ರಾಜ್ಯದ ರೈತರಿಗೆ ಆತ್ಮಹತ್ಯೆ ಗ್ಯಾರಂಟಿ ನೀಡುವ
ಕಾಂಗ್ರೆಸ್ ಸರಕಾರ- ಬಿ.ಸಿ.ಪಾಟೀಲ್
ಬೆಂಗಳೂರು: ರಾಜ್ಯದಲ್ಲಿ ರೈತರಿಗೆ ಆತ್ಮಹತ್ಯೆ ಗ್ಯಾರಂಟಿ ನೀಡುವ ಕಾಂಗ್ರೆಸ್ ಸರಕಾರವಿದೆ ಎಂದು ರಾಜ್ಯದ ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್ ಸರಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ. ಲೋಡ್ ಶೆಡ್ಡಿಂಗ್ ಇದೆ. ರಾಜ್ಯದಾದ್ಯಂತ ಬರಗಾಲದ ಛಾಯೆ ಆವರಿಸಿದೆ ಎಂದು ವಿವರಿಸಿದರು.
ಈ ವರ್ಷ ಇದುವರೆಗೂ 11,18,527 ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿ ಸಂಭವಿಸಿದೆ. ಆದರೆ, ಸರಕಾರವು ಒಬ್ಬನೇ ಒಬ್ಬ ರೈತರಿಗೆ ಒಂದೇ ಒಂದು ಹೆಕ್ಟೇರ್‍ಗೆ, ಒಂದು ಪೈಸೆ ಪರಿಹಾರವನ್ನೂ ಕೊಟ್ಟಿಲ್ಲ. ಕಳೆದ ವರ್ಷ ನಮ್ಮ ಬಿಜೆಪಿ ಸರಕಾರದ ಅವಧಿಯಲ್ಲಿ 39,74,741 ಹೆಕ್ಟೇರ್ ಭೂಮಿಯಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿತ್ತು. ಆಗ ನಾವು ಕೇಂದ್ರದಿಂದ ಬರ ಪರಿಹಾರಕ್ಕಾಗಿ ಕಾಯಲಿಲ್ಲ. ನಿಯಮಾವಳಿ ಪ್ರಕಾರ ಒಂದು ಹೆಕ್ಟೇರ್‍ಗೆ 6,800 ರೂ ಇದ್ದರೆ, ನಮ್ಮ ಸರಕಾರ 13,600 ರೂ. ಅಂದರೆ ದ್ವಿಗುಣ ಮೊತ್ತದ ಪರಿಹಾರವನ್ನು ಕೊಟ್ಟಿದ್ದೇವೆ. ತೋಟಗಾರಿಕಾ ಬೆಳೆಗೆ 13 ಸಾವಿರದ ಬದಲು 25 ಸಾವಿರಕ್ಕೆ ಏರಿಸಲಾಗಿತ್ತು ಎಂದು ತಿಳಿಸಿದರು. ನೀರಾವರಿ ಬೆಳೆಗೆ 18 ಸಾವಿರದ ಬದಲು 28 ಸಾವಿರವನ್ನು ಕೊಟ್ಟಿದ್ದು, ಕಳೆದ ಸಾಲಿನಲ್ಲಿ ಒಟ್ಟು 2,100 ಕೋಟಿ ರೂಪಾಯಿಯನ್ನು 14,62,841 ರೈತರಿಗೆ ಪರಿಹಾರವಾಗಿ ಕೊಟ್ಟಿದ್ದೇವೆ ಎಂದರು.
ಆಗ ನಾವು ಕೇಂದ್ರ ಸರಕಾರವನ್ನು ಕಾಯುತ್ತ ಕುಳಿತಿರಲಿಲ್ಲ. ನಮ್ಮ ರಾಜ್ಯದ ರೈತರು ಬದುಕಬೇಕು. ರೈತರು ಸಂಕಷ್ಟಕ್ಕೆ, ಅತಿವೃಷ್ಟಿಗೆ ಒಳಗಾಗಿದ್ದಾರೆ; ಬೆಳೆ ಹಾಳಾಗಿದೆ ಎಂದು ಕೂಡಲೇ ನಾವು ಸರ್ವೇ ಪ್ರಾರಂಭಿಸಿ ಅದರ ವರದಿ ಪಡೆದು 48 ಗಂಟೆಯೊಳಗೆ ಪರಿಹಾರವನ್ನು ರೈತರಿಗೆ ವಿತರಿಸಿ ರೈತರನ್ನು ಬದುಕಿಸಿದ್ದೇವೆ ಎಂದು ತಿಳಿಸಿದರು. ಅಲ್ಲದೆ ಗರಿಷ್ಠ ಬೆಳೆ ವಿಮೆ ಪರಿಹಾರ ನೀಡಿದ್ದೇವೆ ಎಂದು ಹೇಳಿದರು.
ಇವತ್ತು ರಾಜ್ಯ ಸರಕಾರವು ಕೇವಲ ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ. ಕೇಂದ್ರವು ಹಣ ಕೊಟ್ಟಿಲ್ಲ. ಕೇಂದ್ರ ಸರಕಾರಕ್ಕೆ ಮನವಿ ಕೊಟ್ಟಿದ್ದೇವೆ ಎನ್ನುತ್ತಿದೆ. ಹಾಗಿದ್ದರೆ ನಿಮ್ಮ ಜವಾಬ್ದಾರಿ ಏನು? ಕೇವಲ ಗ್ಯಾರಂಟಿ ಅನುಷ್ಠಾನವÀಷ್ಟೇ ನಿಮ್ಮ ಕೆಲಸವೇ? ರಾಜ್ಯದ ರೈತರು ಬದುಕಬೇಕೇ ಬೇಡವೇ ಎಂದು ಕೇಳಿದರು.
ಇದುವರೆಗೆ ಒಬ್ಬರೇ ಒಬ್ಬ ಸಚಿವರು ಒಬ್ಬ ರೈತರ ಹೊಲಕ್ಕೂ ಹೋಗಿಲ್ಲ. ರೈತರ ಬೆಳೆಹಾನಿ ಅಂದಾಜು ಮಾಡಿಲ್ಲ. ಎಷ್ಟು ಬೆಳೆ ನಷ್ಟ ಎಂದು ತಿಳಿಸಿಲ್ಲ. ಸುಮ್ಮನೆ ಊಹಾಪೋಹ ಮಾಡಿ, ಇವರೇ ಲೆಕ್ಕ ಬರೆದುಕೊಂಡು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇವೆ ಎನ್ನುತ್ತಿದ್ದಾರೆ. ರಾಜ್ಯ ಸರಕಾರಕ್ಕೆ ರೈತರ ಸಂಬಂಧ ಇಲ್ಲವೇ? ರಾಜ್ಯದ ರೈತರು ನಿಮಗೆ ಮತ ಕೊಟ್ಟಿಲ್ಲವೇ? ಅವರಿಂದಾಗಿ ನೀವು ಅಧಿಕಾರ ಮಾಡುತ್ತಿಲ್ಲವೇ? ರೈತರ ಕುರಿತು ಕಡೆಗಣನೆ ಏಕೆ? ರೈತರ ವಿಷಯದಲ್ಲಿ ಮಲತಾಯಿ ಧೋರಣೆ ಯಾಕೆ ಎಂದು ರಾಜ್ಯ ಸರಕಾರವನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರ ಆಡಳಿತ ಇದ್ದಾಗ ಅತಿ ಹೆಚ್ಚು ಆತ್ಮಹತ್ಯೆ
ಕಾಂಗ್ರೆಸ್ ಸರಕಾರ ಆಡಳಿತ ಇದ್ದಾಗ ಅತಿ ಹೆಚ್ಚು ಆತ್ಮಹತ್ಯೆ ಆಗಿದೆ ಎಂದು ಬಿ.ಸಿ.ಪಾಟೀಲ್ ಅವರು ಅಂಕಿಅಂಶಗಳನ್ನು ಮುಂದಿಟ್ಟರು. 2015-16ರಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ಮಾಡುವಾಗ 1,525 ರೈತರು ಆತ್ಮಹತ್ಯೆ ಮಾಡಿಕೊಂಡರೆ, 16-17ರಲ್ಲಿ 1,203 ರೈತರು, 17-18ರಲ್ಲಿ 1,320 ರೈತರು ಆತ್ಮಹತ್ಯೆ ಮಾಡಿಕೊಂಡರು. 18-19ರಲ್ಲಿ ಸರಕಾರ ಬದಲಾಗಿದ್ದು, ಆತ್ಮಹತ್ಯೆ 1,085ಕ್ಕೆ ಇಳಿದಿದೆ. 2019-2020ರಲ್ಲಿ 1,091, 2020-21ರಲ್ಲಿ 855, 2021-22ರಲ್ಲಿ 963 ರೈತರು ಆತ್ಮಹತ್ಯೆ ಮಾಡಿಕೊಂಡರೆ, ಈ ವರ್ಷ ಸೆಪ್ಟೆಂಬರ್ ಅಂತ್ಯದವರೆಗೆ ಈಗಾಗಲೇ 900 ಆತ್ಮಹತ್ಯೆ ಆಗಿದೆ. ಇನ್ನೂ 3 ತಿಂಗಳು ಉಳಿದಿದೆ ಎಂದು ತಿಳಿಸಿದರು.
ರೈತರು ಬೀದಿಗೆ ಬಿದ್ದಿದ್ದಾರೆ. ಆಗಸದತ್ತ ನೋಡುವ ಸ್ಥಿತಿ ಬಂದಿದೆ. ಸರಕಾರದತ್ತ ನೋಡಿದರೂ ಅಲ್ಲಿಂದ ಪರಿಹಾರ ಸಿಗುತ್ತಿಲ್ಲ ಎಂದ ಅವರು, ಸರಕಾರ ಕೇವಲ ಕೇಂದ್ರ ಸರಕಾರದತ್ತ ತೋರಿಸುತ್ತಿದೆ. ಇದು ರೈತವಿರೋಧಿ ಸರಕಾರ ಎಂದು ದೂರಿದರು.
ಬರ ವೀಕ್ಷಣೆ ವರದಿ ಸಂಬಂಧ ತಂಡ ಬಂದಿದೆ. ಅವರ ವರದಿ ಸಿಕ್ಕಿದ ಬಳಿಕ ಕೇಂದ್ರವು ತನ್ನ ಪಾಲಿನ ಹಣ ಕೊಡುತ್ತದೆ. ಕಳೆದ ವರ್ಷ ನಾವು ಕೇಂದ್ರದ ಪರಿಹಾರ ಮೊತ್ತ ಬರುವ ಮೊದಲೇ ದ್ವಿಗುಣ ಮೊತ್ತವನ್ನು ಕೊಟ್ಟಿದ್ದೇವೆ. ಈ ವರ್ಷ ಯಾಕೆ ಆಗುತ್ತಿಲ್ಲ? ನೀವು ಮಾಡಬೇಕಲ್ಲ? ಎಂದು ಕೇಳಿದರು. ನಮ್ಮದು ರೈತರನ್ನು ಬದುಕಿಸುವ ಧ್ಯೇಯವಾಗಿತ್ತು ಎಂದರು.
ರಾಜ್ಯ ಸರಕಾರ ದಿವಾಳಿ ಆಗಿದೆ. ರಾಜ್ಯ ಸರಕಾರದ ಬಳಿ ಹಣ ಇಲ್ಲ. ಇದ್ದ ಬದ್ದ ಹಣವನ್ನೆಲ್ಲ ಕೇವಲ ಭಾಗ್ಯಗಳಿಗೆ ಕೊಡುತ್ತಿದ್ದಾರೆ. ಭಾಗ್ಯಗಳಿಗೆ ಕೊಡಬೇಡಿ ಎನ್ನುತ್ತಿಲ್ಲ. ಅಕ್ಕಿಯ ದುಡ್ಡನ್ನು ಒಂದು ತಿಂಗಳಿಗಷ್ಟೇ ಕೊಟ್ಟಿದ್ದಾರೆ. ಎರಡನೇ ತಿಂಗಳು ಅರ್ಧಕ್ಕರ್ಧ ಕೊಟ್ಟಿದ್ದಾರೆ. ಭಾಗ್ಯಗಳಿಗೆ ಹಣ ಕೊಡಲು ಆಗುತ್ತಿಲ್ಲ. ಪಡಿತರ ಚೀಟಿಗಳನ್ನು ಒಂದಲ್ಲ ಒಂದು ನೆವ ಇಟ್ಟುಕೊಂಡು ರದ್ದು ಮಾಡುತ್ತಿದ್ದಾರೆ. ಕಂಡಿಷನ್ ಹಾಕಿ, ಸರ್ವರ್ ಬಂದ್ ಮಾಡುತ್ತಿದ್ದಾರೆ. ಇದರಿಂದ ನೋಂದಣಿ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಶಾಸಕ ಸಿ.ಕೆ.ರಾಮಮೂರ್ತಿ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.