ಭೂ ಸುಧಾರಣಾ ಕಾಯಿದೆ :
ರೈತ ಸಂಘಟನೆಗಳ ಜೊತೆ ಸೇರಿ ಹೋರಾಟ : ಸಿದ್ದರಾಮಯ್ಯ :
ಬೆಂಗಳೂರು : ಭೂ ಸುಧಾರಣೆ ಕಾಯಿದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ರೈತ ಸಂಘಟನೆಗಳ ಜೊತೆಗೂಡಿ ಹೋರಾಟ ರೂಪಿಸಲಾಗುವುದು. ಈ ಕುರಿತು ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಚರ್ಚಿಸುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಇಂದು ರೈತ ಸಂಘಟನೆಗಳ ಮುಖಂಡರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ನಾವೆಲ್ಲರೂ ತಿದ್ದುಪಡಿಯನ್ನು ವಿರೋಧ ಮಾಡುತ್ತೇವೆ. ಇದು ರೈತರ ಕತ್ತು ಹಿಚುಕುವ ಕರಾಳ ಶಾಸನ. ಸರ್ಕಾರ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ. ಇದರಿಂದ ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿ ಬುಡಮೇಲು ಆಗುತ್ತದೆ. ಆಹಾರ ಸ್ವಾವಲಂಬನೆಗೆ ಧಕ್ಕೆ ತರುವ ಕುಟಿಲ ಪ್ರಯತ್ನ. ಇದಾಗಿದೆ ಎಂದು ರೈತ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಹಳ್ಳಿ ಮಟ್ಟದಿಂದ ಹೋರಾಟ ಮಾಡಿ ಸಂಘರ್ಷದ ಹಾದಿ ಹಿಡಿಯಲು ನಾವು ತಯಾರು ಎಂದು ಅವರು ಸಭೆಯಲ್ಲಿ ತಿಳಿಸಿದ್ದಾರೆ. ನಾವು ಸಹ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಚಳವಳಿ ಆರಂಭಿಸುತ್ತೇವೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಮೊದಲು ವೈದ್ಯಕೀಯ ಉಪಕರಣ ಖರೀದಿಯಲ್ಲಿ ಆಗಿರುವ ಅವ್ಯವಹಾರ ಕುರಿತು ಮೊದಲು ಹೋರಾಟ ಕೈಗೆತ್ತಿಕೊಳ್ಳುತ್ತೇವೆ. ಬಳಿಕ ಭೂ ಸುಧಾರಣಾ ಕಾಯಿದೆಗೆ ಸಂಬಂಧಿಸಿದ ಚಳ¼ವಳಿ ಆರಂಭವಾಗಲಿದೆ ಎಂದು ಹೇಳಿದರು.
ಇದಲ್ಲದೆ, ಎಪಿಎಂಸಿ ಕಾಯಿದೆ, ಇಂಧನ ಕಾಯಿದೆಗೆ ತಿದ್ದುಪಡಿ ಸೇರಿದಂತೆ ವಿವಿಧ ಕಾಯಿದೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿ ಬಗ್ಗೆಯೂ ನಾವು ಹೋರಾಟ ನಡೆಸಲಿದ್ದೇವೆ. ರೈತರು ಹಾಗೂ ಜನ ಸಾಮಾನ್ಯರಿಗೆ ಮಾರಕವಾಗುವಂಥ ತಿದ್ದುಪಡಿಗಳನ್ನು ಉಭಯ ಸರ್ಕಾರಗಳು ಜಾರಿಗೊಳಿಸುತ್ತಿವೆ ಎಂದು ದೂರಿದರು.
ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 13 ಸಾವಿರಕ್ಕೂ ಹೆಚ್ಚು ಕೇಸುಗಳು ನ್ಯಾಯಾಲಯಗಳಲ್ಲಿವೆ. ಒಂದು ವರದಿ ಪ್ರಕಾರ 1.70 ಲಕ್ಷ ಎಕರೆ ಜಮೀನು ಈ ವ್ಯಾಜ್ಯಗಳಿಗೆ ಸಂಬಂಧಿಸಿದೆ. ಒಂದು ಎಕರೆಗೆ 50 ಲಕ್ಷವಾದರೂ 70-80 ಕೋಟಿ ರೂ. ಮೌಲ್ಯದ ಜಮೀನು ಇದಾಗಿದೆ. ಆ ಎಲ್ಲ ಜಮೀನುಗಳು ಖರೀದಿ ಮಾಡಿರುವವರ ವಿರುದ್ಧವಾಗಿದೆ.
ಇದನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು. ಆದರೆ, ಕಾಯಿದೆಗೆ ತಿದ್ದುಪಡಿ ತಂದು ಕೇಸುಗಳನ್ನು ವಜಾ ಮಾಡಿರುವುದರಿಂದ ಕೋಟ್ಯಂತರ ರೂ. ಮೌಲ್ಯದ ಜಮೀನುಗಳು ಉಳ್ಳವರ ಪಾಲಾಗುತ್ತಿದೆ ಎಂದು ಹೇಳಿದರು.
ಹೌಸಿಂಗ್ ಸೊಸೈಟಿ, ರಿಯಲ್ ಎಸ್ಟೇಟ್ ಉದ್ಯಮಿಗಳು, ಶ್ರೀಮಂತರು ಜಮೀನಿನ ಮೇಲೆ ಹಣ ಹೂಡಿಕೆ ಮಾಡುತ್ತಾರೆ. ಇದು ಮುಂದೆ ಹಣ ಮಾಡಿಕೊಳ್ಳುವ ಹುನ್ನಾರ. ಅವರ ಒತ್ತಡಕ್ಕೆ ಸರ್ಕಾರ ಮಣಿದಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದರು.
ಸಿಎಂ ಸುಳ್ಳು ಹೇಳಿದ್ದಾರೆ.
ಕೊರೊನಾ ಉಪಕರಣಗಳ ಖರೀದಿ ಸಂಬಂಧ 24 ಗಂಟೆಯಲ್ಲಿ ಮಾಹಿತಿ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. ಮಾಹಿತಿ ಕೋರಿ ಜುಲೈ 10ರಂದು ನಾನು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದೇನೆ. 24 ಗಂಟೆ ಎಂದರೆ 12 ದಿನಗಳೇ ? ರಾಜ್ಯದ ಜನತೆಗೆ ಸಿಎಂ ಈ ಸುಳ್ಳು ಹೇಳಿದ್ದಾರೆ.
ಮುಖ್ಯ ಕಾರ್ಯದರ್ಶಿಗೇ ಪತ್ರ ಬರೆದರೂ ಈ ವರೆಗೆ ಉತ್ತರವಿಲ್ಲ. ಒಂದು ಇಲಾಖೆ ಮಾತ್ರವಲ್ಲ. ಆರೋಗ್ಯ, ವೈದ್ಯ ಶಿಕ್ಷಣ, ಕಂದಾಯ, ಶಿಕ್ಷಣ, ನಗರಾಭಿವೃದ್ಧಿ, ಸಮಾಜ ಕಲ್ಯಾಣ ಈ ಎಲ್ಲ ಇಲಾಖೆಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳು ಖರೀದಿ ಮಾಡಿರುವ ಉಪಕರಣಗಳು ಮತ್ತು ಅದರ ಮೌಲ್ಯದ ಬಗ್ಗೆ ಮಾಹಿತಿ ಕೋರಿದ್ದೇನೆ. ನಮ್ಮ ಬಳಿ ಕೆಲ ಮಾಹಿತಿಗಳಿವೆ. ಅದನ್ನು ನಾಳೆ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಜನರ ಮುಂದೆ ಇಡುತ್ತೇವೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಕಂದಾಯ ಸಚಿವರಿಗೆ ಉಳುಮೆ ಪಾಠ
ಕಂದಾಯ ಸಚಿವ ಅಶೋಕ್ ಅವರು ರಾಜಕಾರಣಕ್ಕೆ ಬಂದಿದ್ದು ಯಾವಾಗ ? 1974ರಲ್ಲಿ ಅವರು ರಾಜಕಾರಣದಲ್ಲಿ ಇದ್ದರೆ ? ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ ಅಥವಾ ಕಾಗೋಡು ತಿಮ್ಮಪ್ಪ ಅವರನ್ನು ಕೇಳಿದರೆ ಭೂ ಸುಧಾರಣೆ ಕಾಯಿದೆ ಜಾರಿಗೆ ಬಂದ ಬಗ್ಗೆ ಹೇಳುತ್ತಾರೆ. ಅದರ ಇತಿಹಾಸ ವಿವರಿಸುತ್ತಾರೆ. ಕಂದಾಯ ಸಚಿವರಾದ ತಕ್ಷಣ ಎಲ್ಲ ಮಾಹಿತಿ ಅವರ ಬಳಿ ಇರುವುದೇ ? ಎಂದಾದರೂ ಅವರು ಹೊಲ ಉಳುಮೆ ಮಾಡಿದ್ದಾರೆಯೇ ? ನೇಗಿಲು ಹಿಡಿದಿದ್ದಾರೆಯೇ ? ಎಂದು ಪ್ರಶ್ನಿಸಿದರು.
ನಮ್ಮ ಮನೆಯಲ್ಲಿ ಕೆಲಸದವರ ಜೊತೆ ನಾನೂ ಹೊಲ ಉಳುಮೆ ಮಾಡಲು ಹೋಗುತ್ತಿದ್ದೆ. ನೆಗಿಲ ಹಿಡಿ ಹಿಡಿದು ಅಂಗೈ ಗಾಯವಾಗುತ್ತಿತ್ತು. ನಾನು ಈಗಲೂ ನೇಗಿಲು ಕಟ್ಟಬಲ್ಲೆ, ಕುಂಟೆ ಕಟ್ಟಬಲ್ಲೆ, ಹಲುಬೆ ಹೊಡೆಯಬಲ್ಲೆ, ಮಟ್ಟ ಹೊಡೆಯಬಲ್ಲೆ, ಹೊಲ ಉಳುಮೆ ಮಾಡಬಲ್ಲೆ.
ರೈತನಾಗಿ ಈ ಎಲ್ಲವನ್ನೂ ಅಶೋಕ್ ಮಾಡಿದ್ದಾರೆಯೇ ? ಪ್ರಧಾನಿ ನರೇಂದ್ರ ಮೋದಿಯವರು ಹೊಲ ಉಳುಮೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ನಾನು ಚಹಾ ಮಾರಿದ್ದೇನೆ ಎಂದವರು ತಿಳಿಸಿದ್ದಾರೆ. ಕಂದಾಯ ಸಚಿವರಾದವರು ಈ ಎಲ್ಲವನ್ನೂ ತಿಳಿದುಕೊಳ್ಳಬೇಕು. ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತರುವುದರಿಂದ ಏನೇನು ಅನಾಹುತ ಆಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು. ಅಶೋಕ್ ಅವರಿಗೆ ಏನೂ ಗೊತ್ತಿಲ್ಲ ಎಂದು ಹೇಳುವುದಿಲ್ಲ. ಈ ಎಲ್ಲವನ್ನೂ ತಿಳಿದುಕೊಳ್ಳುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ರೈತರ ಜೊತೆ ನಡೆದ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಡಾ. ಎಚ್.ಸಿ. ಮಹಾದೇವಪ್ಪ, ರಾಮಲಿಂಗಾರೆಡ್ಡಿ, ರಮೇಶ್ ಕುಮಾರ್, ನಸೀರ್ ಅಹಮದ್ ಅವರು ಭಾಗವಹಿಸಿದ್ದರು. ರೈತ ಸಂಘಟನೆಗಳ ಪ್ರಮುಖರಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಚಾಮರಸಮಾಲಿ ಪಾಟೀಲ್, ವೀರಸಂಗಯ್ಯ, ಗೋಪಾಲ್ ಮತ್ತಿತತರರು ಹಾಜರಿದ್ದರು.