ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾ ಕುಂಭಮೇಳ ಆಚರಣೆ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ
ಮಂಡ್ಯ,ಅಕ್ಟೋಬರ್ 16: ಮಹಾ ಕುಂಭಮೇಳ ಪ್ರತಿ 12 ವರ್ಷಗಳಿಗೊಮ್ಮೆ ನಿಗದಿತವಾಗಿ ನಡೆಯಲು ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಘೋಷಣೆ ಮಾಡಿದರು.
ಅವರು ಇಂದು ಶ್ರೀ ಮಲೆಮಹಾದೇಶ್ವರ ಕುಂಭಮೇಲದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾವೇರಿ,ಲಕ್ಷ್ಮಣತೀರ್ಥ,ಹೇಮಾವತಿ ಮೂರು ಪವಿತ್ರ ನದಿಗಳ ಸಂಗಮವಾದ ಪುಣ್ಯಸ್ಥಳ ತ್ರಿವೇಣಿ ಸಂಗಮದಲ್ಲಿ ಈ ವರ್ಷ ಮಹಾ ಕುಂಭಮೇಳವನ್ನು ಪರಮ ಪೂಜ್ಯರ ನೇತೃತ್ವದಲ್ಲಿ ಪ್ರಾರಂಭಿಸಿ
ಬಹಳ ಉತ್ತಮವಾಗಿ ನಡೆದಿದೆ ಎಂದರು.
ವೈಶಿಷ್ಟ್ಯ ಪೂರ್ಣ ದೇಶ ಭಾರತ. ಭಕ್ತಿಯ ಚಳವಳಿ ಬೇರೆ ಯಾವ ದೇಶದಲ್ಲಿಯೂ ಆಗಿಲ್ಲ. ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಮ್ ಒಂದೆಡೆ ಇದ್ದರೆ, ನಮ್ಮ ಪುರಾಣ, ವೇದಗಳು ಬುದ್ಧ, ಬಸವ, ಹಲವಾರು ಜನ ವಿಚಾರವಂತರು ಇರುವ ದೇಶ ನಮ್ಮದು. ಇದು ನಮ್ಮ ವೈಶಿಷ್ಟ್ಯ. ಬೇರೆಡೆ ಸಂಬಂಧ, ಶ್ರೀಮಂತಿಕೆ ಸಿಗುವುದಿಲ್ಲ. ಸಾಮಾಜಿಕ ಸಂಬಂಧಗಳನ್ನು ವೃದ್ದಿ ಮಾಡಿರುವ ಮೌಲ್ಯಗಳನ್ನು ಕೊಟ್ಟಿರುವ ಮಹಾನ್ ಬದುಕು ಭಾರತದಲ್ಲಿದೆ. ಇದನ್ನು ಉಳಿಸಿ ಕೊಳ್ಳುವುದು ಮುಖ್ಯ. ಪರಕೀಯರು ಇದರ ಮೇಲೆ ದಾಳಿ ಮಾಡಿದ್ದು ಈ ಸಂಸ್ಕಾರ, ಸಂಸ್ಕೃತಿ, ಧರ್ಮ, ಪರಂಪರೆಯನ್ನು ಒಡೆದು ನಾಶ ಮಾಡಬೇಕೆಂದು ದಾಳಿಗಳಾಗಿವೆ. ಈ ದಾಳಿಯನ್ನು ಸಂಪೂರ್ಣವಾಗಿ ಎದುರಿಸಿ ಮತ್ತೆ ಭಾರತಾಂಬೆ ಸುಸಂಸ್ಕೃತ ಜನರನ್ನು ಎತ್ತಿ ಹಿಡಿದಿದ್ದಾಳೆ. ಮೊಘಲರು, ಬ್ರಿಟಿಷ್, ಫ್ರೆಂಚ್, ಪೋರ್ಚುಗೀಸರು ಇಲ್ಲಿ ಕೊನೆಯಾದರು. ಶ್ರೇಷ್ಠವಾದ ಮಣ್ಣು ಭಾರತದ್ದು. ಇದೆ ನಮ್ಮ ಅಸ್ಮಿತೆ. ಭಾರತೀಯರನ್ನು ಗುರುತಿಸುವುದೇ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದಿಂದ. ಇದನ್ನು ಉಳಿಸಬೇಕು. ನಮ್ಮ ಧರ್ಮದಲ್ಲಿ ಸಹಿಷ್ಣುತೆ, ವೈಚಾರಿಕತೆ, ಎಲ್ಲರೂ ನಮ್ಮವರೇ, ಮನುಕುಲ ಒಂದು , ಬೇಧಭಾವವಿಲ್ಲದ ಜೀವನ ಧರ್ಮ ನಮ್ಮ ಹಿಂದೂ ಧರ್ಮದಲ್ಲಿದೆ. ಇಡೀ ವಿಶ್ವದ ಸುಖ ಶಾಂತಿ ನೆಮ್ಮದಿ, ಮಾನವೀಯ ಮೌಲ್ಯಗಳು ಉಳಿಯಬೇಕು. ಇವುಗಳ ಪಾಲನೆ, ಪುಣ್ಯ ಪ್ರಾಪ್ತಿ ಎಂಬ ಭಾವ ಒಳಗಿನ ಪ್ರವಿತ್ರತೆ ಕಾಪಾಡುವ ಪ್ರಕ್ರಿಯೆ ಇದು ಎಂದರು.
ನದಿಗಳ ಚಲನಶೀಲತೆ ಬದುಕಿಗೂ ಅಗತ್ಯ
ಪುಣ್ಯ ಪಡೆದವರು ಮಾತ್ರ ಕುಂಭಮೇಳಕ್ಕೆ ಬರುತ್ತಾರೆ. ಪಾಪ ಕಳೆದು ಪುಣ್ಯ ಧರಿಸುವ ಮಹಾ ಸಂಸ್ಕಾರಯುತ ಧರ್ಮದ ವಿಧಿವಿಧಾನ. ಕುಂಭಮೇಳಗಳು ಭಾರತದಾದ್ಯಂತ ನದಿಗಳ ಸಂಗಮವಾಗುವೆಡೆಗಳಲ್ಲಿ ಪವಿತ್ರ ಸ್ಥಳವೆಂದು ನಂಬಲಾಗಿದೆ. ನಮ್ಮ ಸಂಸ್ಕೃತಿಯಲ್ಲಿ ನದಿಗೆ ಬಹಳ ಪ್ರಾಮುಖ್ಯತೆ ಇದೆ. ಹತ್ತಾರು ಕೆರೆ ಕೊಳ್ಳಗಳಿಂದ ನೀರು ಒಂದು ಎಡೆ ಸೇರಿ ಮುಂದೆ ಸಾಗುತ್ತದೆ. ಚಲನಶಕ್ತಿ ಯಿಂದ ಮುಂದೆ ಸಾಗಿ ಸಮುದ್ರ ಸೇರುತ್ತದೆ. ನಮ್ಮ ಬದುಕು ಕೂಡ ನದಿಯಂತೆ. ಅನುಭವಗಳ, ವಿಚಾರಗಳ ಸಂಗಮ ನಮ್ಮ ಅಂತರಾಳ. ಅದನ್ನು ನಾವು ಅರ್ಥೈಸಿಕೊಂಡು ಮುಂದೆ ಸಾಗಬೇಕು.ನಿಂತ ನೀರಿನಿಂದ ಸಾಧನೆಯಾಗುವುದಿಲ್ಲ. ಚಲನಾಶಕ್ತಿಯಿಂದ ಪವಿತ್ರ ನದಿಗೆ ಸಾಧನೆಯಾಗುತ್ತದೆ. ರೈತರಿಗೆ, ಜನರಿಗೆ ಕುಡಿಯುವ ನೀರು ದೊರೆಯುತ್ತದೆ. ಆಧ್ಯಾತ್ಮಿಕ ವಾಗಿ ನಾವು ಮುಂದೆ ಸಾಗಬೇಕು. ಆಂತರಿಕ ಜಾಗೃತಿ, ಆತ್ಮಸಾಕ್ಷಿ ಇದ್ದಾಗ ಆತ್ಮಗೌರವ ಪ್ರಾಪ್ತಿ ಯಾಗುತ್ತದೆ.
ಆತ್ಮಗೌರವದಿಂದ ಆತ್ಮಶಾಂತಿ, ಆತ್ಮಶಾಂತಿಯಿಂದ ಸ್ಥಿತಪ್ರಜ್ಞತೆ ದೊರೆಯುತ್ತದೆ. ಸುಖ ದುಃಖಗಳನ್ನು ಮೀರಿ ವಿಚಾಲಿತರಾಗದೆ ಸಧೃಢ ಸಂಕಲ್ಪ ಮೂಡುತ್ತದೆ ಎಂದರು.
ಹಿಂದೂ ಸಮಾಜಕ್ಕೆ ಸ್ಪಷ್ಟತೆ ನೀಡಿದ ಶಂಕರಾಚಾರ್ಯರು
ಅಂತಿಮವಾಗಿ ನದಿ ಸಮುದ್ರ ಸೇರುವಂತೆ, ಆಧ್ಯಾತ್ಮಿಕವಾಗಿ ಸೃಷ್ಟಿ ಕರ್ತನಲ್ಲಿ ಲೀನವಾಗಬೇಕು. ಗುರು ಮತ್ತು ಗುರಿ ಇರಬೇಕು. ಭಕ್ತಿ ಎಂದರೆ ಉತ್ಕೃಷ್ಟ , ಕರಾರರಹಿತ ಪ್ರೀತಿ. ಇದು ಗುರುವಿನಲ್ಲಿ ಇಡಬೇಕು. ಭಕ್ತಿ ಯಲ್ಲಿ ಲೀನವಾಗಿ ಕರಗಬೇಕು. ಬದುಕಿನ ತ್ರಿವೇಣಿ ಸಂಗಮದಲ್ಲಿ ಮುಕ್ತಿ ಸಿಗುತ್ತದೆ. ಶಂಕರಾಚಾರ್ಯರು ಇದನ್ನು ಅರಿತು ವೈಚಾರಿಕ ಕ್ರಾಂತಿ ಮಾಡಿದರು. ಹಿಂದೂ ಸಮಾಜಕ್ಕೆ ಸ್ಪಷ್ಟತೆ, ವೈಚಾರಿಕತೆ, ನಿಖರತೆ ಕೊಟ್ಟವರು ಅವರು. ಆಧ್ಯಾತ್ಮಿಕ ಒಳಾರ್ಥ ನೀಡಿದ್ದಾರೆ. ಅವರು ಇಲ್ಲದಿದ್ದರೆ, ಹಿಂದೂ ಧರ್ಮದ ಪುನಶ್ಚೇತನ ಮಾಡಿರದಿದ್ದರೆ ದೇಶದಲ್ಲಿ ಹಿಂದೂ ಧರ್ಮಕ್ಕೆ ದೊಡ್ಡ ಸವಾಲು ಎದುರಾಗುತ್ತಿತ್ತು. ಶಂಕರಾಚಾರ್ಯರು ಪೀಠಗಳನ್ನು ಸ್ಥಾಪಿಸುವ ಮೂಲಕ ಧರ್ಮದ ಸಂಸ್ಕೃತಿ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠ ಶ್ರೀ ಶಿವಾನಂದಪುರಿ ಸ್ವಾಮೀಜಿ, ಚಂದ್ರವನ ಆಶ್ರಮ ಶ್ರೀ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಶ್ರೀ ಮಲೆ ಮಹದೇಶ್ವರ ಬೆಟ್ಟ ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಪೀಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು,ಪೇಜಾವರ ಮಠ ವಿಶ್ವ ಪ್ರಸನ್ನ ತೀರ್ಥ ಪಾದಂಗಳು, ಚಿತ್ರದುರ್ಗ ಮಾದರ ಚೆನ್ನಯ್ಯ ಗುರುಪೀಠದ ಶೀ ಡಾ.ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ, ರೇಷ್ಮೆ,ಯುವಸಬಲೀಕರಣ ಹಾಗೂ ಕ್ರೀಡೆ ಸಚಿವರಾದ ಡಾ.ನಾರಾಯಣಗೌಡ, ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೆ.ಗೋಪಾಲಯ್ಯ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವರಾದ ಬಿ.ಸಿ ನಾಗೇಶ್, ನಗರಾಭಿವೃದ್ದಿ ಸಚಿವರಾದ ಬಿ.ಎ ಬಸವರಾಜ,ಸಂಸದೆ ಸುಮಲತಾ ಅಂಬರೀಶ್, ಶಾಸಕರುಗಳಾದ ಸಿ.ಟಿ ರವಿ, ಸಿ.ಎಸ್ ನಿರಂಜನ್ ಕುಮಾರ್, ಬಿ. ಹರ್ಷ ವರ್ಧನ್,
ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ. ಸಿಇಒ ಶಾಂತ ಎಲ್. ಹುಲ್ಮನಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಪ್ರಾದೇಶಿಕ ಆಯುಕ್ತರಾದ ಡಾ.ಜಿ.ಸಿ.ಪ್ರಕಾಶ್, ಉಪವಿಭಾಗಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ತಹಶೀಲ್ದಾರ್ ರೂಪ ಸೇರಿದಂತೆ ಇತರರು ಉಪಸ್ಥಿತರಿದ್ದರು.