ತಂಬಾಕು ನಿಯಂತ್ರಣ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ.
ಪಾವಗಡ. ಪಟ್ಟಣದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆರೋಗ್ಯ ಇಲಾಖೆಯು ಶುಕ್ರವಾರ ತಂಬಾಕು ನಿಯಂತ್ರಣ ಕಾಯ್ದೆಯ ಜಾಗೃತಿ ಮೂಡಿಸುವ ಸಲುವಾಗಿ ಗುಲಾಬಿ ಆಂದೋಲನ ಕಾರ್ಯಕ್ರಮಕ್ಕೆ ತಹಶೀಲ್ದಾರ್ ವರದರಾಜು ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ತಹಶೀಲ್ದಾರ್ ವರದರಾಜ ಮಾತನಾಡಿ, ಸಾರ್ವಜನಿಕರಿಗೆ ತಂಬಾಕು ಕಡಿಮೆ ಬಳಸುವಂತೆ ಗುಲಾಬಿ ಹೂಗಳನ್ನು ನೀಡುವ ಮೂಲಕ ಜಾಗೃತಿ ಉಂಟು ಮಾಡುವುದು ಒಂದು ವಿನೂತನ ಕಾರ್ಯಕ್ರಮವಾಗಿದೆ ಎಂದು, ತಂಬಾಕಿನಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ, ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮ ಉದ್ದೇಶಿಸಿ ಆರೋಗ್ಯ ಶಿಕ್ಷಣಾಧಿಕಾರಿಯಾದ ಸುರೇಶ್ ಮಾತನಾಡಿ, ತಂಬಾಕು ಸೇವನೆಯು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು, ಸಾರ್ವಜನಿಕರಲ್ಲಿ ತಂಬಾಕು ಬಳಕೆ ಕಡಿಮೆ ಮಾಡುವಂತೆ ವಿನಂತಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದರು.
ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್ ರಾಜಣ್ಣ ಮಾತನಾಡಿ, ಆರೋಗ್ಯವೇ ಮಹಾಭಾಗ್ಯ, ನಮ್ಮ ವ್ಯಸನಗಳು ನಮ್ಮ ಆರೋಗ್ಯವನ್ನು ಹಾಳು ಮಾಡುವಂತಿರಬಾರದು ಎಂದರು,
ಪಟ್ಟಣದ ಆದರ್ಶ ಶಾಲೆಯ ಮಕ್ಕಳು ತಂಬಾಕಿನ ಬಳಕೆಯನ್ನು ಕಡಿಮೆ ಮಾಡುವಂತೆ ಬಿತ್ತಿ ಚಿತ್ರಗಳನ್ನು ಹಿಡಿದು ಸಾರ್ವಜನಿಕ ಆಸ್ಪತ್ರೆಯಿಂದ ಶನಿ ಮಹಾತ್ಮ ವೃತ್ತದವರೆಗೂ ತಂಬಾಕನ್ನು ಕಡಿಮೆ ಬಳಸುವಂತೆ ಘೋಷಣೆಗಳನ್ನು ಕೂಗುತ್ತಾ, ರಸ್ತೆ ಬದಿಗಳಲ್ಲಿನ ಅಂಗಡಿಯವರಿಗೆ ಗುಲಾಬಿ ಹೂಗಳನ್ನು ನೀಡುವ ಮೂಲಕ ತಂಬಾಕು ಸೇವನೆ ಕಡಿಮೆ ಮಾಡುವಂತೆ ಜಾಗೃತಿ ಮೂಡಿಸಿದರು .
ಕಾರ್ಯಕ್ರಮದಲ್ಲಿ ಗ್ರೇಡ್ 1 ತಹಶೀಲ್ದಾರ್ ಎನ್ ಮೂರ್ತಿ , ಪಿ ಇ. ಓ ಚಿದಾನಂದ,. ಆರ್ ಐ ರಾಜಗೋಪಾಲ್, ಪೊಲೀಸ್ ಇಲಾಖೆಯ ಎ.ಎಸ್.ಐ ಗೋವಿಂದಪ್ಪ, ಬಿಸ್ಮಿಲ್ಲಾ ಕಣ್ಣೂರು, ದೈಹಿಕ ಶಿಕ್ಷಕರಾದ ಪ್ರಕಾಶ್ ಮತ್ತು ಆದರ್ಶ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.
ವರದಿ: ಶ್ರೀನಿವಾಸಲು ಎ