9c05eb15 e4a5 4f51 9b9a fce5519b1104

ಪ್ಯಾಕೇಜ್ ಎಷ್ಟು ಜನರಿಗೆ, ಎಷ್ಟೆಷ್ಟು ತಲುಪಿದೆ…?

STATE POLATICAL

ಪ್ಯಾಕೇಜ್ ಎಷ್ಟು ಜನರಿಗೆ, ಎಷ್ಟೆಷ್ಟು ತಲುಪಿದೆ?; ಸಿಎಂಗೆ ಡಿ.ಕೆ ಶಿವಕುಮಾರ್ ಪ್ರಶ್ನೆ

ಬೆಂಗಳೂರು: ‘ಕೊರೋನಾ ಅವಧಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಘೋಷಣೆ ಮಾಡಿರುವ ಪರಿಹಾರ ಪ್ಯಾಕೇಜ್ ನಿಂದ ರಾಜ್ಯದ ಎಷ್ಟು ಜನರಿಗೆ ಪ್ರಯೋಜನವಾಗಿದೆ ಎಂಬುದರ ಬಗ್ಗೆ ಅಂಕಿಅಂಶಗಳ ದಾಖಲೆ ನೀಡಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಹಾಗೂ ಅವರ ಸ್ನೇಹಿತರನ್ನು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು…

‘ಸರ್ಕಾರ ವಿಧಾನ ಮಂಡಲ ಅಧಿವೇಶನ ಕರೆದಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳು ದೆಹಲಿ ಪ್ರವಾಸ ಮುಗಿಸಿದ್ದಾರೆ. ರಾಜ್ಯದ ಜನರು ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ 25 ಸಂಸದರನ್ನು ಕೊಟ್ಟಿದ್ದಾರೆ.

ಮುಖ್ಯಮಂತ್ರಿಗಳು ಸರ್ವಪಕ್ಷ ನಿಯೋಗವನ್ನು ಪ್ರಧಾನಮಂತ್ರಿಗಳು, ಕೇಂದ್ರ ವಿತ್ತ ಸಚಿವರ ಮುಂದೆ ಕರೆದುಕೊಂಡು ಹೋಗದಿದ್ದರೂ ಕೇವಲ ಬಿಜೆಪಿ ಸಂಸದರನ್ನು ಕರೆದುಕೊಂಡು ಹೋಗಿ ರಾಜ್ಯದ ಸಮಸ್ಯೆ ಬಗ್ಗೆ ಚರ್ಚಿಸಿ ಆಗುತ್ತಿರುವ ಅನ್ಯಾಯ ತಡೆದು, ಜನರ ಬೇಡಿಕೆ ಹಾಗೂ ಅನುದಾನ ತರುವ ಪ್ರಯತ್ನ ಮಾಡುವ ನಿರೀಕ್ಷೆ ಇತ್ತು. ಆದರೆ ಅದನ್ನು ಮಾಡಲಿಲ್ಲ.

ಈ ಹಿಂದೆ ಅಧಿವೇಶನ ನಡೆಯುವಾಗ ಎಲ್ಲ ಪಕ್ಷದ ಸದಸ್ಯರನ್ನು ಕರೆದು, ಪಕ್ಷಭೇದ ಮರೆತು ರಾಜ್ಯದ ಹಿತದ ಬಗ್ಗೆ ಚರ್ಚೆ ಮಾಡುವ ಸಂಪ್ರದಾಯ ನಡೆದುಕೊಂಡು ಬರುತ್ತಿತ್ತು.

ಈ ಬಾರಿ ಸಂಸತ್ ಅಧಿವೇಶನ ನಡೆಯುವಾಗ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿದ್ದರೂ ಯಾವ ಸಂಸದರನ್ನೂ ಕರೆದು ಸಭೆ ಮಾಡಿಲ್ಲ. ನಮ್ಮ ಸಂಸದರನ್ನು ಕರೆದುಕೊಂಡು ಹೋಗಲು ಇಷ್ಟವಿಲ್ಲದಿದ್ದರೆ ಬೇಡ. ಅವರ ಸಂಸದರನ್ನೇ ಕರೆದುಕೊಂಡು ಹೋಗಿ ಸರ್ಕಾರದ ಮೇಲೆ ಒತ್ತಡ ಹೇರಬಹುದಾಗಿತ್ತು. ಈ ವಿಚಾರದಲ್ಲಿ ಸಿಎಂ ವಿಫಲರಾಗಿದ್ದಾರೆ.

ಈ ಬಾರಿ ವಿಧಾನ ಮಂಡಲ ಅಧಿವೇಶನದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ. ಈ ಸಂದರ್ಭದಲ್ಲಿ ನಾವು ರಾಜ್ಯದ ಪರವಾಗಿ ಒಂದು ವಿಚಾರವನ್ನು ನಿರೀಕ್ಷೆ ಮಾಡುತ್ತಿದ್ದೇವೆ.

ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಹಣಕಾಸು ಸಚಿವರು ಘೋಷಣೆ ಮಾಡಿದ 20 ಲಕ್ಷ ಕೋಟಿ ಪ್ಯಾಕೇಜ್ ನಲ್ಲಿ ರಾಜ್ಯಕ್ಕೆ ಎಷ್ಟು ಬಂದಿದೆ. ಈ ಪ್ಯಾಕೇಜ್ ನಿಂದ ರಾಜ್ಯದಲ್ಲಿ ಯಾವಾಗ? ಯಾರಿಗೆ? ಎಷ್ಟು ಪ್ರಮಾಣದ ಹಣ ನೀಡಲಾಗಿದೆ?

ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಬ್ಯಾಂಕ್ ಗಳ ಜತೆ ಎಷ್ಟು ಸಭೆ ನಡೆಸಿದ್ದಾರೆ? ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಪಿಎಂ ಕೇರ್ ನಿಧಿಯ ದೇಣಿಗೆಯನ್ನು ರಾಜ್ಯದ ಜನರಿಗೆ ಯಾವ ರೀತಿ ಬಳಸಲಾಗಿದೆ?

1610 ಕೋಟಿ ರೂಪಾಯಿ ಪ್ಯಾಕೇಜ್ ಹಾಗೂ ನಂತರದ ದಿನಗಳಲ್ಲಿ ಘೋಷಿಸಿದ ಪ್ಯಾಕೇಜ್ ಗಳಿಂದ ಎಷ್ಟು ಚಾಲಕರಿಗೆ, ಸವಿತಾ ಸಮಾಜದವರಿಗೆ, ದರ್ಜಿಗಳಿಗೆ, ಮಾಡಿವಾಳರಿಗೆ ಪರಿಹಾರ ಸಿಕ್ಕಿದೆ? ಯಾವ ಯಾವ ವರ್ಗಗಳಿಗೆ ನೀಡಲಾಗಿದೆ ಎಂಬುದರ ಕುರಿತು ಸರ್ಕಾರ ತನ್ನ ದಾಖಲೆಯನ್ನು, ಅಂಕಿ ಅಂಶಗಳ ಮಾಹಿತಿಯನ್ನು ಅಧಿವೇಶನದ ಆರಂಭದ ದಿನದಲ್ಲೇ ಕೊಡಬೇಕು ಎಂದು ಈ ಮೂಲಕ ಒತ್ತಾಯ ಮಾಡುತ್ತೇನೆ.

ಮಾಧ್ಯಮಗಳ ವರದಿ ಪ್ರಕಾರ ಸರ್ಕಾರ ಪಿಂಚಣಿ ಹಣವನ್ನೇ ನೀಡಿಲ್ಲ. ಕೊರೋನಾ ಸಮಯದಲ್ಲಿ ಸರ್ಕಾರ ಎಷ್ಟು ಆದೇಶ, ಘೋಷಣೆಗಳನ್ನು ಮಾಡಿತ್ತು, ಅದರಲ್ಲಿ ಎಷ್ಟು ಕಾರ್ಯರೂಪಕ್ಕೆ ಬಂದಿವೆ ಎಂಬ ಮಾಹಿತಿಯನ್ನು ಘೋಷಣೆ ಮಾಡಬೇಕು.

ಮಾಧ್ಯಮಗಳು ಕಳೆದ ಆರು ತಿಂಗಳಲ್ಲಿ ಅನೇಕ ವಿಚಾರವಾಗಿ ಸರ್ಕಾರದ ಗಮನಕ್ಕೆ ತಂದಿವೆ. ನಮಗಿಂತ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿವೆ. ನಿಮ್ಮ ಜತೆ ಕೈಜೋಡಿಸಲು ನಾವು ಬದ್ಧರಾಗಿದ್ದೇವೆ.

ಮುಖ್ಯಮಂತ್ರಿಗಳು ದೆಹಲಿ ಪ್ರವಾಸದಲ್ಲಿ ಎಷ್ಟು ಬೇಡಿಕೆ ಮುಂದಿಟ್ಟಿದ್ದರು. ಅದರಲ್ಲಿ ಎಷ್ಟು ಹಣ ತಂದಿದ್ದಾರೆ? ಅವರ ಭೇಟಿಯಿಂದ ಎಷ್ಟು ಅನುಕೂಲ ಆಗಿದೆ? ಎಂಬುದರ ಮಾಹಿತಿಯನ್ನು ನಿಮ್ಮ ಮುಂದೆ, ರಾಜ್ಯದ ಜನರ ಮುಂದೆ ಇಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ.’

dcb1afd6 3957 4459 b969 442239566a97

ರಮೇಶ್ ಬಾಬು ಸೇರ್ಪಡೆ:

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಆಗಮಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಹಾಗೂ ಇತರೆ ಸದಸ್ಯರನ್ನು ಶನಿವಾರ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥ ಬಿ.ಎಲ್ ಶಂಕರ್, ಉಪಾಧ್ಯಕ್ಷ ಸುದರ್ಶನ್ ಇದ್ದರು.

ಕಾಂಗ್ರೆಸ್ ಸೇರಲು 60 ಅರ್ಜಿಗಳು:

ಕಾಂಗ್ರೆಸ್ ಪಕ್ಷಕ್ಕೆ ಸೇರಲು ರಾಜ್ಯದ ವಿವಿಧ ಜಿಲ್ಲೆಗಳಿಂದ 60ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಕಾಂಗ್ರೆಸ್ ಪಕ್ಷಕ್ಕೆ ಇವರನ್ನು ಸೇರಿಸಿಕೊಳ್ಳುವ ಮುನ್ನ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ರಚಿಸಿದ್ದೇವೆ. ಈ ಸಮಿತಿ ಸ್ಥಳೀಯ ಮುಖಂಡರ ಜತೆ ಚರ್ಚಿಸಿ ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸುತ್ತದೆ. ಪಕ್ಷಕ್ಕೆ ಬರುವವರು ಸ್ಥಳೀಯರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕಾಗಿದೆ. ಅನೇಕ ಅರ್ಜಿಗಳ ಬಗ್ಗೆ ಸ್ಥಳೀಯವಾಗಿ ಚರ್ಚೆ ನಡೆಯುತ್ತಿದೆ.

ವಿಧಾನ ಪರಿಷತ್ ಚುನಾವಣೆ ಶೀಘ್ರದಲ್ಲೇ ಘೋಷಣೆಯಾಗುವ ಹಿನ್ನೆಲೆಯಲ್ಲಿ ರಮೇಶ್ ಬಾಬು ಅವರ ಅರ್ಜಿಯನ್ನು ಬೇಗ ತೀರ್ಮಾನಿಸಲಾಗಿದೆ. ನಾನು, ವಿರೋಧ ಪಕ್ಷದ ನಾಯಕರು ಹಾಗೂ ಹಿರಿಯ ನಾಯಕರು ಚರ್ಚೆ ಮಾಡಿ ರಮೇಶ್ ಹಾಗೂ ಅವರ ಸ್ನೇಹಿತರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಒಂದೂವರೆ ತಿಂಗಳ ಹಿಂದೆಯೇ ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿತ್ತಾದರೂ ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು.

ರಮೇಶ್ ಅವರು ಯಾವುದೇ ಷರತ್ತು ಇಲ್ಲದೆ, ಸೋನಿಯಾ ಗಾಂಧಿ ಅವರ ನಾಯಕತ್ವ ಹಾಗೂ ಪಕ್ಷದ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬಂದಿದ್ದಾರೆ. ಜೆಡಿಎಸ್ ಪರವಾಗಿ ಮಾಧ್ಯಮಗಳ ಚರ್ಚೆಯಲ್ಲಿ ಭಾಗವಹಿಸುತ್ತಿದ್ದಾಗಲೂ ರಮೇಶ್ ಅವರು ಕಾಂಗ್ರೆಸ್ ಸಿದ್ಧಾಂತದ ಪರವಾಗಿದ್ದನ್ನು ನೋಡಿದ್ದೇವೆ. ಅವರಿಗೆ ಈ ಸಂದರ್ಭದಲ್ಲಿ ನಮ್ಮ ನಾಯಕರೆಲ್ಲರು ಒಟ್ಟಾಗಿ ಸ್ವಾಗತಿಸುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.