DSC 4344 scaled e1623773386257

ತುಮಕೂರು: ಕೋವಿಡ್ ಮೂರನೇ ಅಲೆ, ಮಕ್ಕಳ ಸಂರಕ್ಷಣೆ, ಚಿಕಿತ್ಸೆಗೆ ಸಜ್ಜಾಗಿ…!

DISTRICT NEWS ತುಮಕೂರು

ಕೋವಿಡ್ 3ನೇ ಅಲೆಯಿಂದ ಮಕ್ಕಳ ಸಂರಕ್ಷಣೆ, ಚಿಕಿತ್ಸೆಗೆ ಸಕಲ ರೀತಿಯಲ್ಲಿಯೂ ಸಜ್ಜಾಗುವಂತೆ  ಸೂಚನೆ

ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳ ಭವಿಷ್ಯಕ್ಕೆ ಆದ್ಯತೆ ಕೊಡುವಂತೆ ಸಚಿವೆ ಶಶಿಕಲಾ ಜೊಲ್ಲೆ ನಿರ್ದೇಶನ

ತುಮಕೂರು(ಕವಾ)ಜೂ.15: ಕೋವಿಡ್ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಮತ್ತು ಚಿಕಿತ್ಸೆ ನೀಡಲು ಸಕಲ ರೀತಿಯಲ್ಲಿಯೂ ಸಜ್ಜಾಗುವಂತೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ  ಸೂಚನೆ ನೀಡಿದರು.

ಕೊರೋನಾ ಸಂಭಾವ್ಯ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗರೂಕ ಕ್ರಮಗಳ ಕುರಿತು ಜನಪ್ರತಿನಿಧಿಗಳು  ಹಾಗೂ ಅಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆ ಎದುರಾದಲ್ಲಿ ಮಕ್ಕಳಿಗೆ ಸಮರ್ಪಕವಾಗಿ ಚಿಕಿತ್ಸೆ ಒದಗಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಸಜ್ಜಾಗಿರಬೇಕು ಎಂದು ನಿರ್ದೇಶಿಸಿದರು.

ಕೋವಿಡ್ ಮೂರನೇ ಅಲೆಗೆ ಹೆಚ್ಚಿನ ಮಕ್ಕಳು ಬಾಧಿತರಾಗುವ ನಿರೀಕ್ಷೆಯಿದ್ದು, ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ  ಖಾಸಗಿ ಆಸ್ಪತ್ರೆಗಳಲ್ಲಿ  ಬೆಡ್‍ಗಳ ವ್ಯವಸ್ಥೆ, ಆಮ್ಲಜನಕ, ವೆಂಟಿಲೇಟರ್ ಸೇರಿದಂತೆ ಅಗತ್ಯ ಸಿದ್ಧತೆ ಕೈಗೊಳ್ಳುವುದರೊಂದಿಗೆ ಶಿಶುತಜ್ಞ ವೈದ್ಯರನ್ನು ನೇಮಕ ಮಾಡಿಕೊಂಡು ವೈದ್ಯಕೀಯ ಸೌಲಭ್ಯ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.DSC 4369

ಅನಾಥ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ: ಜಿಲ್ಲೆಯಲ್ಲಿ ಕೋವಿಡ್‍ನಿಂದ  ಪೋಷಕರಿಬ್ಬರನ್ನು ಕಳೆದುಕೊಂಡು ಅನಾಥವಾಗುವ ಅಥವಾ ಒಬ್ಬರು ಪೋಷಕರನ್ನು ಕಳೆದುಕೊಂಡು ಏಕ ಪೋಷಕತ್ವದಲ್ಲಿರುವ  ಮಕ್ಕಳಿಗೆ ಪಾಲನಾ ಸಂಸ್ಥೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಅಂತಹ ಮಕ್ಕಳಿಗಾಗಿ ಸರ್ಕಾರದಿಂದ ಜಾರಿಗೊಳಿಸಿರುವ ಬಾಲ ಸೇವಾ ಯೋಜನೆ, ಮಾಸಾಶನ, ಉಚಿತ ಶೈಕ್ಷಣಿಕ ಸೌಲಭ್ಯ ಸೇರಿದಂತೆ ಉನ್ನತ ಶೈಕ್ಷಣಿಕ ದೃಷ್ಟಿಯಿಂದ ಲ್ಯಾಪ್‍ಟಾಪ್ ವಿತರಣೆ ಹಾಗೂ ಇತರೆ ಎಲ್ಲಾ ಸೌಲಭ್ಯಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಮಕ್ಕಳು ಅನ್ಯಾಯಕ್ಕೆ ಒಳಗಾಗಬಾರದು ಎಂದು ಸೂಚಿಸಿದರು.

ಮಕ್ಕಳ ಭವಿಷ್ಯ ರೂಪಿಸಲು ಕೊಂಡಿ: ಅನಾಥರಾಗುವ ಮಕ್ಕಳ ಭವಿಷ್ಯ ರೂಪಿಸಲು ದತ್ತು ನಿಯಮ, ಕಾನೂನು ಅನುಸಾರ ಯಾರಾದರೂ ದಾನಿಗಳು, ಸಂಘ-ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಭವಿಷ್ಯ ರೂಪಿಸಲು ಮುಂದೆ ಬಂದಲ್ಲಿ ಇಲಾಖೆಯು ಕೊಂಡಿಯಾಗಿ ಕಾರ್ಯನಿರ್ವಹಿಸಿ ದತ್ತು ನಿಯಮ ಪ್ರಕಾರ ಅವರಿಗೆ ಸರ್ಕಾರದಿಂದ ಸಹಕಾರ ಕಲ್ಪಿಸಲಾಗುವುದು ಎಂದು ಹೇಳಿದರು.DSC 4410

ಹೆಚ್ಚು ಅರಿವು ಮೂಡಿಸಿ: ಮೊದಲನೇ ಅಲೆ ಹಾಗೂ ಎರಡನೇ ಅಲೆಯಲ್ಲಿಯೂ ಮಕ್ಕಳು ಕೋವಿಡ್ ಬಾಧಿತರಾಗಿದ್ದು, ಮೂರನೆ ಅಲೆಯ ಕೋವಿಡ್ ನಿಂದ ಮಕ್ಕಳನ್ನು ಮುಕ್ತಗೊಳಿಸಲು ಪೋಷಕರಿಗೆ ಹೆಚ್ಚು ಅರಿವು ಮೂಡಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದರು.

ಆತಂಕ ದೂರ ಮಾಡಿ: ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಬೆಂಗಳೂರಿಗೆ ಸಮೀಪವಿರುವ ತುಮಕೂರು ಜಿಲ್ಲೆಯು ಎರಡನೇ ಅಲೆಯಲ್ಲಿ ಅತಂತ್ರ ಸ್ಥಿತಿಗೆ ತಲುಪಿತ್ತು. ಆದರೆ, ಜಿಲ್ಲಾಡಳಿತದ ಕ್ರಮದಿಂದಾಗಿ ಸೋಂಕು ನಿಯಂತ್ರಣಕ್ಕೆ ಬಂದಿದ್ದು ಆತಂಕ ದೂರವಾಗಿದೆ. ಅಂತೆಯೇ ಮುಂದಿನ ದಿನಗಳಲ್ಲಿ ಮಕ್ಕಳನ್ನು ಬಾಧಿಸುವ ನಿರೀಕ್ಷೆಯಲ್ಲಿರುವ

ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಪೋಷಕರಿಗೆ ಹೆಚ್ಚು ಅರಿವು ಮೂಡಿಸಬೇಕು. ಮನೆಯಲ್ಲಿಯೇ ಚಿಕಿತ್ಸೆ ನೀಡುವುದಕ್ಕಿಂತ ಕೋವಿಡ್ ಕೇರ್ ಸೆಂಟರ್ ನಲ್ಲಿ ಆರೈಕೆಗೆ ಹೆಚ್ಚು ಆದ್ಯತೆ ಕೊಡಬೇಕು. ಜಿಲ್ಲಾವಾರು ಬದಲು ಜನಸಂಖ್ಯೆಗೆ ಅನುಗುಣವಾಗಿ ಲಸಿಕೆಯನ್ನು ಸರ್ಕಾರದಿಂದ ಪೂರೈಕೆ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ  ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ವೈದ್ಯರಂತೆ ಕರ್ತವ್ಯ ನಿರ್ವಹಿಸಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳ ಸಂರಕ್ಷಣೆ ಕ್ರಮ: ಸಭೆಯಲ್ಲಿದ್ದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಂಭಾವ್ಯ ಮೂರನೇ ಅಲೆಯಿಂದ ಮಕ್ಕಳ ಸಂರಕ್ಷಣೆಗಾಗಿ ಎಲ್ಲಾ ರೀತಿಯಲ್ಲಿಯೂ ಕ್ರಮ ವಹಿಸಲಾಗಿದೆ. ಚಿಕಿತ್ಸಾ ವ್ಯವಸ್ಥೆಯನ್ನೂ ಸಹ ಎಲ್ಲ ರೀತಿಯಲ್ಲಿಯೂ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಸಿದ್ಧತೆ ಕುರಿತು ಮಾಹಿತಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್. ನಟರಾಜು ಮಾತನಾಡಿ, ಕೋವಿಡ್ ಸಂಭಾವ್ಯ ಮೂರನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆ ಮತ್ತು ಒಟ್ಟು 10 ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳಿಗೋಸ್ಕರ 547 ಹಾಸಿಗೆ, 116 ಎನ್.ಐ.ಸಿ.ಯು.,   53 ಪಿ.ಐ.ಸಿ.ಯು. ಮತ್ತು 20 ವೆಂಟಿಲೇಟರ್‍ಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತೀ ತಾಲ್ಲೂಕುಗಳಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪರಿಣಿತ ಮಕ್ಕಳ ತಜ್ಞರನ್ನು ಗುರುತಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ 1 ಮತ್ತು 2 ನೇ ಅಲೆಯಲ್ಲಿ ಕೋವಿಡ್ ಸೋಂಕಿನಿಂದ ಯಾವುದೇ ಮಗು ಅನಾಥವಾಗಿಲ್ಲ. ಸರ್ಕಾರದ ಮುಖ್ಯಮಂತ್ರಿ ಬಾಲಸೇವಾ ಯೋಜನೆ ಹಾಗೂ ಬಾಲಹಿತೈಷಿ ಯೋಜನೆಯನ್ನು ಸಮರ್ಪಕ ಅನುμÁ್ಟನ ಮಾಡಲಾಗಿದೆ. ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ 1 ಮತ್ತು 2 ನೇ ಅಲೆಯಲ್ಲಿ ಕೋವಿಡ್‍ನಿಂದ ಮರಣ ಹೊಂದಿದ ಓರ್ವ ಅಂಗನವಾಡಿ ಕಾರ್ಯಕರ್ತೆಗೆ 30 ಲಕ್ಷ ಪರಿಹಾರ ವಿತರಿಸಲಾಗಿದೆ.DSC 4384

ಜಿಲ್ಲೆಯಲ್ಲಿ ಒಟ್ಟು 4109 ಅಂಗನವಾಡಿ   ಕೇಂದ್ರಗಳಿದ್ದು, 7396 ಅಂಗನವಾಡಿ ಕಾರ್ಯಕರ್ತೆಯರು / ಸಹಾಯಕಿಯರಿದ್ದಾರೆ. ಇವರಲ್ಲಿ 7080 ಮೊದಲ ಲಸಿಕೆ ಹಾಗೂ 6601 ಕಾರ್ಯಕರ್ತೆಯರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 6 ವರ್ಷದೊಳಗಿನ 146079 ಹಾಗೂ  0-18 ವರ್ಷದೊಳಗಿನ 482651ಮಕ್ಕಳು, 16352 ಗರ್ಭಿಣಿಯರು, 15642 ಬಾಣಂತಿಯರು, 12 ಕಿಶೋರಿಯರು, 176 ತೀವ್ರ ಅಪೌಷ್ಠಿಕ   ಮಕ್ಕಳಿದ್ದಾರೆ. ಕಳೆದ ಒಂದು ವರ್ಷದಲ್ಲಿ 49 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ( 49 ಪ್ರಕರಣಗಳಲ್ಲಿ ಎಫ್.ಐ.ಆರ್ . ದಾಖಲಿಸಿ , 21 ಪ್ರಕರಣದಲ್ಲಿ ಪರಿಹಾರ ಒದಗಿಸಲಾಗಿದೆ ). ಅಲ್ಲದೆ 130  ಬಾಲ್ಯವಿವಾಹ ದೂರುಗಳು ಬಂದಿದ್ದು,   123 ಬಾಲ್ಯವಿವಾಹ ಗಳನ್ನು ತಡೆಯಲಾಗಿದ್ದು, 7 ಪ್ರಕರಣಗಳಲ್ಲಿ ಎಫ್.ಐ.ಆರ್  ದಾಖಲಿಸಿಕೊಳ್ಳಲಾಗಿದೆ. 2021 ಏಪ್ರಿಲ್‍ನಿಂದ ಇಲ್ಲಿಯವರೆಗೆ 14 ಬಾಲ್ಯವಿವಾಹ ದೂರು ಬಂದಿದ್ದು,   12 ಬಾಲ್ಯ ವಿವಾಹಗಳನ್ನು ತಡೆಯಲಾಗಿದ್ದು, 2 ಪ್ರಕರಣಗಳಲ್ಲಿ ಎಫ್.ಐ.ಆರ್. ದಾಖಲಿಸಿಕೊಳ್ಳಲಾಗಿದೆ ಎಂದು ಇಲಾಖೆಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು.

ಹತ್ತು ಸಾವಿರ ಮಕ್ಕಳಿಗೆ ಕೋವಿಡ್: ಮೊದಲನೆ ಅಲೆಯ 2020-21ನೇ ಸಾಲಿನಲ್ಲಿ 2382 ಮಕ್ಕಳಿಗೆ ಅದಾದ ಬಳಿಕ 2021ರ ಏಪ್ರಿಲ್ ನವರೆಗೆ 2386 ಹಾಗೂ 2021ರ ಮೇ ವರೆಗೆ 5273 ಸೇರಿ ಒಟ್ಟು ಎರಡನೇ ಅಲೆಯಲ್ಲಿ 7659 ಹಾಗೂ ಕೋವಿಡ್ ಪ್ರಾರಂಭವಾದಾಗಿನಿಂದ ಈವರೆಗೆ  ಒಟ್ಟು 10041 ಮಕ್ಕಳಿಗೆ ಕೋವಿಡ್ ದೃಢವಾಗಿದೆ. ಆದರೆ, ಯಾವುದೇ ಮಗು ಸಾವನ್ನಪ್ಪಿಲ್ಲ. ಬಹುತೇಕ ಎಲ್ಲಾ ಮಕ್ಕಳು ಚೇತರಿಸಿಕೊಂಡಿದ್ದಾರೆ. ಹಾಗೇ ಯಾವುದೇ  ಮಗುವಿನಲ್ಲೂ ಬ್ಲಾಕ್ ಫಂಗಸ್ ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಮಾಹಿತಿ ಒದಗಿಸಿದರು.

ಸಭೆಯಲ್ಲಿ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಜಯರಾಮ್,ಬಿ.ಸಿ.ನಾಗೇಶ್, ಎಂ.ಆರ್. ರಾಜೇಶ್ ಗೌಡ, ತಿಪ್ಪೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಅನುರಾಧ,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿμÁ್ಠಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಸೇರಿದಂತೆ  ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಸಭೆಯಲ್ಲಿ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೂಕ್ಷ್ಮ ಪೋಷಕಾಂಶವುಳ್ಳ ಸ್ವಿರುಲಿನಾ ಚಿಕ್ಕಿ, ಸ್ವಿರುಲಿನಾ ಕಾಳುಗಳನ್ನು ಸಾಂಕೇತಿಕವಾಗಿ ಸಚಿವೆ ಶಶಿಕಲಾ ಜೊಲ್ಲೆ ವಿತರಿಸಿದರು. ಇದೇ ವೇಳೆ ಮೂರನೇ ಅಲೆ ಕುರಿತ ಜಾಗೃತಿ ಕರಪತ್ರ ಬಿಡುಗಡೆಗೊಳಿಸಿದರು.