ಕೊರೊನಾ ಸೋಂಕು; ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ…!

STATE Genaral

5 ಲಕ್ಷ ದಾಟಿದ ಕೊರೊನಾ ಸೋಂಕು; ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ

ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರ: ಈಶ್ವರ ಖಂಡ್ರೆ ಖಂಡನೆ

ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದ್ದು, ಈ ವೈರಾಣುವಿಗೆ ಬಲಿಯಾದವರ ಸಂಖ್ಯೆಯೂ 7ಸಾವಿರದ 800ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರೂ ಸರ್ಕಾರ ನಿರ್ಲಕ್ಷ್ಯ ತಾಳಿ, ಮುಗ್ದ ಜನರ ಜೀವದೊಂದಿಗೆ ಚಲ್ಲಾಟವಾಡುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ಸಿನಿಮಾ ಮಂದಿರ, ಈಜುಕೊಳ ಹಾಗೂ ಶಾಲಾ ಕಾಲೇಜು ಹೊರತು ಪಡಿಸಿ ಉಳಿದೆಲ್ಲವನ್ನೂ ತೆರೆದಿರುವ ಸರ್ಕಾರ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಗಮನವನ್ನೇ ಹರಿಸುತ್ತಿಲ್ಲ, ರೋಮು ಹತ್ತಿ ಉರಿಯುತ್ತಿದ್ದಾಗ ದೊರೆ ನೀರೋ ಪಿಟೀಲು ನುಡಿಸುತ್ತಿದ್ದ ಎಂಬ ಜನಪ್ರಿಯ ನಾಣ್ಣುಡಿ ಇದೆ.ಅದೇ ರೀತಿ, ಜನ ಸೂಕ್ತ ಚಿಕಿತ್ಸೆ ಸಿಗದೆ, ಸೋಂಕಿನಿಂದ ಸಾಯುತ್ತಿದ್ದರೂ, ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ದೆಹಲಿಯನ್ನು ಎಡತಾಕುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ನಿನ್ನೆ ಒಂದೇ ದಿನ ದಾಖಲೆಯ 179 ರೋಗಿಗಳು ಕೊರೊನಾಗೆ ಬಲಿಯಾಗಿದ್ದಾರೆ. ವಾಟ್ಸ್ ಆಪ್, ಫೇಸ್ ಬುಕ್ ತುಂಬಾ ಬರೀ ಸಾವಿನ ಸುದ್ದಿಗಳೇ ಬರುತ್ತಿವೆ. ಈ ಹಂತದಲ್ಲಿ ಶಾಲೆ ಕಾಲೇಜು ತೆರೆಯುವ ಬಗ್ಗೆಯೂ ಸರ್ಕಾರ ಚಿಂತಿಸುತ್ತಿದೆ ಎಂದು ಸಚಿವರು ಹೇಳುತ್ತಾರೆ. ಮಕ್ಕಳ ಭವಿಷ್ಯದ ಜೊತೆ ಸರ್ಕಾರ ಹುಡುಗಾಟವಾಡುತ್ತಿದೆ. ರಾಜ್ಯದಲ್ಲಿ ಕಳೆದ ಏಪ್ರಿಲ್ ನಿಂದ ಈಚೆಗೆ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳ ಆಗಿದೆ. ಆದರೂ ಸರ್ಕಾರ ಏನೂ ಆಗಿಯೇ ಇಲ್ಲ ಎಂಬಂತೆ ಜಾಣ ಕುರುಡುತನ, ಕಿವುಡುತನ ಪ್ರದರ್ಶಿಸುತ್ತಿದೆ, ಇಷ್ಟು ಜನವಿರೋಧಿ ಸರ್ಕಾರವನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಹೇಳಿದ್ದಾರೆ.

ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬ ಗಾದೆಯಂತೆ ರಾಜ್ಯದ ಜನರ ಜೊತೆ ಸರ್ಕಾರ ಚಲ್ಲಾಟ ಆಡುತ್ತಿದೆ. ಬೆಂಗಳೂರು ನಗರದಲ್ಲಿ ದಿನವೂ ಸೋಂಕು ಹೆಚ್ಚಾಗುತ್ತಿದೆ, ಬೆಂಗಳೂರು ನಗರದಲ್ಲಿ ಕೋವಿಡ್ ನಿಯಂತ್ರಿಸಲು ನೇಮಕಗೊಂಡಿದ್ದ ಅಷ್ಟ ದಿಕ್ಪಾಲಕರು ಏನು ಮಾಡುತ್ತಿದ್ದಾರೆ, ಆರೋಗ್ಯ ಇಲಾಖೆ ಏನು ಮಾಡುತ್ತಿದೆ. ಜನರ ಸಂಕಷ್ಟ ಇವರಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಸಂಪೂರ್ಣ ಕೈಚೆಲ್ಲಿ ಕುಳಿತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಎರಡು ಗಡ ದೂರದ ಅಂತರ ಪಾಲಿಸುವ ಮೂಲಕ ಮತ್ತು ತಮ್ಮ ಕೈಗಳನ್ನು ಆಗಾಗ್ಗೆ ಸಾಬೂನಿನಿಂದ ತೊಳೆದು ಶುಚಿ ಗೊಳಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯ ತಾವು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.