ಮಾರ್ಚ್ 24. ಕ್ಕೆ ದಾವಣಗೆರೆಯಲ್ಲಿ ಸುನಾಮಿಗಳ ಸಂಗಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬೃಹತ್ ರೋಡ್ ಶೊ ನಡೆಸಿದ ಸಿಎಂ ಬೊಮ್ಮಾಯಿ
ಬೆಂಗಳೂರು, ಮಾರ್ಚ್ 06: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬಂದರೆ ಸುನಾಮಿ ಶುರುವಾಗುತ್ತದೆ. ಮಾರ್ಚ್ 24. ಕ್ಕೆ ದಾವಣಗೆರೆಯಲ್ಲಿ ಸುನಾಮಿಗಳ ಸಂಗಮವಾಗಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
ಅವರು ಇಂದು ಬೆಂಗಳೂರಿನ ಬಸವನಗುಡಿ ಹಾಗೂ ಪದ್ಮನಾಭನಗರ ಕ್ಷೇತ್ರದಲ್ಲಿ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಚಿವ ಆರ್.ಅಶೋಕ್ ಅವರು ತಮ್ಮ ಕೆಲಸದ ಮೂಲಕ ನಿಮ್ಮೆಲ್ಲರ ಹೃದಯ ಗೆದ್ದು ಹೃದಯ ಸಾಮ್ರಾಟ್ ಆಗಿದ್ದಾರೆ. ಕಳೆದ ಬಾರಿ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.
ಪದ್ಮನಾಭನಗರದ ನಾಗರಿಕರು ಬಹಳ ಪ್ರೀತಿ ತೋರಿದ್ದು, ನಿಮ್ಮ ನೆಚ್ಚಿನ ನಾಯಕ ಅಶೋಕ್ ಅವರು ಕಳೆದ ಐದು ವರ್ಷದಲ್ಲಿ ಮಾಡಿದ ಸಾಧನೆಗೆ ನಿಮ್ಮ ಬೆಂಬಲ ಸೂಚಿಸಿದ್ದೀರಿ. ಮುಂದಿನ ಚುನಾವಣೆಯಲ್ಲಿ ಮತ್ತೆ ಅವರನ್ನು ಬೆಂಬಲಿಸಿ ಎಂದು ಕರೆ ನೀಡಿದರು.
ಜನಬೆಂಬಲ
ಇಡೀ ಕರ್ನಾಟಕದಲ್ಲಿ ಎಲ್ಲೆಡೆ ಇದೇ ರೀತಿಯ ಬೆಂಬಲ ಜನರಿಂದ ದೊರೆಯುತ್ತಿದೆ. ಈ ಬಾರಿ ನಡೆಯುವ ಚುನಾವಣೆಯಲ್ಲಿ ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ಅದೇ ರೀತಿ ರಾಜ್ಯದಲ್ಲಿ 140 ಸ್ಥಾನ ಪಡೆದು ಬಿಜೆಪಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮತ್ತೆ ಬಿಜೆಪಿ ಅಧಿಕಾರ ಸ್ವೀಕರಿಸುವ ಸುಸಂದರ್ಭ ಬರುವುದು ಅಷ್ಟೇ ಸತ್ಯ ಎಂದರು.
ಇದಕ್ಕೂ ಮೊದಲು ಬಸವಗುಡಿ ಹಾಗೂ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬೃಹತ್ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವರಾದ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಮಣ್ಯ, ಎಂ. ಕೃಷ್ಣಪ್ಪ ಹಾಗೂ ಮತ್ತಿತರರು ಹಾಜರಿದ್ದರು.