ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 22 ವರ್ಷ ನಂತರ ಮತ್ತೆ ಒಂದಾದ ಜೋಡಿ.
ಪಾವಗಡ: ವಿವಿಧ ಕಾರಣಗಳಿಂದ 22 ವರ್ಷಗಳ ಹಿಂದೆ ಬೇರೆ–ಬೇರೆಯಾಗಿದ್ದ ದಂಪತಿಗಳು ಮತ್ತೊಮ್ಮೆ ಒಂದಾಗಿರುವ ಘಟನೆ ಶನಿವಾರ ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನಡೆದಿದೆ.
ತಾಲ್ಲೂಕಿನ ಹುಲಿಬೆಟ್ಟ ತಾಂಡದ ಚಿಟ್ಟಿಬಾಯಿ, ಶಿರಾದ ನಾಗರಾಜ ನಾಯ್ಕ ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನಕ್ಕಾಗಿ ಪ್ರಕರಣ ದಾಖಲಿಸಿದ್ದರು,
ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಹಿರಿಯ ಸಿವಿಲ್ ನ್ಯಾಯಾದೀಶರಾದ ಎಂ.ಎಸ್ ಹರಿಣಿ ಮದ್ಯಸ್ಥಿಕೆಯಲ್ಲಿ ಪ್ರಕರಣ ಇತ್ಯರ್ಥವಾಗಿದ್ದು, ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಅದಾಲತ್‌ನಲ್ಲಾದ ತೀರ್ಮಾನದಂತೆ 22 ವರ್ಷದ ನಂತರ ದಂಪತಿ ತಮ್ಮ ನಡುವಿನ ಕಲಹ ಮರೆತು ಜೊತೆಯಾಗಿ ಬಾಳ್ವೆ ಮಾಡುವುದಕ್ಕೆ ಸಮ್ಮತಿಸಿದರು. ಹೀಗೊಂದು ಪುನರ್ ಮಿಲನಕ್ಕೆ ಕೋರ್ಟ್‌ನ ಸಭಾಂಗಣ ಸಾಕ್ಷಿಯಾಯಿತು.
ಚಿಟ್ಟಿ ಬಾಯಿ ಹಾಗೂ ನಾಗರಾಜ ನಾಯ್ಕ ನ್ಯಾಯಾಧೀಶರ ಸಮ್ಮುಖದಲ್ಲಿ ಹಾರಗಳನ್ನು ಬದಲಾಯಿಸಿಕೊಂಡರು.
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪತಿ ಪತ್ನಿ ಸಂತೋಷದಿಂದಿರಬೇಕು. ಕಲಹ, ವಿಚ್ಚೇದನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ದಿನಗಳಲ್ಲಿ ಇಬ್ಬರೂ ಸಂತಸದಿಂದ ಇದ್ದು, ಮಕ್ಕಳನ್ನೂ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾದೀಶರಾದ ಎಂ.ಎಸ್ ಹರಿಣಿ ಬುದ್ಧಿವಾದ ಹೇಳಿದರು.
ಈ ಸಂದರ್ಭದಲ್ಲಿ ವಕೀಲ ಯಜ್ಞ ನಾರಾಯಣ ಶರ್ಮ, ಎ.ಎಸ್. ರಘುನಂದನ್, ಶಿರಾಜ್ ಜಾಫರ್, ಪ್ರಭಾಕರರೆಡ್ಡಿ, ರಮೇಶ್, ಉಪಸ್ಥಿತರಿದ್ದರು.