20221215 080742

ಹುಬ್ಬಳ್ಳಿ: ಜನವರಿ ಅಂತ್ಯಕ್ಕೆ ಎಲ್ಲಾ 438 ನಮ್ಮ ಕ್ಲಿನಿಕ್‌ಗಳು….!

Genaral STATE

ನಮ್ಮ ಕ್ಲೀನಿಕ್ ಯೋಜನೆಗೆ ಚಾಲನೆ;

ಜನವರಿ ಅಂತ್ಯದೊಳಗೆ 438 ನಮ್ಮ ಕ್ಲೀನಿಕ್ ಆರಂಭ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ, ಡಿಸೆಂಬರ್‌ 14 : – ಬಡವರ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ಬು ತಲುಪಿಸಲು ಸರ್ಕಾರ ಆದ್ಯತೆ ನೀಡಲಾಗಿದ್ದು, ಜನವರಿ ಅಂತ್ಯದೊಳಗೆ 438 ನಮ್ಮ ಕ್ಲೀನಿಕ್ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಳಿಗ್ಗೆ ‌ಹುಬ್ಬಳ್ಳಿ ತಾಲೂಕಿನ ಬೈರಿದೇವರಕೋಪ್ಪದ ರೇಣುಕಾ ನಗರದಲ್ಲಿ ನಮ್ಮ ಕ್ಲೀನಿಕ್ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಸರಕಾರ ಹೆಚ್ಚು ಆದ್ಯತೆ ನೀಡಿದೆ. ಆರೋಗ್ಯ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ 10 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಬಡವರಿಗೆ, ಜನಸಾಮಾನ್ಯರಿಗೆ ಅತ್ಯಂತ ಅವಶ್ಯಕತೆ ಇರುವ ಈ ಆರೋಗ್ಯ ಕಾರ್ಯಕ್ರಮ ನಗರದಲ್ಲಿನ ಬಡವರ ಆರೋಗ್ಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಬಡವರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಖಾಸಗಿ ಆಸ್ಪತ್ರೆಗಳು ಹೆಚ್ಚು ದರ ವಿಧಿಸುವದರಿಂದ ತೊಂದರೆ ಆಗುತ್ತದೆ. ನಮ್ಮ ಸರಕಾರ ಸ್ಪಂದನಾಶೀಲವಾಗಿದೆ ಎಂದು ತಿಳಿಸಿದರು.

20221215 081531

ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣ :
ಬಡತನ ಮತ್ತು ಅನಾರೋಗ್ಯ ಎರಡು ಅಭಿವೃದ್ಧಿಯ ಶತ್ರುಗಳು. ಬಡತನದಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತದೆ. ಯಾವುದೇ ತಾರತಮ್ಯವಿಲ್ಲದೇ ಎಲ್ಲರಿಗೂ ಉತ್ತಮ ಚಿಕಿತ್ಸೆ, ಉಚಿತ ಔಷಧೋಪಚಾರ ದೊರೆಯುವಂತೆ ರಾಜ್ಯ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ . ಹಿಂದುಳಿದ, ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳನ್ನು ಗುರುತಿಸಿ, ಶಿಕ್ಷಣ, ಆರೋಗ್ಯ ಸೇವೆ, ಮೂಲಭೂತ ಸೌಕರ್ಯಗಳ ಸುಧಾರಣೆಗೆ ಕ್ರಮವಹಿಸಲಾಗಿದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ.ಕಲ್ಯಾಣ ಕರ್ನಾಟಕ ಭಾಗದಲ್ಲಿ 45 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಆರೋಗ್ಯ ಸೌಲಭ್ಯಗಳು :
ಸಮುದಾಯ ಆಸ್ಪತ್ರೆಗಳ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಡಯಾಲಿಸಿಸ್ ಸೈಕಲ್ಸ್ ಗಳನ್ನು 60 ಸಾವಿರಕ್ಕೆ ಹೆಚ್ಚಳ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಹೊಸದಾಗಿ 12 ಕೆಮೊಥೆರಪಿ ಕೇಂದ್ರಗಳನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಉಚಿತ ಕಣ್ಣು ತಪಾಸಣೆ, ಚಿಕಿತ್ಸೆ ಉಚಿತ ಕನ್ನಡಕ, 500 ಕೋಟಿ ವೆಚ್ಚದಲ್ಲಿ ಕಿವಡರಿಗೆ ಶ್ರವಣಸಲಕರಣೆ ವಿತರಣೆ, ರೈತರಿಗೆ ಯಶ್ವನಿ ಯೋಜನೆ ಮುಂದುವರಿಕೆಗೆ‌ ಕ್ರಮವಹಿಸಲಾಗಿದೆ . ಹುಬ್ಬಳ್ಳಿಯಲ್ಲಿ ರೂ.350 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಶಂಕುಸ್ಥಾಪನೆ ಮಾಡಲಾಗುವುದು. ನವನಗರ ಕ್ಯಾನ್ಸರ್ ಆಸ್ಪತ್ರೆಗೆ ಹೊಸ ಉಪಕರಣ ಖರೀದಿಗೆ 10 ಕೋಟಿ ಅನುದಾನ ನೀಡಲಾಗಿದ್ದು, ಈ ಆಸ್ಪತ್ರೆ ಬಡವರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.

ಸುಲಭ ದರದ ಚಿಕಿತ್ಸೆಗೆ ಸಂಶೋಧನೆಗಳು :
ಬಡವರಿಗೆ, ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಆರೋಗ್ಯ ಚಿಕಿತ್ಸೆ ದೊರೆಯಲು ಹೊಸ ಸಂಶೋಧನೆಗಳಿಂದ ಲಾಭ ದೊರೆಯುವಂತಾಗಬೇಕು.ವೆಂಟಿಲೇಟರ್ಸ್, ಸ್ಕ್ಯಾನರ್ಸ್ ಗಳಂತಹ ಉಪಕರಣಗಳ ಸೌಕರ್ಯ ಬಡಜನರಿಗೆ ದೊರೆಯುವ ದಿಸೆಯಲ್ಲಿ ನೂತನ ಸಂಶೋಧನೆಗಳು ನಡೆಯಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರಾಜ್ಯದಲ್ಲಿ 1250 ಜನೌಷಧಿ ಕೇಂದ್ರ :
ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ತಲುಪಿಸುವಲ್ಲಿ ರಾಜ್ಯ ಸರಕಾರ ಹೆಚ್ಚು ಕಾಳಜಿವಹಿಸಿದೆ. ದೇಶದಲ್ಲಿ ಕರ್ನಾಟಕ ರಾಜ್ಯ ಹೆಚ್ಚಿನ ಕೇಂದ್ರದ ಜನೌಷಧಿ ಕೇಂದ್ರಗಳು ಹೊಂದಿರುವ 2 ರಾಜ್ಯವಾಗಿದೆ. ಪ್ರಸ್ತುತ 1250 ಕೇಂದ್ರಗಳಿದ್ದು, ಮುಂದಿನ ವರ್ಷ ಇನ್ನೂ 1000 ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ನಮ್ಮ ಕ್ಲಿನಿಕ್ ನಲ್ಲಿ ಟೆಲಿಮೆಡಿಸಿನ್ ಮುಖಾಂತರ ಆರೋಗ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರತಿ ಜಿಲ್ಲೆಯ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ಆಗಬೇಕು. ಜಿಲ್ಲೆಯ ಮಕ್ಕಳ ಚಿಕಿತ್ಸೆ, ಆರೋಗ್ಯ ದಾಖಲೆ ಆಗಬೇಕು. ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚುವಂತೆ ಮಾಡಬೇಕು. ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ: ಕೆ.ಸುಧಾಕರ್, ಸಚಿವರಾದ ಹಾಲಪ್ಪ ಆಚಾರ್, ಸಿ.ಸಿ.ಪಾಟೀಲ್ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್ ಹಾಗೂ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

20221215 081546

ಆರೋಗ್ಯ ಸಚಿವರು

ಜನವರಿ ಅಂತ್ಯಕ್ಕೆ ಎಲ್ಲಾ 438 ನಮ್ಮ ಕ್ಲಿನಿಕ್‌ಗಳು ಕಾರ್ಯಾರಂಭ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

ಐತಿಹಾಸಿಕವಾಗಿ ಏಕ ಕಾಲಕ್ಕೆ ವಿವಿಧ ಜಿಲ್ಲೆಗಳಲ್ಲಿ 114 ನಮ್ಮ ಕ್ಲಿನಿಕ್‌ಗಳಿಗೆ ಚಾಲನೆ

ಹೊಸ ವರ್ಷಕ್ಕೆ ಮಹಿಳೆಯರಿಗೆ ಸರ್ಕಾರದ ಕೊಡುಗೆ; ಆಯುಷ್ಮತಿ ಕ್ಲಿನಿಕ್‌ಗಳು

ಜನವರಿಯಿಂದ ಮನೆ ಬಾಗಿಲಿಗೆ ಔಷಧಿಗಳನ್ನು ಪೂರೈಸುವ ಕಾರ್ಯಕ್ರಮ ಜಾರಿ

ಹೊಸ ವರ್ಷದ ಜನವರಿ ಅಂತ್ಯಕ್ಕೆ ಎಲ್ಲಾ 438 ʼನಮ್ಮ ಕ್ಲಿನಿಕ್‌ʼಗಳು ಕಾರ್ಯಾರಂಭವಾಗಲಿವೆ. ಹಾಗೆಯೇ ಮಹಿಳೆಯರಿಗೆ ಮೀಸಲಾದ ʼಆಯುಷ್ಮತಿʼ ಕ್ಲಿನಿಕ್‌ಗಳನ್ನೂ ಜನವರಿಯಲ್ಲೇ ಉದ್ಘಾಟಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮೊದಲ ʼನಮ್ಮ ಕ್ಲಿನಿಕ್‌ʼಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ನಮ್ಮ ಕ್ಲಿನಿಕ್‌ನಲ್ಲಿ ಲ್ಯಾಬ್‌ ಪರೀಕ್ಷೆ, ತಪಾಸಣೆ, ಔಷಧಿ ಸಂಪೂರ್ಣ ಉಚಿತವಾಗಿದ್ದು, ಇದು ಆರೋಗ್ಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರುವ ಹೆಜ್ಜೆಯಾಗಿದೆ. ಸದ್ಯ 114 ಕ್ಲಿನಿಕ್‌ಗಳನ್ನು ಉದ್ಘಾಟಿಸಲಾಗುತ್ತಿದೆ. ಇನ್ನು ಮುಂದೆ ಪ್ರತಿ ವಾರಕ್ಕೆ 100 ರಂತೆ ಕ್ಲಿನಿಕ್‌ಗಳನ್ನು ಉದ್ಘಾಟನೆ ಮಾಡಿ, ಜನವರಿ ಅಂತ್ಯಕ್ಕೆ ಎಲ್ಲಾ 438 ಕ್ಲಿನಿಕ್‌ಗಳನ್ನು ಆರಂಭಿಸಲಾಗುವುದು. ಹಾಗೆಯೇ, ಆಯುಷ್ಮತಿ ಕ್ಲಿನಿಕ್‌ ಕೂಡ ಆರಂಭವಾಗಲಿದೆ. ಇದು ಮಹಿಳೆಯರಿಗೆ ನಮ್ಮ ಸರ್ಕಾರ ನೀಡುತ್ತಿರುವ ಹೊಸ ವರ್ಷದ ಕೊಡುಗೆ ಎಂದು ತಿಳಿಸಿದರು.

20221215 080751

ಮನೆ ಬಾಗಿಲಿಗೆ ಔಷಧಿ

ರಾಜ್ಯದಲ್ಲಿ 7 ಸಾವಿರಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಈಗಾಗಲೇ ಆರಂಭಿಸಿದ್ದು, ಇಲ್ಲಿ 30 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲರೂ ವರ್ಷಕ್ಕೆ ಒಮ್ಮೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಭಾರತ ಈಗ ಮಧುಮೇಹದ ಕೇಂದ್ರವಾಗಿದ್ದು, ಇಂತಹ ಅಸಾಂಕ್ರಾಮಿಕ ರೋಗಗಳ ಪತ್ತೆ ಅಗತ್ಯವಿದೆ. ಇದಕ್ಕಾಗಿ ಕಳೆದ ಒಂದು ವರ್ಷದಲ್ಲಿ ಈ ಕೇಂದ್ರಗಳಲ್ಲಿ ಶೇ.60 ರಷ್ಟು ಜನರನ್ನು ತಪಾಸಣೆ ಮಾಡಿದ್ದು, ವಿವಿಧ ರೋಗಗಳಿಗೆ ಉಚಿತ ಔಷಧಿ ನೀಡಲಾಗುತ್ತಿದೆ. ಜನವರಿ ತಿಂಗಳಿಂದ ಮಧುಮೇಹ, ಬಿಪಿ, ಕ್ಷಯ ಮೊದಲಾದ ರೋಗಗಳಿಗೆ ಔಷಧಿಯನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಇತಿಹಾಸದಲ್ಲಿ ಯಾವ ಸರ್ಕಾರವೂ ಒಂದೇ ಬಾರಿಗೆ 114 ಕ್ಲಿನಿಕ್‌ಗಳನ್ನು ಉದ್ಘಾಟನೆ ಮಾಡಿಲ್ಲ. ಇಂದು ನಮ್ಮ ಸರ್ಕಾರದ ಮೂಲಕ ಸಾರ್ವಕಾಲಿಕ ದಾಖಲೆಯಾಗಿದೆ. ಸಾಮಾನ್ಯ ಜನರ ಮುಖ್ಯಮಂತ್ರಿಯಾಗಿರುವ, ʼಕಾಮನ್‌ ಮ್ಯಾನ್‌ʼ ಬಸವರಾಜ ಬೊಮ್ಮಾಯಿ ಅವರಿಂದ ʼನಮ್ಮ ಕ್ಲಿನಿಕ್‌ʼಗಳು ಉದ್ಘಾಟನೆಯಾಗಿವೆ ಎಂದರು.

ನಗರಗಳೆಂದರೆ ಶ್ರೀಮಂತರೇ ಇರುವ ಪ್ರದೇಶ ಎಂಬ ತಪ್ಪು ಕಲ್ಪನೆ ಇದೆ. ನಗರಗಳಲ್ಲಿರುವ ಬಡವರು, ಕೂಲಿ ಕಾರ್ಮಿಕರು, ವಲಸೆ ಬಂದವರು, ಕೊಳೆಗೇರಿ ನಿವಾಸಿಗಳ ಆರೋಗ್ಯ ರಕ್ಷಣೆಗಾಗಿ ನಮ್ಮ ಕ್ಲಿನಿಕ್‌ ಆರಂಭಿಸಲಾಗಿದೆ. ಇಂದು ಮೊದಲ ನಮ್ಮ ಕ್ಲಿನಿಕ್‌ನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉದ್ಘಾಟಿಸುತ್ತಿರುವುದು ವಿಶೇಷವಾಗಿದೆ. ಒಟ್ಟು 114 ಕ್ಲಿನಿಕ್‌ಗಳನ್ನು ವಿವಿಧ ಜಿಲ್ಲೆಗಳಲ್ಲಿ ಏಕ ಕಾಲಕ್ಕೆ ಉದ್ಘಾಟಿಸಲಾಗುತ್ತಿದೆ ಎಂದು ತಿಳಿಸಿದರು.

ಒಂದು ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯ, ಲ್ಯಾಬ್‌ ತಂತ್ರಜ್ಞ, ನರ್ಸ್‌, ಡಿ ಗ್ರೂಪ್‌ ನೌಕರ ಇರುತ್ತಾರೆ. ಜ್ವರ, ಕೆಮ್ಮು, ನೆಗಡಿ ಮೊದಲಾದ ಸಣ್ಣ ಸಮಸ್ಯೆಗಳಿಗೆ ಹಿಂದೆ ಜಿಲ್ಲಾಸ್ಪತ್ರೆಗೆ ಹೋಗಬೇಕಿತ್ತು. ಆದರೆ ಈಗ ನಮ್ಮ ಕ್ಲಿನಿಕ್‌ಗೆ ಹೋಗಿ ಉಚಿತವಾಗಿ ಸೇವೆ ಪಡೆಯಬಹುದು. ಬೇರೆ ಆಸ್ಪತ್ರೆಗಳಲ್ಲಿ 10 ರೂ. ಶುಲ್ಕ ಪಡೆಯಲಾಗುತ್ತಿತ್ತು. ಆದರೆ ನಮ್ಮ ಕ್ಲಿನಿಕ್‌ನಲ್ಲಿ ಬಿಡಿಗಾಸನ್ನೂ ನೀಡಬೇಕಿಲ್ಲ ಎಂದು ವಿವರಿಸಿದರು.

ಆಯುಷ್ಮಾನ್‌ ಕಾರ್ಡ್‌, ಪ್ರಧಾನಿಗಳಿಂದ ವಿತರಣೆ

ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಇಲ್ಲದಿದ್ದರೆ ಸಂಪದ್ಭರಿತ ನಾಡನ್ನು ಸೃಷ್ಟಿಸಲು ಸಾಧ್ಯವಿಲ್ಲ. ಒಂದು ದೇಶ-ಒಂದು ಪಡಿತರ ಚೀಟಿ, ಒಂದು ದೇಶ-ಒಂದು ತೆರಿಗೆ ಎಂಬಂತೆ, ಒಂದು ದೇಶ-ಒಂದು ಹೆಲ್ತ್‌ ಕಾರ್ಡ್‌ ಎಂಬ ಘೋಷಣೆಯ ಆಯುಷ್ಮಾನ್‌ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. 1.20 ಕೋಟಿ ಕಾರ್ಡ್‌ಗಳ ನೋಂದಣಿ ಪೂರ್ಣಗೊಂಡಿದ್ದು, ಈ ಕಾರ್ಯಕ್ರಮಕ್ಕೂ ಚಾಲನೆ ನೀಡಬೇಕಿತ್ತು. ಆದರೆ ಕೇಂದ್ರದ ಆರೋಗ್ಯ ಸಚಿವರು ಕರೆ ಮಾಡಿ ಶ್ಲಾಘಿಸಿ, ಪ್ರಧಾನಿ ನರೇಂದ್ರ ಮೋದಿಯವರಿಂದಲೇ ಈ ಕಾರ್ಡ್‌ ವಿತರಣೆ ಮಾಡಿಸಲಾಗುವುದು ಎಂದು ತಿಳಿಸಿದ್ದಾರೆ. ಆದ್ದರಿಂದ ಪ್ರಧಾನಿಗಳ ಕೈಯಿಂದಲೇ ಕಾರ್ಡ್‌ಗಳನ್ನು ಜನರಿಗೆ ಕೊಡಿಸಲಾಗುವುದು ಎಂದು ತಿಳಿಸಿದರು.

42 ಲಕ್ಷ ಜನರಿಗೆ ಉಚಿತ ಚಿಕಿತ್ಸೆ

ಕೆಲವರು ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಟೀಕೆ ಮಾಡುತ್ತಾರೆ. ಆದರೆ ನಾಲ್ಕು ವರ್ಷಗಳಲ್ಲಿ 42 ಲಕ್ಷ ಜನರಿಗೆ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತ ಸೇವೆ ನೀಡಿದ್ದು, ಅದಕ್ಕಾಗಿ 5 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಪೈಕಿ ಶೇ.70 ರಷ್ಟು ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದಾರೆ. ಸರ್ಕಾರಿ ಆರೋಗ್ಯ ವ್ಯವಸ್ಥೆ ಸರಿ ಇಲ್ಲ ಎಂದು ದೂರುವುದು ಸುಲಭ. ಆದರೆ ಉಚಿತ ಸೇವೆಯ ಪರಂಪರೆಯನ್ನು ನೋಡಬೇಕು. ನಮ್ಮ ಅವಧಿಯಲ್ಲಿ ಆಸ್ಪತ್ರೆಗಳ ಮೂಲಸೌಕರ್ಯದಲ್ಲಿ 5-6 ಪಟ್ಟು ಪ್ರಗತಿ, ಉಚಿತ ಔಷಧಿ ವಿತರಣೆ, ಡಯಾಲಿಸಿಸ್‌ ಸಂಖ್ಯೆಯನ್ನು 30 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಳ ಸೇರಿದಂತೆ ಅನೇಕ ಸುಧಾರಣೆ ಮಾಡಲಾಗಿದೆ ಎಂದರು.

20221215 080733

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹುಬ್ಬಳ್ಳಿಗೆ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಮಂಜೂರು ಮಾಡಿದ್ದು, ಜನವರಿಯಲ್ಲಿ ಶಂಕುಸ್ಥಾಪನೆ ನೆರವೇರಲಿದೆ.

ಹಿಂದೆ ಅನುದಾನ ಕೆಲವೇ ಭಾಗಗಳಿಗೆ ಹೋಗುತ್ತಿತ್ತು. ಮುಖ್ಯಮಂತ್ರಿಗಳು ಪ್ರತಿ ತಾಲೂಕು ಮಟ್ಟದಲ್ಲಿ ಹಿಂದುಳಿದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದಾರೆ.

14 ಬಗೆಯ ತಪಾಸಣೆಗಳು ನಮ್ಮ ಕ್ಲಿನಿಕ್‌ನಲ್ಲಿ ಲಭ್ಯ. ಔಷಧಿ, ಪರೀಕ್ಷೆ ಎಲ್ಲವೂ ಉಚಿತ.