ಮಧುಗಿರಿ: ಕ್ಷೀರಭಾಗ್ಯ ಯೋಜನೆಯಡಿ ಸರ್ಕಾರಿ ಶಾಲೆ , ಅನುದಾನಿತ, ಮತ್ತು ಅಂಗನವಾಡಿ ಕೇಂದ್ರದ ಮಕ್ಕಳಿಗೆ 58 ಲಕ್ಷ 68 ಸಾವಿರ ಮಕ್ಕಳಿಗೆ 1 ಕೋಟಿ ರೂ ವೆಚ್ಚದಲ್ಲಿ ಹಾಲು ನೀಡುತ್ತಿದ್ದೇವೆ ಎಂದು ಸಿ.ಎಂ. ಸಿದ್ದ ರಾಮಯ್ಯ ತಿಳಿಸಿದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಕೆ.ಎಂ.ಎಫ್ ಬೆಂಗಳೂರು, ಹಾಗು ರಾಜ್ಯದ ಎಲ್ಲಾ ಜಿಲ್ಲಾ ಸಹಕಾರ , ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳ ಸಹಯೋಗದೊಂದಿಗೆ ಕ್ಷೀರ ಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆಯ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಕ್ಷೀರಭಾಗ್ಯ ಯೋಜನೆ ವಿಶ್ವ ಹಾಲು ಮಹಾಮಂಡಳಿ ವತಿಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದೆ.
ಹಿಂದಿನ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡಜನರಿಗೆ 7 ಕೆಜಿ ಅಕ್ಕಿ ನೀಡುತ್ತಿದ್ದು , ಹಿಂದಿನ ಬಿಜೆಪಿ ಸರ್ಕಾರ ಅದನ್ನು 5 ಕೆಜಿಗೆ ಇಳಿಸಿತು. ಚುನಾವಣಾ ಸಂದರ್ಭದಲ್ಲಿ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದೆವು. ಆದರೆ ಕೇಂದ್ರ ಸರ್ಕಾರ ಅಕ್ಕಿ ಸರಬರಾಜು ಮಾಡದ ಕಾರಣ 5 ಕೆಜಿ ಹೆಚ್ಚುವರಿ ಅಕ್ಕಿ ಬದಲಿಗೆ 170 ರೂ ಹಣವನ್ನು ನೀಡುತ್ತಿದ್ದೇವೆ. ಪ್ರಸ್ತುತ 4 ಕೋಟಿ 72 ಲಕ್ಷ ಜನರಿಗೆ ಅಕ್ಕಿ ವಿತರಿಸುತ್ತಿದ್ದು ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ. ಶಕ್ತಿ ಯೋಜನೆಯಡಿ ಪ್ರತಿ ದಿನ 50 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಬೆಳೆಸಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ 1 ಕೋಟಿ 26 ಲಕ್ಷ ಮಹಿಳೆಯರ ಪೈಕಿ 1 ಕೋಟಿ 10 ಲಕ್ಷ ಮಂದಿ ಫಲಾನುಭವಿಗಳ ಖಾತೆಗೆ 2 ಸಾವಿರ ರೂ ಹಣ ಜಮೆ ಮಾಡಲಾಗಿದೆ. ಈಗಾಗಲೇ 4 ಗ್ಯಾರಂಟಿ ಯೋಜನೆಗಳು ಅನುಷ್ಠಾನ ಗೊಂಡಿದ್ದು, 5 ನೇ ಗ್ಯಾರಂಟಿ ಯೋಜನೆಯಂತೆ ನಿರುದ್ಯೋಗ ಯುವಕ ಯುವತಿಯರಿಗೆ 2024 ರಲ್ಲಿ ಅನುಷ್ಟಾನಗೊಳಿಸಲಾಗುವುದು. ಜನರಿಗೆ ಯಾವುದೇ ಉಚಿತ ಕಾರ್ಯಕ್ರಮಗಳನ್ನು ನೀಡಿದರೆ ದೇಶದ ಪ್ರಧಾನಿ ನರೇಂದ್ರ ಮೋದಿ ದೂರಿದ್ದರು. ಆದರೆ ಪ್ರಸ್ತುತ ನಾವು ನುಡಿದಂತೆ ನಡೆದಿದ್ದೇವೆ ಎಂದರು. ಅತಿ ಶೀಘ್ರವಾಗಿ ಎತ್ತಿನಹೊಳೆ ಯೋಜನೆಯಡಿ ನೀರನ್ನು ಈ ಭಾಗಕ್ಕೆ ಹರಿಸುವುದಾಗಿಯೂ ರೈತರಿಗೆ 5 ಲಕ್ಷದ ವರೆಗೆ ಶೂನ್ಯಬಡ್ಡಿದರದಲ್ಲಿ ಹಾಗೂ 15 ಲಕ್ಷ ರೂಗಳಿಗೆ ಶೇ 3 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.
ಗೃಹಸಚಿವ ಡಾ.ಜಿ.ಪರಮೇಶ್ವರ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ನವರ ಮಧುಗಿರಿ ಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಒತ್ತಾಯಿಸಿದ್ದು ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲಿಸುವುದಾಗಿ ತಿಳಿಸಿದರು. ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸಲು ಈಗಾಗಲೇ ಹಣ ಬಿಡುಗಡೆ ಮಾಡಿದ್ದು ಪ್ರವಾಸಿಗರಿಗೆ ಅನುಕೂಲವಾಗುವಂತೆ ರೋಪ್ ವೇ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ ಮಧುಗಿರಿ ಉಪವಿಭಾಗದ ತಾಲೂಕುಗಳು ಶಾಶ್ವತ ಬರಪೀಡಿತವಾಗಿದ್ದು ಈ ತಾಲೂಕುಗಳಿಗೆ ಎತ್ತಿನಹೊಳೆ ನೀರು ಹರಿಸಬೇಕು. ಆಡಳಿತ ದೃಷ್ಟಿಯಿಂದ ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಹಾಗೂ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸಿದರೆ ಜನಸಾಮಾನ್ಯರ ಜೀವನ ಮಟ್ಟ ಸುಧಾರಣೆಗೊಂಡು ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.
ಪ್ರಾಸ್ತಾವಿಕ ನುಡಿಗಳಾಡಿದ ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯಕ್ ಮಾತನಾಡಿ ಕ್ಷೀರ ಭಾಗ್ಯ ಯೋಜನೆಯಿಂದ ರಾಜ್ಯದ 14 ಹಾಲು ಒಕ್ಕೂಟಗಳಿಗೆ 27 ಲಕ್ಷ ಮಂದಿ ಹಾಲು ಉತ್ಪಾದಕ ರೈತರಿಗೆ ಶಕ್ತಿ ತುಂಬಲಾಗಿದೆ. ಕ್ಷೀರ ಭಾಗ್ಯ ಯೋಜನೆ ಇಡೀ ದೇಶದಲ್ಲಿ ವಿಶಿಷ್ಟ ಕಾರ್ಯಕ್ರಮ ವಾಗಿದೆ. ರೈತರ ಹಿತದೃಷ್ಟಿಯಿಂದ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಒಂದು ತಿಂಗಳಲ್ಲೇ ಹಾಲು ಉತ್ಪಾದಕರಿಗೆ 5 ರೂ ಸಹಾಯಧನ ಹೆಚ್ಚಿಸಿದ್ದು ರೈತರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ ರೈತರಿಗೆ, ಕೃಷಿಕರಿಗೆ, ಸಣ್ಣ ವ್ಯಾಪಾರಿಗಳಿಗೆ, ಶೂನ್ಯಬಡ್ಡಿದರದಲ್ಲಿ ಸಾಲಕೊಟ್ಟ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಹಸಿವು ಮುಕ್ತ ಕರ್ನಾಟಕ ಮಾಡುವ ಉದ್ದೇಶ ದಿಂದ ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂದು ಅನ್ನಭಾಗ್ಯ ಯೋಜನೆ ಜಾರಿ ತಂದಿದ್ದು ರಾಜ್ಯದ ಬಡಜನತೆ ಉಪವಾಸ ಮುಕ್ತರಾಗಿದ್ದಾರೆ. ಕರೋನಾ ಕಾಲದಲ್ಲಿ ಅನ್ನಭಾಗ್ಯ ಯೋಜನೆ ಇಲ್ಲದಿದ್ದರೆ ಬಹಳಷ್ಟು ಬಡಜನರು ಹಸಿವಿನಿಂದ ಪ್ರಾಣಬಿಡುವ ಪರಿಸ್ಥಿತಿ ಯಾಗುತಿತ್ತು ಎಂದರು. ಮಧುಗಿರಿ ಯನ್ನು ಜಿಲ್ಲೆ ಯಾಗಿಸುವ ಹಾಗೂ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್ , ಶಾಸಕರಾದ ಟಿ.ಬಿ. ಜಯಚಂದ್ರ , ಕೆ. ಷಡಕ್ಷರಿ , ಎಸ್. ಆರ್. ಶ್ರೀನಿವಾಸ್ , ಡಾ. ರಂಗನಾಥ್ , ಎಚ್ .ವಿ. ವೆಂಕಟೇಶ. ನಂಜೇಗೌಡ.ವಿಧಾನ ಪರಿಷತ್ ರಾಜೇಂದ್ರ ರಾಜಣ್ಣ , ಕೆ.ಎಂ.ಎಫ್. ಅಧ್ಯಕ್ಷ ಎಲ್. ಬಿ. ಪಿ.ಭೀಮನಾಯ್ಕ್ , ಮಾಜಿ ಶಾಸಕರಾದ ನಿಂಗಪ್ಪ , ಗಂಗಹನುಮಯ್ಯ, ಕಿರಣ್ ಕುಮಾರ್ , ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ , ತುಮುಲ್ ಅಧ್ಯಕ್ಷ ಮಹಾಲಿಂಗಯ್ಯ , ಕೆಎಂಎಫ್ ನಿರ್ದೇಶಕ ಕಾಂತರಾಜು, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ , ಇಲಾಖೆ ನಿಬಂಧಕರಾದ ಕ್ಯಾಪ್ಟನ್ ರಾಜೇಂದ್ರ , ಜಿಲ್ಲಾಧಿಕಾರಿ ಶ್ರೀನಿವಾಸ್ ಜಿ.ಪಂ. ಸಿಇಒ
ಜಿ.ಪ್ರಭು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ . ಕಾರ್ಯಕ್ರಮದ ನಿರೂಪಣೆ ಅಪರ್ಣ ಮತ್ತು ಶಂಕರ್ ಇತರರು ಹಾಜರಿದ್ದರು
ವರದಿ ಲಕ್ಷ್ಮಿಪತಿ, ದೊಡ್ಡ ಯ ಲ್ಕೂರು.