*ಮುನಿರತ್ನ ನಿಜ ಬಣ್ಣ ತಡವಾಗಿ ಗೊತ್ತಾಗಿದೆ; ಡಿ.ಕೆ ಶಿವಕುಮಾರ್*
ಬೆಂಗಳೂರು:- ಮುನಿರತ್ನ ಅವರ ನಿಜ ಸ್ವರೂಪ ಈಗ ಗೊತ್ತಾಗಿದೆ. ತಡವಾಗಿ ಅರಿವಾಗಿದೆ. ಅವರ ಸಿನಿಮಾ ಡೈಲಾಗ್ ಗಳು ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿವಲ್ಲ, ನಿಜ ಜೀವನದಲ್ಲೂ ಬಳಕೆ ಆಗುತ್ತವೆ ಅಂತಾ ಗೊತ್ತಿರಲಿಲ್ಲ. ಈಗ ಗೊತ್ತಾಗುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು:
‘ಈ ಚುನಾವಣೆ ಈ ಕ್ಷೇತ್ರದ ಸ್ವಾಭಿಮಾನದ ಪ್ರಶ್ನೆ. ತಾವು ಹಾಕಿದ ಮತವನ್ನು ಮಾರಿಕೊಡಿದ್ದರ ಬಗ್ಗೆ ಮತದಾರರು ಆಕ್ರೋಶಗೊಂಡಿದ್ದಾರೆ. ಯಡಿಯೂರಪ್ಪನವರು ಈ ಅಭ್ಯರ್ಥಿ ಭ್ರಷ್ಟಾಚಾರ ಮಾಡಿದ್ದಾರೆ ಅಂತಾ ಹಿಂದೆಯೇ ರಾಜ್ಯಪಾಲರಿಗೆ ದೂರು ನೀಡಿದ್ದರು. ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪನವರು ಇವರ ವಿರುದ್ಧ ಮಾತನಾಡಿದ್ದರು. ಈಗ ಆ ಬಗ್ಗೆ ಬಿಜೆಪಿಯವರ ಬಳಿ ಉತ್ತರವಿಲ್ಲ.
ಯಡಿಯೂರಪ್ಪನವರು ಮಂತ್ರಿ ಮಾಡುವುದಾಗಿ ಆಮಿಷ ಒಡ್ಡುತ್ತಿದ್ದಾರೆ. ಇನ್ನು ಬಿಜೆಪಿ ಪಕ್ಷದ ಪರಿಸ್ಥಿತಿ ಕೇಳುವುದೇ ಬೇಡೇ? ಈತ ಬಿಜೆಪಿ ಸೇರಿ ಒಂದು ವರ್ಷವಾಯ್ತು. ಈವರೆಗೂ ಮುನಿರಾಜುಗೌಡ ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧದ ಪ್ರಕರಣವನ್ನು ರದ್ದು ಮಾಡಿಲ್ಲ. ಒಬ್ಬ ಬಿಜೆಪಿ ಕಾರ್ಯಕರ್ತನ ರಕ್ಷಣೆ ಮಾಡಿಲ್ಲ.
ಯಡಿಯೂರಪ್ಪನವರು ಇಂಥ ಒಬ್ಬ ವ್ಯಕ್ತಿಗೆ ಅಧಿಕಾರ ಕೊಡುವುದಕ್ಕಾಗಿ ಬಿಜೆಪಿ ಕಾರ್ಯಕರ್ತರನ್ನೇ ಬಲಿ ಕೊಡಲು ಹೊರಟಿದ್ದಾರಲ್ಲಾ ಇದು ಸರಿಯೇ?ಈ ಬಗ್ಗೆ ಯಡಿಯೂರಪ್ಪನವರೇ ಉತ್ತರ ನೀಡಲಿ.
ತೇಜಸ್ವಿನಿಯವರು ಹಾಗೂ ರಮ್ಯಾ ಅವರನ್ನು ನಾನು ಚುನಾವಣೆಗೆ ನಿಲ್ಲಿಸಲಿಲ್ಲ. ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ಕೊಟ್ಟಿತು. ನಾವು ಕಾರ್ಯಕರ್ತರಾಗಿ ಅವರನ್ನು ಗೆಲ್ಲಿಸಿದ್ದೇವೆ. ಈಗಲೂ ಅಷ್ಟೇ ಸೋನಿಯಾ ಗಾಂಧಿ ಅವರು ಟಿಕೆಟ್ ಕೊಟ್ಟ ಅಭ್ಯರ್ಥಿ ಪರ ನಾವೆಲ್ಲ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದೇವೆ.
ನಮ್ಮ ಅಭ್ಯರ್ಥಿ ವಿದ್ಯಾವಂತೆ, ಬುದ್ದಿವಂತೆ, ಅರ್ಹ ಮಹಿಳೆ ಅಂತಾ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದ ಮುಂದೆ ಬಂದು ಬೆಂಬಲ ನೀಡುತ್ತಿದ್ದಾರೆ.
ಮುನಿರತ್ನಗೆ ಏನೋ ಹೆಚ್ಚು ಕಮ್ಮಿ ಆಗಿ ಗೊಂದಲದಲ್ಲಿದ್ದಾನೆ. ಅವರ ಪಕ್ಷದಲ್ಲೇ ಅವನಿಗೆ ಅನೇಕ ಸಮಸ್ಯೆಗಳಿವೆ. ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದ ಹಾಗೆ ಬಿಜೆಪಿ ನಾಯಕರು ಹಾಗೂ ಈ ಅಭ್ಯರ್ಥಿಯಿಂದ ಕೇಸು ಹಾಕಿಕೊಂಡಿರುವ ಕಾರ್ಯಕರ್ತರು ಬೇಸರಗೊಂಡಿದ್ದು, ಮುಂದಿನ ದಿನಗಳಲ್ಲಿ ಅವರದೇ ಆದ ನಿರ್ಧಾರ ಕೈಗೊಳ್ಳಲಿದ್ದಾರೆ.
ದುಡ್ಡು ಹಂಚುವ ವಿಚಾರದಲ್ಲಿ ನಿನ್ನೆ ರಾತ್ರಿಯಿಂದ 20 ವಿಡಿಯೋ ಮಾಡಿದ್ದೇವೆ. ಪೊಲೀಸರಿಗೆ ಕೊಡುತ್ತೇವೆ. ಅವರು ಅವರ ಕೆಲಸ ಮಾಡಲಿ. ಮುನಿರತ್ನ ಅವರ ಬಾಯಲ್ಲಿ ಇಂತಹ ಮಾತು ಬರುತ್ತಿವೆ ಎಂದರೆ ಅದರಿಂದ ಕ್ಷೇತ್ರಕ್ಕೆ ಅಪಮಾನವಾಗುತ್ತದೆ. ಅವರು ಕ್ಷೇತ್ರದ ಮತದಾರರಿಗೆ ಅವಮಾನ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಅವರು ಉತ್ತರ ನೀಡಲಿ.
*ಕಾಂಗ್ರೆಸ್ ಜಾತಿ ರಾಜಕಾರಣ ಮಾಡುವುದಿಲ್ಲ, ನೀತಿ ಎತ್ತಿ ಹಿಡಿಯುತ್ತದೆ*
ಕಾಂಗ್ರೆಸ್ ಪಕ್ಷ ಯಾವತ್ತೂ ಜಾತಿ ರಾಜಕಾರಣ ಮಾಡುವುದಿಲ್ಲ. ಅದು ಸದಾ ನೀತಿ ಎತ್ತಿ ಹಿಡಿಯುತ್ತದೆ. ಯಡಿಯೂರಪ್ಪನವರು ಬೆಳಗಾವಿಗೆ ಹೋಗಿ ನೀವು ನನ್ನನ್ನು ಬೆಂಬಲಿಸದಿದ್ದರೆ ಲಿಂಗಾಯತರಿಗೆ ತೊಂದರೆ ಆಗುತ್ತದೆ ಎಂದು ಭಾಷಣ ಮಾಡಿದ್ದರು. ಅದಕ್ಕೆ ಚುನಾವಣಾ ಆಯೋಗ ನೋಟೀಸ್ ಜಾರಿ ಮಾಡಿತ್ತು. ನಾವು ಆ ರೀತಿ ಮಾಡಿಲ್ಲ. ಕಾಂಗ್ರೆಸ್ ಪಕ್ಷವೇ ಒಂದು ಜಾತಿ. ಸಂವಿಧಾನದಲ್ಲಿ ಎಷ್ಟು ಜಾತಿ ಇದೆಯೋ ಅಷ್ಟೂ ಕಾಂಗ್ರೆಸ್ ಜಾತಿ.
*ಬಿಜೆಪಿ ಕುತಂತ್ರ:*
ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆಗೂ ಕಾಂಗ್ರೆಸ್ ನ ಮಾಜಿ ಮೇಯರ್ ಸಂಪತ್ ರಾಜ್ ಗೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಅವರನ್ನು ಸಿಲುಕಿಸಲು ಕುತಂತ್ರ ಮಾಡುತ್ತಿದೆ.
ಸಂಪತ್ ರಾಜ್ ಎಲ್ಲೂ ಹೋಗಿಲ್ಲ. ಕೊರೋನಾ ಸಮಸ್ಯೆಯಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳಿಂದ ಮಾಧ್ಯಮಗಳಿಗೆ ಸುಳ್ಳು ಹೇಳಿಸಿ, ಅಪಪ್ರಚಾರ ಮಾಡಿಸುತ್ತಿದ್ದಾರೆ. ತಮ್ಮ ವೈಫಲ್ಯ ಮುಚ್ಚಿ ಕೊಳ್ಳಲು ಕಾಂಗ್ರೆಸ್ ನಾಯಕರನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ.
ನಮ್ಮ ಪಕ್ಷದ ಆಂತರಿಕ ತನಿಖೆ ಸಮಿತಿಯಲ್ಲಿ ಮೂವರು ಮಾಜಿ ಗೃಹ ಮಂತ್ರಿಗಳಾದ ಕೆ.ಜೆ ಜಾರ್ಜ್, ಡಾ.ಪರಮೇಶ್ವರ್, ರಾಮಲಿಂಗಾರೆಡ್ಡಿ ಹಾಗೂ ಮಾಜಿ ಸಚಿವ ಕೃಷ್ಣ ಭೈರೇಗೌಡ, ಮುಖಂಡ ಹರಿಪ್ರಸಾದ್ ಅವರು ಇದ್ದರು. ಅವರು ಅನೇಕರ ವಿಚಾರಣೆ ಮಾಡಿದ್ದರು. ಇದು ಪೊಲೀಸ್ ಇಲಾಖೆ ವೈಫಲ್ಯ ಎಂದು ಆ ಸಮಿತಿ ಹೇಳಿದೆ.
ನಾಗರೀಕ ಸೇವಾ ಸಂಸ್ಥೆ ಕೂಡ ತನಿಖೆ ನಡೆಸಿದ್ದು, ಇದು ಕೂಡ ಪೊಲೀಸರ ನಿರ್ಲಕ್ಷ್ಯ ಎಂದು ಹೇಳಿದೆ.
*ಧರ್ಮದ ಸ್ಥಳದಲ್ಲಿ ರಾಜಕೀಯ ಮಾಡುವುದಿಲ್ಲ:*
ನಾನು ಪ್ರಾರ್ಥನೆ ಮಾಡಲು ಇಂದು ಚರ್ಚ್ ಗೆ ಬಂದಿದ್ದು, ಇಲ್ಲಿನ ಪಾದ್ರಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ. ನಾನು ಇಲ್ಲಿ ಮತ ಕೇಳುವುದಕ್ಕಾಗಲಿ, ರಾಜಕೀಯ ಮಾಡುವುದಕ್ಕೆ ಆಗಲಿ ಬಂದಿಲ್ಲ. ದೇವಸ್ಥಾನ, ಮಸೀದಿ, ಚರ್ಚ್ ನಂತಹ ಧಾರ್ಮಿಕ ಕೇಂದ್ರಗಳಲ್ಲಿ ರಾಜಕೀಯ ಮಾಡುವುದಿಲ್ಲ. ಮಾಡಬಾರದು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ.