ಚಿತ್ರದುರ್ಗ ಜಿಲ್ಲೆಯಲ್ಲಿ 1000 ಎಕರೆ ಪ್ರದೇಶದ ಕೈಗಾರಿಕಾ ಟೌನ್ ಶಿಪ್ ನಿರ್ಮಾಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಚಿತ್ರದುರ್ಗ, ಅಕ್ಟೋಬರ್ 22 :
ಮುಂಬೈ ಚೆನ್ನೈ ಕೈಗಾರಿಕಾ ಕಾರಿಡಾರ್ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ 1000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಾಣ ಮಾಡುವ ಮೂಲಕ ಕೈಗಾರಿಕಾ ಕ್ರಾಂತಿ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ, ಸರ್ಕಾರಿ ವಿವಿಧ ಸೌಲಭ್ಯ ವಿತರಣೆ, 100 ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮತ್ತು 94-ಸಿಸಿ, 94-ಸಿ ಹಾಗೂ ಬಗರ್ ಹುಕಂ ಸಾಗುವಳಿ ಚೀಟಿ ವಿತರಣೆ ಹಾಗೂ ಅಮೃತ ಗ್ರಾಮ ಪಂಚಾಯಿತಿಗಳ ಜನವಸತಿಗಳ ಮನೆ-ಮನೆಗೆ ನಳಸಂಪರ್ಕ ಕಲ್ಪಿಸುವ ಕಾಮಗಾರಿಗಳ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕುಡಿಯುವ ನೀರು ಯೋಜನೆಗೆ 593 ಕೋಟಿ ರೂ.ಗಳಿಗೆ ಮಂಜೂರಾತಿ:
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸಚಿವಸಂಪುಟದ ಅನುಮೋದನೆ ದೊರೆತು ಸುಮಾರು 13 ಸಾವಿರ ಕೋಟಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಚಿತ್ರದುರ್ಗ ಮೂಲಕ ತುಮಕೂರು- ದಾವಣಗೆರೆ ರೈಲು ಸಂಪರ್ಕ ಯೋಜನೆಗೆ 100 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಚಿತ್ರದುರ್ಗದಲ್ಲಿ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ, ಚಿತ್ರದುರ್ಗ ಜಿಲ್ಲೆ ಜಲಜೀವನ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ 593 ಕೋಟಿ ರೂ.ಗಳನ್ನು ಸಚಿವಸಂಪುಟದಲ್ಲಿ ಮಂಜೂರಾತಿ ನೀಡಲಾಗಿದೆ ಎಂದರು.
ರಾಜ್ಯ ಸರ್ಕಾರದಿಂದ ಬೆಳೆಹಾನಿಗೆ ದುಪ್ಪಟ್ಟು ಪರಿಹಾರ :
ವಾಣಿವಿಲಾಸ ಜಲಾಶಯದಿಂದ 1 ಟಿಎಂಸಿ ನೀರನ್ನು ಕುಡಿಯು ನೀರಿಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಯಿತು. ಹನಿ ನೀರಾವರಿ, ಕೆರೆ ತುಂಬಿಸುವ ಯೋಜನೆಗಳಿಂದ ಬರಗಾಲವನ್ನು ಹೆಚ್ಚು ಎದುರಿಸುವ ಈ ತಾಲ್ಲೂಕಿಗೆ ನೀಡಲಾಗುತ್ತಿದೆ. ಈ ಭಾಗದ ರೈತರಿಗೆ 73 ಸಾವಿರ ರೈತರಿಗೆ 105 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ. ಮನೆ ಹಾನಿ ಪರಿಹಾರವಾಗಿ 4.55 ಕೋಟಿ ರೂ. ಬಿಡುಗಡೆಯಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದ ಪರಿಹಾರದ ಜೊತೆಗೆ ರಾಜ್ಯ ಸರ್ಕಾರದ ಮೊತ್ತವನ್ನು ಸೇರಿಸಿ ದುಪ್ಪಟ್ಟು ಪರಿಹಾರ ನೀಡಲಾಗುತ್ತಿದೆ. ಪರಿಹಾರದ ಮೊತ್ತ ಒಂದೂವರೆ ತಿಂಗಳೊಳಗಾಗಿ ಡಿಬಿಡಿ ಮುಖಾಂತರ ರೈತರಿಗೆ ತಲುಪಿಸಲಾಗುತ್ತಿದೆ. ನಮ್ಮ ಸರ್ಕಾರ ಬಂದ ಮೇಲೆ 5 ಲಕ್ಷ ಮನೆ ನಿರ್ಮಾಣ ಮಾಡಿದ್ದೇವೆ. ಈ ತಾಲ್ಲೂಕಿನಲ್ಲಿ ಸ್ಲಂ ಬೋರ್ಡ್ 700 ಮನೆಗಳನ್ನು ಹಾಗೂ ಗ್ರಾಮೀಣ ಪ್ರದೇಶದಲ್ಲಿ 1000 ಮನೆಗಳನ್ನು ನೀಡಿದ್ದೇವೆ ಎಂದರು.
ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು :
ಹೊಸದುರ್ಗಕ್ಕೆ ಸ್ವಚ್ಛಭಾರತ ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆಯಲ್ಲಿ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಹಿಂದಿನ ಸರ್ಕಾರಗಳಿಗೆ ಈ ಪ್ರದೇಶಕ್ಕೆ ಕುಡಿಯುವ ನೀರನ್ನೂ ಕೊಡಲು ಸಾಧ್ಯವಾಗಲಿಲ್ಲ. ಕೇವಲ ಬಾಯಿಮಾತಿನಲ್ಲಿ ತಾಕತ್ತು ತೋರಿಸುವ ಬಹಳಷ್ಟು ಮಂದಿ ಇದ್ದಾರೆ.ಒಬ್ಬ ರಾಜಕಾರಣಿ ತನ್ನ ತಾಕತ್ತನ್ನು ಜನರ ಸಂಕಷ್ಟಗಳನ್ನು ದೂರ ಮಾಡುವುದರಲ್ಲಿ ತೋರಿಸಬೇಕು. ಜನರಿಗೆ ಕುಡಿಯುವ ನೀರು, ರಸ್ತೆ, ಬಡವರಿಗೆ ಮನೆ , ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವುದು ನಿಜವಾದ ತಾಕತ್ತು. ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, 6 ಲಕ್ಷ ರೈತಕೂಲಿ ಕಾರ್ಮಿಕರಿಗೆ ಈ ವರ್ಷ ವಿದ್ಯಾನಿಧಿಯನ್ನು ನೀಡಲಾಗುತ್ತಿದೆ.ನೇಕಾರರು, ಮೀನುಗಾರರು, ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ. ಎಸ್ ಸಿ ಎಸ್ಟಿ ಜನಾಂಗಕ್ಕೆ 75 ಯೂನಿಟ್ ಉಚಿತ ವಿದ್ಯುತ್, ಭೂಮಿ ಖರೀದಿಗೆ 20 ಲಕ್ಷ ರೂ.ನೀಡಲಾಗುತ್ತಿದೆ ಎಂದರು.
ನವಕರ್ನಾಟಕದಿಂದ ನವಭಾರತದ ನಿರ್ಮಾಣದ ಗುರಿ :
ಸ್ತ್ರೀಸಾಮರ್ಥ್ಯ ಯೋಜನೆಯಡಿ ಪ್ರತಿ ಗ್ರಾಮದ ಎರಡು ಸ್ತ್ರೀಶಕ್ತಿಸಂಘಗಳಿಗೆ ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಪ್ರತಿ ಗ್ರಾಮದ 2 ಯುವಕ ಸಂಘಕ್ಕೆ ಆರ್ಥಿಕ ಸಹಾಯ, ಅವರ ಉತ್ಪನ್ನಗಳಿಗೆ ಮಾರಾಟ ವ್ಯವಸ್ಥೆಗಳನ್ನು ಮಾಡಲಾಗುವುದು. ಈ ರೀತಿ 5 ಲಕ್ಷ ಮಹಿಳೆಯರು, 5 ಲಕ್ಷ ಯುವಕರಿಗೆ ಉದ್ಯೋಗ ಒದಗಿಸಿದಂತಾಗುತ್ತದೆ. ಎಸ್ ಸಿ ಮೀಸಲಾತಿಯನ್ನು 17 %ಕ್ಕೆ, ಎಸ್ ಟಿ ಮೀಸಲಾತಿಯನ್ನು 7% ಕ್ಕೆ ಹೆಚ್ಚಿಸಲಾಗಿದೆ. ದುಡಿಯುವ ವರ್ಗಕ್ಕೆ ಶಕ್ತಿಯನ್ನು ನಮ್ಮ ಸರ್ಕಾರ ನೀಡಿದೆ. ನವಕರ್ನಾಟಕದಿಂದ ನವಭಾರತದ ನಿರ್ಮಾಣದ ಗುರಿಯನ್ನು ಸರ್ಕಾರ ಹೊಂದಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೂಳಿಹಟ್ಟಿ ಶೇಖರ್ ರವರನ್ನು ಆಯ್ಕೆ ಮಾಡಿ, ಜನಸೇವೆಗೆ ಅವಕಾಶ ಮಾಡಿಕೊಡಬೇಕೆಂದು ಜನರಲ್ಲಿ ವಿನಂತಿಸಿದರು.