ಜಾನಪದ ಗ್ರಾಮೀಣ ಜನಜೀವನದ ಪ್ರತಿಬಿಂಬ
ಪಾವಗಡ : ಗ್ರಾಮೀಣ ಜನಜೀವನದ ಪ್ರತಿಬಿಂಬ ಜಾನಪದ ಕಲೆಯಾಗಿದ್ದು, ಪ್ರೋತ್ಸಾಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಲೇಖಕ ಹೊ.ಮ.ನಾಗರಾಜು ತಿಳಿಸಿದರು.
ನಿಡಗಲ್ಲು ಕ್ಷೇತ್ರದಲ್ಲಿ ಭಾನುವಾರದಂದು ಸಿದ್ದಾಪುರದ ಸ್ವಾಮಿ ವಿವೇಕಾನಂದ ಕಲಾಸಂಘವು, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ತುಮಕೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಜಾನಪದ ಸಂಭ್ರಮ-೨೦೨೩ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕಲಾ ಮಾಧ್ಯಮಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ರಕ್ಷಿಸಿ ಪ್ರೋತ್ಸಹಿಸಿ ಬೆಳೆಸಿದರೆ ತಲೆಮಾರಿ ಜಾನಪದ ಸಿರಿ ಮುಂದುವರೆಯುತ್ತದೆ ಎಂದರು.
ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೆಗಾರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪ್ರತಿದಿನದ ಬದುಕಿನಲ್ಲಿ ಹಳ್ಳಿಗರು ತಮ್ಮ ಶ್ರಮದ ಧಣಿವಾರಿಸಿಕೊಳ್ಳಲು ಹಲವು ಕಲೆಗಳನ್ನು ಕರಗತ ಮಾಡಿಕೊಂಡಿದ್ದರು. ಆದರೆ ಯುವ ಪೀಳಿಗೆಯು ಈ ಸೊಗಡನ್ನು ಅಳವಡಿಸಿಕೊಳ್ಳುವಲ್ಲಿ ಅಸಡ್ಡೆ ಮತ್ತು ನಿರಾಸಕ್ತಿ ಹೊಂದಿದೆ. ಪರಿಣಾಮವಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕಾರಣವಾಗಿರುವ ಜಾನಪದ ಕಲೆಗಳು ಅವಸಾನ ತಲುಪುವ ಹಂತಕ್ಕೆ ಬಂದು ನಿಂತಿವೆ. ಸರ್ಕಾರಗಳು ತಮ್ಮ ಪ್ರಯತ್ನ ಮಾಡುತ್ತಿದ್ದು, ಹಲವಾರು ಸಂಘ ಸಂಸ್ಥೆಗಳ ಮೂಲಕವಾದರೂ ಕಲೆಗಳನ್ನು ಉಳಿಸುವ ಕೆಲಸ ಮಾಡುತ್ತಿರುವುದಕ್ಕೆ ಅಭಿನಂದನೆ ತಿಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೀಲುಕುದುರೆ ಸೋಮನಕುಣಿತ, ಭಜನೆ, ತತ್ವಪದ ಗಾಯನ, ಗಾರುಡಿಗೊಂಬೆ, ಜನಪದ ಗೀತೆ ಗಾಯನ ಇತ್ಯಾದಿ ಕಲೆಗಳು ಪ್ರದರ್ಶನಗೊಂಡವು.
ಕಲಾವಿದ ವೀರ್ಲಗೊಂದಿ ನಾಗರಾಜು, ಎನ್.ಆರ್.ಲಿಂಗಪ್ಪ, ದ್ಯಾವೀರಪ್ಪ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಿರುಮಲೇಶ, ಪಾಲಯ್ಯ, ಭಾಸ್ಕರ ನಾಯಕ, ಸಂಘದ ರ‍್ರಿಸ್ವಾಮಿ, ಕಲಾವಿದರಾದ ಬಲರಾಮ ಮುಂತಾದವರು ಇದ್ದರು.
ವರದಿ :- ನಂದೀಶ್ ನಾಯ್ಕ
ಪಾವಗಡ