*ಕೋವಿಡ್19 ನಿರ್ವಹಣೆ ಕುರಿತಂತೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್; ರಾಜ್ಯದ ಪರಿಸ್ಥಿತಿ ವಿವರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್*
*ವೈದ್ಯ ವಿದ್ಯಾರ್ಥಿಗಳ ಕಡ್ಡಾಯ ಸೇವೆ ಸಲ್ಲಿಕೆಗೆ ಕ್ರಮ ಕೈಗೊಳ್ಳಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ*
*ಬೆಂಗಳೂರು, ಆಗಸ್ಟ್ 11, ಮಂಗಳವಾರ*
ಕೋವಿಡ್ 19 ನಿರ್ವಹಣೆ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವೀಡಿಯೋ ಕಾನ್ಫರೆನ್ಸ್ ನಡೆಸಿದರು.
ಮಂಗಳವಾರ ನಡೆದ ವೀಡಿಯೋ ಸಭೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡು, ವರದಿ ನೀಡಿದರು.
ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪದವಿ ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಕೋರ್ಸ್ ಬಳಿಕ ಕಡ್ಡಾಯವಾಗಿ ಸೇವೆ ಸಲ್ಲಿಸುವಂತೆ ಮಾಡಬೇಕು. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಬೇಕು. ಕೋವಿಡ್ ಸಂಬಂಧಿತ ಚಟುವಟಿಕೆಗಳಿಗೆ ಅಂತಿಮ ವರ್ಷದ ಅರೆ ವೈದ್ಯಕೀಯ ಮತ್ತು ವೈದ್ಯ ಪದವಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಅವರಿಗೆ ತರಗತಿ ಆರಂಭಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ಲಿಕ್ವಿಡ್ ಆಕ್ಸಿಜನ್ ಘಟಕಗಳು ಸುಲಭವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ವೈದ್ಯ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗೆ ಒತ್ತು ನೀಡಬೇಕು. ಮೆಡಿಕಲ್ ಕಾಲೇಜುಗಳಲ್ಲಿ ಪ್ರತಿ ವರ್ಷ 10,000 ಪದವಿ ಮತ್ತು 2,000 ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸಲು ಅನುಮತಿ ನೀಡಬೇಕು ಎಂದು ಕೋರಿದರು.
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಉಪಸ್ಥಿತರಿದ್ದರು.
*ಕೋವಿಡ್ ಮಾಹಿತಿ*
*ಕೊರೊನಾ ರೋಗಿಯ ಸಂಪರ್ಕಿತ ವ್ಯಕ್ತಿಗಳ ಪತ್ತೆಗೆ ಬೂತ್ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಸ್ವಯಂಸೇವಕರ ತಂಡ ರಚಿಸಲಾಗಿದೆ. ರೋಗಿಯ ಸರಾಸರಿ ಸಂಪರ್ಕ ಪತ್ತೆ ಪ್ರಮಾಣ 3.5 ರಿಂದ (ಜುಲೈನಲ್ಲಿ) 4.5 ಕ್ಕೆ (ಆಗಸ್ಟ್) ಏರಿಕೆಯಾಗಿದೆ.
*ದಿನದ ಕೊರೊನಾ ಪರೀಕ್ಷೆ ಸಂಖ್ಯೆಯನ್ನು 20,000 ದಿಂದ 50,000 ಕ್ಕೆ ಏರಿಸಲಾಗಿದೆ. 75,000 ಏರಿಸುವ ಗುರಿ ಇದೆ. ಒಟ್ಟು 100 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ.
*ಕಂಟೇನ್ಮೆಂಟ್ ಹಾಗೂ ಬಫರ್ ವಲಯದಲ್ಲಿ ಪರೀಕ್ಷೆಗೆ 1,300 ಮೊಬೈಲ್ ಲ್ಯಾಬ್ ಗಳನ್ನು ನಿಯೋಜಿಸಲಾಗಿದೆ.
*ಲಕ್ಷಣ ರಹಿತ ಮತ್ತು ಕಡಿಮೆ ಲಕ್ಷಣ ಹೊಂದಿರುವವರಿಗೆ ಸೌಲಭ್ಯವಿದ್ದರ ಮನೆಯಲ್ಲೇ ಆರೈಕೆ ಮಾಡಲಾಗುತ್ತಿದೆ. ಮನೆಗೆ ಭೇಟಿ ಹಾಗೂ ಟೆಲಿ ಮಾನಿಟಿರಿಂಗ್ ಮೂಲಕ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.
*43 ಖಾಸಗಿ ಮೆಡಿಕಲ್ ಕಾಲೇಜು, 17 ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಸೇವೆ ಕಲ್ಪಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಕೊರೊನಾಗೆ ಮೀಸಲಿಡಲಾಗಿದೆ. ಕೇಂದ್ರೀಕೃತ ಹಾಸಿಗೆ ನಿರ್ವಹಣೆ ವ್ಯವಸ್ಥೆ ನಿರ್ಮಿಸಿದ್ದು, ಯಾವ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇದೆ ಎಂಬುದರ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತದೆ.
*ಶಿಫಾರಸು ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಕೊರೊನಾ ರೋಗಿಗಳ ಶುಲ್ಕವನ್ನು ರಾಜ್ಯ ಸರ್ಕಾರ ಪಾವತಿಸುತ್ತಿದೆ. ಪ್ಲಾಸ್ಮ ಬ್ಯಾಂಕ್ ಆರಂಭಿಸಲಾಗಿದೆ.
*ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ 10,100 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿದೆ. ಬೇರೆ ಕೇಂದ್ರಗಳಲ್ಲಿ 1,04,000 ಹಾಸಿಗೆಗಳಿವೆ.
*ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ 5,500 ಆಕ್ಸಿಜನ್ ಸಹಿತ ಹಾಸಿಗೆಗಳಿದ್ದು, ಹೆಚ್ಚುವರಿಯಾಗಿ 1,600 ಆಕ್ಸಿಜನ್ ಹಾಸಿಗೆಗಳನ್ನು ನೀಡಲಾಗಿದೆ. ಆಗಸ್ಟ್ ಅಂತ್ಯಕ್ಕೆ ಇನ್ನೂ 5,000 ಆಕ್ಸಿಜನ್ ಹಾಸಿಗೆ ನೀಡಲಾಗುವುದು. ಸೆಪ್ಟೆಂಬರ್ ಅಂತ್ಯಕ್ಕೆ 20,000 ಕ್ಕೂ ಅಧಿಕ ಆಕ್ಸಿಜನ್ ಹಾಸಿಗೆಗಳು ಲಭ್ಯವಿರಲಿದೆ. ಪ್ರಮುಖ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ಆರಂಭಿಸಲಾಗುತ್ತಿದೆ.
*ಕೋವಿಡ್ ರೋಗಿಗಳನ್ನು ಕರೆದೊಯ್ಯಲು ಆಂಬ್ಯುಲೆನ್ಸ್ ಸಂಖ್ಯೆಯನ್ನು 800 ರಿಂದ 2,000 ಕ್ಕೆ ಹೆಚ್ಚಿಸಲಾಗಿದೆ.
*ಕಠಿಣ ಕ್ರಮ*
*ಮಾಸ್ಕ್ ಧರಿಸದಿರುವುದು ಸೇರಿದಂತೆ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗಿದೆ. 2,05,029 ಪ್ರಕರಣ ದಾಖಲಿಸಿದ್ದು, 6.65 ಕೋಟಿ ರೂ. ದಂಡ ಸಂಗ್ರಹವಾಗಿದೆ.
*ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ವಿರುದ್ಧ 5,821 ಎಫ್ ಐಆರ್ ದಾಖಲಾಗಿದೆ. ಕ್ವಾರಂಟೈನ್ ನಲ್ಲಿದ್ದ 5.7 ಲಕ್ಷ ಜನರಿಗೆ ಎಚ್ಚರಿಕೆ ನೀಡಲಾಗಿದೆ. 3,246 ಮಂದಿಯನ್ನು ಮನೆಯಿಂದ ಸಾಂಸ್ಥಿಕ ಕ್ವಾರಂಟೈನ್ ಗೆ ಕಳುಹಿಸಲಾಗಿದೆ.
*ಮರಣ ಪ್ರಮಾಣ ಕಡಿಮೆ ಮಾಡಲು ಕೈಗೊಂಡ ಕ್ರಮಗಳಿಂದ ಜುಲೈ ನಲ್ಲಿದ್ದ 2.1 ಮರಣ ಪ್ರಮಾಣವು ಆಗಸ್ಟ್ ನಲ್ಲಿ 1.8 ಕ್ಕೆ ಇಳಿಕೆಯಾಗಿದೆ.
*ಕೋವಿಡ್ ಕೇರ್ ಸೆಂಟರ್ ಗಳಲ್ಲಿ 1.14 ಲಕ್ಷ ಹಾಸಿಗೆ, 20,000 ಜನರಲ್ ಹಾಸಿಗೆ, 8,000 ಆಕ್ಸಿಜನ್ ಹಾಸಿಗೆ, 3,000 ಐಸಿಯು ಹಾಸಿಗೆ, 1,500 ವೆಂಟಿಲೇಟರ್ ಸಹಿತ ಹಾಸಿಗೆಯೊಂದಿಗೆ ಕೊರೊನಾ ಪಿಡುಗು ನಿಯಂತ್ರಣ ಮಾಡುತ್ತಿದ್ದೇವೆ.
*ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 2,025 ವೆಂಟಿಲೇಟರ್ ನೀಡಿರುವುದಕ್ಕೆ ಧನ್ಯವಾದ.
*ಕೋವಿಡ್ ನಿಯಂತ್ರಣಕ್ಕೆ ಪ್ರಧಾನಿ ಸೂಚನೆ*
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, “ದೇಶದ 6 ಲಕ್ಷ ಸಕ್ರಿಯ ಕೊರೊನಾ ಪ್ರಕರಣದಲ್ಲಿ ಶೇ.80 ರಷ್ಟು ಪ್ರಕರಣ ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಇದೆ. ಈ ರಾಜ್ಯಗಳಲ್ಲಿ ನಿಯಂತ್ರಣ ಸಾಧಿಸಿದರೆ ಇಡೀ ದೇಶದಲ್ಲಿ ನಿಯಂತ್ರಣ ತರಬಹುದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸೋಂಕಿತರು ಪತ್ತೆಯಾದ 72 ಗಂಟೆಯೊಳಗೆ ಸಂಪರ್ಕಿತರನ್ನು ಪತ್ತೆ ಮಾಡಬೇಕು ಎಂದೂ ಅವರು ಸೂಚಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
“ವೈದ್ಯಕೀಯ ಸೀಟುಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಮುಖ್ಯಮಂತ್ರಿಗಳು ಕೂಡ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಕೋವಿಡ್ ಅಲ್ಲದೆ, ಮುಂದೆ ಯಾವುದೇ ಸಾಂಕ್ರಮಿಕ ರೋಗ ಬಂದಾಗಲೂ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರ ಕೊರತೆ ನೀಗಿಸಬೇಕು ಎಂದು ಕೋರಲಾಗಿದೆ” ಎಂದರು.
“ಇಡೀ ರಾಜ್ಯದಲ್ಲಿ ಬೂತ್ ಮಟ್ಟದ ಕಾರ್ಯಪಡೆ ಆರಂಭಿಸಿ ಅವರಿಗೆ ವಿವಿಧ ಜವಾಬ್ದಾರಿ ನೀಡಲಾಗಿದೆ. ಅವರ ಮೂಲಕ ಕ್ವಾರಂಟೈನ್ ಮಾಡುವುದು, ಅರಿವು ಮೂಡಿಸುವುದು, ಮನೆ ಸಮೀಕ್ಷೆ ಮೊದಲಾದ ಕಾರ್ಯ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ 8,154 ಕಾರ್ಯಪಡೆ ರಚಿಸಲಾಗಿದೆ. ಕೊರೊನಾ ಮರಣ ಪ್ರಮಾಣವು ರಾಜ್ಯದಲ್ಲಿ ಶೇ.1.8 ಹಾಗೂ ಬೆಂಗಳೂರಿನಲ್ಲಿ ಶೇ.1.7 ಇದೆ ಎಂದು ವಿವರಿಸಲಾಗಿದೆ” ಎಂದು ತಿಳಿಸಿದರು.