ವಿಧಾನಸಭೆ ಚುನಾವಣೆ – 2023 ಪೂರ್ವಭಾವಿ ತಯಾರಿ ಪರಿವೀಕ್ಷಣೆಗೆ
ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರ ಮೂರು ದಿನದ ಭೇಟಿ
ಬೆಂಗಳೂರು, ಮಾರ್ಚ್ 07: ಮುಂಬರುವ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ – 2023 ರ ಪೂರ್ವ ತಯಾರಿ ಪರಿವೀಕ್ಷಣೆಗಾಗಿ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ತಂಡ ಮಾರ್ಚ್ 9, 10 ಮತ್ತು 11 ರಂದು ಒಟ್ಟು ಮೂರು ದಿನಗಳ ಕಾಲ ಬೆಂಗಳೂರಿಗೆ ಭೇಟಿ ನೀಡಲಿದೆ.
ನಿಯೋಗದಲ್ಲಿ ಭಾರತ ಚುನಾವಣಾ ಆಯೋಗದ ಚುನಾವಣಾ ಆಯುಕ್ತರುಗಳಾದ ಅನೂಪ್ ಚಂದ್ರಪಾಂಡೆ, ಅರುಣ್ ಗೋಯಲ್ ಹಾಗೂ ಉಪ ಆಯುಕ್ತರುಗಳು ಸೇರಿದಂತೆ ಆಯೋಗದ ಹಿರಿಯ ಅಧಿಕಾರಿಗಳು ಆಗಮಿಸಲಿದ್ದಾರೆ.
ಮೊದಲ ದಿನ ಅಪರಾಹ್ನ ಬೆಂಗಳೂರಿಗೆ ಆಗಮಿಸುವ ನಿಯೋಗವು ಮೊದಲು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ರಾಜ್ಯಮಟ್ಟದಲ್ಲಿ ಚುನಾವಣಾ ಪೂರ್ವ ತಯಾರಿ ಕುರಿತು ಸಭೆ ನಡೆಸಲಿದೆ. ತದನಂತರ ಮುಂಬರುವ ಚುನಾವಣೆ ಕುರಿತು ಪ್ರತ್ಯೇಕವಾಗಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆಯನ್ನು ನಡೆಸಲಿದ್ದು ಮುಖ್ಯವಾಗಿ ಅವರ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆಯಲಿದೆ. ಅಂದು ಸಂಜೆ ಹೋಟೆಲ್ ತಾಜ್ ವೆಸ್ಟೆಂಡ್ ನಲ್ಲಿ ಹಮ್ಮಿಕೊಳ್ಳಲಾಗಿರುವ “ಪ್ರಜಾಪ್ರಭುತ್ವದ ಒಳಗೊಳ್ಳುವಿಕೆ ಮತ್ತು ಸಮಗ್ರತೆ” ವಿಷಯದ ಕುರಿತ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೋಳ್ಳಲಿದ್ದಾರೆ. ಹಲವು ಪ್ರಜಾಪ್ರಭುತ್ವ ದೇಶಗಳ ಚುನಾವಣಾ ಆಯುಕ್ತರುಗಳು ಇದರಲ್ಲಿ ನೇರವಾಗಿ ಪಾಲ್ಗೊಳ್ಳಲಿದ್ದು ಕೆಲವರು ವಿಡಿಯೋ ಕಾನ್ಫಿರೆನ್ಸ್ ಮೂಲಕ ಪಾಲ್ಗೊಳ್ಳಲಿದ್ದಾರೆ.
ಎರಡನೆಯ ದಿನ ರಾಜ್ಯದ 34 ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ಚುನಾವಣೆಯ ಪೂರ್ವಭಾವಿ ತಯಾರಿ ಕುರಿತು ಸಭೆ ನಡೆಸಲಿದೆ. ಅಂದು ಸಂಜೆ ನಗರದ ಐಐಎಸ್‍ಸಿ ಆವರದಲ್ಲಿರುವ ಟಾಟಾ ಸಭಾಂಗಣದಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆವತಿಯಿಂದ ಹಮ್ಮಿಕೊಳ್ಳಲಾಗಿರುವ ಮತದಾರರ ಜಾಗೃತಿ ಕುರಿತ ವಿಶೇಷ ವಸ್ತುಪ್ರದರ್ಶನ, ಹೇಕಥಾನ್ ಉದ್ಘಾಟಿಸದ ನಂತರ ಮತದಾರರ ಜಾಗೃತಿ ಮೂಡಿಸುವ ಎಲ್‍ಇಡಿ ವಾಹನಗಳಿಗೆ ಚಾಲನೆ ನೀಡಲಿದ್ದಾರೆ. ತದನಂತರ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂವಾದದಲ್ಲಿ ಚುನಾವಣಾ ರಾಯಭಾರಿಗಳು, ವಿದ್ಯಾರ್ಥಿಗಳು, ದಿವ್ಯಾಂಗರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಮೂರನೇ ದಿನ ಬೆಳಿಗ್ಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಪರಾಹ್ನದ ನಂತರ ಮೂರು ದಿನಗಳ ತಮ್ಮ ಭೇಟಿಯ ಕುರಿತು ಪತ್ರಿಕಾಗೋಷ್ಠಿ ನಡೆಸಿಕೊಡಲಿದ್ದಾರೆ. ಅಂದು ಸಂಜೆ ವೇಳೆಗೆ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.