f640fc06 8930 4959 8c3d 12f6ea354f9e

ಕೇರಳ ಆರೋಗ್ಯ ಸಚಿವರೊಂದಿಗೆ ವೀಡಿಯೋ ಸಂವಾದ – ಡಾ.ಕೆ.ಸುಧಾಕರ್

STATE

ಬೆಂಗಳೂರು  – ಮೇ 12, 2020: ಕೋವಿಡ್ ವಿರುದ್ಧದ ಹೋರಾಟದಲ್ಲಿ ಅಳವಡಿಸಿಕೊಂಡಿರುವ ಉತ್ತಮ ನಿಯಂತ್ರಣ ಮತ್ತು ಚಿಕಿತ್ಸಾ ಪದ್ಧತಿಗಳ ಕುರಿತು ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್ ಅವರ ಜೊತೆ ವೈದ್ಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಸೋಮವಾರ ವಿಡಿಯೋ ಸಂವಾದ ನಡೆಸಿದರು. ಐವತ್ತು ನಿಮಿಷಗಳಿಗೂ ಹೆಚ್ಚು ಕಾಲ ನಡೆದ ಸಂವಾದದಲ್ಲಿ ಎರಡೂ ರಾಜ್ಯಗಳಲ್ಲಿ ರೋಗದ ಪತ್ತೆ, ಪರೀಕ್ಷೆ ಮತ್ತು ಚಿಕಿತ್ಸೆಗೆ ಅಳವಡಿಸಿಕೊಂಡಿರುವ ಕ್ರಮಗಳು, ಅವುಗಳಿಂದ ದೊರಕಿರುವ ಫಲಿತಾಂಶ, ಲಾಕ್‍ಡೌನ್ ಸಡಿಲಿಕೆ ನಂತರ ಎದುರಾಗುವ ಸವಾಲುಗಳನ್ನು ಎದುರಿಸಲು ಕೈಗೊಳ್ಳಲಿರುವ ಮುನ್ನೆಚ್ಚರಿಕೆ ಕ್ರಮ ಕುರಿತು ವಿವರವಾಗಿ ಚರ್ಚಿಸಲಾಯಿತು. ರೋಗ ನಿಯಂತ್ರಣಕ್ಕೆ ಬರುವತನಕ ಇನ್ನು ಮುಂದೆ ನಿಯಮಿತವಾಗಿ ಸಂವಾದ ನಡೆಸಿ, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಇಬ್ಬರೂ ಸಚಿವರು ಸಹಮತ ವ್ಯಕ್ತಪಡಿಸಿದರು.

66503c09 2b94 4103 9cf2 bd8fdae16713

ಇತರೆ ರಾಜ್ಯಗಳಿಗೆ ಮತ್ತು ದೇಶದ ಶೇಕಡಾವಾರು ಮರಣ ಪ್ರಮಾಣಕ್ಕೆ ಹೋಲಿಸಿದರೆ ಕೇರಳ ಉತ್ತಮವಾಗಿ ಕೋವಿಡ್ ನಿರ್ವಹಣೆ ಮಾಡಲು ಕೈಗೊಂಡ ಕ್ರಮಗಳನ್ನು ವಿವರಿಸಿದ ಸಚಿವೆ ಶೈಲಜಾ ಟೀಚರ್, ವುಹಾನ್‍ನಲ್ಲಿ ಸೋಂಕು ಕಾಣಿಸಿಕೊಂಡು ಅಲ್ಲಿನ ವಿದ್ಯಾರ್ಥಿಗಳು ಕೇರಳಕ್ಕೆ ಹಿಂತಿರುಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ತಿಳಿಸಿದರು. ಪಿಎಚ್‍ಸಿ ಮತ್ತು ತಾಲ್ಲೂಕು ಮಟ್ಟದಲ್ಲಿ ಉತ್ತಮ ಆರೋಗ್ಯ ಸೇವೆ ಜಾಲ ಹೊಂದಿರುವುದರಿಂದ ಕೊರೋನಾ ಸೋಂಕಿತರನ್ನು ಮುಂಚಿತವಾಗಿ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಿದ್ದರಿಂದ ಮತ್ತು ಪ್ರಾಥಮಿಕ ಮತ್ತು ದ್ವತೀಯ ಹಂತದ ಸೋಂಕಿತರನ್ನು ಪ್ರತ್ಯೇಕಿಸಿ ಕಟ್ಟುನಿಟ್ಟಾಗಿ ಅವರ ಮೇಲೆ ನಿಗಾವಹಿಸಿದ್ದರಿಂದ  ಕೇರಳದಲ್ಲಿ ಮರಣ ಪ್ರಮಾಣ ಹೆಚ್ಚಾಗದಂತೆ ತಡೆಯಲು ಸಾಧ್ಯವಾಯಿತು ಎಂದು ತಿಳಿಸಿದರು

9897fbad 3b70 486c b5f2 614b91c6757f

ಕರ್ನಾಟಕಕ್ಕೆ ಹೋಲಿಸಿದರೆ ಕೇರಳದಲ್ಲಿ ಜನಸಾಂದ್ರತೆ ವಿರಳ. ಸೋಂಕಿನ ಸರಪಳಿಯನ್ನು ತುಂಡರಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಜತೆ, ಆಶಾ ಕಾರ್ಯಕರ್ತೆಯರು ನೆರವಾಗುತ್ತಿದ್ದಾರೆ. ಇವರೊಂದಿಗೆ ಸಿಸಿಬಿ ಪೊಲೀಸರ ನೆರವನ್ನೂ ಪಡೆಯಲಾಗುತ್ತಿದೆ. ಸೋಂಕಿತರು ಹೆಚ್ಚಿನ ಜನರ ಸಂಪರ್ಕಕ್ಕೆ ಬಾರದಂತೆ ಕಠಿಣ ಕ್ರಮ ಕೈಗೊಂಡಿರುವುದು ಸಹ ಉತ್ತಮ ಫಲಿತಾಂಶ ನೀಡಿದೆ. ಲಾಕ್‍ಡೌನ್ ಸಡಿಲಿಕೆ ನಂತರ ಹೊರ ರಾಜ್ಯ ಮತ್ತು ವಿದೇಶಗಳಿಂದ ಬಹು ದೊಡ್ಡ ಸಂಖ್ಯೆಯಲ್ಲಿ ಕೇರಳಿಗರು ಮರಳಲು ನೋಂದಣಿ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಚೆನ್ನೈನಿಂದ ಆಗಮಿಸಿದ ಅನೇಕರು ಪಾಸಿಟಿವ್ ಆಗಿರುವುದು ದೊಡ್ಡ ಸವಾಲಾಗಿದೆ ಎಂದು ಕೇರಳ ಆರೋಗ್ಯ ಸಚಿವರು ಸಂವಾದದಲ್ಲಿ ಹೇಳಿದರು.

ಮುಂದೆ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಲು ಆರಂಭಿಸಿದ ಬಳಿಕವಷ್ಟೇ ಸವಾಲು ಎದುರಾಗುತ್ತದೆ. ಈ ಹಂತದಲ್ಲಿ ಕರ್ನಾಟಕದಂತಹ ಉತ್ತಮ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ರಾಜ್ಯದ ಸಲಹೆ, ಸಹಕಾರ ಅಗತ್ಯವಿದೆ ಎಂದರು. ಸಂವಾದ ಸಂದರ್ಭದಲ್ಲಿ ಸಚಿವ ಸುಧಾಕರ್ ಅವರಿಂದ ಕರ್ನಾಟಕದಲ್ಲಿ ಅಳವಡಿಸಿಕೊಂಡಿರುವ ತಂತ್ರಜ್ಞಾನ ಮತ್ತು ತಜ್ಞರ ಆಧರಿತ ಚಿಕಿತ್ಸಾ ಕ್ರಮ, ಆರಂಭದಲ್ಲಿ ಎರಡರಷ್ಟಿದ್ದ ಲ್ಯಾಬ್‍ಗಳ ಸಂಖ್ಯೆ ಇದೀಗ 35 ಕ್ಕೆ ಏರಿಕೆಯಾಗಿರುವ ಮತ್ತು ಪ್ರತಿದಿನ ಐದೂವರೆ ಸಾವಿರ ಟೆಸ್ಟ್ ಮಾಡುತ್ತಿರುವ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಗರ್ಭಿಣಿ ಮತ್ತು ಹಿರಿಯ ನಾಗರಿಕರ ಚಿಕಿತ್ಸೆಗೆ ಸಂಬಂಧಿಸಿದಂತೆ ಐಸಿಎಂಆರ್ ಮಾರ್ಗಸೂಚಿ ಮತ್ತು ಎದುರಾಗಿರುವ ಗೊಂದಲಗಳ ಬಗ್ಗೆಯೂ ಸಚಿವದ್ವಯರು ಚರ್ಚಿಸಿ, ಇಂತಹ ವಿಷಯಗಳ ಬಗ್ಗೆ ಏಕರೂಪದ ಕ್ರಮಗಳ ಬಗ್ಗೆ ಮಾರ್ಗಸೂಚಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲು ನಿರ್ಧರಿಸಿದರು

6044a685 e219 46d6 8e17 869126fe84a9

ಕೊರೋನಾ ಸೋಂಕಿತರು ಮತ್ತು ಕುಟುಂಬ ಸದಸ್ಯರನ್ನು ಕಳಂಕಿತರಂತೆ ಕಾಣುವ ಮನೋಭಾವ ಸುಶಿಕ್ಷಿತರಲ್ಲೂ ಕಾಣುತ್ತಿದೆ. ಸಾಮಾಜಿಕ ಪಿಡುಗಿನಂತೆ ಕಾಣುವ ಮನೋಭಾವ ಕೆಲವರಲ್ಲಿದೆ, ಕೇರಳದ ಪರಿಸ್ಥಿತಿ ಏನು ಎಂಬ ಸಚಿವ ಸುಧಾಕರ್ ಅವರ ಪ್ರಶ್ನೆಗೆ, “ಕೇರಳದಲ್ಲೂ ಅದೇ ಸ್ಥಿತಿಯಿದೆ. ಸೋಂಕಿತರನ್ನು ಕ್ವಾರಂಟೈನ್ ಮಾಡುವುದಕ್ಕೆ ಸಂಬಂಧಿಸಿದಂತೆ ತಕರಾರು ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಾಧ್ಯಮಗಳ ಮೂಲಕ ಪ್ರತಿದಿನವೂ ಜನರಲ್ಲಿ ಅರಿವು ಮೂಡಿಸುವ ಯತ್ನ ನಡೆಸಿದ್ದಾರೆ” ಎಂದರು.

ಸೋಂಕಿತರನ್ನು ಕ್ವಾರಂಟೈನ್‍ಗೆ ಒಳಪಡಿಸುತ್ತಿರುವ ರೀತಿ, ಅವರನ್ನು ಟೆಸ್ಟ್‌ಗೆ ಒಳಪಡಿಸುತ್ತಿರುವುದು, ಉಸಿರಾಟ ಹಾಗೂ ಇತರೆ ಕಾಯಿಲೆಗಳಿರುವವರಿಗೆ ಔಷಧ ಉಪಚಾರ ನೀಡುತ್ತಿರುವುದು, ಖಾಸಗಿ ಮೆಡಿಕಲ್ ಕಾಲೇಜು ಮತ್ತು ವೈದ್ಯರ ಸಹಕಾರ, ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಅಳವಡಿಸಿಕೊಂಡಿರುವ ಕ್ರಮ, ಗರ್ಭಿಣಿಯರಿಗೆ ನೀಡುತ್ತಿರುವ ಚಿಕಿತ್ಸೆ, ವಿದೇಶಿ ಪ್ರಯಾಣಿಕರ ಆಗಮನದ ಬಳಕ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸುತ್ತಿರುವುದು ಸೇರಿದಂತೆ ಇತರೆ ಪ್ರಮುಖ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.

ವಿಡಿಯೋ ಸಂವಾದ ಸಂದರ್ಭದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ರಾಜೀವ್ ಗಾಂಧಿ ಆರೋಗ್ಯ ವಿವಿಯ ಕುಲಪತಿ ಡಾ. ಸಚ್ಚಿದಾನಂದ, ಡಿಎಂಇ ಡಾ. ಗಿರೀಶ್, ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ. ಮಂಜುನಾಥ್, ಕಿಮ್ಸ್ ನಿವೃತ್ತ ನಿರ್ದೇಶಕ ಡಾ. ಸುದರ್ಶನ್ ಮತ್ತಿತರೆ ಅಧಿಕಾರಿಗಳು ಹಾಜರಿದ್ದರು.