ಉದ್ಯಾನ ನಗರದ ಗತವೈಭವವನ್ನು
ಮರುಕರುಳಿಸಲು ಕ್ರಮ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಜನವರಿ 20 (ಕರ್ನಾಟಕ ವಾರ್ತೆ):
ಬೆಂಗಳೂರು ಉದ್ಯಾನ ನಗರಿ ಎಂದು ಪ್ರಸಿದ್ದಿ ಪಡೆದಿದ್ದು, ಉದ್ಯಾನ ನಗರದ ಗತವೈಭವವÀನ್ನು ಮರುಕರುಳಿಸುವಂತೆ ಕ್ರಮ ವಹಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಇಂದು ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘದ ವತಿಯಿಂದ ಲಾಲ್‍ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿರುವ ಬೆಂಗಳೂರು ನಗರದ ಇತಿಹಾಸ ವಿಷಯಾಧಾರಿತದ ಗಣರಾಜ್ಯೋತ್ಸವ ಫಲಪುಪ್ಪ ಪ್ರದರ್ಶನ-2023 ಉದ್ಘಾಟಿಸಿದ ನಂತರ ಮಾತನಾಡಿದರು.
ಬೆಂಗಳೂರಿನ ಲಾಲ್‍ಬಾಗ್, ಕಬ್ಬನ್‍ಪಾರ್ಕ್ ಸೇರಿದಂತೆ ಇತರ ಪ್ರಮುಖ ಉದ್ಯಾನಗಳು ಹಾಗೂ ಬಿಬಿಎಂಪಿ ಅವರು ನಿರ್ಮಿಸುವ ಹೊಸ ಉದ್ಯಾನವನಗಳಲ್ಲಿ ಸಸ್ಯ ಸಂಪತ್ತನ್ನು ಹೆಚ್ಚಾಗಿ ಬೆಳೆಸಬೇಕು. ಹೊರವಲಯದಲ್ಲಿ ಹೊಸ ಉದ್ಯಾನಗಳನ್ನು ನಿರ್ಮಿಸುವ ಮೂಲಕ ಉದ್ಯಾನಗರದ ಹೆಸರನ್ನು ಸದಾ ಉಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಫಲಪುಷ್ಫ ಪ್ರದರ್ಶನವು ಅತ್ಯಂತ ಜನಪ್ರಿಯವಾಗಿದ್ದು, ಪ್ರತಿವರ್ಷ ಲಕ್ಷಗಟ್ಟಲೆ ಜನ ಬರುತ್ತಾರೆ. ಈ ಬಾರಿ 10 ರಿಂದ 15 ಲಕ್ಷದವರೆಗೂ ಜನಬರುವ ನೀರಿಕ್ಷೆ ಇದೆ. ಇದಕ್ಕಾಗಿ ತೋಟಗಾರಿಕೆ ಇಲಾಖೆ ಸಕಲ ವ್ಯವಸ್ಥೆ ಮಾಡಿಕೊಂಡಿದೆ. ಫಲಪುಪ್ಪ ಪ್ರದರ್ಶನ ಎಲ್ಲರಿಗೂ ಪ್ರಿಯವಾಗಿದ್ದು, ಸಸ್ಯ ಸಂಪತ್ತನ್ನು ಹೆಚ್ಚು ಮಾಡಬೇಕೆಂಬುದು ನಮ್ಮ ಉದ್ದೇಶ. ರಾಜ್ಯದಲ್ಲಿ ಹಸಿರು ಪದರ ವಿಸ್ತರಣೆಯಾಗಬೇಕೆಂದು ರೂ. 100ಕೋಟಿಗಳನ್ನು ಹಸಿರಿನ ವಿಸ್ತರಣೆ ಸಲುವಾಗಿ ಮೀಸಲಿರಿಸಿದೆ. ಅದರ ಅನುಷ್ಠಾನವೂ ಆಗುತ್ತಿದೆ ಎಂದು ಹೇಳಿದರು.
ಗುಡ್ಡಗಾಡು ಪ್ರದೇಶದಲ್ಲಿ ಸಂಪೂರ್ಣ ಹಸಿರು ಮಾಡಿ ಪರಿಸರ ಸಮತೋಲನ ಕಾಯ್ದುಕೊಳ್ಳಲು ರಾಜ್ಯದಲ್ಲಿ ಪ್ರಥಮವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ತೋಟಗಾರಿಕೆ ಇಲಾಖೆ ವಿಸ್ತರಣೆ ಕೂಡ ಆಗಬೇಕು. ಲಾಲ್‍ಬಾಗ್‍ನಿಂದ ಹಿಡಿದು ರಾಜ್ಯದೆಲ್ಲೆಡೆ ತೋಟಗಾರಿಕೆ ಇದೆ. ಇವುಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದು, ಮುಂದಿನ ಬಜೆಟ್‍ನಲ್ಲಿ ಅನುದಾನ ನೀಡಲಾಗುವುದು. ತೋಟಗಾರಿಕೆಯಿಂದ ಹಸಿರು ಹೆಚ್ಚಾಗುವ ಜೊತೆಗೆ ಉತ್ಪಾದನೆ, ಪೌಷ್ಠಿಕ ಆಹಾರವನ್ನು ಒದಗಿಸಲು ಸಾಧ್ಯತೆ ಇದೆ. ದೊಡ್ಡ ಪ್ರಮಾಣದಲ್ಲಿ ತೋಟಗಾರಿಕೆ ವಿಸ್ತರಣೆ ಮಾಡುವುದು ಮತ್ತು ಫಾರ್ಮ್‍ಗಳನ್ನು ಬೆಳೆಸುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದರು.
ಜನರು ಫಲಪುಷ್ಪ ಪ್ರದರ್ಶನದ ಲಾಭ ಪಡೆಯಲಿ. ಪ್ರದರ್ಶನವು ಯಶಸ್ವಿಯಾಗಲಿ. ಜನರೆಲ್ಲರೂ ತಮ್ಮದೇ ಶೈಲೆಯಲ್ಲಿ ಫಲಪುಷ್ಪಗಳನ್ನು ಬೆಳೆಸಲು ಪ್ರಯತ್ನಿಸಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕಾ ಸಚಿವ ಮುನಿರತ್ನ, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.