ಪತ್ರಕರ್ತರು ಪ್ರದೇಶಗಳಿಗೆ ಸೀಮಿತವಾಗದೇ ಅಖಂಡ ಕರ್ನಾಟಕದ ಭಾಗವಾಗಬೇಕು – ಸಿಎಂ ಬೊಮ್ಮಾಯಿ
ವಿಜಯಪುರ, ಫೆಬ್ರವರಿ 04 : ಪತ್ರಕರ್ತರು ಪ್ರದೇಶಗಳಿಗೆ ಸೀಮಿತವಾಗದೇ ಅಖಂಡ ಕರ್ನಾಟಕದ ಭಾಗಬೇಕು. ಆಗ ಮಾತ್ರ ರಾಜ್ಯದ ಗಟ್ಟಿ ಧ್ವನಿ ಎಲ್ಲೆಡೆ ಕೇಳುತ್ತದೆ. ಉತ್ತರ ದಕ್ಷಿಣ ಎಂಬ ಬೇಧಭಾವ ಇರಬಾರದು. ಎಲ್ಲಾ ಭಾಗಗಳು ಅಭಿವೃದ್ಧಿಯಾಗಬೇಕಾದರೆ ಸಮಗ್ರ ಕರ್ನಾಟಕದ ಬಗ್ಗೆ ನಾವು ಮಾತನಾಡಬೇಕು. ಈ ವಿಷಯವನ್ನು ಪರ್ತಕರ್ತರು ಚರ್ಚೆ ಮಾಡಬೇಕು ಎಂದು ಮುಖ್ಯಮಂತ್ತಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿರುವ “37ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ಟಿವಿ9 ಸುದ್ದಿ ವಾಚಕಿ ಸುಕನ್ಯಾ, ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿಯವರನ್ನು ಸನ್ಮಾನಿಸಿದರು.
ಅವಿನಾಭಾವ ಸಂಬಂಧ
ಪತ್ರಕರ್ತರು ಹಾಗೂ ರಾಜಕಾರಣಿಗಳದ್ದು ಅವಿನಾಭಾವ ಸಂಬಂಧ ಪರಸ್ಪರರನ್ನು ಬಿಟ್ಟು ಕೆಲಸ ಮಾಡಲಾಗುವುದಿಲ್ಲ. ಸುದ್ದಿಯನ್ನು ಬಿಂಬಿಸುವ ಮೂಲಕ ನಮ್ಮ ಅಭಿಪ್ರಾಯಗಳನ್ನು ಬಿಂಬಿಸಿ, ಅಭಿಪ್ರಾಯಗಳ ಮೂಲಕ ನಮ್ಮ ವ್ಯಕ್ತಿತ್ವ ಮೂಡಿಸಲು ಪತ್ರಕರ್ತರು ಕಾರಣ. ರಾಜಕಾರಣಿಗಳು ಇಲ್ಲದಿದ್ದರೆ, ಪತ್ರಿಕೆಗಳನ್ನು ಯಾರೂ ಓದುತ್ತಿರಲಿಲ್ಲ. ಪ್ರಾಮಾಣಿಕ ಕಾರ್ಯನಿರತ ಸಂಬಂಧ. ಗಡಿಗಳನ್ನು ದಾಟದೇ ಇದ್ದಾಗ ಆರೋಗ್ಯಕರವಾದ ಸಂಬಂಧವಿರುತ್ತದೆ. ರಾಜಕಾರಣಿಗಳು ಮತ್ತು ಪತ್ರಕರ್ತರ ನಡುವೆ ಆರೋಗ್ಯಕರವಾದ ಸಂಬಂಧವಿದ್ದರೆ ರಾಜ್ಯದ ರಾಜಕಾರಣ ಹಾಗೂ ಆಡಳಿತ ಉತ್ತಮವಾಗಿರುತ್ತದೆ. ಪತ್ರಿಕೋದ್ಯಮ ಬಹಳಷ್ಟು ಬದಲಾವಣೆ ಕಂಡಿದೆ. ಪ್ರತಿಯೊಬ್ಬ ಓದುಗನೂ ಪರ್ತಕರ್ತನಾಗಿದ್ದಾನೆ. ಇಂಥ ಸಂದರ್ಭದಲ್ಲಿ ಪತ್ರಿಕೋದ್ಯಮವನ್ನು ಉಳಿಸಿಕೊಂಡು ಪರ್ತಕರ್ತರ ವೃತ್ತಿಯನ್ನು ಗಟ್ಟಿಗೊಳಿಸುವುದು ಸವಾಲಿನ ಕೆಲಸ. ವಿಶ್ವಾಸಾರ್ಹತೆ ಹಾಗೂ ಸಹಮತದಿಂದ ಇದು ಸಾಧ್ಯವಿದೆ. ಇದು ರಾಜಕಾರಣಿಗಳಿಗೂ ಅನ್ವಯವಾಗುತ್ತದೆ ಎಂದರು.
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್
ಸಮಸ್ಯೆಗಳಿಗೆ ಪರಿಹಾರ ನೀಡಿದ್ದೇವೆ. ಇನ್ನಷ್ಟು ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು. ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ನೀಡಬೇಕೆಂಬ ಬೇಡಿಕೆ ಇದೆ. ಗ್ರಾಮೀಣ ಪತ್ರಕರ್ತರ ಬಗ್ಗೆ ಮಾಹಿತಿಯನ್ನು ಪತ್ರಕರ್ತರ ಸಂಘದವರು ಮಾಹಿತಿ ಸರಿಯಾಗಿ ನೀಡಿದರೆ, ಖಂಡಿತವಾಗಿಯೂ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಲು ಬಜೆಟ್ ನಲ್ಲಿ ಅನುದಾನ ನೀಡಲಾಗುವುದು ಎಂದರು. ನಿವೃತ್ತ ಪತ್ರಕರ್ತರಿಗೆ ಮಾಸಾಸನವನ್ನು ಹೆಚ್ಚಳ ಮಾಡಲು ಕೋರಿದ್ದು, ಈ ಬಾರಿಯ ಬಜೆಟ್ ನಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಪರ್ತಕರ್ತರ ಭವನಗಳ ನಿರ್ವಹಣೆಯನ್ನು ಪತ್ರಕರ್ತರಿಗೇ ನೀಡಬೇಕೆಂಬ ಮನವಿಗೆ ಸ್ಪಂದಿಸಿ, ಈ ಬಗ್ಗೆ ಯೋಚಿಸಿ, ನಾನು ನೀಡಲು ಸಿದ್ಧ ಎಂದರು. ಅದರ ನಿರ್ವಹಣೆ ಮಾಡುವ ಶಕ್ತಿ ನಿಮ್ಮಲ್ಲಿ ಇದ್ದರೆ ನೀಡಲಾಗುವುದು. ಇಲ್ಲದಿದ್ದರೆ ಸರ್ಕಾರದ ಜವಾಬ್ದಾರಿಯಾಗುತ್ತದೆ ಎಂದರು.
ನಮ್ಮಲ್ಲಿಯೇ ಪೈಪೋಟಿ
ವಿಧಾನಪರಿಷತ್ತಿನಲ್ಲಿ ನಾಮನಿರ್ದೇಶನ ಕೋರಿರುವ ಬಗ್ಗೆ ಪ್ರತಿಕ್ರಿಯಿಸಿ, ನಮ್ಮಲ್ಲಿಯೇ ಪೈಪೋಟಿ ಬಹಳ ಇದೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ ಆ ಪಕ್ಷದಿಂದಲೇ ಸಾಕಷ್ಟು ಜನ ನಿಲ್ಲುತ್ತಾರೆ. ಬರುವ ದಿನಗಳಲ್ಲಿ ಅಂಥ ಅವಕಾಶ ದೊರೆತರೆ ಮಾಡೋಣ ಎಂದರು. ಸ್ಥಳೀಯ ಸಂಸ್ಥೆಗಳಲ್ಲಿ ಪರ್ತಕರ್ತರಿಗೆ ನಿವೇಶನ ನೀಡುವ ಬಗ್ಗೆ ಭರವಸೆ ನೀಡಿದರಲ್ಲದೇ ಜಾಹೀರಾತುಗಳ ದರ ಪರಿಷ್ಕರಣೆಗೆ ಆದೇಶ ನೀಡಲಾಗಿದೆ. ಪರಿಷ್ಕರಣೆ ಆದ ಕೂಡಲೇ ಕ್ರಮ ವಹಿಸಲಾಗುವುದು. ಯಶಸ್ವಿನಿ ವ್ಯಾಪ್ತಿಗೆ ಪರ್ತಕರ್ತರನ್ನು ತರಲು ಕೂಡ ಪರಿಶೀಲಿಸಲಾಗುವುದು ಎಂದರು.
ಕರ್ನಾಟಕ ಇಡೀ ದೇಶಕ್ಕೆ ಅನ್ನ ನೀಡುವ ರಾಜ್ಯವಾಗಬೇಕು:
ಬಸವಣ್ಣನವರು ಹುಟ್ಟಿದ ಮಣ್ಣಿನಲ್ಲಿ ಆಧುನಿಕ ಚಿಂತಕರ ಸಮ್ಮೇಳನವಿದು. ಸಮ್ಮೇಳನ ಔಚಿತ್ಯಪೂರ್ಣವಾಗಬೇಕಾದರೆ ಈ ಪ್ರದೇಶದ ಬಸವಣ್ಣನವರು, ಸಿದ್ಧೇಶ್ವರ ಸ್ವಾಮೀಜಿಗಳ ಮೌಲ್ಯಗಳನ್ನು ಅಳವಡಿಸಕೊಳ್ಳಬೇಕು. ವಿಜಯಪುರ ಜಿಲ್ಲೆಯ ಭವ್ಯ ಪರಂಪರೆ, ಪಂಚ ನದಿಗಳು ಕೃಷ್ಣಾ ನದಿ ಹಾಗೂ ಇಲ್ಲಿನ ಮಣ್ಣಿನ ಸೊಗಡು ಅತ್ಯಂತ ಶ್ರೇಷ್ಠವಾಗಿರುವಂಥದ್ದು. ವಿಜಾಪುರ ಜೋಳದಲ್ಲಿರುವ ಸತ್ವ ಶ್ರೇಷ್ಠತೆ ಹೈಬ್ರಿಡ್ ಜೋಳದಲ್ಲಿರುವುದಿಲ್ಲ.ಇದೇ ಶ್ರೇಷ್ಠತೆ ಇಲ್ಲಿನ ಜನರಿಗಿದೆ. ಕಠಿಣ ಪರಿಶ್ರಮಿಗಳಿರುವ ಈ ಜಿಲ್ಲೆಯಲ್ಲಿ ಅಭಿವೃದ್ಧಿ ಪಥವು ಪ್ರಾರಂಭವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕೃಷ್ಣೆಯ ನೀರು 5 ಲಕ್ಷ ಹೆಕ್ಟೇರ್ ಪ್ರದೇಶದ ಕೊನೆಯ ಭಾಗಕ್ಕೂ ತಲುಪಿದಾಗ ಕರ್ನಾಟಕ ,ಇಡೀ ದೇಶಕ್ಕೆ ಅನ್ನ ನೀಡುವ ರಾಜ್ಯವಾಗುತ್ತದೆ. ಈ ಕನಸಿನ ಈಡೇರಿಕೆಗೆ ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡಬೇಕಿದೆ ಎಂದರು.
ಆಡಳಿತ ಮಾಡುವವರಿಗೆ ಸ್ಪಷ್ಟತೆ ಇರಬೇಕು :
ನಾನು ನೀರಾವರಿ ಸಚಿವನಾದಾಗ, ಸ್ಕೀಮ್ ಬಿ ಯೋಜನೆಗಳಾದ ಚಿಮ್ಮಲಗಿ, ಗುತ್ತಿಬಸವಣ್ಣ ಯೋಜನೆ ಮಾಡುವುದು ಬೇಡ ಎಂದು ಹೇಳುತ್ತಿದ್ದರು. ಕೃಷ್ಣಾ ಯೋಜನೆಯೆಂದು ಮಾತ್ರ ಇದ್ದು, ಸ್ಕೀಮ್ ಎ ಮತ್ತು ಬಿ ಎಂದಿಲ್ಲ ಎಂದು ತಿಳಿಸಿದೆ. ಯೋಜನೆಯ ಮೂಲಸೌಕರ್ಯ ರಾಜ್ಯ ಮಾಡಬಹುದಾಗಿದ್ದು, ನೀರು ಹಂಚಿಕೆಯ ವಿಷಯದಲ್ಲಿ ಟ್ರಿಬ್ಯೂನಲ್ ಆದೇಶ ಪಾಲಿಸಬೇಕು ಎಂದು ತಿಳಿಸಿ, 2009 ರಲ್ಲಿ ಕೃಷ್ಣಾ 3ನೇ ಹಂತದ 9 ಯೋಜನೆಗಳಲ್ಲಿ 7 ಯೋಜನೆಗಳನ್ನು ನನ್ನ ಕಾಲಾವಧಿಯಲ್ಲಿ ಪ್ರಾರಂಭಿಸಿದೆ. ಆಡಳಿತ ಮಾಡುವವರಿಗೆ ಸ್ಪಷ್ಟತೆ ಇದ್ದು, ನಮ್ಮ ಕರ್ತವ್ಯ ವ್ಯಾಪ್ತಿಯ ಬಗ್ಗೆ ಅರಿವಿರಬೇಕು. ಜನರಿಗೆ ಒಳಿತು ಮಾಡಲು ಒಂದು ಕಾರಣ ಸಾಕು, ಮಾಡದಿರಲು ನೂರು ಕಾರಣಗಳಿರುತ್ತವೆ. ಕಟ್ಟಕಡೆಯ ವ್ಯಕ್ತಿಗೆ ಅನುಕೂಲವಾಗುವಂತಹ ಕೆಲಸ ಮಾಡಲಾಗುತ್ತಿದೆ. ಪ್ರಾದೇಶಿಕವಾಗಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಾಗ ಮಾತ್ರ ಸಮಗ್ರ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಸಿ.ಸಿ.ಪಾಟೀಲ್, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ಮತ್ತಿತರರು ಹಾಜರಿದ್ದರು.