images 17

ನವ ವರ್ಷದಂದು ನಮ್ಮ ಸಂಕಲ್ಪಗಳ ರಚನೆ….!

Genaral STATE

ನವ ವರ್ಷದಂದು ನಮ್ಮ ಸಂಕಲ್ಪಗಳ ರಚನೆ

ಪ್ರತಿ ವರ್ಷ ನವ ವರ್ಷವನ್ನು ಬಹಳ ಚೆನ್ನಾಗಿ ಹಾಗೂ ಸಂತೋಷಬರಿತವಾಗಿ ಆಚರಿಸಲು ನಾವೆಲ್ಲರೂ ಸಹ ಅನೇಕ ಶುಭ ಸಂಕಲ್ಪ, ವಿಚಾರ ಅಥವಾ ಪ್ರತಿಜ್ಞೆ ನಮಗೆ ನಾವೇ ಮಾಡಿಕೊಳ್ಳುತ್ತೇವೆ. ನಮ್ಮ ಯೋಜನೆಗಳು, ಪರಿಯೋಜನೆಗಳು ಹಾಗೂ ಕನಸುಗಳನ್ನು ಸಾಕಾರಗೊಳಿಸಲು ಮನಸ್ಸಿನಲ್ಲಿ ಅನೇಕ ವಿಚಾರಗಳು ಹಾಗೂ ವಿಷಯಗಳು ಬರುತ್ತವೆ. ಅವುಗಳಲ್ಲಿ ಬಹಳಷ್ಟು ಸಂಕಲ್ಪಗಳು ಸಕಾರಾತ್ಮಕ, ನಕಾರಾತ್ಮಕ, ದೃಢ ಅಥವಾ ದುರ್ಬಲ ಸಂಕಲ್ಪಗಳು ಇರುತ್ತವೆ. ನಕಾರಾತ್ಮಕ ಅಥವಾ ದುರ್ಬಲ ಸಂಕಲ್ಪಗಳು ನಮನ್ನು ಜೀವನದಲ್ಲಿ ಮುಂದು-ವರೆಯಲು ಬಿಡುವುದಿಲ್ಲ. ನಮ್ಮ ವ್ಯಕ್ತಿತ್ವವನ್ನು ಸಹ ಬೆಳಗಿಸುವುದಿಲ್ಲ. ಅದರಿಂದ ನಾವು ಜೀವನದಲ್ಲಿ ಉದಾಸೀನ ಹಾಗೂ ನಿರಾಶೆಗೊಳಗಾಗುತ್ತೇವೆ.
ನಮ್ಮ ಸಂಕಲ್ಪಗಳು ಪರಸ್ಪರ ಸಂಬಂಧ-ಸಂಪರ್ಕಗಳ ಮೇಲೆ ಬಹಳ ಆಳವಾದ ಪ್ರಭಾವ ಬೀರುತ್ತವೆ. ಅದಕ್ಕೋಸ್ಕರ ನಮ್ಮ ಸಂಕಲ್ಪ ಶಕ್ತಿಯನ್ನು ಶುಭ ಹಾಗೂ ಸಕಾರಾತ್ಮಕ ಮಾಡಿದರೆ ನಮ್ಮ ಜೀವನದಲ್ಲಿ ಸುಖ-ಶಾಂತಿ, ಸಮೃದ್ಧಿ ಬರುವುದು.


ನಮ್ಮ ಸಂಕಲ್ಪಗಳು ಹೇಗಿರಬೇಕು ?
ಮನುಷ್ಯನ ಮನಸ್ಸಿನಲ್ಲಿ ಪ್ರತಿ ನಿಮಿಷ ಸಾವಿರಾರು ಸಂಕಲ್ಪಗಳು-ವಿಕಲ್ಪಗಳು ಬರುತ್ತಾ ಇರುತ್ತವೆ. ನಮ್ಮ ಸಂಕಲ್ಪ ಶಕ್ತಿ ನಾವು ಕಣ್ಣು ಪಿಳಿಕಿಸುವುದಕ್ಕಿಂತಲೂ ತೀವ್ರ ವೇಗವಾಗಿ ನಡೆಯುತ್ತಿರುತ್ತವೆ. ಅದಕ್ಕೋಸ್ಕರ ನಮ್ಮ ಸಂಕಲ್ಪಗಳು ಒಳ್ಳೆಯದೋ ಅಥವಾ ಕೆಟ್ಟದೊ? ಎಂದು ಚೆಕ್ ಮಾಡಿಕೊಳ್ಳುತ್ತಿರಬೇಕು. ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ, ಶ್ರೇಷ್ಠ, ಸ್ನೇಹಯುಕ್ತ ದೃಢ ಸಂಕಲ್ಪಗಳು ನಮ್ಮವು ಆಗಿರಬೇಕು. ಬರಲಿರುವ ನವ ವರ್ಷ ಸುಖಮಯ, ಸಾರ್ಥಕ, ಉಮಂಗ-ಉತ್ಸಾಹಪೂರ್ಣವಾಗಿರಲಿ. ಇದಕ್ಕೋಸ್ಕರ ನಮ್ಮ ಮನಸ್ಸನ್ನು ಸಹಜ, ಸರಳ, ಸಬಲ, ಸಕಾರಾತ್ಮಕ ಹಾಗೂ ಪವಿತ್ರವಾಗಿಟ್ಟು ಕೊಳ್ಳೊಣ. ಜೊತೆಗೆ ನಮ್ಮ ಪ್ರತಿಯೊಂದು ಸಂಕಲ್ಪ ಅನ್ಯರ ಪ್ರತಿಯಾಗಿ ಶುಭ ಭಾವನೆ, ಶುಭಕಾಮನೆ ಹಾಗೂ ಸಹಯೋಗ ಭಾವನೆಯಿಂದ ಕೂಡಿರಲಿ. ನಮ್ಮ ಸಂಕಲ್ಪ ಪ್ರಭಾವಶಾಲಿ ಹಾಗೂ ಮಹಾನತೆಯ ಅನುಭವ ಮಾಡಿಸುವಂತದ್ದಾಗಿರಬೇಕು. ಇದರಿಂದ ನಮ್ಮ ಸ್ಥಿತಿ ಶ್ರೇಷ್ಠವಾಗುವುದು ಹಾಗೂ ನಾವು ಜೀವನದ ಪ್ರತಿ ಹೆಜ್ಜೆಯಲ್ಲೂ ಸಫಲತೆ ಪ್ರಾಪ್ತಿ ಮಾಡಿಕೊಳ್ಳುತ್ತಾ ಹೋಗುತ್ತೇವೆ.
ಮನಸ್ಸಿನಲ್ಲಿ ಉತ್ಪನ್ನವಾಗುವ ಸಂಕಲ್ಪಗಳ ಮೇಲೆ ನಮ್ಮ ನಿಯಂತ್ರಣವಿರಬೇಕು, ಆಗ ವ್ಯರ್ಥ ಸಂಕಲ್ಪಗಳನ್ನು ತಡೆಯಬಹುದು. ಆಗಲೇ ಸಂಕಲ್ಪ ಶಕ್ತಿಶಾಲಿ ಹಾಗೂ ಉತ್ಸಾಸಪೂರ್ಣವಾಗುತ್ತವೆ.
ಉದಾಹರಣೆಗೆ ನಿಮ್ಮ ಯಾವುದೇ ಅತಿ ಹತ್ತಿರದ ಸಂಬಂಧಿಕರು ಅನಾರೋಗ್ಯದಿಂದ ಬಳಲುತ್ತಿರಬಹುದು, ಡಾಕ್ಟರ ಸಹ ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿರಬಹುದು. ಆ ಸಮಯದಲ್ಲಿ ಸಾಂತ್ವನ, ಧ್ಯೆರ್ಯ ತುಂಬಿದಾಗ ಆ ವ್ಯಕ್ತಿಗೆ ಖುಶಿ, ಶಾಂತಿ, ಆನಂದದ ಅನುಭೂತಿ ಮಾಡಿಸಲು ಸಾಧ್ಯವಾಗುವುದು ಹಾಗೂ ಅವರಿಗೆ ರೋಗವನ್ನು ಎದುರಿಸುವ, ಸಹನೆ ಮಾಡುವ ಸಾಮರ್ಥ್ಯ ಬರುವುದು.
ಸಂಕಲ್ಪ ಶ್ರೇಷ್ಠ ಮಾಡುವ ವಿಧಿ
ಒಂದು ವೇಳೆ ನಮ್ಮ ಸಂಕಲ್ಪ ಶಕ್ತಿ ಶ್ರೇಷ್ಠ ಅಥವಾ ಸಮರ್ಥ ವಾಗಬೇಕೆಂದರೆ ನಮ್ಮ ವಿಚಾರಗಳು ಗುಣಯುಕ್ತ ಹಾಗೂ ಸಕಾರಾತ್ಮಕವಾಗಿರಬೇಕು. ಸಹನಶೀಲತೆ, ಸಂತೋಷ, ತ್ಯಾಗ, ಮಧುರತೆ, ನಮ್ರತೆ, ದೃಢ ನಿಶ್ಚಯ ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಉತ್ಸಾಹದ ಜೊತೆಗೆ ಸದಾ ಸಹಯೋಗಿ ಆತ್ಮರಾಗಿ, ಸಹಯೋಗದ ಸಂಕಲ್ಪ ಕಾರ್ಯದಲ್ಲಿ ತೊಡಗಿಸಿರಿ, ಆಗ ವಿಜಯ ಪಾಪ್ತವಾಗುವುದು. ನಮ್ಮ ಸಹಯೋಗದ ಸಂಕಲ್ಪವು ನಮ್ಮ ಜೊತೆ ಅನ್ಯರ ಸಂಕಲ್ಪಗಳಲ್ಲೂ ಶಕ್ತಿ ತುಂಬುತ್ತದೆ. ಹೀಗೆ ಶ್ರೇಷ್ಠ ಸಂಕಲ್ಪ ಇಂಜೆಕ್ಷನ್‌ನ ಕಾರ್ಯ ಮಾಡುತ್ತದೆ. ನಮ್ಮ ದೃಷ್ಟಿ, ವೃತ್ತಿ ಶುದ್ಧ ಹಾಗೂ ಪವಿತ್ರವಾದಾಗ ಏನೇ ಸಂಕಲ್ಪ ಮಾಡಲಿ ಅದು ಸಕಾರಾತ್ಮಕ ಮತ್ತು ಶಕ್ತಿಶಾಲಿಯಾಗುತ್ತದೆ.
ಸಂಕಲ್ಪಗಳಲ್ಲಿ ಶಕ್ತಿಯನ್ನ್ತು ಹೇಗೆ ತುಂಬುವುದು ?
ದಿನವಿಡಿ ನಮ್ಮಲ್ಲಿ ಅನೇಕ ವಿಚಾರಗಳು ಬರುತ್ತವೆ, ಅದರಲ್ಲಿ ಬಹಳಷ್ಟು ನಕಾರಾತ್ಮಕ, ಕೆಲವು ಸಕಾರಾತ್ಮಕವಾಗಿರುತ್ತವೆ. ನಕಾರಾತ್ಮಕ ವಿಚಾರಗಳು ಪುನಃ ಪುನಃ ಬರುವುದರಿಂದ ನಮ್ಮ ಮಾತುಗಳ ಗುಣಮಟ್ಟ ಕಡಿಮೆಯಾಗುತ್ತದೆ. ಈ ರೀತಿ ವಿಚಾರ ಅಥವಾ ಸಂಕಲ್ಪ ರೂಪಿ ಖಜಾನೆಯನ್ನು ಸರಿಯಾಗಿ ಉಪಯೋಗ ಮಾಡುವ ಸ್ಥಾನದಲ್ಲಿ ಅದನ್ನು ವ್ಯರ್ಥವಾಗಿ ಕಳೆಯುತ್ತೇವೆ. ಏಕಾಗ್ರತೆ ಹಾಗೂ ಸಕಾರಾತ್ಮಕತೆಯಿಂದ ನಾವು ಸಂಕಲ್ಪ ಮಾಡಿದರೆ, ಆಗ ನಮ್ಮ ಸಂಕಲ್ಪ ಶಕ್ತಿಶಾಲಿ ಯಾಗುವುದು. ನಮ್ಮ ಸರ್ವ ಕಾರ್ಯಗಳಿಗೆ ಸಹಜವಾಗಿ ಸಫಲತೆ ಪ್ರಾಪ್ತಿಯಾಗುವುದು.
ನವ ವರ್ಷದಲ್ಲಿ ಬರುವ ಸಂಕಲ್ಪಗಳನ್ನು ಶಕ್ತಿಶಾಲಿ ಹಾಗೂ ಪ್ರಭಾವಶಾಲಿ ಮಾಡುವುದಕ್ಕೊಸ್ಕರ ನಮ್ಮ ಯೋಚಿಸುವ ಶಕ್ತಿಯನ್ನು ಅನ್ಯರ ಕಲ್ಯಾಣದಲ್ಲಿ ಹಾಗೂ ನಿಮಿತ್ತಭಾವದಲ್ಲಿ ಇದ್ದು ಕಾರ್ಯದಲ್ಲಿ ತೊಡಗಿಸಬೇಕಾಗಿದೆ. ಆಗಲೇ ಜೀವನದಲ್ಲಿ ಸಫಲತೆ ನಿಶ್ಚಿತ. ಇದಕ್ಕಾಗಿ ನಿತ್ಯ ಸ್ವಲ್ಪ ಹೊತ್ತಾದರೂ ರಾಜಯೋಗ ಅಭ್ಯಾಸ ಮತ್ತು ಧ್ಯಾನ ಮಾಡುವ ವಿಧಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳೊಣ. ಯೋಗದಿಂದ ಮನಸ್ಸು ಸಧೃಡವಾಗುತ್ತದೆ. ಮನೋಬಲ ವರ್ಧಿಸುತ್ತದೆ. ಇದರಿಂದ ವ್ಯಕ್ತಿತ್ವ ಶ್ರೇಷ್ಠವಾಗುತ್ತದೆ ಎಂಬ ಮಾತುಗಳನ್ನು .ರಾಜಯೋಗಿನಿ ಬ್ರಹ್ಮಾಕುಮಾರಿ ರಾಜಶ್ರೀ ದಿದೀಜಿ ಅವರು ತಿಳಿಸಿದ್ದಾರೆ.

ಓದುಗರೆಲ್ಲರಿಗೂ ನವ ವರ್ಷದ ಹಾರ್ದಿಕ ಶುಭಾಶಯಗಳು.ರಾಜಯೋಗಿನಿ ಬ್ರಹ್ಮಾಕುಮಾರಿ ರಾಜಶ್ರೀ ದಿದೀಜಿ, ಶುಭ ಕೋರಿದ್ದಾರೆ.