ಸರಕಾರದ ವಿರುದ್ಧ ಹೋರಾಟಕ್ಕೆ ಕೋರ್ ಕಮಿಟಿ ನಿರ್ಧಾರ ವರ್ಗಾವಣೆ ದಂಧೆ ಸಂಬಂಧವಾಗಿ ಕಾಂಗ್ರೆಸ್ ಶಾಸಕರು ಮತ್ತು ಸಚಿವರ ನಡುವೆ ಜಗಳ: ಸಿ.ಟಿ.ರವಿ
ಬೆಂಗಳೂರು: ಅನಿಯಮಿತ ವಿದ್ಯುತ್ ಕಡಿತ ರಾಜ್ಯ ಸರಕಾರದ ಕೊಡುಗೆಯಾಗಿದೆ. ವರ್ಗಾವಣೆ ದಂಧೆಯಲ್ಲಿ ಕಾಂಗ್ರೆಸ್ ಸರಕಾರ ತೊಡಗಿದೆ. ಹುದ್ದೆಗಳನ್ನು ಹರಾಜಿಗೆ ಹಾಕಲಾಗುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಸಿ.ಟಿ.ರವಿ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವರ್ಗಾವಣೆ ದಂಧೆ ಸಂಬಂಧವಾಗಿ ಶಾಸಕರು ಮತ್ತು ಸಚಿವರ ನಡುವೆ ಜಗಳ ನಡೆಯುತ್ತಿದೆ. ಶಾಸಕರು ಮಂತ್ರಿಗಳ ವಿರುದ್ಧ ತಿರುಗಿ ಬಿದ್ದಿರುವುದಕ್ಕೆ ವರ್ಗಾವಣೆ ದಂಧೆಯೂ ಪ್ರಮುಖ ಕಾರಣ ಎಂದು ಅವರು ವಿಶ್ಲೇಷಿಸಿದರು.
ಭ್ರಷ್ಟ್ಟಾಚಾರದ ವಿರುದ್ಧ ಮಾತನಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ದಿನದಿಂದಲೇ ಭ್ರಷ್ಟ್ಟಾಚಾರದಲ್ಲಿ ತೊಡಗಿದೆ. ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ 11 ಸಾವಿರ ಕೋಟಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಇದಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತನಾಡುತ್ತಿದ್ದ ಮತ್ತು ಪ್ರಶ್ನಿಸುತ್ತಿದ್ದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಸೋಷಿಯಲ್ ಮೀಡಿಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವವರ ಮೇಲೆ ಮೊಕದ್ದಮೆ ಹೂಡುತ್ತಿದ್ದಾರೆ. ಈ ಮೂಲಕ ಯಾರು ತನ್ನನ್ನು ಪ್ರಶ್ನಿಸುತ್ತಾರೋ ಅವರ ವಿರುದ್ಧ ಕೇಸು ದಾಖಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇದೆಲ್ಲದರ ವಿರುದ್ಧ ಇದೇ 28ರಂದು ಸೋಮವಾರ ಬೆಂಗಳೂರಿನಲ್ಲಿ ಒಂದು ಹೋರಾಟ ಹಮ್ಮಿಕೊಂಡಿದ್ದೇವೆ. ಇದಲ್ಲದೆ ಸೆಪ್ಟೆಂಬರ್ 8ರವರೆಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ವಿಚಾರವನ್ನೂ ಮುಂದಿಟ್ಟು ಹೋರಾಟ ನಡೆಸಲಾಗುವುದು ಎಂದು ಅವರು ಪ್ರಕಟಿಸಿದರು.
ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯಬೇಕಿಲ್ಲ. ಈ ಸರಕಾರದ ಕಾರ್ಯವೈಖರಿಗೆ ನಾವೇನೂ ಕನ್ನಡಿ ಹಿಡಿಯಬೇಕಾಗಿಲ್ಲ. ಬಿ.ಆರ್.ಪಾಟೀಲ, ಬಸವರಾಜ ರಾಯರೆಡ್ಡಿಯವರು ಕನ್ನಡ ಹಿಡಿಯುತ್ತಿದ್ದಾರೆ ಎಂದು ಅವರು ನುಡಿದರು. ಹಿರಿಯ ಸಚಿವರು ತಮ್ಮ ಅಸಹನೆಯನ್ನು ಪತ್ರ ಮೂಲಕ ಹೊರಹಾಕುತ್ತಿದ್ದಾರೆ. ಇದೆಲ್ಲವನ್ನೂ ಬಿಜೆಪಿ ಹೋರಾಟದ ವೇಳೆ ಜನರ ಮುಂದಿಡುತ್ತೇವೆ ಎಂದು ಅವರು ತಿಳಿಸಿದರು.
ಇಂದಿನ ಕೋರ್ ಕಮಿಟಿ ಸಭೆಯು ಎರಡೂವರೆ ಗಂಟೆಗಳ ಕಾಲ ವಿವಿಧ ವಿಚಾರಗಳ ಕುರಿತು ಚರ್ಚಿಸಿದೆ. ಪ್ರಚಲಿತ ರಾಜಕಾರಣ, ಸಂಘಟನಾತ್ಮಕ ವಿಚಾರಗಳೂ ಒಳಗೊಂಡಂತೆ ಮುಂಬರುವ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗಳು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ, ಲೋಕಸಭಾ ಚುನಾವಣೆ ಸೇರಿ ವಿವಿಧ ವಿಷಯಗಳ ವಿಸ್ತøತವಾದ ಚರ್ಚೆ ನಡೆದಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಅವರಲ್ಲದೆ ಕೋರ್ ಕಮಿಟಿ ಸದಸ್ಯರು ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.
40 ಶೇಕಡಾ ಆರೋಪದ ಕುರಿತು ತನಿಖೆ ನಡೆಸಲು ಹಿಂದಿನ ನ್ಯಾಯಾಧೀಶ ಮತ್ತು ಈಗ ವಕೀಲರಾಗಿರುವ ನಾಗಮೋಹನ್‍ದಾಸ್ ಅವರ ಸಮಿತಿಯನ್ನು ನೇಮಿಸಲಾಗಿದೆ. ನಾಗಮೋಹನ್‍ದಾಸ್ ಅವರು ಪ್ರಾಮಾಣಿಕ ರೀತಿಯಲ್ಲಿ ತನಿಖೆ ನಡೆಸುವ ವಿಶ್ವಾಸ ನಮಗಿಲ್ಲ. ದತ್ತಪೀಠದ ವಿಚಾರ ಸೇರಿದಂತೆ ಹಲವು ತನಿಖೆಗಳಲ್ಲಿ ಅವರು ಕಾಂಗ್ರೆಸ್ ಪಕ್ಷದ ಮರ್ಜಿಗೆ ತಕ್ಕಂತೆ ಕಾರ್ಯನಿರ್ವಹಿಸಿದ್ದರು ಎಂದು ಅವರು ವಿವರಿಸಿದರು. ನಮಗೆ ಗೊತ್ತಿರುವ ಪ್ರಕಾರ ಒಂದು ಟೂಲ್‍ಕಿಟ್ ರೂಪದಲ್ಲಿ ನಾಗಮೋಹನ್‍ದಾಸ್ ಸಮಿತಿ ರಚಿಸಿದ್ದಾರೆ ಎಂದು ಅವರು ಆಕ್ಷೇಪಿಸಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಕೇವಲ ಮೂರು ತಿಂಗಳು ಕಳೆದಿದೆ. ವಿದ್ಯುತ್ ದರ ಎರಡು ಪಟ್ಟು ಏರಿಕೆ ಆಗಿದೆ. ಇದರಿಂದ ಉತ್ಪಾದನೆ ಮೇಲೆ ಹೊಡೆತ ಬೀಳುತ್ತಿದೆ. 200 ಯೂನಿಟ್‍ಗಿಂತ ಹೆಚ್ಚು ಬಳಸುವವರಿಗೆ ವಿದ್ಯುಚ್ಛಕ್ತಿ ದುಬಾರಿಯಾಗಿದೆ. ಹಿಂದೆ 5 ಸಾವಿರ ಬಿಲ್ ಬರುವವರಿಗೆ 10 ಸಾವಿರ ಬಿಲ್ ಬರುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ಅನಿಯಮಿತ ಪವರ್ ಕಟ್ ಮುಂದುವರಿದಿದೆ. ಮಳೆಗಾಲದಲ್ಲಿ ಕರ್ನಾಟಕವನ್ನು ಕತ್ತಲೆಗೆ ದೂಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಆಕ್ಷೇಪಿಸಿದರು.