಿದ್ಯಾಭ್ಯಾಸಕ್ಕಾಗಿ ದೂರದ ಊರುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಇಲ್ಲದೇ ನಡೆದುಕೊಂಡು ಹೋಗುವಂತಹ ಪರಿಸ್ಥಿತಿಯಿದೆ ಕೂಡಲೇ ಕೆಎಸ್‍ಆರ್‍ಟಿಸಿ ಬಸ್ ಬಿಡಿಸುವಂತೆ ನಾಯಕರ ಪಾಳ್ಯದ ಗ್ರಾಮಸ್ಥರೊಬ್ಬರು ಮನವಿ ಮಾಡಿದರು.
ಗ್ರಾಮಕ್ಕೆ ರಸ್ತೆ, ಊರಿಗೆ ಸಕಾಲಕ್ಕೆ ಬಸ್, ಹೊಲಕ್ಕೆ ಹೋಗಲು ದಾರಿ ಮಾಡಿಸಿಕೊಡುವುದು, ಸೇರಿದಂತೆ ಅನೇಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ಹೇಳಿಕೊಂಡಾಗ ಸಮಾಧಾನದಿಂದ ಮನವಿ ಆಲಿಸಿ ಪರಿಹಾರದ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ತಂಡ ತಮ್ಮ ಗ್ರಾಮಕ್ಕೆ ಆಗಮಿಸಿ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರಗಳನ್ನು ಕಂಡುಕೊಳ್ಳುವಂತಹ ಮತ್ತು ಸರ್ಕಾರದ ಮಟ್ಟದಲ್ಲಿ ಆಗುವಂತಹ ಕೆಲಸಗಳನ್ನು ಸರ್ಕಾರದ ಗಮನಕ್ಕೆ ತರುವಂತಹ ವಿನೂತನ ಕಾರ್ಯಕ್ರಮವಾಗಿದೆ ಎಂದರು.
ಗ್ರಾಮದ ಜನರಿಗೆ ಬೇಕಾದ ಕಂದಾಯ ದಾಖಲೆಗಳನ್ನು ನೀಡುವುದು, ಸ್ಮಶಾನ ಭೂಮಿ ಒದಗಿಸುವುದು, ವಿವಿಧ ಮಶಾಸನಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುವುದಕ್ಕೆ ಈ ಕಾರ್ಯಕ್ರಮ ಪೂರಕ ವೇದಿಕೆಯಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಬಂದಾಗ ಹಳ್ಳಿಯ ಜನರು ಸ್ವಾಗತಿಸುವ ಕ್ರಮ ಶ್ಲಾಘನೀಯ ಇದರಿಂದ ನಾಡು, ನುಡಿ, ಸಂಸ್ಕøತಿಯ ಬಗ್ಗೆ ಗ್ರಾಮದ ಮಕ್ಕಳಿಗೆ ತಿಳಿಸುವಂತಹ ಕೆಲಸಕ್ಕೆ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಆಶಯವಾಗಿದೆ ಎಂದರು.

DSC 8162


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗ್ರಾಮದ ಗರ್ಭಿಣಿಯರಿಗೆ ಸೀಮಂತ ಕಾರ್ಯವನ್ನು ನಡೆಸಿಕೊಟ್ಟರು. ಮಹಿಳಾ ಅಧಿಕಾರಿಗಳು ಗರ್ಭಿಣಿಯರಿಗೆ ಸೀರೆ, ಅರಶಿಣ, ಕುಂಕುಮ ನೀಡಿ ಗೌರವಿಸಿದರು. ಜಿಲ್ಲಾಧಿಕಾರಿಗಳು ಮಗುವೊಂದಕ್ಕೆ ಅನ್ನಪ್ರಾಶನ ಮಾಡಿದರು.
ರಾಷ್ಟ್ರೀಯ ಅಂಧತ್ವ ನಿವಾರಣ ಕಾರ್ಯಕ್ರಮದಡಿ ಆರೋಗ್ಯ ಇಲಾಖೆಯಿಂದ ಕಣ್ಣು ಪರೀಕ್ಷೆ ನಡೆಸಿ ಕನ್ನಡಕಗಳನ್ನು ವಿತರಿಸಲಾಯಿತು. ಅರಣ್ಯ ಇಲಾಖೆಯಿಂದ ಗಿಡಗಳನ್ನು ನೀಡಲಾಯಿತು.
ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ 9 ಫಲಾನುಭವಿಗಳಿಗೆ ಕಾರ್ಯದೇಶ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷ ಸಂಜೀವಯ್ಯ, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಇಲಾಖೆ ಉಪನಿರ್ದೇಶಕ ಬಾಲಕೃಷ್ಣ, ಕೃಷಿ ಜಂಟಿ ನಿರ್ದೇಶಕಿ ರಾಜ ಸುಲೋಚನ, ತೋಟಗಾರಿಕಾ ಉಪನಿರ್ದೇಶಕ ರಘು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಜಿಲ್ಲಾ ಕಾರ್ಮಿಕಾಧಿಕಾರಿ ರಮೇಶ್,ಡಿಡಿಎಲ್‍ಆರ್ ಸುಜಯ್ ಕುಮಾರ್, ತಹಶೀಲ್ದಾರ್ ಮೋಹನ್ ಕುಮಾರ್, ಭೂಮಿ ಕೇಂದ್ರದ ಅಧಿಕಾರಿ ನರಸಿಂಹರಾಜು, ಎಪಿಎಂಸಿ ನಿರ್ದೇಶಕ ಗಂಗಾಧರಪ್ಪ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಜರಿದ್ದರು.