8001 ಕೋಟಿ ರೂ.ಗಳ ಪೂರಕ ಅಂದಾಜುಗಳ*
*ಎರಡನೇ ಕಂತಿನ ಬೇಡಿಕೆಗಳ ಪ್ರಸ್ತಾವನೆಗೆ ವಿಧಾನಸಭೆಯಲ್ಲಿ ಅನುಮೋದನೆ*
ಸುವರ್ಣಸೌಧ,ಬೆಳಗಾವಿ(ಕರ್ನಾಟಕ ವಾರ್ತೆ)ಡಿ.29; 2022-23 ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತಿನ 8001.13 ಕೋಟಿ ರೂ.ಗಳ ಬೇಡಿಕೆಗಳ ಪ್ರಸ್ತಾವನೆಗೆ ವಿಧಾನಸಭೆಯಲ್ಲಿ ಇಂದು ಅನುಮೋದನೆ ದೊರೆಯಿತು.ಇದು ಪ್ರಸಕ್ತ ಸಾಲಿನ ಆಯವ್ಯಯ ಗಾತ್ರದ ಶೇ.8.38 ರಷ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸಭೆಯ ಕಲಾಪದಲ್ಲಿ ಇಂದು ಅವರು ಪ್ರಸ್ತಾವ ಮಂಡಿಸಿ, ಸದನದ ಅನುಮೋದನೆ ಕೋರಿ ಮಾತನಾಡಿದರು, ಪ್ರಸಕ್ತ ಸಾಲಿನ ಸುಮಾರು 2 ಲಕ್ಷ 71 ಸಾವಿರ ಕೋಟಿ ರೂ.ಗಳ ಬಜೆಟ್ ಗಾತ್ರದ ಶೇ.8.38 ರಷ್ಟಿರುವ ಎರಡನೇ ಕಂತಿನ ಪೂರಕ ಅಂದಾಜುಗಳ ಬೇಡಿಕೆಗಳ ಪ್ರಸ್ತಾವದಲ್ಲಿ ಸುಮಾರು 1396 ಕೋಟಿ ರೂ.ಗಳನ್ನು ರಾಜ್ಯ ವಿಪತ್ತು ನಿರ್ವಹಣೆಗೆ ,ಸುಮಾರು 780 ಕೋಟಿ ರೂ.ಕೇಂದ್ರದ ಪಾಲು,ವಿದ್ಯುತ್ ವಲಯಕ್ಕೆ 500 ಕೋಟಿ ರೂ.,ಜಲಧಾರೆಗೆ 200 ಕೋಟಿ ರೂ. ದೀನ್‍ದಯಾಳ ಉಪಾಧ್ಯಾಯ ಸೌಹಾರ್ದ ಹಾಸ್ಟೇಲುಗಳ ಸ್ಥಾಪನೆಗೆ 200 ಕೋಟಿ ರೂ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 200 ಕೋಟಿ ರೂ.ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ 300 ಕೋಟಿ ರೂ.ವೆಚ್ಚವೂ ಸೇರಿ ಒಟ್ಟು 8001 ಕೋಟಿ ರೂ.ಗಳ ಪೂರಕ ಅಂದಾಜಿನ ವಿವಿಧ ಬಾಬತ್ತುಗಳನ್ನು ವಿವರಿಸಿದರು.
ಕೇಂದ್ರ ಸರ್ಕಾರದಿಂದ 10550 ಕೋಟಿ ರೂ. ಜಿಎಸ್‍ಟಿ ಪಾಲು ಬಿಡುಗಡೆಯಾಗಿದೆ.3399 ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಉದ್ದೇಶಿಸಲಾಗಿದ್ದು 1700 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ರಾಜ್ಯವು ಜಿಎಸ್‍ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.ತೆರಿಗೆ ಸಂಗ್ರಹ ಸಾಮಥ್ರ್ಯವೂ ಹೆಚ್ಚಳವಾಗಿದೆ.ವಾಣಿಜ್ಯ ತೆರಿಗೆ ಮೂಲಕ 79010 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿಗಳು ಸದನಕ್ಕೆ ವಿವರಿಸಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಕೃಷ್ಣ ಭೈರೇಗೌಡ ಅವರು ಪೂರಕ ಅಂದಾಜುಗಳ ಪ್ರಸ್ತಾವದ ಮೇಲೆ ಮಾತನಾಡಿದರು.