*ಕನ್ನಡದ ಮಕ್ಕಳು ಜಾಗತಿಕ ಸ್ಪರ್ಧೆಗೆ ಸಜ್ಜಾಗಲು ಉಭಯ ಮಾಧ್ಯಮ ಶಾಲೆಗಳು – ಎಸ್.ಸುರೇಶ್ ಕುಮಾರ್.*
ಕನ್ನಡದ ಬಗೆಗಿನ ಸರ್ಕಾರದ ಬದ್ಧತೆ, ಸಂಕಲ್ಪಗಳನ್ನು ಕೊರೋನಾ ಕಸಿಯಲು ಅಸಾಧ್ಯ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು. ಅವರು ಇಂದು
65ನೇ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮಾತನಾಡಿದರು.
ನಮ್ಮ ನಾಡು ಹಾಗೆಯೇ ನಮ್ಮ ಕಸ್ತೂರಿ ನುಡಿ ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ. ನಮ್ಮ ಭಾಷೆ ಅತ್ಯಂತ ಶ್ರೀಮಂತ, ಸಮೃದ್ಧ ಹಾಗೆಯೇ ಅತ್ಯಂತ ಗಟ್ಟಿತನದಿಂದ ಕೂಡಿದ ಭಾಷೆ. 2500 ಕ್ಕೂ ಹೆಚ್ಚು ವರ್ಷಗಳ ಹಿನ್ನೆಲೆ ನಮ್ಮ ಭಾಷೆಯದು ಎಂಬುದು ನಮ್ಮ ಹೆಮ್ಮೆ. ಕನ್ನಡ ಶಾಸ್ತ್ರೀಯ ಭಾಷಾ ಸ್ಥಾನಮಾನ ಹೊಂದಿರುವುದು ನಮ್ಮ ಭಾಷೆಯ ಸಮೃದ್ಧ ಹಿನ್ನೆಲೆಗೆ ಸಾಕ್ಷಿಯಾಗಿದೆ ಎಂದ ಸುರೇಶ್ ಕುಮಾರ್,
ನಾವು ನಮ್ಮ ಭಾಷೆಯನ್ನು ಶಿಕ್ಷಣ ಸೇರಿದಂತೆ ನಮ್ಮ ದೈನಂದಿನ ಎಲ್ಲ ವ್ಯವಹಾರಗಳಲ್ಲಿಯೂ ಬಳಸುವ ಮೂಲಕ ನಾವು ನಮ್ಮ ಭಾಷೆಯನ್ನು ಉಳಿಸಿ ಬೆಳೆಸಬೇಕು. ನಮ್ಮ ಭಾಷೆ ಉಳಿದರೆ ನಾವು ಉಳಿಯುತ್ತೇವೆ. ಹಾಗಾಗಿ ಕನ್ನಡದ ಹೊರತಾಗಿ ನಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು ಸಾಧ್ಯವಾಗದ ಮಾತು ಎಂದರು.
*ಅವರ ಪ್ರಾಸ್ತಾವಿಕ ಭಾಷಣದ ಪ್ರಮುಖಾಂಶಗಳು ಈ ರೀತಿ ಇವೆ.*
ವಿಶ್ವದಲ್ಲಿ ಅದೆಷ್ಟೋ ಭಾಷೆಗಳು ಅವಸಾನ ಕಂಡಿವೆ. ಅದಕ್ಕೆಲ್ಲ ಭಾಷೆ ಮತ್ತು ನುಡಿಯ ಮೇಲಿನ ನಿಷ್ಕಾಳಜಿ ಕಾರಣವಾಗಿದೆ. ಅದನ್ನು ಬಳಸದೇ ಅವು ಅವಸಾನವಾಗಿದೆ. ಆದರೆ ನಮ್ಮ ಕನ್ನಡ ಭಾಷೆ ಪ್ರತಿದಿನವೂ ಪ್ರತಿ ಕ್ಷಣವೂ ಇನ್ನೂ ಗಟ್ಟಿಗೊಳ್ಳುತ್ತಲೇ ಸಾಗಿದೆ. ಇದು ನಮ್ಮ ನಾಡವರು ನಮ್ಮ ಭಾಷೆಯ ಮೇಲಿಟ್ಟಿರುವ ಪ್ರೀತಿ. ನಾವು ವಿಶ್ವದ ಯಾವುದೇ ಭಾಗದಲ್ಲಿರಲಿ, ನಮ್ಮ ನಾಡು ನುಡಿಯ ಕುರಿತ ಕಾಳಜಿಯನ್ನು ನಮ್ಮ ಎದೆಯಾಳದಲ್ಲಿ ಹುದುಗಿಸಿಕೊಂಡು ಉಸಿರಾಡಬೇಕು. ಆ ಮೂಲಕ ನಮ್ಮ ತಾಯಿನುಡಿಗೆ ಗೌರವ ಸಲ್ಲಿಸಬೇಕು. ಈಗಲೂ ನಮ್ಮ ಭಾಷೆ ಉಳಿದಿದೆ ಎಂದರೆ ಅದರ ಗಟ್ಟಿತನ ಮತ್ತು ನಮ್ಮ ಭಾಷೆ ಕುರಿತ ನಮ್ಮೆಲ್ಲರ ಕಾಳಜಿಯೇ ಕಾರಣವಾಗಿದೆ.
ಇಂದು ನಮ್ಮ ಕರ್ನಾಟಕವನ್ನು ಇಡೀ ವಿಶ್ವವೇ ಎದುರು ನೋಡುತ್ತಿದೆ. ಇದಕ್ಕೆ ನಮ್ಮ ನಾಡಿನ ಪರಂಪರೆಯಷ್ಟೇ ಅಲ್ಲ ನಮ್ಮ ಶಿಕ್ಷಣವೂ ಕಾರಣವಾಗಿದೆ. ದೇಶವಿದೇಶಗಳ ಜನರು ನಮ್ಮಲ್ಲಿಗೆ ಶಿಕ್ಷಣಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದಕ್ಕೆಲ್ಲ ನಮ್ಮ ಶಿಕ್ಷಣ ವ್ಯವಸ್ಥೆ ಪೂರಕವಾಗಿದ್ದು, ಆ ಮೂಲಕ ಬೆಂಗಳೂರು ಸೇರಿದಂತೆ ಕರ್ನಾಟಕ ಮಾಹಿತಿ ತಂತ್ರಜ್ಞಾನದ ರಾಜಧಾನಿಯೂ ಆಗಿ ಪರಿವರ್ತನೆಯಾಗಲು ನಮ್ಮ ಶಿಕ್ಷಣವೂ ಕಾರಣವಾಗಿದೆ.
1956ರ ರಾಜ್ಯ ಪುನರ್ಘಟನೆಯ ನಂತರ ಅಸ್ತಿತ್ವಕ್ಕೆ ಬಂದ ವಿಶಾಲ ಮೈಸೂರು ರಾಜ್ಯ, 1973 ರಲ್ಲಿ ಕರ್ನಾಟಕ ರಾಜ್ಯವಾಗಿ ನಾಮಕರಣವಾದ ಸಂದರ್ಭದ ನೆನಪಾಗಿ ನಾವು ಪ್ರತಿ ವರ್ಷವೂ ನಾವು ರಾಜ್ಯೋತ್ಸವನ್ನು ಆಚರಿಸುತ್ತಿದ್ದೇವೆ.
8 ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆ ಕನ್ನಡವಾಗಿದೆ. ಇಂತಹ ಕನ್ನಡ ಭಾಷೆಯ ಕುರಿತು ನಮ್ಮ ಸರ್ಕಾರದ ಬದ್ಧತೆ ಪ್ರಶ್ನಾತೀತವಾಗಿದೆ. ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ತನ್ನದೇ ಆದ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಈ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತು ಕನ್ನಡ ಭಾಷೆಯ ಉಳಿವಿಗಾಗಿ ಯಾವುದೇ ಭಾಷಿಕ ಹಿನ್ನೆಲೆಯ ಮಕ್ಕಳೂ ಸಹ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಲೇಬೇಕೆಂಬ ಹಿನ್ನೆಲೆಯಲ್ಲಿ ಜಾರಿಗೆ ಬಂದ ಕನ್ನಡ ಕಲಿಕಾ ಕಾಯಿದೆ-2017ನ್ನು ಅನುಷ್ಠಾನಗೊಳಿಸುವಲ್ಲಿ ನಾವು ಕಠಿಣ ಕ್ರಮಗಳನ್ನು ಕೈಗೊಂಡಿರುವುದು ಎಲ್ಲರಿಗೂ ಗೊತ್ತಿರುವಂತಹುದೇ ಆಗಿದೆ. ಈ ನೆಲದಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡ ಕಲಿಯುವುದರೊಂದಿಗೆ ಕನ್ನಡದ ಜೊತೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ಸರ್ಕಾರದ ನಿಲುವಾಗಿದೆ.
*ಮೊದಲ ಬಾರಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ*
ಹಾಗೆಯೇ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ನಮ್ಮ ಸರ್ಕಾರ ಸಾಕಷ್ಟು ದಾಪುಗಾಲನ್ನಿಟ್ಟು ಮುಂದೆ ಸಾಗಿದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ಉಭಯ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗಿದ್ದು, ಈ ಕ್ರಮವು ರಾಜ್ಯಾದ್ಯಂತ ವ್ಯಾಪಕವಾಗಿ ಸ್ವಾಗತಿಸಲ್ಪಟ್ಟಿದೆ. ಈ ಶಾಲೆಗಳು ಕನ್ನಡದ ವಾತಾವರಣದಲ್ಲಿ ಆಂಗ್ಲಭಾಷೆಯನ್ನು ಕಲಿಯುವ ನಮ್ಮ ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧೆಗಳನ್ನು ಎದುರಿಸಲು ಸಜ್ಜುಗೊಳಿಸುವ ಉದಾತ್ತ ನಿಲುವು ಹೊಂದಿವೆ. ಇದು ವೈಜ್ಞಾನಿಕವಾಗಿಯೂ ಕೂಡ ಮಾತೃಭಾಷೆ ಮೂಲಕ ಜಗತ್ತನ್ನು ನೋಡಬೇಕೆಂಬ ಹಿನ್ನೆಲೆಯಲ್ಲಿ ವ್ಯಾಪಕ ಪ್ರಶಂಸೆಗೊಳಗಾಗಿವೆ.
ಕೊರೋನಾ ಅವಧಿಯಲ್ಲಿ ದುರ್ಬಲ ಕುಟುಂಬಗಳ ಮಕ್ಕಳು, ಪೋಷಕರು ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದು ನಮಗೆ ಇಂತಹ ಸಂದರ್ಭದಲ್ಲೂ ಒಂದು ಬೆಳ್ಳಿಗೆರೆಯನ್ನು ಮೂಡಿಸಿದ್ದು ಸಂತಸದ ಸಂಗತಿಯಾಗಿದೆ. ನಮ್ಮಲ್ಲಿನ ಅಂಕಿಅಂಶಗಳಂತೆ ಸುಮಾರು 90,000 ಮಕ್ಕಳು ಈಗಾಗಲೇ ಸರ್ಕಾರಿ ಶಾಲೆಗಳಿಗೆ ಸೇರ್ಪಡೆಯಾಗಿದ್ದು, ಇದು ಕಳೆದ 14 ವರ್ಷಗಳಲ್ಲಿ ಮೊದಲ ಬಾರಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿದೆ.
*ಎನ್.ಸಿ.ಇ.ಆರ್.ಟಿ ಪದವಿಪೂರ್ವ ಪಠ್ಯ ಮೊದಲ ಬಾರಿ ಕನ್ನಡದಲ್ಲಿ*
ಹಾಗೆಯೇ ನಮ್ಮ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಪಿಯುಸಿ ವಿಜ್ಞಾನದ ಎನ್.ಸಿ.ಇ.ಆರ್.ಟಿ., ಪುಸ್ತಕಗಳನ್ನು ಕನ್ನಡ ಮಾಧ್ಯಮದಲ್ಲಿ ತಯಾರು ಮಾಡಿ ನೀಡಿರುವುದು ನಮ್ಮ ಸರ್ಕಾರದ ಕನ್ನಡಪರ ಕಾಳಜಿಯ ಧ್ಯೋತಕವಾಗಿದೆ ಎಂಬುದನ್ನು ಗಮನಿಸಬೇಕಿದೆ.
*ಸರ್ಕಾರದ ಕನ್ನಡ ಬದ್ಧತೆ ಪ್ರಶ್ನಾತೀತ*
ಸರ್ಕಾರಕ್ಕೆ ಕನ್ನಡ ಕುರಿತ ಬದ್ಧತೆ ಪ್ರಶ್ನಾತೀತ. ಈ ಸಂದರ್ಭದಲ್ಲಿ ನಮ್ಮ ವಿಶಾಲ ಕರ್ನಾಟಕದ ಏಕೀಕರಣಕ್ಕೆ ದುಡಿದ ಹಾಗೆಯೇ ಕನ್ನಡ ಭಾಷೆಯ ಉಳಿವಿಗೆ ಶ್ರಮಿಸಿದ ಎಲ್ಲ ಮಹನೀಯರನ್ನು ಸ್ಮರಿಸುತ್ತೇನೆ. ಕರ್ನಾಟಕ ಹೆಸರಾದಂತೆ ಕನ್ನಡವನ್ನು ನಮ್ಮ ಉಸಿರಾಗಿಸಿಕೊಳ್ಳುವ ಮೂಲಕ ನಾವು ನಮ್ಮ ಭಾಷೆಯ ಉಳಿವಿಗೆ ಪ್ರತಿಕ್ಷಣವೂ ತೊಡಗಿಸಿಕೊಳ್ಳಬೇಕಿದೆ.
ನಮ್ಮ ಸರ್ಕಾರವು ಕರ್ನಾಟಕ ರಾಜ್ಯವನ್ನು ದೇಶದಲ್ಲೇ ಮಾದರಿ ರಾಜ್ಯವಾಗಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ನಾಡಿನ ಹಿರಿಯರ, ಬುದ್ಧಿಜೀವಿಗಳ, ತಜ್ಞರ ಮಾರ್ಗದರ್ಶನ ಮತ್ತು ಸಹಕಾರ ಪಡೆದು ನಮ್ಮ ಸರ್ಕಾರ ಮುಂದಡಿ ಇಡುತ್ತಿದೆ. ಇದಕ್ಕೆ ನಾಡಿನ ಸಮಸ್ತ ಜನತೆಯ ಆಶೀರ್ವಾದವನ್ನು ನಾನು ಈ ಸಂದರ್ಭದಲ್ಲಿ ಕೋರುತ್ತೇನೆ. ಜೈ ಹಿಂದ್ ಜೈ ಕರ್ನಾಟಕ.
*ಕನ್ನಡ ಕಾಯಕಲ್ಪ ವರ್ಷ:*
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಶ್ರೀ.ಬಿ.ಎಸ್.ಯಡಿಯೂರಪ್ಪ, ಈ ವರ್ಷವನ್ನು ಕನ್ನಡ ಕಾಯಕಲ್ಪ ವರ್ಷವನ್ನಾಗಿ ಆಚರಿಸಲಾಗುತ್ತದೆಂದರು. ಮುಂದಿನ ಒಂದು ವರ್ಷದಲ್ಲಿ ಕನ್ನಡ ಕಾಯಕ ವರ್ಷದ ಅಂಗವಾಗಿ ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ವಿವರಗಳನ್ನು ಶೀಘ್ರ ಪ್ರಕಟಿಸಲಾಗುವುದು, ತಂತ್ರಜ್ಞಾನದ ಈ ಯುಗದಲ್ಲಿ ಕನ್ನಡ ಭಾಷೆಯ ಅಸ್ತಿತ್ವದ ಕುರಿತಂತೆಯೂ ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಹೇಳಿದರು.
ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ ಮಾತೃಭಾಷಾ ಕಲಿಕೆಗೆ ನೀಡಿರುವ ಒತ್ತು ಸರ್ಕಾರದ ಕನ್ನಡ ಮಾಧ್ಯಮವನ್ನು ಪ್ರೋತ್ಸಾಹಿಸುವ ನೀತಿಗೆ ಇನ್ನಷ್ಟು ಬಲತುಂಬಲಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಶ್ರೀರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು. ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.