ಶ್ರೀರಾಮಮಂದಿರ ವಿರೋಧಿಗಳು ಕಾಂಗ್ರೆಸ್ಸಿಗರು
ರಾಮಮಂದಿರ ಶಿಲಾನ್ಯಾಸಕ್ಕೆ ಶುಭಕೋರಿದ ಕೆಂದ್ರ ಸಚಿವ ಸದಾನಂದ ಗೌಡ, ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಬೇಕೆಂದ ಕಾಂಗ್ರೆಸ್ಸಿಗರಿಗೆ ತರಾಟೆ
ಬೆಂಗಳೂರು, ಆಗಸ್ಟ್ ೪ – ಅಯೋಧ್ಯೆಯಲ್ಲಿ ನಾಳೆ ಬುಧವಾರ ಆಯೋಜಿಸಿರುವ ಶ್ರೀ ರಾಮಮಂದಿರ ನಿರ್ಮಾಣದ ಭೂಮಿಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಲಿ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಶುಭಹಾರೈಸಿದ್ದಾರೆ.
ಕೋಟ್ಯಂತರ ಭಾರತೀಯರು ಎದುರು ನೋಡುತ್ತಿದ್ದ ಶುಭಘಳಿಗೆ ಸಮೀಪಿಸಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಯೋಧ್ಯೆ ಆಂದೋಲನದಲ್ಲಿ ಪ್ರಮುಖ ಪಾತ್ರವಹಿಸಿದ್ದ ಪಕ್ಷದ ಹಿರಿಯ ನಾಯಕ ಮಾಜಿ ಉಪಪ್ರಧಾನಿ ಶ್ರೀ ಲಾಲಕೃಷ್ಟ ಅಡ್ವಾಣಿ, ಬಿಜೆಪಿ ಮಾಜಿ ಅಧ್ಯಕ್ಷ ಡಾ ಮುರಳಿ ಮನೋಹರ್ ಜೋಶಿ ಮುಂತಾದ ಹಿರಿಯ ನಾಯಕರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಸಚಿವರು ಇಂದು ಇಲ್ಲಿ ಮಾಧ್ಯಮ ಹೇಳಿಕೆಯೊಂದರಲ್ಲಿ ತಿಳಿಸಿದರು.
ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ಭಾರತೀಯರ ಆರಾಧ್ಯದೈವ. ನಮ್ಮಂತಹ ಕೋಟ್ಯಂತರ ಶ್ರದ್ಧಾಳುಗಳ ಪ್ರಾರ್ಥನೆ ಫಲಿಸುವ ಕ್ಷಣ ಬಂದೇಬಿಟ್ಟಿದೆ. ಅಯೋಧ್ಯೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಶ್ರೀ ರಾಮಮಂದಿರ ಪುನರ್ ನಿರ್ಮಾಣದ ಶಿಲಾನ್ಯಾಸಕ್ಕೆ ವೇದಿಕೆ ಸಜ್ಜುಗೊಂಡಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿಯಾಗಿದ್ದರೆ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಯೋಧ್ಯೆಯಲ್ಲಿ ಲಕ್ಷೋಪಲಕ್ಷ ಜನ ಸೇರುತ್ತಿದ್ದರು. ಆದರೆ ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಸರಳವಾಗಿ ಕೆಲವೇ ಕೆಲವು ಆಯ್ದ ಜನರ ಸಮ್ಮುಖದಲ್ಲಿ ಶಿಲಾನ್ಯಾಸ ನಡೆಯಲಿದೆ. ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸುತ್ತೇನೆ ಎಂದು ಸಚಿವರು ಹೇಳಿದರು.
ಹದಿನಾರನೆ ಶತಮಾನದ ಆದಿಯಲ್ಲಿ (1628-29) ಮೊಗಲ್ ದೊರೆ ಬಾಬರನ ಜಿಹಾದಿ ಪಡೆ ಅಯೋಧ್ಯೆಯಲ್ಲಿನ ಶ್ರೀರಾಮಮಂದಿರವನ್ನು ಧ್ವಂಸಮಾಡಿ ಅದರ ಮೇಲೆ ಅಕ್ರಮ ಬಾಬರಿ ಕಟ್ಟಡ ನಿರ್ಮಾಣ ಮಾಡಿದಾಗಿನಿಂದ ಇಲ್ಲಿಯವರಗೆ ಹಿಂದೂಗಳು ತಮ್ಮ ಶ್ರದ್ಧಾಕೇಂದ್ರದ ಪುನರ್‌ನಿರ್ಮಾಣಕ್ಕಾಗಿ ನಡೆಸಿದ ಹೋರಾಟ, ಮಾಡಿದ ಬಲಿದಾನವನ್ನು ಸಚಿವರು ನೆನಪಿಸಿಕೊಂಡರು.
2003ರಲ್ಲಿ ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ವಿವಾದಕ್ಕೆ ಸಂಬಂದಿಸಿದ ಎಲ್ಲ ಕಕ್ಷಿದಾರರ ಉಪಸ್ಥಿತಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಿವಾದಿತ ಜಾಗದಲ್ಲಿ ನಡೆಸಿದ ಉತ್ಖನನದಲ್ಲಿ ಪುರಾತನ ಮಂದಿರ ಇರುವ ಬಗ್ಗೆ ಅನೇಕ ಕುರುಹುಗಳು ದೊರೆತಿದ್ದವು. ಉತ್ಖನನ ಪ್ರಕ್ರಿಯೆಯನ್ನ ಸಂಪೂರ್ಣವಾಗಿ ಚಿತ್ರೀಕರಿಸಲಾಗಿತ್ತು. ಉತ್ಖನನ ವರದಿ ಹಾಗೂ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ದೇಶದ ಸರ್ವೋಚ್ಛ ನ್ಯಾಯಾಲಯ ಹಲವು ಶತಮಾನಗಳ ಹಳೆಯದಾದ ಈ ವಿವಾದವನ್ನು ಅಂತಿಮವಾಗಿ 2019ರ ನವೆಂಬರ್ 9ರಂದು ಬಗೆಹರಿಸಿತು. ಅಂದು ಐತಿಹಾಸಿಕ ತೀರ್ಪು ಪ್ರಕಟಿಸಿದ ಸರ್ವೋಚ್ಛ ನ್ಯಾಯಾಲಯ ರಾಮಜನ್ಮಭೂಮಿಯನ್ನು ಹಿಂದುಗಳಿಗೆ ಒಪ್ಪಿಸಿತು ಎಂದು ಅವರು ಹೇಳಿದರು.
ಶ್ರೀರಾಮಮಂದಿರ ವಿರೋಧಿಗಳು ಕಾಂಗ್ರೆಸ್ಸಿಗರು:
ಶಿಲಾನ್ಯಾಸ ಕಾರ್ಯಕ್ರಮಕ್ಕೆ ತಮಗೂ ಆಮಂತ್ರಣ ನೀಡಬೇಕು ಎಂದು ಬೇಡಿಕೆ ಇಟ್ಟಿರುವ ಕಾಂಗ್ರೆಸ್ಸಿಗರು ಮತ್ತವರ ಸಾಥಿಗಳನ್ನು ಸದಾನಂದ ಗೌಡ ಅವರು ತೀವ್ರ ತರಾಟೆಗೆ ತೆಗೆದುಕೊಂಡರು.
ಅವರ ಬೇಡಿಕೆ ಹಾಸ್ಯಾಸ್ಪದವಾಗಿದೆ. ಮೊದಲನೆಯಯದಾಗಿ ಇದು ಸರ್ಕಾರಿ ಕಾರ್ಯಕ್ರಮವಲ್ಲ. ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ರಚಿಸಲಾಗಿರುವ ಟ್ರಸ್ಟ್ ಸಂಘಟಿಸುತ್ತಿರುವ ಕಾರ್ಯಕ್ರಮವಿದು. ಕಾರ್ಯಕ್ರಮಕ್ಕೆ ಯಾರನ್ನು ಆಮಂತ್ರಿಸಬೇಕು, ಯಾರನ್ನು ಆಮಂತ್ರಿಸಬಾರದು ಎಂಬುದು ಸಂಘಟಕರಿಗೆ ಬಿಟ್ಟ ವಿಚಾರ ಎಂದರು
“ಅಷ್ಟಕ್ಕೂ ಕಾಂಗ್ರೆಸ್ಸಿಗೂ ಶ್ರೀರಾಮಮಂದಿರ ನಿರ್ಮಾಣಕ್ಕೂ ಎತ್ತಣೆತ್ತಣ ಸಂಬಂಧ? ಮೊದಲಿನಿಂದಲೂ ಅಯೋಧ್ಯೆ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದವರು ಕಾಂಗ್ರೆಸ್ಸಿಗರು. ಕರಸೇವಕರ ಮೇಲೆ ಗುಂಡುಹಾರಿಸಿದವರು. ಅಕ್ರಮ ಬಾಬರಿ ಕಟ್ಟಡ ನೆಲಸಮವಾದಾಗ ಉತ್ತರ ಪ್ರದೇಶದಲ್ಲಿನ ಬಿಜೆಪಿ ಸರ್ಕಾರವನ್ನ ವಜಾಮಾಡಿದವರು ಕಾಂಗ್ರೆಸ್ಸಿಗರು. ಮತ್ತೆ, ವಿವಾದಾತ್ಮಕ ಬಾಬರಿ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ಯೋಚಿಸಿದವರು ಕಾಂಗ್ರೆಸ್ಸಿಗರು. ರಾಮಜನ್ಮಭೂಮಿ ವಿವಾದವನ್ನು ಶೀಘ್ರ ಇತ್ಯರ್ಥಗೊಳಿಸಲು ಕೋಟ್ಯಂತರ ಹಿಂದೂ ಶ್ರದ್ಧಾಳುಗಳು ಹಂಬಲಿಸುತ್ತಿದ್ದರೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪರವಾಗಿ ಹಾಜರಾಗುವ ಇದೇ ಕಾಂಗ್ರೆಸ್ಸಿನ ಘಟಾನುಗಟಿ ವಕೀಲರು ಚುನಾವಣೆ ನಂತರ ಪ್ರಕರಣದ ವಿಚಾರಣೆ ಮಾಡುವಂತೆ ಕೋರ್ಟಿನಲ್ಲಿ ವಾದಿಸುತ್ತಾರೆ. ಭಾರತ ಶ್ರೀಲಂಕಾ ನಡುವೆ ಇರುವ ಪಾರಂಪರಿಕ ರಾಮಸೇತು ಅವಶೇಷಗಳನ್ನು “ಸೇತುಸಮುದ್ರಮ್” ಯೋಜನೆ ಹೆಸರಲ್ಲಿ ನಾಶಮಾಡಲು ಮುಂದಾವರು ಕಾಂಗ್ರೆಸ್ಸಿಗರು. ಹಾಗೆಯೇ ಶ್ರೀರಾಮ ಇದ್ದ ಅನ್ನುವುದಕ್ಕೆ ಯಾವುದೇ ಐತಿಹಾಸಿಕ ದಾಖಲೆ ಇಲ್ಲ ಎಂದು ಸರ್ವೋಚ್ಛ ನ್ಯಾಯಾಲಯದಲ್ಲಿ 2007ರಲ್ಲಿ ಅಪಿಡಾವಿಟ್ ಸಲ್ಲಿಸಿದವರು ಕಾಂಗ್ರೆಸ್ಸಿಗರು. ಮೊನ್ನೆ ಕೂಡಾ ಅಷ್ಟೆ. ಶಿಲಾನ್ಯಾಸವನ್ನು ಮುಂದೂಡುವಂತೆ ತಮ್ಮ ಚೇಲಾಗಳ ಮೂಲಕ ಪಿಐಎಲ್ ದಾಖಲಿಸಲು ಹೋಗಿ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಇಂಥ ಕಾಂಗ್ರೆಸ್ಸಿಗರು ಇಂದು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನ ಬಯಸುತ್ತಿದ್ದಾರೆ. ಅತ್ತೂಕರೆದು ಈ ಐತಿಹಾಸಿಕ ಕ್ಷಣದ ಭಾಗವಾಗಲು ಪ್ರಯತ್ನಿಸುತ್ತಿದ್ದಾರೆ. ಅವರನ್ನ ಹತಾಶೆ ಎಷ್ಟರಮಟ್ಟಿಗೆ ಆವರಿಸಿದೆ ಎಂಬುದರ ದ್ಯೋತಕವಿದು. ಭಗವಾನ್ ಶ್ರೀರಾಮಚಂದ್ರ ಅವರಿಗೆ ಇನ್ನಾದರೂ ಸದ್ಬುದ್ಧಿ ಕರುಣಿಸಲಿ ಎಂದಷ್ಟೇ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ” ಎಂದು ಸಚಿವರು ಹೇಳಿದರು