IMG 20221218 WA0012

ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಮುನ್ನೆಚ್ಚರಿಕೆ ಹಾಗೂ ಜಾಗೃತಿ ಅವಶ್ಯ

Genaral STATE

ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಮುನ್ನೆಚ್ಚರಿಕೆ ಹಾಗೂ ಜಾಗೃತಿ ಅವಶ್ಯ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

ಅಸಾಂಕ್ರಾಮಿಕ ರೋಗಗಳ ಕುರಿತು ಅಂಕಿ ಅಂಶ ಸಂಗ್ರಹ ಮಾಡಬೇಕು

ಬೆಂಗಳೂರು, ಡಿಸೆಂಬರ್‌ 17, ಶನಿವಾರ ಆರೋಗ್ಯ ವ್ಯವಸ್ಥೆಯಲ್ಲಿ ಹೆಚ್ಚು ಸುಧಾರಣೆ ತರಲು ಮುನ್ನೆಚ್ಚರಿಕೆ ಕ್ರಮಗಳು ಅಗತ್ಯವಾಗಿದೆ. ಇದಕ್ಕಾಗಿ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ಇದರ ಜೊತೆಗೆ ಅಸಾಂಕ್ರಾಮಿಕ ರೋಗಗಳ ಕುರಿತ ಅಂಕಿ ಅಂಶ ಸಂಗ್ರಹಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

KRSSDI ನಿಂದ ಆಯೋಜಿಸಿದ್ದ ಮಧುಮೇಹ ಕುರಿತ ರಾಜ್ಯ ಸಮ್ಮೇಳನದಲ್ಲಿ ಸಚಿವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನಗಳ ಬಳಕೆಯ ಮೂಲಕ ಆಸ್ಪತ್ರೆ ಆರೈಕೆಯಿಂದ ಮನೆ ಆರೈಕೆಗೆ ಆರೋಗ್ಯ ವ್ಯವಸ್ಥೆಯನ್ನು ಬದಲಿಸಬೇಕಿದೆ. ವೈದ್ಯ ಕೇಂದ್ರಿತದಿಂದ ರೋಗಿ ಕೇಂದ್ರಿತ ವ್ಯವಸ್ಥೆಗೆ ಬದಲಾಗಬೇಕಿದೆ. ಆರೋಗ್ಯ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರಲು ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳು ಅವಶ್ಯವಾಗಿವೆ. ಮಾಹಿತಿ, ಶಿಕ್ಷಣ, ಸಂವಹನವಿದ್ದರೆ ಜನರಿಗೆ ಹೆಚ್ಚು ಉಪಯೋಗವಾಗುತ್ತದೆ. ಆರೋಗ್ಯದಲ್ಲಿ ಕರ್ನಾಟಕ ಪ್ರಗತಿ ಸಾಧಿಸಿದರೂ, ಮಾತೃ ಮರಣ, ಶಿಶು ಮರಣದಲ್ಲಿ ಹಿಂದುಳಿದಿದೆ. ಇದಕ್ಕಾಗಿ ಅರಿವು ಕಾರ್ಯಕ್ರಮ ಅಗತ್ಯ ಎಂದರು.

IMG 20221218 WA0010

ರಾಜ್ಯದಲ್ಲಿ 8 ಸಾವಿರಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಅಸಾಂಕ್ರಾಮಿಕ ರೋಗಗಳ ತಪಾಸಣೆ ಹೆಚ್ಚಿಸಲಾಗಿದೆ. ಈ ಮೂಲಕ ಸರಿಯಾದ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ವೈದ್ಯರು ಕೂಡ ಸರಿಯಾದ ಅಂಕಿ ಅಂಶಗಳ ಸಂಗ್ರಹಕ್ಕೆ ಸಹಕಾರ ನೀಡಬೇಕು. ವ್ಯಾಯಾಮ, ವಾಕಿಂಗ್‌ ಮೊದಲಾದ ಚಟುವಟಿಕೆಗಳು ಎಷ್ಟು ಅಗತ್ಯ ಎಂಬುದು ಅನೇಕರಿಗೆ ಅರಿವಿಲ್ಲ. ಇದರಿಂದ ಮಧುಮೇಹ ಹೆಚ್ಚಾಗುತ್ತಿದೆ ಎಂದರು.

ನಿದ್ದೆಯಲ್ಲಿ ವ್ಯತ್ಯಾಸ, ನಿಯಮಿತ ವ್ಯಾಯಾಮ ಹಾಗೂ ಉತ್ತಮ ಆಹಾರ ಪದ್ಧತಿ ಇಲ್ಲದಿದ್ದರೆ, ಮಧುಮೇಹ ಉಂಟಾಗುತ್ತದೆ. ಭಾರತ ಈಗ ಮಧುಮೇಹಿಗಳ ಕೇಂದ್ರವಾಗಿರುವುದು ಬಹಳ ಬೇಸರದ ಸಂಗತಿ. ಈಗಿನ ಕಾಲದಲ್ಲಿ ಆಹಾರ ಪದ್ಧತಿಯಲ್ಲಿ ಬಹಳ ಬದಲಾವಣೆ ಉಂಟಾಗಿದೆ. ಅಭಿವೃದ್ಧಿ ಉತ್ತಮವಾಗಿ ಆಗುತ್ತಿದ್ದರೂ, ಆರೋಗ್ಯ ದೃಷ್ಟಿಯಿಂದ ಇದನ್ನು ನೋಡಿದರೆ ನಾವು ಹಿಮ್ಮುಖವಾಗಿ ಚಲಿಸುತ್ತಿದ್ದೇವೆ ಎಂದೆನಿಸುತ್ತದೆ ಎಂದರು

IMG 20221218 WA0009

ಗರಿಷ್ಠ ವಯೋಮಾನ ಈಗ 60 ವರ್ಷಕ್ಕಿಂತ ಹೆಚ್ಚಿರುವುದು ಆರೋಗ್ಯ ಮೂಲಸೌಕರ್ಯದಲ್ಲಿ ಉಂಟಾದ ಪ್ರಗತಿಯನ್ನು ತೋರಿಸುತ್ತದೆ. ಆದರೆ ಎಷ್ಟು ದೀರ್ಘ ಬದುಕಿದ್ದೇವೆ ಎನ್ನುವುದಕ್ಕಿಂತ ಎಷ್ಟು ಉತ್ತಮವಾಗಿ ಬದುಕಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. 10 ವರ್ಷಕ್ಕೂ ಅಧಿಕ ಕಾಲ ಡಯಾಲಿಸಿಸ್‌ ಮಾಡಿಕೊಂಡೇ ಬದುಕಿದರೆ ಅದರಿಂದ ಏನು ಲಾಭ ಎಂದು ಚಿಂತಿಸಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ದಿನ 30 ಸಾವಿರ ಇದ್ದ ಪ್ರಕ್ರಿಯೆಯನ್ನು 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಖಾಸಗಿಯೂ ಸೇರಿದರೆ 1 ಲಕ್ಷಕ್ಕೂ ಅಧಿಕ ಪ್ರಕ್ರಿಯೆ ನಡೆಯುತ್ತಿದೆ ಎನ್ನಬಹುದು. ಇದು ಎಚ್ಚರಿಕೆಯ ಸಂಖ್ಯೆಯಾಗಿದೆ. ಈ ಎಲ್ಲಾ ಕಾರಣಗಳಿಂದ ಅಸಾಂಕ್ರಾಮಿಕ ರೋಗಗಳ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ ಎಂದರು.

ಈ ಸಮ್ಮೇಳನದಲ್ಲಿ ಮಧುಮೇಹದ ನಿವಾರಣೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡಬಹುದು. ಇದರಿಂದ ಕಾರ್ಯಕ್ರಮಗಳನ್ನು ಜಾರಿ ಮಾಡಲು ನೆರವಾಗುತ್ತದೆ ಎಂದರು.