IMG 20230119 WA0121

BJP: ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ…!

NATIONAL National - ಕನ್ನಡ POLATICAL STATE

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಪ್ರಧಾನಿ ಶ್ಲಾಘನೆ
ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ- ಪ್ರಧಾನಿ ಮೋದಿ

ಯಾದಗಿರಿ: ರಾಜ್ಯದಲ್ಲಾಗುತ್ತಿರುವ ಪ್ರಗತಿಯ ಸಾಧನೆಗೆ ಕಾರಣೀಕರ್ತರಾದ ಬಸವರಾಜ ಬೊಮ್ಮಾಯಿ ಮತ್ತು ಅವರ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶಹಬ್ಬಾಸಗಿರಿ ನೀಡಿದ್ದಾರೆ.
ನೀರಾವರಿ ಯೋಜನೆಗಳ ಜಾರಿಗೆ ಡಬಲ್ ಇಂಜಿನ್ ಸರ್ಕಾರ ಶ್ರಮಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಯಾದಗಿರಿ ಜಿಲ್ಲೆಯಲ್ಲಿ ನಾನಾ ಯೋಜನೆಗಳಿಗೆ ಚಾಲನೆ ಬಳಿಕ ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಸರ್ಕಾರದ ಕಾರ್ಯ ವೈಖರಿಗೆ ಶಹಬ್ಬಾಸ್ ಗಿರಿ ನೀಡಿದರು.

IMG 20230119 WA0127

ʼಭಾರತ್ ಮಾತಾ ಕೀ ಜೈʼ ಎಂದು ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ನನ್ನ ಕಣ್ಣು ಹಾಯಿಸಿದೆಡೆಯಲ್ಲೆಲ್ಲ ಜನವೋ ಜನ. ಪೆಂಡಾಲ್ ಹೊರಗೆಯೂ ಸಾವಿರಾರು ಜನರು ಬಿಸಿಲಲ್ಲಿ ನಿಂತಿದ್ದಾರೆ. ಎಲ್ಲಿವರೆಗೂ ನನಗೆ ಕಾಣಿಸುತ್ತಿದೆಯೋ ಅಲ್ಲಿವರೆಗೂ ಜನರು ಇದ್ದಾರೆ. ಹೆಲಿಪ್ಯಾಡ್ ಬಳಿಯೂ ಜನಸ್ತೋಮ ನೋಡಿತ್ತಿದ್ದೇನೆ. ನಿಮ್ಮ ಈ ಪ್ರೀತಿ, ಆಶೀರ್ವಾದವೇ ನಮಗೆ ತಾಕತ್ತು. ಆಶೀರ್ವಾದ ಮಾಡಲು ಬಂದ ಜನರಿಗೆ ನನ್ನ ನಮನಗಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಯಾದಗಿರಿ ಸಮೃದ್ಧ ಇತಿಹಾಸವನ್ನು ಹೊಂದಿದೆ. ರಟ್ಟಿಹಳ್ಳಿಯ ಹಳೆಯ ಕೋಟೆ ನಮ್ಮ ಪೂರ್ವಜರ ಸಾಮರ್ಥ್ಯದ ಪ್ರತೀಕ. ಯಾದಗಿರಿಯು ನಮ್ಮ ಸಂಸ್ಕೃತಿ ಪರಂಪರೆಯೊಂದಿಗೆ ಹೊಂದಿಕೊಂಡಿದೆ. ತಮ್ಮ ಆಡಳಿತದ ಮೂಲಕ ಸುರಪುರದ ವೆಂಕಟಪ್ಪ ನಾಯಕರು ಯಾದಗಿರಿಯನ್ನು ದೇಶಾದ್ಯಂತ ಖ್ಯಾತಿಗೊಳಿಸಿದ್ರು. ಈ ಬಗ್ಗೆ ನಮಗೆಲ್ಲರಿಗೂ ಗರ್ವ ಇದೆ. ಯಾದಗಿರಿಯಲ್ಲಿ ಸಾವಿರಾರು ಕೋಟಿ ಮೌಲ್ಯದ ನೀರಾವರಿ ಹಾಗೂ ರಸ್ತೆಯ ಅತಿದೊಡ್ಡ ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ನಾರಾಯಣಪುರ ಎಡದಂಡೆ ಕಾಲುವೆ ವಿಸ್ತರಣೆ ಮತ್ತು ಆಧುನೀಕರಣದಿಂದ ಯಾದಗಿರಿ, ಕಲಬುರಗಿ, ವಿಜಯಪುರದ ಲಕ್ಷಾಂತರ ರೈತರಿಗೆ ನೇರ ಲಾಭ ಆಗಲಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಲಕ್ಷಾಂತರ ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದು ಪ್ರಧಾನಿಗಳು ಹೇಳಿದರು.

ಮುಂದಿನ 25 ವರ್ಷಗಳ ವಿಕಾಸ ನಮ್ಮ ಗುರಿ
ಸೂರತ್- ಚೆನ್ನೈ ಆರ್ಥಿಕ ಕಾರಿಡಾರ್ನ ಭಾಗ ಕರ್ನಾಟಕದಲ್ಲೂ ಇದೆ. ಇದರ ಕೆಲಸ ಇಂದು ಶುರು ಆಗಿದೆ. ಈ ಮೂಲಕ ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಯ ಜನರ ಜೀವನ ಉತ್ತಮವಾಗಲಿದೆ ಹಾಗೂ ಉದ್ಯೋಗ ಸಿಗಲಿದೆ. ಇದರ ಜತೆಗೆ ಉತ್ತರ ಕರ್ನಾಟಕದ ಅಭಿವೃದ್ದಿ ಶರವೇಗದಲ್ಲಿ ಸಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಲದಲ್ಲಿ ಮುಂದಿನ 25 ವರ್ಷಗಳ ಅಭಿವೃದ್ದಿ ಕಲ್ಪನೆಯೊಂದಿಗೆ ದೇಶ ಮುಂದುವರಿಯುತ್ತಿದೆ. ಅಮೃತ ಮಹೋತ್ಸವ ಕಾಲದಲ್ಲಿ ವಿಕಸಿತ ಭಾರತವನ್ನು ನಿರ್ಮಾಣ ಮಾಡಬೇಕಿದೆ. ಭಾರತದ ಪ್ರತಿ ಕುಟುಂಬ, ಪ್ರತಿ ರಾಜ್ಯ ಈ ಅಭಿಯಾನದಲ್ಲಿ ಭಾಗವಹಿಸಿದಲ್ಲಿ ವಿಕಸಿತ ಭಾರತ ಉದ್ದೇಶ ಸಫಲವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

IMG 20230119 WA0123


ಹಿಂದೆ ತಪ್ಪು ರಾಜಕೀಯ ನೀತಿಗಳು ಮತ್ತು ನಿರ್ಧಾರಗಳಿಂದ ನಾವು ಪಾಠ ಕಲಿತಿದ್ದೇವೆ. ನಮ್ಮ ಮುಂದೆ ಯಾದಗಿರಿ ಮತ್ತು ಉತ್ತರ ಕರ್ನಾಟಕದ ಉದಾಹರಣೆ ಇದೆ. ಈ ಕ್ಷೇತ್ರದ ಸಾಮರ್ಥ್ಯ ಕಮ್ಮಿ ಇಲ್ಲ. ಆದರೂ ಇದು ವಿಕಾಸದ ಯಾತ್ರೆಯಲ್ಲಿ ಬಹಳ ಹಿಂದೆ ಉಳಿದುಕೊಂಡಿದೆ. ಹಿಂದಿನ ಸರ್ಕಾರ ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆ ಎಂದು ಘೋಷಿಸಿ ಸುಮ್ಮನಿದ್ದರು. ಹೀಗಿದ್ರೆ ಬಡತನ ಹೇಗೆ ಕಡಿಮೆ ಆಗುತ್ತದೆ. ವಿದ್ಯುತ್, ನೀರಾವರಿ, ರಸ್ತೆ ಅಭಿವೃದ್ಧಿಗಳಿಗೆ ಸಮಯ ಕೊಡುವ ಕಾಲದಲ್ಲಿ ವೋಟ್ ಬ್ಯಾಂಕ್ ರಾಜಕೀಯ ಮಾಡಿದರು. ಇದರ ನಷ್ಟವನ್ನು ಕರ್ನಾಟಕ ನೋಡಿದೆ. ಈಗ ನಮ್ಮ ಸರ್ಕಾರ ಆ ಹಣೆಪಟ್ಟಿ ಕಳಚುವ ಕೆಲಸ ಮಾಡ್ತಿದೆ. ನಮ್ಮ ಪ್ರಾಥಮಿಕ ಕೆಲಸ ವಿಕಾಸ ಆಗಿದೆ. ಯಾವುದೇ ಜಿಲ್ಲೆ ಅಭಿವೃದ್ಧಿಯಿಂದ ಹಿಂದೆ ಉಳಿದರೆ ದೇಶದ ವಿಕಾಸ ಸಾಧ್ಯವಿಲ್ಲ. ಇದಕ್ಕೆ ಯಾದಗಿರಿ ಜಿಲ್ಲೆಯೂ ಸೇರಿದಂತೆ ದೇಶದ 100 ಜಿಲ್ಲೆಗಳಲ್ಲಿ ಆಕಾಂಕ್ಷ ಜಿಲ್ಲೆಗಳ ಯೋಜನೆ ಪ್ರಾರಂಭಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಯಾದಗಿರಿಯಲ್ಲಿ ಕುಪೋಷಣೆ ಕಡಿಮೆ ಆಗಿದೆ
ಯಾದಗಿರಿಯಲ್ಲಿ 100ರಷ್ಟು ಮಕ್ಕಳ ವ್ಯಾಕ್ಸಿನ್ ಆಗಿದೆ. ಜಿಲ್ಲೆಯಲ್ಲಿ ಕುಪೋಷಣೆಗೆ ಈಡಾಗಿದ್ದ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ. ಇಲ್ಲಿನ ಎಲ್ಲ ಹಳ್ಳಿಗಳು ರಸ್ತೆ ಸಂಪರ್ಕ ಪಡೆದಿದೆ. ಆಕಾಂಕ್ಷ ಜಿಲ್ಲೆಗಳ ಪೈಕಿ ಯಾದಗಿರಿ ಜಿಲ್ಲೆ ಟಾಪ್ 10ರಲ್ಲಿದೆ. ಇದಕ್ಕೆ ನಾನು ಜಿಲ್ಲೆಯ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ಭಾರತದ ಅಭಿವೃದ್ಧಿ ಹೊಂದಲು ಗಡಿ ಭದ್ರತೆ, ಕರಾವಳಿ ಭದ್ರತೆ ಜತೆಗೆ ನೀರಿನ ಭದ್ರತೆಯೂ ಮುಖ್ಯ. ಡಬಲ್ ಇಂಜಿನ್ ಸರ್ಕಾರ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕರ್ನಾಟಕದಲ್ಲಿ ಬಾಕಿ ಉಳಿದಿದ್ದ ಅನೇಕ ಯೋಜನೆಗಳು ಈಗ ಮುಕ್ತಾಯವಾಗುತ್ತಿದೆ. ಅದರಲ್ಲಿ ಹಲವು ನದಿಗಳ ಜೋಡಣೆ ಕಾರ್ಯವೂ ಜರುಗುತ್ತಿದೆ. ನಾರಾಯಣಪುರ ಎರದಂಡೆ ಕಾಲುವೆಯನ್ನು ಹೊಸ ತಂತ್ರಜ್ಞಾನದ ಮೂಲಕ ಕಾಮಗಾರಿ ಪೂರ್ಣಗೊಳಿಸಿದ್ದು, ನಾಲ್ಕೂವರೆ ಲಕ್ಷ ಹೆಕ್ಟೇರ್ ಜಮೀನು ನೀರಾವರಿ ಆಗಿದೆ. ಈಗ ದೇಶದಲ್ಲಿ ಪರ್ ಡ್ರಾಪ್ ಮೋರ್ ಕ್ರಾಪ್ ಯೋಜನೆ ಜಾರಿಯಲ್ಲಿದೆ. ಮೈಕ್ರೋ ಇರಿಗೇಷನ್ ಮೂಲಕ ಬಲ ನೀಡುತ್ತಿದ್ದೇವೆ. ಹಿಂದಿನ ಆರೇಳು ವರ್ಷಗಳಲ್ಲಿ ದೇಶದ 70 ಲಕ್ಷ ಹೆಕ್ಟೇರ್ ಭೂಮಿಯನ್ನು ಮೈಕ್ರೋ ಇರಿಗೇಷನ್ ಅಡಿಯಲ್ಲಿ ತಂದಿದ್ದೇವೆ. ಕರ್ನಾಟಕದಲ್ಲಿ ಈ ಯೋಜನೆಯಿಂದ 5 ಲಕ್ಷ ಹೆಕ್ಟೇರ್ ಜಮೀನಿಗೆ ಲಾಭವಾಗಲಿದೆ. ಇದು ಡಬಲ್ ಇಂಜಿನ್ ಸರ್ಕಾರದಿಂದ ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಎನ್ಇಪಿ ಜತೆಯಲ್ಲಿ ವಿದ್ಯಾನಿಧಿ
ವಿದ್ಯಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ನ್ಯಾಷನಲ್ ಎಜುಕೇಷನ್ ಪಾಲಿಸಿ ತಂದಿದೆ. ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ವಿದ್ಯಾನಿಧಿ ಕಾರ್ಯಕ್ರಮ ಜಾರಿ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆ ಆಗಿದೆ. ಮಹಾಮಾರಿಯ ನಡುವೆಯೂ ಕರ್ನಾಟಕ ದೇಶದಲ್ಲಿ ಅಭಿವೃದ್ಧಿಯ ಪ್ರಗತಿಯಲ್ಲಿ ಮುನ್ನುಗ್ಗುತ್ತಿದೆ. ಸ್ವಾತಂತ್ರ್ಯ ಪಡೆದು ಇಷ್ಟು ವರ್ಷದ ನಂತರವೂ ಯಾವುದಾದರೂ ವ್ಯಕ್ತಿ ಯೋಜನೆಗಳಿಂದ ವಂಚಿತವಾಗಿದ್ದರೆ ಆ ವ್ಯಕ್ತಿಗೆ ನಮ್ಮ ಸರ್ಕಾರ ಎಲ್ಲ ರೀತಿಯ ಯೋಜನೆಗಳನ್ನು ಮುಟ್ಟಿಸುತ್ತಿದೆ.

ಯಾದಗಿರಿ ರಾಷ್ಟ್ರದ ತೊಗರಿ ಕಣಜ
ದೇಶದಲ್ಲಿ ಸಣ್ಣ ವ್ಯವಸಾಯಗಾರರು ಹೆಚ್ಚು ಇದ್ದಾರೆ. ಒಂದೆಡೆ ತಂತ್ರಜ್ಞಾನ ಆಧಾರಿತ ವ್ಯವಸಾಯಕ್ಕೆ ಬಲ ನೀಡುತ್ತಿದ್ದೇವೆ. ಇದರ ಜತೆ ಸಾಂಪ್ರದಾಯಿಕ ಕೃಷಿಗೂ ಸರ್ಕಾರದಿಂದ ಬೆಂಬಲ ಇದೆ. ಇವರೆಲ್ಲರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತಿದ್ದೇವೆ. ಯಾದಗಿರಿ ಕ್ಷೇತ್ರ ತೊಗರಿಯ ಕಣಜವಾಗಿದೆ. ನೀವು ಬೆಳೆಯುವ ಉತ್ತರ ಕರ್ನಾಟಕದ ತೊಗರಿ ಹಾಗೂ ಬೇಳೆ ಕಾಳುಗಳು ದೇಶದ್ಯಾಂತ ರಫ್ತಾಗುತ್ತಿದೆ. ಕೇಂದ್ರ ಸರ್ಕಾರ ಕಳೆದ 8 ವರ್ಷಗಳಲ್ಲಿ ರೈತರಿಂದ 80% ಗೂ ಅಧಿಕ ಬೆಳೆಯನ್ನು ಎಂ ಎಸ್ ಪಿ ಅಡಿ ಖರೀದಿ ಮಾಡಿದೆ. ಬೆಳೆ ಬೆಳೆಯುವ ರೈತರಿಗೆ 70 ಸಾವಿರ ಕೋಟಿ ಹಣದ ನೆರವು ನೀಡಿದ್ದೀವಿ. ಖಾದ್ಯ ತೈಲದಲ್ಲಿ ಆತ್ಮನಿರ್ಭರತೆ ಮಾಡಲಾಗುತ್ತಿದೆ. ಇದರ ಲಾಭ ಕರ್ನಾಟಕದ ರೈತರಿಗೂ ಸಹ ಸಿಗಲಿದೆ. ಬಯೋ ಫ್ಯೂಯೆಲ್ ಆದ ಇಥೆನಾಲ್ ಬಳಕೆಗೆ ಆದ್ಯತೆ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಉತ್ತರ ಕರ್ನಾಟಕದಲ್ಲಿ ಸಂಪರ್ಕಕ್ಕೆ ಹೆಚ್ಚಿನ ಒತ್ತು
ಭಾರತದ ಆಗ್ರಹಕ್ಕೆ ಮಣಿದು ವಿಶ್ವಸಂಸ್ಥೆಯು ಈ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿದೆ. ಕರ್ನಾಟಕದ ರಾಗಿ ಮತ್ತು ಜೋಳ ಬಳಹ ಪ್ರಸಿದ್ಧಿ ಪಡೆದಿದೆ. ಇದನ್ನು ವಿಶ್ವಮಟ್ಟದಲ್ಲಿ ಪ್ರಚಾರ ಮಾಡಲು ಡಬಲ್ ಇಂಜಿನ್ ಸರ್ಕಾರ ಬದ್ಧವಾಗಿದೆ. ಕರ್ನಾಟಕದ ರೈತರು ಇಲ್ಲೂ ಲಾಭ ಪಡೆಯಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಲಿದ್ದೇವೆ. ಕೃಷಿ, ಉದ್ಯೋಗ, ಸಂಚಾರ ಎಲ್ಲಕ್ಕೂ ರಸ್ತೆ ಮುಖ್ಯ. ಇದಕ್ಕಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನ ಸವಾಲಾಗಿ ಸ್ವೀಕರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭವಿಷ್ಯದಲ್ಲಿ ಈ ಅಭಿವೃದ್ಧಿ ಇನ್ನೂ ಹೆಚ್ಚಾಗಲಿದೆ. ಉತ್ತರ ಕರ್ನಾಟಕಕ್ಕೂ ಈ ಲಾಭ ಸಿಗಲಿದೆ. ಈ ಯೋಜನೆಗಳಿಂದ ರಾಜ್ಯಕ್ಕೆ ಸಮೃದ್ಧಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.