IMG 20231026 WA0010

Karnataka : ಸಿದ್ದರಾಮಯ್ಯಗೆ ನಾನೇ ವಿಲನ್…!

POLATICAL STATE

ನೈಸ್ ಭೂಮಿ ಕಬಳಿಸಿದ ಡಿಕೆ ಬ್ರದರ್ಸ್:

ಸಿದ್ದರಾಮಯ್ಯಗೆ ನಾನೇ ವಿಲನ್

ಅವರಿಗೆ ವಿಲನ್ ಆಗದೇ ಫ್ರೆಂಡ್ ಆಗಲು ಸಾಧ್ಯವೇ?

ಸಿಎಂಗೆ ತಿರುಗೇಟು ಕೊಟ್ಟ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

**

ಬೆಂಗಳೂರು: ಹೌದು, ನಾನು ಸಿದ್ದರಾಮಯ್ಯಗೆ ರಾಜಕೀಯವಾಗಿ ವಿಲನ್. ಇಲ್ಲ ಎಂದವರು ಯಾರು? ಅವರಿಗೆ ನಾನು ವಿಲನ್ ಆಗದೇ ಸ್ನೇಹಿತ ಆಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಮಾತುಗಳಲ್ಲಿ ಹೇಳಿದರು.

ಅವರು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು.

ತಾಜ್ ನಲ್ಲಿ ಇದ್ದೆ ಅಂತ ಪದೇ ಪದೇ ಹೇಳ್ತಾರೆ. ತಾಜ್ ನಲ್ಲಿ ನಾನು ಮೋಜು ಮಸ್ತಿ ಮಾಡ್ತಿರಲಿಲ್ಲ. ಅಭಿವೃದ್ಧಿ ಕೆಲಸದ ಚರ್ಚೆ ಮಾಡ್ತಿದ್ದೆ. ನನ್ನ ಬಳಿ ಎಲ್ಲಾ ದಾಖಲಾತಿ ಇದೆ ಎಂದು ಅವರು ಟಾಂಗ್ ನೀಡಿದರು.

ನನ್ನನ್ನು ಕಾಂಗ್ರೆಸ್ ನಾಯಕರು ಸಿಎಂ ಎನ್ನುವ ಗೌರವ ಇಲ್ಲದೆ ಪಪೇಟ್ ರೀತಿಯಲ್ಲಿ ನಡೆಸಿಕೊಂಡು ಅಪಮಾನ ಮಾಡಿದರು. ನಾನು ಸಿಎಂ ಆದಾಗ ಕಾಂಗ್ರೆಸ್ ಶಾಸಕರು ಇಸ್ಪೀಟ್ ಎಲೆ ಎಸೆದ ಹಾಗೆ ಅವರ ಅಹವಾಲುಗಳನ್ನು ನನ್ನ ಟೇಬಲ್ ಮೇಲೆ ಎಸೆಯುತ್ತಿದ್ದರು. ಅಂತಹವರು ನನ್ನ ಬಗ್ಗೆ ವಿಲನ್ ಎಂದು ಹೇಳುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು ಕುಮಾರಸ್ವಾಮಿ.

ಸರಕಾರ ಬೀಳಿಸಿದ್ದ ಸಿದ್ದರಾಮಯ್ಯ:

ನನ್ನ ನೇತೃತ್ವದ ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಅವರೇ. ಇದರಲ್ಲಿ ಎರಡು ಮಾತಿಲ್ಲ. ಬಿಜೆಪಿ‌ಯವರು ಸರ್ಕಾರ ಬೀಳಿಸಿದ್ದರು ಅಂತ ಹೇಳಿದ್ದೆ. ಆದರೆ ಅದಕ್ಕೆ ಬಿತ್ತನೆ ಹಾಕಿದ್ದು ಇದೇ ಸಿದ್ದರಾಮಯ್ಯ ಎಂದ ಅವರು ರಮೇಶ್ ಜಾರಕಿಹೋಳಿ ಯಾರು? ಅವರಿಗೂ ನನಗೂ ಯಾವ ಶತ್ರುತ್ವ ಇತ್ತಾ? ಬೆಳಗಾವಿ ರಾಜಕೀಯ ಸರಿ ಮಾಡಿ ಎಂದು ನಾನು ಇವರಿಗೆ ಹೇಳಿದೆ. ಇವರು ಸರಕಾರ ಬಿದ್ದು ಹೋಗಲಿ ಎಂದು ಸುಮ್ಮನಿದ್ದರು. ಆಗ ಬಿಜೆಪಿ‌ ಜತೆ ಕೈ ಜೋಡಿಸಿದ್ದು ಸಿದ್ದರಾಮಯ್ಯ. ಅದಕ್ಕೆ ‌ಸಮ್ಮಿಶ್ರ ಸರಕಾರ ಬಿದ್ದು ಹೋಯಿತು ಎಂದು ಅವರು ನೇರ ಆರೋಪ ಮಾಡಿದರು.

ಇಬ್ಬರು ಪಕ್ಷೇತರ ಶಾಸಕರನ್ನು ಮಂತ್ರಿ ಮಾಡಿಸಿದ್ದು ಸಿದ್ದರಾಮಯ್ಯ. ಬಿ.ಸಿ.ಪಾಟೀಲ್ ಅವರನ್ನು ಮಂತ್ರಿ ಮಾಡಲು ಹೇಳಿದ್ದೆ. ಆದರೆ‌ ಸಿದ್ದರಾಮಯ್ಯ ಮಾಡಲಿಲ್ಲ. ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಶ್ರೀಮಂತ ಪಾಟೀಲ್, ಆರ್.ಶಂಕರ್ ಅವರನ್ನು ರೆಸಾರ್ಟ್ ನಿಂದ ಕಳಿಸಿದ್ದು ಇದೇ ಸಿದ್ದರಾಮಯ್ಯ ಎಂದು ಟೀಕಾ ಪ್ರಹಾರ ನಡೆಸಿದ ಅವರು; ಅಪ್ಪ ನಿಮಗೊಂದು ನಮಸ್ಕಾರ. 14 ತಿಂಗಳು ನನ್ನನ್ನ ಅಧಿಕಾರದಲ್ಲಿ ಇಟ್ಟಿದ್ದಕ್ಕೆ ನಮೋ ನಮಃ. ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು ಅವರು.

ಗೃಹಲಕ್ಷ್ಮಿ ರಾಜಸ್ಥಾನದಲ್ಲಿ ಯಾಕೆ 10 ಸಾವಿರ‌ ಕೊಡ್ತಿದ್ದೀರಾ? ಎಲ್ಲಾ ಕಡೆ ಗ್ಯಾರಂಟಿಗಳನ್ನು ಕೊಡುತ್ತಿದೆ ಕಾಂಗ್ರೆಸ್. ಈ ಕಾರಣಕ್ಕೆ ಎಲ್ಲ ಯೋಜನೆಗಳು ಹಳ್ಳ ಹಿಡಿದು ಹೋಗಿವೆ. ನಿಮ್ಮ ಗ್ಯಾರಂಟಿಗಳ ಬಗ್ಗೆ ಜನ ಛೀ ಥೂ ಎಂದು ಉಗಿಯೋ ಕಾಲ ಬರುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು

.

IMG 20231026 WA0013

ಬಹಿರಂಗ ಚರ್ಚೆ; ಡಿಸಿಎಂ ಡಿಕೆಶಿ ಸವಾಲ್ ಸ್ವೀಕರಿಸಿದ ಹೆಚ್.ಡಿ.ಕುಮಾರಸ್ವಾಮಿ

ನೈಸ್ ನೋಟಿಫೈ ಆಗಿದ್ದ 8 ಎಕರೆ ಭೂಮಿ ಕಬಳಿಸಿದ ಡಿ.ಕೆ.ಬ್ರದರ್ಸ್; ಮಾಜಿ ಸಿಎಂ ಗಂಭೀರ ಆರೋಪ

ತಾವರೆಕೆರೆಯ ಒಂದೇ ಕಂಪೊಂಡಿನ 900 ಎಕರೆ ಭೂಮಿಯಲ್ಲಿ 350 ಎಕರೆ ಯಾರದು?

ರಾಮನಗರ ಹೆಸರು ಬದಲಿಸಿದರೆ ಆಮರಣಾಂತ ಉಪವಾಸ

ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಯಾರಿಗೆ ದಕ್ಷಣಿ ಕೊಡುತ್ತೀರಿ ಎಂದು ಟಾಂಗ್


ಬಹಿರಂಗ ಚರ್ಚೆಗೆ ಬರುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಕಿರುವ ಸವಾಲನ್ನು ಸ್ವೀಕರಿಸಿದ್ದೇನೆ. ವಿಧಾನಸಭೆಯಲ್ಲಿಯೇ ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಹೆಚ್ಚು ಟಿಆರ್ ಪಿ ಇರುವ ಚಾನೆಲ್ ನಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನಗೆ ಬಹಿರಂಗ ಸವಾಲು ಹಾಕಿದ್ದಾರೆ. ಅದು ಹಾಗಿರಲಿ, ರಾಮನಗರ ಜಿಲ್ಲೆಯ ಅಭಿವೃದ್ಧಿಯನ್ನು ಯಾರು ಮಾಡಿದರು ಎಂಬ ವಿಷಯವೂ ಸೇರಿದಂತೆ; ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಬೆಂಗಳೂರು ಸುತ್ತ ಇರುವ ಭೂಮಿಗಳನ್ನು ಯಾರು ಕೊಳ್ಳೆ ಹೊಡೆಯಲು ಹೊರಟಿದ್ದಾರೆ ಎಂಬ ಬಗ್ಗೆಯೂ ಬಹಿರಂಗ ಚರ್ಚೆ ಸದನದಲ್ಲಿಯೇ ನಡೆಯಲಿ. ದಾಖಲೆ ಸಮೇತ ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಘೋಷಿಸಿದರು ಮಾಜಿ ಮುಖ್ಯಮಂತ್ರಿಗಳು.

ಕನಕಪುರ ಸೇರಿ ರಾಮನಗರ ಜಿಲ್ಲೆಯ ಭೂಮಿಯನ್ನು ಲೂಟಿ ಮಾಡಲು ಬೆಂಗಳೂರು ದಕ್ಷಿಣ ಜಿಲ್ಲೆ ಎನ್ನುತ್ತಿದ್ದಾರೆ. ಯಾರಿಗೆ ದಕ್ಷಣಿಯಾಗಿ ಕೊಡಲು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುತ್ತಿದ್ದಿರಿ? ಎಂದು ಅವರು ನೇರ ಪ್ರಶ್ನೆ ಕೇಳಿದ್ದಾರೆ.

ನೈಸ್ ಭೂಮಿ ಕಬಳಿಸಿದ ಡಿಕೆ ಬ್ರದರ್ಸ್:

ನೈಸ್ ಜಮೀನನ್ನು ಅಕ್ರಮವಾಗಿ ಡಿ.ಕೆ.ಸುರೇಶ್ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಹೊಸಕೆರೆ‌ಹಳ್ಳಿ ಬಳಿ 8 ಎಕರೆ ನೈಸ್ ಗೆ ಅಂತ ನೋಟಿಫಿಕೇಶನ್ ಆಗಿತ್ತು ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ಈ ಜಮೀನು ಡಿ.ಕೆ.ಸುರೇಶ್ ಖರೀದಿ ಮಾಡಿದ್ದಾರೆ. ಭಾಗ್ಯಲಕ್ಷಿ, ಅಮಾಸೆಗೌಡ ಎಂಬುವವರ ಹೆಸರಲ್ಲಿ ಈ ಭೂಮಿ ಇತ್ತು. ಇದನ್ನು ನೈಸ್ ಯೋಜನೆಗೆ ನೋಟಿಫೈ ಮಾಡಲಾಗಿತ್ತು. ಇದನ್ನು ಡಿ.ಕೆ.ಸುರೇಶ್ ಯಾವ ಆಧಾರದಲ್ಲಿ ಖರೀದಿ ಮಾಡುತ್ತಾರೆ ಎನ್ನುವುದು ನನ್ನ ಪ್ರಶ್ನೆ. ಅಧಿಕಾರಿಗಳು ಈ ಪ್ರಕರಣದಲ್ಲಿ ಶಾಮೀಲಾಗಿ ಡಿ.ಕೆ.ಸುರೇಶ್ ಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ 8 ಎಕರೆ ಜಾಗವನ್ನು ಶೋಭಾ ಡೆವಲಪರ್ ಗೆ ಕೊಡಲಾಗಿದೆ. ಅಲ್ಲಿ ಈಗಾಗಲೇ ಅಪಾರ್ಟ್ ಮೆಂಟ್ ಬಂದಿದೆ. ಇದರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಾತ್ರವೂ ಇದೆ ಎಂದು ಮಾಜಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ಈ ಎಂಟು ಎಕರೆ ಕರ್ಮಕಾಂಡದ ಬಗ್ಗೆ ನನ್ನ ಬಳಿ ದಾಖಲೆ ಇದೆ. ಈ ಬಗ್ಗೆಯೂ ಬಹಿರಂಗವಾಗಿ ಚರ್ಚೆ ಮಾಡೋಣ. ಅಧಿವೇಶನ ಕರೆಯಲಿ. ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ಅವರು ಸವಾಲು ಹಾಕಿದರು.

ತಾವರೆಕೆರೆ ಬಳಿ ಒಂದೇ ಕಂಪೊಂಡಿನಲ್ಲಿ 900 ಎಕರೆಯಷ್ಟು ಭೂಮಿ ಇದೆ. ಅದರಲ್ಲಿ 350 ಎಕರೆ ಯಾರದ್ದು? ಆ ಭೂಮಿಗೆ ಅಪ್ಪ ಅಮ್ಮ ಯಾರು? ಅಂತಹ ಪಾಪದ ಭೂಮಿಗಳ ಬೆಲೆ ಹೆಚ್ಚಿಸಿಕೊಂಡು ದುಡ್ಡು ಮಾಡುವುದಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ರಚನೆ ಮಾಡಬೇಕಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ಕರ್ನಾಟಕದವರು ಬೆಂಗಳೂರಿನಲ್ಲಿ ಇದ್ದಾರೆ. ಬೆಂಗಳೂರು ನಗರವು ಕರ್ನಾಟಕದ ಒಂದು ಭಾಗ. ನಮ್ಮ ಬ್ರ್ಯಾಂಡ್ ಬೆಂಗಳೂರು ಎನ್ನುವರಿಗೆ ಈ ನಗರವೇನು ಪಿತ್ರಾರ್ಜಿತ ಆಸ್ತಿಯೇ? ನಮ್ಮನ್ನು ವಲಸಿಗರು ಎನ್ನುವ ಇವರಿಗೆ ಅದು ಅರ್ಥ ಆಗಬೇಕು. ಡಿಕೆಶಿ ಬೆಂಗಳೂರಿನವರು ಅಲ್ಲ. ಅವರ ಮೂಲ ಬೆಂಗಳೂರು ಅಲ್ಲವೇ ಅಲ್ಲ ಎಂದು ಅವರು ಕಿಡಿಕಾರಿದರು.

ನನ್ನ ಬಳಿಯೂ ಸಾಕಷ್ಟು ಸರಕಿದೆ, ಉತ್ತರಿಸುತ್ತೇನೆ:

ವಿಜಯದಶಮಿ ಆಸುಪಾಸಿನಲ್ಲಿ ಸಿಎಂ ಮತ್ತೆ ಡಿಸಿಎಂ ವೈಯಕ್ತಿಕವಾಗಿ ನನ್ನ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ದಾಖಲೆ ಸಮೇತ ಮಾತಾಡಲು ಬಂದಿದ್ದೇನೆ. ಟಿಆರ್ ಪಿ ಹೆಚ್ಚು ಇರುವ ಚಾನಲ್ ನಲ್ಲಿ ನಾನು ಚರ್ಚೆಗೆ ಸಿದ್ದ ಅಂದಿದ್ದಾರೆ ಡಿಸಿಎಂ. ಟಿಆರ್ ಪಿ ಇರುವ ಚಾನೆಲ್ ಇರಲಿ, ವಿಧಾನಸಭೆಯಲ್ಲಿಯೇ ಚರ್ಚೆಗೆ ನಾನು ಸಿದ್ಧನಿದ್ದೇನೆ. ಅವರು ಚರ್ಚೆಗೆ ಬರಲಿ. ನಾನು ಕೂಡ ಸವಾಲನ್ನು ಸ್ವೀಕಾರ ಮಾಡ್ತೀನಿ. ನನ್ನ ಬಳಿಯೂ ಸಾಕಷ್ಟು ಸರಕು ಇದೆ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಹಾಕಿದರು.

ನಾನು ಬಿಡದಿಯಲ್ಲಿ ಖರೀದಿ‌ ಮಾಡಿರುವ 44 ಎಕರೆ ಜಾಗ ರಾಜಕೀಯಕ್ಕೆ ಬರುವ ಮುನ್ನ ತೆಗೆದುಕೊಂಡಿದ್ದು. ಸಿನಿಮಾದಿಂದ ಬಂದ ಹಣದಲ್ಲಿ 4 ಸಾವಿರದಿಂದ 12 ಸಾವಿರ ಹಣ ಕೊಟ್ಟು ಖರೀದಿ ಮಾಡಿದ್ದ ಭೂಮಿ ಅದು. ಮಾಲ್ ಆರಂಭ ಮಾಡಿ ಬಿಸಿನೆಸ್ ಪ್ಯಾಶನ್ ಅಂತ ನಾನು ಹಣ‌ ಸಂಪಾದನೆ ಮಾಡಿಲ್ಲ ಎಂದು ಅವರು ಹೇಳಿದರು.

1,400 ಕೋಟಿ ರೂ. ಹೇಗೆ ಸಂಪಾದನೆ ಮಾಡಿದಿರಿ?

ಡಿ.ಕೆ.ಶಿವಕುಮಾರ್ ಅವರೇ 1,400 ಕೋಟಿ ರೂಪಾಯಿ ಹೇಗೆ ಸಂಪಾದನೆ ಮಾಡಿದಿರಿ ಎಂದು ಹೇಳಿ. ನನಗೆ ನೀವು ಹೇಳುವುದು ಬೇಡ, ಕನಕಪುರದ ಜನತೆಗಾದರೂ ಹೇಳಿ, 1,400 ಕೋಟಿ ರೂಪಾಯಿ ‌ಖರೀದಿ ಹೇಗೆ ಮಾಡಿದ್ದು ಅಂತ ತಿಳಿಸಿ. ನಿಮ್ಮ ಮತದಾರರಿಗಾದರೂ ಸತ್ಯ ಹೇಳಿ.

ದೊಡ್ಡ ಆಲದಹಳ್ಳಿಯಲ್ಲಿ ಹೇಗೆ ಆಸ್ತಿ ಸಂಪಾದನೆ ಮಾಡಿದ್ದೀರಾ ಎಂಬುದು ನನಗೆ ಗೊತ್ತಿದೆ. 8 ಬಾರಿ ಶಾಸಕರಾಗಿ 1,400 ಕೋಟಿ ರೂಪಾಯಿ ಹೇಗೆ ಸಂಪಾದನೆ ‌ಮಾಡಿದಿರಿ ಎಂಬುದನ್ನು ದಯಮಾಡಿ ಹೇಳಿ. ಕೇಳಿ ತಿಳಿದುಕೊಳ್ಳುವ ಹಂಬಲ ನನ್ನದು ಎಂದು ಡಿಕೆಶಿ ಅವರಿಗೆ ಟಾಂಗ್ ಕೊಟ್ಟರು ಮಾಜಿ ಮುಖ್ಯಮಂತ್ರಿಗಳು.

ಸಮಯ, ಸ್ಥಳ, ದಿನಾಂಕ ನಿಗದಿ ಮಾಡಿ:

ಕನಕಪುರ ಯಾರಿಂದ ಹೇಗೆ ಅಭಿವೃದ್ಧಿ ಹೊಂದಿದೆ ಎಂಬ ಚರ್ಚೆಗೂ ನಾನು ಸಿದ್ಧನಿದ್ದೇನೆ. ಅವರ ಯಾವುದೇ ಸವಾಲಿಗೂ ನಾನು ರೆಡಿ. ವಿಧಾನಸೌಧದಲ್ಲಿ ಚರ್ಚೆ ಮಾಡೋಕೆ‌ ನಾನು ಸಿದ್ದ. ಸಮಯ, ಸ್ಥಳ‌‌ ಎಲ್ಲಾ ಡಿ.ಕೆ.ಶಿವಕುಮಾರ್ ಫಿಕ್ಸ್ ಮಾಡಲಿ, ನಾನು ಚರ್ಚೆಗೆ ಬರುತ್ತೇನೆ.

ನಾವು ಅವರಂತೆ ತಲೆ ಒಡೆಯುವ ಕೆಲಸ ಮಾಡಿಲ್ಲ. ಬೇರೆ ಜಮೀನಿಗೆ ಫೆನ್ಸಿಂಗ್ ಹಾಕಿಲ್ಲ. ಅದೆಲ್ಲ ಹೆಂಗೆ ಅಂತ ಡಿ.ಕೆ
ಶಿವಕುಮಾರ್ ಅಣ್ಣನ್ನೇ ಕೇಳಿ ಎಂದು ಕಾಲೆಳೆದ ಅವರು; ಶಾಂತಿನಗರ ಹೌಸಿಂಗ್ ಸೊಸೈಟಿ ಅಸಲಿ ನಕಲಿ ಮಾಡಿದ್ದು ಯಾರು?‌ ಡಿಕೆಶಿ ಯಾರನ್ನು ಬೇಕಾದರೂ ಕೊಂಡುಕೊಳ್ತಾರೆ ಎಂದರು ಅವರು.

ಬ್ರ್ಯಾಂಡ್ ಬೆಂಗಳೂರು ಎನ್ನುತ್ತಾರೆ. ಕೆರೆ-ಕಟ್ಟೆ ನುಂಗಿ ಹಾಕಿದ್ದಾರೆ. ಯಾವ ಯಾವ ಕೆರೆ ನುಂಗಿದ್ದೀರಾ ಎನ್ನುವ ಬಗ್ಗೆ ಪಟ್ಟಿ ಬೇಕಾ? ಯಾವ ಮುಖ ಇಟ್ಟುಕೊಂಡು ಕೆಂಪೇಗೌಡರ ಹೆಸರು ಹೇಳ್ತೀರಾ. ಈಗ ಕನಕಪುರ, ರಾಮನಗರ ಕೆರೆಗಳನ್ನು ಮುಗಿಸಲು ಹೊರಟಿದ್ದೀರಾ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ ಹೆಸರು ಬದಲಿಸಿದರೆ ಆಮರಣಾಂತ ಉಪವಾಸ

ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಿದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೂರುತ್ತೇನೆ. ನನ್ನ ಆರೋಗ್ಯ ಚೆನ್ನಾಗಿಲ್ಲ. ನನ್ನ ಜೀವ ಹೋದರೂ ಪರವಾಗಿಲ್ಲ, ಜಿಲ್ಲೆಯ ಹೆಸರು ಬದಲಾವಣೆಗೆ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

ನಾನು ಹುಟ್ಟಿದ್ದು ಹಾಸನ ಜಿಲ್ಲೆ ಇರಬಹುದು. ಆದರೆ ನನ್ನ ಜೀವನ ಅಂತ್ಯ ಆಗುವುದು ರಾಮನಗರದಲ್ಲೇ.‌ ನನ್ನ ಹೋರಾಟಕ್ಕೆ ರಾಮನಗರದ ಜನರ ಸಹಕಾರ ಕೇಳ್ತೀನಿ. ಈ ಹೋರಾಟದಲ್ಲಿ ಅವರು ಭಾಗಿ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಅವರು ಮನವಿ ಮಾಡಿದರು.

ನಾನು ರಾಮನಗರ ಜಿಲ್ಲೆ ಮಾಡಿದಾಗ ಇವರು ವಿರೋಧ‌ ಮಾಡಿರಲಿಲ್ಲ. 17 ವರ್ಷದಿಂದ ವಿರೋಧ ಮಾಡಿರಲಿಲ್ಲ. ಯಾಕೆ ವಿರೋಧ ಮಾಡಿರಲಿಲ್ಲ? ಇದ್ದಕಿದ್ದ ಹಾಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಲ್ಲಿಂದ ಹುಟ್ಟಿ ಬಂತು? ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ ಎಂದು ಎಂದು ಅವರು ತಿಳಿಸಿದರು.

ರಾಜೀವ್ ಗಾಂಧಿ ವಿವಿ ರಾಮನಗರಕ್ಕೆ ಹೋಗಿದ್ದಕ್ಕೆ ಇವರು ಬಹಳ ವಿರೋಧ ಮಾಡಿದರು. ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಬೇಕು ಎಂದರು. ಮೊದಲು ಕೊಡಲಾಗಿದ್ದ ಮೆಡಿಕಲ್ ಕಾಲೇಜ್ ಚಿಕ್ಕಬಳ್ಳಾಪುರಕ್ಕೆ ಹೋಯಿತು. ಮತ್ತೆ 450 ಕೋಟಿ‌ ರೂಪಾಯಿ ಹಣ ಇಟ್ಟು ಹೊಸ ಮೆಡಿಕಲ್ ಕಾಲೇಜ್ ಗೆ 100 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೆ ಎಂದ ಅವರು, ನಾನು ‌ಫ್ರೀ ಇದ್ದೀನಿ. ಡಿ.ಕೆ.ಶಿವಕುಮಾರ್ ಯಾವಾಗ ಬೇಕಾದರೂ ಸಮಯ ನಿಗದಿ ಮಾಡಲಿ. ಅವರು ಹೇಳಿದ ಸಮಯಕ್ಕೆ ಚರ್ಚೆಗೆ ನಾನು ಸಿದ್ದ ಎಂದು ಅವರು ಸವಾಲು ಹಾಕಿದರು.

ಮಾಗಡಿಯ ಮಾಜಿ ಶಾಸಕ ಆರ್ ಮಂಜುನಾಥ್, ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಎ.ಪಿ.ರಂಗನಾಥ್, ಜಯಮುತ್ತು ಮುಂತಾದವರು ಉಪಸ್ಥಿತರಿದ್ದರು.

========