ಗೋಹತ್ಯೆ ನಿಷೇಧ ಕಾಯ್ದೆ ವಿಧಾನಸಭೆ ಯಲ್ಲಿ ಅಂಗೀಕಾರ
ಅಜೆಂಡಾ ದಲ್ಲಿ ಬಿಲ್ ಇಲ್ಲದಿದ್ದರೂ ಬಿಲ್ ತಂದ ಸರ್ಕಾರ
ಬಿಲ್ ಪ್ರತಿ ನೀಡದೆ ಬಿಲ್ ಪಾಸ್ ಮಾಡಿದೆ: ಕಾಂಗ್ರೆಸ್
ಬೆಂಗಳೂರು : ಪ್ರತಿಪಕ್ಷ ಕಾಂಗ್ರೆಸ್,ಜೆಡಿ ಎಸ್ ತೀವ್ರ ವಿರೋಧದ ನಡುವೆಯೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ತಿದ್ದುಪಡಿ ವಿಧೇಯಕ 2020 ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಿತು. ಈ ಮಸೂದೆಯ ರಾಜ್ಯಪಾಲರ ಅಂಕಿತದೊಂದಿಗೆ ಕಾಯ್ದೆಯಾಗಿ ಜಾರಿಯಾದ ನಂತರ ಗೋ ಹತ್ಯೆ ಮಾಡಿದರೆ 7 ವರ್ಷ ಜೈಲು ಶಿಕ್ಷೆ ಮತ್ತು ರೂ 5ರಿಂದ 10 ಲಕ್ಷ ದಂಡ ವಿಧಿಸಲು ಅವಕಾಶವಿದೆ.
ವಿಧೇಯಕದ ಪ್ರಸ್ತಾವದಲ್ಲಿ ಗೋ ಹತ್ಯೆಯ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆಯ ಪ್ರಸ್ತಾವವಿತ್ತು. ಆದರೆ ಇಂದು ಮಂಡನೆಯಾದ ದಾಖಲೆಯಲ್ಲಿ ಇದು 7 ವರ್ಷಕ್ಕೆ ಏರಿಕೆಯಾಗಿದೆ. ಅದೇ ರೀತಿ ಕನಿಷ್ಠ ದಂಡವನ್ನು ರೂ 50 ಸಾವಿರದಿಂದ ರೂ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಗೋಹತ್ಯೆ ನಿಷೇಧ ಮಾಡಿರುವ ರಾಜ್ಯಗಳ ಪಟ್ಟಿಗೆ ಇದೀಗ ಕರ್ನಾಟಕವೂ ಸೇರಿದಂತಾಗಿದೆ.ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ರಾಜ್ಯಾದ್ಯಂತ ಈ ಕಾಯ್ದೆಯನ್ನು ಜಾರಿ ಮಾಡುವುದಾಗಿ ಬಿಜೆಪಿ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು.
ವಿಧಾನಸಭೆಯಲ್ಲಿ ಅಂಗೀಕಾರ ಆಗಿರುವ ಗೋಹತ್ಯೆ ನಿಷೇಧ ವಿಧೇಯಕ ವಿಧಾನ ಪರಿಷತ್ನಲ್ಲೂ ಅಂಗೀಕಾರವಾಗಿ, ರಾಜ್ಯಪಾಲರ ಅನುಮೋದನೆ ಪಡೆದ ಬಳಿಕ ಕಾಯ್ದೆಯಾಗಲಿದೆ. ಇದಕ್ಕೂ ಮುನ್ನ ವಿಧೇಯಕಕ್ಕೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ಪ್ರತಿಪಕ್ಷದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸದನದ ಬಾವಿಗೆ ಇಳಿದು ಪ್ರತಿಭಟನೆಯನ್ನೂ ನಡೆಸಿದರು.
ಗೋವಾದಲ್ಲೂ ಬಿಜೆಪಿ ಸರ್ಕಾರವಿದೆ. ಆದರೆ ಅಲ್ಲಿ ಇಲ್ಲದ ಗೋ ಹತ್ಯೆ ನಿಷೇಧ ಇಲ್ಲೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಚರ್ಚೆ ಇಲ್ಲದೆ ಗೋ ಹತ್ಯೆ ನಿಷೇಧ ವಿಧೇಯಕವನ್ನು ಅಂಗೀಕರಿಸಲಾಗಿದ್ದು, ಕಾನೂನು ಸಚಿವ ಮಾಧುಸ್ವಾಮಿ ವಿಧೇಯಕದ ಪ್ರಮುಖ ಅಂಶಗಳ ಬಗ್ಗೆ ವಿವರಣೆ ನೀಡಿದರು. ಎಲ್ಲ ಗದ್ದಲ, ಗಲಾಟೆ, ವಿರೋಧದ ನಡುವೆಯೂ ಮಸೂದೆ ಅಂಗೀಕಾರ ಆಗಿ, ಸ್ಪೀಕರ್ ಉಳಿದ ಕಾರ್ಯಕಲಾಪ ಕೈಗೆತ್ತಿಕೊಂಡರೂ ಕಾಂಗ್ರೆಸ್ ಪ್ರತಿಭಟನೆ ನಿಲ್ಲಿಸಲಿಲ್ಲ.
ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸದನದ ಪಾವಿತ್ರ್ಯತೆ ಹಾಳಾಗುತ್ತಿದೆ. ನಿಮ್ಮ ಸ್ಥಾನಕ್ಕೂ ಚ್ಯುತಿ ತರುತ್ತಿದ್ದಾರೆ. ಕಲಾಪ ಸಲಹಾ ಸಮಿತಿ ಸಭೆ ಮಾಡೋದೇಕೆ? ಬಿಎಸಿ ಸಭೆಯಲ್ಲಿ ಯಾವುದೇ ಬಿಲ್ ಇಲ್ಲ ಅಂತ ಹೇಳಿದ್ರಿ.
ಬಿಲ್ ತರಬೇಕಾದರೆ ಅಜೆಂಡಾದಲ್ಲಿ ಹಾಕಬೇಕಿತ್ತು. ಬೆಳಗ್ಗೆ ಅಜೆಂಡಾದಲ್ಲಿ ಯಾಕೆ ಹಾಕಲಿಲ್ಲ? ನೀವು ಬಿಲ್ ತರಬೇಕಾದರೆ ಅಜೆಂಡಾದಲ್ಲಿ ಹಾಕಬೇಕು. ಹಿಂಬಾಗಿಲಿನಿಂದ ಏಕೆ ಬಿಲ್ ಮಂಡನೆ ಮಾಡುತ್ತಿದ್ದೀರಾ? ಎಂದು ಪ್ರತಿಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ವಿಧೇಯಕ ಸಂಬಂಧ ನಾಳೆ ಚರ್ಚೆ ಮಾಡೋಣ ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಆದರೆ ಬಿಜೆಪಿ ಶಾಸಕರು ಇಂದೇ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು. ಈ ವೇಳೆ ಉಭಯ ನಾಯಕರ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನೆ ಮಧ್ಯೆ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಯಿತು.