ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುತ್ತಿರುವ ಮಾದರಿ ಯುವಕ
ನಿಸ್ವಾರ್ಥ ಸೇವೆಯಲ್ಲಿ ನವೀನ್ ಕಿಲಾರ್ಲಹಳ್ಳಿ
ಇಂದಿನ ಆಧುನಿಕ ಜಗತ್ತಿನಲ್ಲಿ ನಾನು ನಂದು , ನನ್ನ ಕುಟುಂಬ ಎಂಬ ಸ್ವಾರ್ಥದ ಬದುಕಿನಲ್ಲಿಯೇ ಕಾಲ ಕಳೆಯೋ ಜನರ ನಡುವೆ ಇಲ್ಲೋರ್ವ ಯುವಕನ ಸೇವಾ ಕಾರ್ಯ ಕಂಡರೆ ನಿಜಕ್ಕೂ ಪ್ರತಿಯೊಬ್ಬರೂ ಶಹಬ್ಬಾಸ್ ಎನ್ನಲೇ ಬೇಕು. ಹೌದು..!
ಇಷ್ಟಕ್ಕೂ ಯಾರೀತ ಏನು ಅಂತ ಸೇವೆ ಮಾಡ್ತಿದ್ದಾನೆ ಅನ್ನುವ ಕಲ್ಪನೆ ನಿಮ್ಮಲ್ಲಿ ಮೂಡಿರಬೇಕು.ಅದಕ್ಕುತ್ತರ ಮುಂದೆ ಓದಿ.
ಇತ್ತೀಚಿಗೆ ಶಾಲಾ ಕಾಲೇಜುಗಳ ಹದಿಹರೆಯದ ಮಕ್ಕಳ ಮಾನಸಿಕ ಸ್ಥಿತಿ ಬದಲಾಗುತ್ತಿರುವುದು ಯಕ್ಷ ಪ್ರಶ್ನೆಯಾಗಿದೆ.
ವಿದ್ಯಾರ್ಥಿಗಳ ಅಲೋಚನೆ ಶಕ್ತಿ ಕ್ಷಣಿಕ ಮೋಹದ ಕಡೆ ವಾಲುತ್ತ ಉತ್ತಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.
ಹಾಗಾಗಿ ಹಾದಿ ತಪ್ಪುತ್ತಿರುವ ವಿದ್ಯಾರ್ಥಿಗಳನ್ನ ಎಚ್ಚರಿಸುವ ಸಲುವಾಗಿ ಯುವಕನೋರ್ವ ಮಾಡುತ್ತಿರುವ ಸೇವೆ ಅನ್ಯರಿಗೆ ಪ್ರೇರಣೆಯಾಗಿದೆ. ತನ್ನೆಲ್ಲ ಕೆಲಸ ಬದಿಗೊತ್ತಿ ತನ್ನ ಸ್ವಂತ ಖರ್ಚಿನಲ್ಲಿ ಯಾವುದೇ ಪ್ರತಿಫಲಾಫೇಕ್ಷೆಯಿಲ್ಲದೆ ಪ್ರತಿದಿನ ಶಾಲಾ ಕಾಲೇಜುಗಳ ಮಕ್ಕಳಿಗೆ ಅರಿವು ಮೂಡಿಸುತ್ತಿರುವ ಯುವಕನೇ ನವೀನ್ ಕಿಲಾರ್ಲಹಳ್ಳಿ.
ಈತ ತುಮಕೂರು ಜಿಲ್ಲೆಯ ಗಡಿನಾಡಿನ ಪಾವಗಡ ತಾಲ್ಲೂಕಿನ ಕಿಲಾರ್ಲಹಳ್ಳಿಯ ಬಸಪ್ಪ ,ಜಯಮ್ಮ ದಂಪತಿಗಳ ಬಡ ಕುಟುಂಬದಲ್ಲಿ ಜನಿಸಿದೀತ ಪತ್ರಿಕೋದ್ಯಮದಲ್ಲಿ ಪದವಿಗಳನ್ನ ಮುಗಿಸಿದ್ದಾನೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತ, ಕಾರ್ಯಕ್ರಮ ನಿರೂಪಕ,ಮಿಮಿಕ್ರಿ,ಹಾಸ್ಯ, ಕಲಾವಿದನಾಗಿ ಗುರುತಿಸಿಕೊಂಡಿರುವ ಈತನಿಗೆ 22-23 ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಮಡಿವಾಳ ರತ್ನ ಪ್ರಶಸ್ತಿ,ಡಾ.ಪ್ರಭಾಕರ್ ರೆಡ್ಡಿ ಸೇವಾ ಪ್ರಶಸ್ತಿಗಳನ್ನ ನೀಡಿ ಗೌರವಿಸಲಾಗಿದೆ
15 ವರ್ಷದಿಂದ ಸೇವೆ: ಕಳೆದ ಹದಿನೈದು ವರ್ಷಗಳಿಂದ ಒಂದಿಲ್ಲೊಂದು ಸಾಮಾಜಿಕ ಕಳಕಳಿ ಇಟ್ಟುಕೊಂಡು ಸಾಗುತ್ತಿರುವ ಇವರು ಜನರಲ್ಲಿ ಮೌಡ್ಯಚಾರಣೆ ಕುರಿತು ಜಾಗೃತಿ,ಡೋಂಘಿ ವೇಷಧಾರಿಗಳ ಮೋಸದ ಜಾಲದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ.ಜಾದೂಕಲೆಯ ಮೂಲಕ ಮಕ್ಕಳಿಗೆ ವೈಜ್ಞಾನಿಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ.ಇಂದು ಈ ಶಾಲಾ ಕಾಲೇಜುಗಳಲ್ಲೊಂದು ಜಾಗೃತಿ ವಿಶೇಷ ಕಾರ್ಯಕ್ರಮ ನಡೆಸುತ್ತಿರುವ ಹಿರಿಮೆ ಈ ಯುವಕನಿಗೆ ಸಲ್ಲುತ್ತದೆ.
ಇತ್ತೀಚಿಗಂತೂ ಮಕ್ಕಳ ನಡವಳಿಕೆ ಮಾನಸಿಕ ಚಂಚಲ ಅಸಮತೋಲನಗಳ ಕ್ಷಣಿಕ ಆಕರ್ಷಣೆಯ ಕೆಟ್ಟ ಸಂಸ್ಕೃತಿಯನ್ನ ಕಂಡು ಹೇಗಾದರೂ ಮಾಡಿ ಮಕ್ಕಳಲ್ಲಿ ಅದರ ಅರಿವು ಮೂಡಿಸಬೇಕು ಎಂಬ ನಿಲುವಿನಿಂದ ಇಂದು ನವೀನ ಜಾಗೃತಿ ಮತ್ತು ಸಾಂಸ್ಕೃತಿಕ ಕಲಾ ಸೇವಾ ಟ್ರಸ್ಟ್ ಯೊಂದನ್ನ ಕಟ್ಟಿಕೊಂಡು ಅದರಡಿಯಲ್ಲಿ ಶಾಲಾ ಕಾಲೇಜುಗಳಲ್ಲೊಂದು ಜಾಗೃತಿ ಕಾರ್ಯಕ್ರಮವನ್ನು ಉಚಿತವಾಗಿ ಮಕ್ಕಳೆಡೆಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ.
ಇದರಿಂದ ಮಕ್ಕಳ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರಿ ವ್ಯಕ್ತಿತ್ವ ವಿಕಸನಗೊಳ್ಳಲು ಸಹಕಾರಿಯಾಗುತ್ತಿದೆ.
ಕಾರ್ಯಕ್ರಮದ ಉದ್ದೇಶ: ಮಕ್ಕಳಿಗೆ ನೈತಿಕ ಮೌಲ್ಯ,ಹದಿಹರೆಯದ ಮಕ್ಕಳು ಹಾದಿ ತಪ್ಪಲು ಕಾರಣಗಳ ಅರಿವು, ಸಾಮಾಜಿಕ ಜಾಗೃತಿ, ತಂದೆ ತಾಯಿಯ ಕಷ್ಟಗಳನ್ನು ತಿಳಿಯದೆ ಹಿಂಸಿಸುವ ಮಕ್ಕಳಿಗೆ ಅರಿವು, ಗುರು ಹಿರಿಯರ ಪರಿಶ್ರಮದ ಮೌಲ್ಯ,ಪರೀಕ್ಷೆ ಎದುರಿಸುವ ಬಗೆಯ ಕುರಿತು ಜಾಗೃತಿ ಮೂಡಿಸುತ್ತ ಮಕ್ಕಳ ಭವಿಷ್ಯದಲ್ಲಿ ಸಾಧನೆ ಮಾಡುತ್ತೇವೆ ಎಂದು ಛಲದ ನಿರ್ಧಾರ ಉಂಟು ಮಾಡುವಂತೆ ಮಾಡುತ್ತಿದ್ದಾರೆ.
ಸುಮಾರು ಎರಡು ಗಂಟೆ ನಡೆಸುವ ಕಾರ್ಯಕ್ರಮದಲ್ಲಿ
ಪರೀಕ್ಷೆ ಎದುರಿಸುವ ಬಗೆ,ತಮ್ಮ ತಂದೆ ತಾಯಿಯರ ಕಷ್ಟದ ಅನುಭವಗಳ ಬಗ್ಗೆ ತಿಳಿಹೇಳುವ ನವೀನ್ ಕಿಲಾರ್ಲಹಳ್ಳಿ ಅವರ ಭಾವನೆಗಳಿಗೆ ಮಕ್ಕಳು ಭಾವುಕರಾಗಿ ಆನಂದಭಾಷ್ಪ ಸುರಿಸುತ್ತ ಗುರಿ ಮುಟ್ಟುತ್ತೇವೆ ಎಂದು ವಿಶ್ವಾಸದಿಂದ ಮಾತನಾಡುತ್ತಿರುವುದೇ ಕಾರ್ಯಕ್ರಮದ ಶಕ್ತಿ.
ಯಾವುದೇ ಸಂಘ ಸಂಸ್ಥೆ, ಸರ್ಕಾರದಿಂದಾಗಲಿ ಆರ್ಥಿಕ ಸಹಕಾರ ಪಡೆಯದೆ ತಾವೇ ತಮ್ಮ ಸ್ವಂತ ಖರ್ಚು ವೆಚ್ಚ ಭರಿಸುತ್ತ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸೇವೆ ಸಲ್ಲಿಸುತ್ತಿದ್ದಾರೆ.
ಮಕ್ಕಳು ನಾವು ಉತ್ತಮವಾಗಿ ಅಧ್ಯಯನ ಮಾಡುತ್ತೇವೆ,ಇಲ್ಲಿಯವರೆಗೂ ನಿರ್ಲಕ್ಷ್ಯ ಮಾಡುತ್ತಿದ್ದೆವೋ, ಓದುವ ಶೈಲಿ ಅರಿವಾಯಿತು ಎಂದು ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಭಾವುಕರಾಗುತ್ತಿರುವ ಗುರುಗಳು: ನವೀನ್ ಕಿಲಾರ್ಲಹಳ್ಳಿಯವರ ಮಂತ್ರಮುಗ್ದ ಮಾತುಗಳ ಭಾವನೆಗಳಿಗೆ ಕೇವಲ ಮಕ್ಕಳಲ್ಲದೇ ಅವರಿಗೆ ಪಾಠ ಮಾಡುವ ಗುರುಗಳು ಸಹ ಭಾವುಕರಾಗುತ್ತಿದ್ದಾರೆ.
ಗುರುಗಳಿಂದ ಮೆಚ್ಚುಗೆ: ಇವರ ಈ ಸೇವೆಯನ್ನ ಕಂಡ ಗುರುಗಳು ಇಲ್ಲಿಯವರೆಗೂ ಇಂತಹ ಕಾರ್ಯಕ್ರಮ ಕಂಡೇ ಇರಲಿಲ್ಲ.ಅಂತಹ ಉಪಯುಕ್ತವಾಗುವಂತಹ ಮಕ್ಕಳ ಬದುಕಿನ ವಿಕಸನಗೊಳ್ಳುತ್ತಿರುವ ಸೇವಾ ಕಾರ್ಯಕ್ರಮ ಇದು ಎಂದು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲೆಲ್ಲಿ ಕಾರ್ಯಕ್ರಮ: ಈಗಾಗಲೇ ರಾಜ್ಯದೆಲ್ಲೆಡೆ ಕಾರ್ಯಕ್ರಮವನ್ನ ವಿಸ್ತರಿಸುವ ಹಿನ್ನೆಲೆಯಿಂದ ತುಮಕೂರು,ಚಿತ್ರದುರ್ಗ, ದಾವಣಗೆರೆ, ಚಳ್ಳಕೆರೆ, ಹೊಳಲ್ಕೆರೆ,ಮಧುಗಿರಿ, ಶಿರಾ ಭಾಗಗಳಲ್ಲಿ ನಡೆಸುತ್ತ ಪಾವಗಡ ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಶಾಲಾ ಕಾಲೇಜುಗಳಲ್ಲೊಂದು ಕಾರ್ಯಕ್ರಮ ನಡೆಸುತ್ತಿದ್ದಾರೆ.ಇನ್ನು ಮುಂದೆಯೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆಸುವ ಆಸಕ್ತಿಯೊಂದಿದ್ದಾರೆ.
ಸರ್ಕಾರ ಗುರುತಿಸುವಂತಾಗಬೇಕು : ಪ್ರತಿಫಲಾಪೇಕ್ಷೆಯಿಲ್ಲದೆ ಮಕ್ಕಳಲ್ಲಿ ಅರಿವಿನ ಸಂಚಲನ ಮೂಡಿಸುತ್ತ ಮಕ್ಕಳ ಮನ ಗೆಲ್ಲುತ್ತಿರುವ ಇವರಿಗೆ ಸರ್ಕಾರ ಗುರುತಿಸಬೇಕಿದೆ. ಇವರನ್ನ ಸರ್ಕಾರದಡಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನೇಮಿಸಿ ರಾಜ್ಯದೆಲ್ಲೆಡೆ ಕಾರ್ಯಕ್ರಮ ನೀಡಲು ಪ್ರೋತ್ಸಾಹಿಸುವ ಅನಿವಾರ್ಯತೆಯಿದೆ.
ಮಕ್ಕಳಿಗೆ ಅವಶ್ಯಕವಾದ ಕಾರ್ಯಕ್ರಮ ಇದಾಗಿದೆ ಎಂದು ನವೀನ್ ಕಿಲಾರ್ಲಹಳ್ಳಿಯವರ ಸೇವೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸಭಾವನೆ ಮೂಡುತ್ತಿದೆ.