IMG 20200804 184851

ಕೋವಿಡ್‌ ಸಾವು: ಆಡಿಟ್‌ಗೆ ಡಿಸಿಎಂ ಸಲಹೆ…!

STATE Genaral

ಕೋವಿಡ್‌ ಸಾವು: ಆಡಿಟ್‌ಗೆ ಡಿಸಿಎಂ ಸಲಹೆ

ಬೆಂಗಳೂರು:
ಕೋವಿಡ್‌ ಕಾರಣದಿಂದ ನಗರ ವ್ಯಾಪ್ತಿಯಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳ ನಿಖರ ಕಾರಣ ತಿಳಿಯಲು ಪ್ರತ್ಯೇಕವಾದ ಉನ್ನತಮಟ್ಟದ ಸಮಿತಿ ರಚಿಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಕೋವಿಡ್ ಸಂಬಂಧ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಅವರ ಜತೆ ಮಂಗಳವಾರ ಸಭೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

IMG 20200804 184857

ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರಚಿಸುವ ಸಮಿತಿ, ಸಾವಿನ ಪ್ರಕರಣಗಳು ಹೆಚ್ಚಾಗಲು ಕಾರಣ ಏನು? ಚಿಕಿತ್ಸೆ ತಡವಾಗಿದ್ದಕ್ಕೆ ಸಾವು ಸಂಭವಿಸಿತೇ? ಅಥವಾ ಚಿಕಿತ್ಸಾ ವಿಧಾನದಲ್ಲಿ ಏನಾದರೂ ಲೋಪಗಳು ಇತ್ತೇ? ಇತ್ಯಾದಿ ಅಂಶಗಳ ಬಗ್ಗೆ ಅಧ್ಯಯನ ನಡೆಸಬೇಕು. ನಂತರ ಸಮಿತಿ ಕೊಡುವ ವರದಿಯನ್ನಾಧರಿಸಿ, ಲೋಪಗಳನ್ನು ಸರಿಪಡಿಸಿಕೊಂಡು ಸಾವಿನ ಪ್ರಮಾಣ ಶೂನ್ಯಕ್ಕೆ ಇಳಿಸಲು ಪ್ರಯತ್ನಿಸಬೇಕುʼ ಎಂದು ಉಪ ಮುಖ್ಯಮಂತ್ರಿ ಸೂಚಿಸಿದರು.

ನಿಯಮಗಳ ಪ್ರಕಾರ ಚಿಕಿತ್ಸೆ ದೊರೆಯುತ್ತಿದೆಯೇ ಎಂಬುದನ್ನೂ ನಿರಂತರವಾಗಿ ಪರಿಶೀಲನೆ ನಡೆಸಬೇಕು. ಖಾಸಗಿಯೇ ಇರಲಿ ಸರ್ಕಾರಿ ಆಸ್ಪತ್ರೆಗಳೇ ಇರಲಿ; ಎಲ್ಲ ಕಡೆ ಪರಿಶೀಲನೆ ಮಾಡುವ ಕೆಲಸ ಆಗಬೇಕು. ನಿಯಮಗಳನ್ನು ಪಾಲಿಸದವರ ವಿರುದ್ಧ ಚಾಟಿ ಬೀಸಬೇಕು ಎಂದೂ ಅವರು ಸಲಹೆ ನೀಡಿದರು.

ರಿಯಲ್‌ ಟೈಮ್‌ ಅಪ್‌ಡೇಟ್‌
ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‌ ಖಾಲಿ ಇವೆ? ಎಷ್ಟು ರೋಗಿಗಳು ವೆಂಟಿಲೇಟರ್‌ ಮೇಲಿದ್ದಾರೆ? ಎಷ್ಟು ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಹೋಗಿದ್ದಾರೆ? ಇತ್ಯಾದಿ ಎಲ್ಲ ಮಾಹಿತಿಯೂ ಕ್ಷಣಕ್ಷಣಕ್ಕೂ ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಆಗಬೇಕು. ಈ ಮಾಹಿತಿ ಸಾರ್ವಜನಿಕರಿಗೂ ಆನ್‌ಲೈನ್‌ನಲ್ಲಿ ಸಿಗುವ ಹಾಗೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಕಾನೂನು ಕ್ರಮಕ್ಕೆ ಸಲಹೆ:
ಕೆಲವು ಆಸ್ಪತ್ರೆಗಳು ಬೆಡ್‌ಗಳ ಸಂಖ್ಯೆಯನ್ನು ಸರಿಯಾಗಿ ನೀಡುತ್ತಿಲ್ಲ; ಕೊಡುವುದೊಂದು ಇರುವುದೊಂದಾಗಿದ್ದು, ಅದನ್ನು ಸರಿಪಡಿಸಬೇಕು. ವ್ಯತ್ಯಾಸಗಳು ಕಂಡುಬಂದಲ್ಲಿ, ನೇರವಾಗಿ ಕಾನೂನು ಕ್ರಮ ತೆಗೆದುಕೊಳ್ಳುವ ಕೆಲಸ ಆಗಬೇಕು ಎಂದು ಅವರು ಆಯುಕ್ತರಿಗೆ ಸೂಚಿಸಿದರು.

ನಗರದಲ್ಲಿ ಆಶಾ ಕಾರ್ಯಕರ್ತೆಯರ ಕೊರತೆ ಇದ್ದು, ತಕ್ಷಣ ನೇಮಕ ಮಾಡಿಕೊಳ್ಳುವ ಕೆಲಸ ಆಗಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು; ಎಎನ್‌ಎಂ ಸಿಬ್ಬಂದಿಗೂ ಕೋವಿಡ್‌ ಭತ್ಯೆ ನೀಡುವುದಲ್ಲದೆ, ಅವರ ವೇತನ ಹೆಚ್ಚಳಕ್ಕೂ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಸಲಹೆಯನ್ನು ಉಪ ಮುಖ್ಯಮಂತ್ರಿ ನೀಡಿದರು.

ಸಾರಿ/ಐಎಲ್‌ಐ ಪ್ರಕರಣಗಳಿದ್ದಲ್ಲಿ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೊಳಪಡಿಸಬೇಕು; ಕೋವಿಡ್‌ ಪರೀಕ್ಷೆಗಳ ಪ್ರಮಾಣ ಕೂಡ ಹೆಚ್ಚಿಸಬೇಕು ಎನ್ನುವ ಸಲಹೆಯನ್ನು ಅವರು ನೀಡಿದರು.