IMG 20230210 WA0037

ಮಧುಗಿರಿ: ಸರ್ಕಾರಿ ನೌಕರರ ನೂತನ ಅಧ್ಯಕ್ಷರ ಪದಗ್ರಹಣ….!

DISTRICT NEWS ತುಮಕೂರು

ಮಧುಗಿರಿ. ಸರ್ಕಾರಿ ನೌಕರರ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ.

ವಿಧ್ಯಾವಂತರಾನ್ನಾಗಿ ಸೃಷ್ಟಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ಹನುಮಂತನಾಥಸ್ವಾಮೀಜಿ ತಿಳಿಸಿದರು.
ಪಟ್ಟಣದ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರ ಪದಗ್ರಹಣ, ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮದಲ್ಲಿ.ದಿವ್ಯ ಸಾನಿದ್ಯವಹಿಸಿ ಮಾತನಾಡಿದ ಶ್ರೀಗಳು ಜಗತ್ತನ್ನು ಆಳುವ ನಾಯಕನನ್ನು ಸೃಷ್ಟಿಸಿದರೂ ಶಿಕ್ಷಕರು ತ್ಯಾಗಮಯಿಗಳಾಗುತ್ತಾರೆ. ಹಿಂದೆ ಗುರುಕುಲಗಳಿದ್ದು ಈಗ ಆಧುನಿಕ ಶೈಕ್ಷಣಿಕ ಪದ್ಧತಿ ಮುನ್ನಲೆಗೆ ಬಂದಿದ್ದು ಮಾನವೀಯ ಶಿಕ್ಷಣ ಕಡಿಮೆಯಾಗಿದೆ. ಇಂದು ಮಕ್ಕಳನ್ನು ಅಂಕಗಳಿಸಲು ಮಾತ್ರ ಬಿಡದೆ ಕೊನೆ ಕಾಲದಲ್ಲಿ ಹೆತ್ತವರಿಗೆ ಅನ್ನ ಹಾಕುವ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ. ಮಕ್ಕಳು ಮೊಬೈಲ್‍ಗಳ ಮೊರೆ ಹೋಗದೆ ಪುಸ್ತಕಗಳ ಜೊತೆಯಾದರೆ ಬದುಕು ಸುಂದರವಾಗುತ್ತೆ. ಅಧಿಕಾರ ಸ್ವಾರ್ಥಕ್ಕೆ ಬಳಸದೆ ಜನರಿಗಾಗಿ ಬಳಸುವವನೇ ನಿಜವಾದ ನಾಯಕ ಎಂದರು.
ಶಿಕ್ಷಣ ಕದಿಯಲಾರದ ಸಂಪತ್ತು ಇದು ಸಮಾಜ ಬೆಳಗುವ ಅಸ್ತ್ರವಾಗಲಿ. ಮಕ್ಕಳಿಗೆ ಜಾತಿಯ ವಿಷಬೀಜ ಬಿತ್ತದೆ ಶಿಕ್ಷಕರು ಭೋದನೆ ಮಾಡಬೇಕು. ಯಾರು ಮೋಸ ಮಾಡಿದರೂ ನಂಬಿದ ಮಣ್ಣು ಮೋಸ ಮಾಡಲ್ಲ. ಮುಂದೆ ಒಳ್ಳೆಯ ಕಾಲ ಬರಲಿದ್ದು ರೈತರು ತಮ್ಮ ಜಮೀನು ಮಾರಬೇಡಿ. ಮುಂದೆ ನಿಮ್ಮ ಭವಿಷ್ಯ ಇದೇ ಮಣ್ಣಿನಲ್ಲಿದೆ ಎಂಬುದನ್ನು ಮರೆಯಬೇಡಿ. ಆಸ್ತಿಗೆ ಬದಲು ಸತ್ತಾಗ ಹೊರಲು 4 ಜನರನ್ನು ಸಂಪಾದಿಸುವ ಸಂಸ್ಕಾರ ಕಲಿತರೆ ಇಡೀ ಸಮಾಜ ಸ್ವಾರ್ಥದಿಂದ ಹೊರಬರುತ್ತದೆ ಎಂದರು.

ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ನನಗೆ ಕಷ್ಟಗಳೇ ಪಾಠ ಕಲಿಸಿದ್ದು ಇಂದು ಈ ಮಟ್ಟಕ್ಕೆ ಬೆಳೆಯಲು ಕಾರಣ. ನೀವು ಸಹ ಶಿಕ್ಷಣದ ಶಕ್ತಿಯಿಂದ ಎಲ್ಲವನ್ನೂ ಸಾಧಿಸಬಹುದಾ. ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹತ್ತು ಹಲವು ಕೆಲಸ ಮಾಡಿದ್ದು, ತೃಪ್ತಿಯಿದೆ. ಜನರ ತೆರಿಗೆಯಿಂದ ನಾವು ಸಂಬಳ ಪಡೆಯುತ್ತಿದ್ದು ನಮ್ಮ ಸೇವೆ ಸಮಾಜಮುಖಿಯಾಗಿರಲಿ ಎಂದು ಕಿವಿಮಾತು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಮಾತನಾಡಿ, ಹೋರಾಟವಿಲ್ಲದೆ ಸರ್ಕಾರದಿಂದ 21 ಆದೇಶಗಳನ್ನು ನೌಕರರ ಪರವಾಗಿ ಷಡಕ್ಷರಿಯವರ ನೇತೃತ್ವದಲ್ಲಿ ಜಾರಿಗೊಳಿಸಿದ್ದೇವೆ. ಈಗ 7ನೇ ವೇತನ ಜಾರಿಯಾಗಲಿದ್ದು, ಜಿಲ್ಲಾ ಕ್ರೀಡಾಕೂಟಕ್ಕಾಗಿ 3 ಕೋಟಿ ಬಿಡುಗಡೆ ಮಾಡಿಸಿದ್ದೇವೆ. ನೌಕರರು ಅಕಾಲಿಕ ಮರಣ ಹೊಂದಿದರೆ ಎಸ್‍ಬಿಐ ಖಾತಾದಾರರಾಗಿದ್ದರೆ 1 ಕೋಟಿ ಪರಿಹಾರ ನೀಡುವ ಯೋಜನೆಗೆ ಮನವಿ ಮಾಡಿದ್ದು ಜಾರಿಯಾಗುವ ನಿರೀಕ್ಷೆಯಿದೆ. ನನ್ನ ಅವಧಿಗೆಮುನ್ನ 73 ಲಕ್ಷವಿದ್ದ ನೌಕರರ ಹಣ ಇಂದು 64 ಕೋಟಿಗೆ ತಲುಪಿದ್ದು, ಯಾರಿಗೂ ಹೆದರದೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿ. ನಿಶ್ಚಿತ ಪಿಂಚಣಿ ಹೋರಾಟಕ್ಕೆ ಇದು ಸಮಯವಲ್ಲ.

ಮೊದಲು 7ನೇ ವೇತನ ಜಾರಿಯಾಗಲಿ. ನಂತರ ಕರೆದರೆ ನಾವೂ ಹೋರಾಟ ಬೆಂಬಲಿಸುತ್ತೇವೆ. ಶಾಲೆಗಳಲ್ಲಿ ಬಿಸಿಯೂಟಕ್ಕೆ ಶಿಕ್ಷಕರ ಬದಲಿಗೆ ಬೇರೆ ನೌಕರರನ್ನು ನೇಮಿಸಲು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿರ್ಗಮಿತ ಅಧ್ಯಕ್ಷ ವೆಂಕಟೇಶಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, 102 ವರ್ಷದ ಇತಿಹಾಸ ಈ ಸಂಘಕ್ಕಿದೆ ಕಳೆದ 23 ವರ್ಷದಿಂದ ಸಂಘದಲ್ಲಿದ್ದು ನೌಕರರ ಸೇವೆ ಮಾಡಿದ್ದೇನೆ. ನನ್ನ ಈ ಸಾಧನೆಗೆ ನನ್ನ ಧರ್ಮಪತ್ನಿಯ ಸಹಕಾರ ಮರೆಯುವಂತಿಲ್ಲ. ನಿವೃತ್ತಿಗೂ ಮುನ್ನ ಅಧ್ಯಕ್ಷರಾಗಲೆಂದು ಸಹೋದರ ಸಮಾನರಾದ ಜಯರಾಮಯ್ಯನವರಿಗೆ ಅಧ್ಯಕ್ಷ ಪದವಿಯನ್ನು ಮುಕ್ತ ಮನಸ್ಸಿನಿಂದ ಹಸ್ತಾಂತರ ಮಾಡುತ್ತಿದ್ಧೇನೆ ಎಂದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಜಯರಾಮಯ್ಯ ಅಧಿಕಾರ ಸ್ವೀಕರಿಸಿದರು. ಡಿಡಿಪಿಐ ರಂಗಯ್ಯ, ಬಿಇಓ ತಿಮ್ಮರಾಜು, ಬಿ ಆರ್ ಸಿ.ಹನುಮಂತರಾಯಪ್ಪ, ರೋಟರಿ ಅಧ್ಯಕ್ಷ ಕರಿಯಣ್ಣ, ಪುರಸಭೆ ಸದಸ್ಯರಾದ ಎಂ.ಎಲ್.ಗಂಗರಾಜು, ಎಂ.ಆರ್.ಜಗನಾಥ್, ಕೆ.ನಾರಾಯಣ್, ಮುಖ್ಯಾಧಿಕಾರಿ ನಜ್ಮಾ, ಸಂಘದ ಕಾರ್ಯದರ್ಶಿ ನಟರಾಜು, ಖಜಾಂಚಿ ಚಿಕ್ಕರಂಗಯ್ಯ, ಶಿಕ್ಷಕ ಮುಖಂಡರಾದ ಶಶಿಕುಮಾರ್, ಟಿ.ಡಿ.ನರಸಿಂಹಮೂರ್ತಿ, ಗೋವಿಂದರಾಜು, ನಾಗೇಶಯ್ಯ, ಕೆಂಪಯ್ಯ, ಮಲ್ಲಿಕಾರ್ಜುನ್, ಎಸ್ ಎನ್
ಹನುಮಂತರಾಯಪ್ಪ, ಚೆನ್ನಬಸಪ್ಪ, ಗುಡ್ ನೈಬರ್ಸ್ ಇಂಡಿಯಾದ ಲೊಕೇಶ್, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳುಮಕ್ಕಳು, ಪೋಷಕರು ಇದ್ದರು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಮಾಡಲಾಯಿತು.

ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರು