- ಕ್ವಾರಂಟೈನ್‍ನಲ್ಲಿರಬೇಕಾದ ವ್ಯಕ್ತಿಗಳಿ ಗೆ ವೈದ್ಯರ ಸಲಹೆ ಮೇರೆಗೆ ಉಚಿತ ಔಷಧಿ ವಿತರಣೆ
ಪಾವಗಡ: – ನೂತನವಾಗಿ ಪತ್ತೆಯಾದ ಕೋವಿಡ್ ಸೋಂಕು ತಗುಲಿದ ವ್ಯಕ್ತಿಯು ಮನೆಯಲ್ಲಿಯೇ ಔಷಧೋಪಚಾರವನ್ನು ಪಡೆಯುವಂತಹ (Home Quarantine) ವ್ಯಕ್ತಿಗಳಿಗೆ ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಉಚಿತವಾಗಿ ಔಷಧಿಗಳ ಕಿಟ್‍ನ್ನು ನೀಡಲಾಗುತ್ತದೆ. ಈ ಔಷಧಿಗಳ ಕಿಟ್‍ಗಳನ್ನು ಖರೀದಿಸಿ ಬಡ ರೋಗಿಗಳಿಗೆ ಉಚಿತವಾಗಿ ವಿತರಿಸಲು ನಮ್ಮ ಸಂಸ್ಥೆ ಮುಂದೆ ಬಂದಿದೆ ಎಂದು ಪೂಜ್ಯ ಸ್ವಾಮಿ ಜಪಾನಂದಜಿ ರವರು ವಿವರಿಸಿದ್ದಾರೆ. ಈ ಯೋಜನೆಯ ಮೂಲಕ ಹೋಂ ಕ್ವಾರಂಟೈನ್‍ನಲ್ಲಿರಬೇಕಾದ ವ್ಯಕ್ತಿಗಳು ವೈದ್ಯರ ಸಲಹೆ ಮೇರೆಗೆ ಈ ಔಷಧಿಗಳನ್ನು ಉಚಿತವಾಗಿ ಪಡೆಯುವ ಅವಕಾಶವನ್ನು ಮಾಡಲಾಗಿದೆ. ಈ ಸಮಯೋಚಿತ ಯೋಜನೆಯಿಂದ ನೂರಾರು ಬಡ ರೋಗಿಗಳಿಗೆ ಸಂಜೀವಿನಿಯಂತೆ ಸಹಾಯ ದೊರಕುತ್ತಿರುವುದು ಖಂಡಿತವಾಗಿ ಪಾವಗಡ ತಾಲ್ಲೂಕಿನಲ್ಲಿ ಮತ್ತೊಂದು ವಿನೂತನವಾದ ಯೋಜನೆ ಎನ್ನಬಹುದು. ಈ ಯೋಜನೆಯನ್ನು ತಾಲ್ಲೂಕು ವೈದ್ಯಾಧಿಕಾರಿಗಳ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಆರಂಭಿಸಲಾಗುತ್ತಿದೆ ಎಂದು ಪೂಜ್ಯ ಸ್ವಾಮಿ ಜಪಾನಂದಜೀ ರವರು ತಿಳಿಸಿದ್ದಾರೆ.
ಈಗಾಗಲೇ ಪಕ್ಕದ ಆಂಧ್ರ ಪ್ರದೇಶದಲ್ಲಿ ಸರಿಸುಮಾರು 20000 ಈ ತೆರನಾದ ಔಷಧಿ ಕಿಟ್‍ಗಳನ್ನು ಹೋಂ ಕ್ವಾರಂಟೈನ್‍ನಲ್ಲಿ ಇರುವ ಸೋಂಕಿತರಿಗೆ ಯಶಸ್ವಿಯಾಗಿ ನೀಡಲಾಗಿದೆ. ಈ ಯೋಜನೆಯಿಂದ ಸೋಂಕಿತರು ಔಷಧಿಗಳಿಗಾಗಿ ವೃಥಾ ಸುತ್ತುವುದು ಹಾಗೂ ನಾಗರಿಕರ ಸಂಪರ್ಕಕ್ಕೆ ಬರುವುದು ತಪ್ಪುವಂತಾಗಿದೆ. ಇದೊಂದು ಮಹತ್ತರವಾದ ಹಾಗೂ ಸಮಯೋಚಿತವಾದ ಯೋಜನೆಯಾಗಿದೆ ಎಂದು ಈ ಯೋಜನೆಗಳ ರೂವಾರಿ ಪೂಜ್ಯ ಸ್ವಾಮಿ ಜಪಾನಂದಜೀ ರವರು ತಿಳಿಸಿದ್ದಾರೆ. ಪಾವಗಡದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಕಿರಣ್ ರವರ ಮಾರ್ಗದರ್ಶನದಲ್ಲಿ ಈ ಯೋಜನೆಯು ಅನುಷ್ಠಾನರೂಪಕ್ಕೆ ಬರಲಿದೆ. ಈ ಔಷಧಿ ಕಿಟ್‍ಗಳನ್ನು ಸಂಪೂರ್ಣ ಉಚಿತವಾಗಿ ಕೋವಿಡ್ ಸೋಂಕಿತರಿಗೆ ನೀಡಲು ಸರ್ವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಔಷಧಿ ಕಿಟ್‍ಗಳು ಕೇವಲ ಹೋಂ ಕ್ವಾರಂಟೈನ್‍ನಲ್ಲಿರುವ ಸೋಂಕಿತರಿಗೆ ಮಾತ್ರ ಎಂಬುದನ್ನು ಪೂಜ್ಯ ಸ್ವಾಮೀಜಿಯವರು ತಿಳಿಸಿರುತ್ತಾರೆ. ಸರಿಸುಮಾರು ರೂ.500/- ಮೌಲ್ಯದ ಈ ಕಿಟ್ ಸೋಂಕಿತರಿಗೆ ಉಚಿತವಾಗಿ ದೊರೆಯುವಂತೆ ಮಾಡಿರುವುದು ನಿಜಕ್ಕೂ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ಅತ್ಯಂತ ಮಹತ್ತರವಾದ ಯೋಜನೆ ಎನ್ನಬಹುದು. ಈ ಔಷಧಿ ಚೀಲವನ್ನು ಉಚಿತವಾಗಿ ಪಡೆಯಲಿಚ್ಚಿಸುವವರು ಎಲ್ಲ ರೀತಿಯ ದಾಖಲೆಗಳೊಂದಿಗೆ ಡಾ.ಜಿ.ಕಿರಣ್, ಆಡಳಿತ ವೈದ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ, ಪಾವಗಡ ಇವರಿಂದ ಪಡೆಯಬಹುದು. ದಾಖಲೆಗಳು ಹಾಗೂ ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿಯೊಂದಿಗೆ ಆಡಳಿತ ವೈದ್ಯಾಧಿಕಾರಿಗಳಲ್ಲಿ ಸಂಪರ್ಕಿಸಿ ಅವರ ಮಾರ್ಗದರ್ಶನದಲ್ಲಿ ಔಷಧಿ ಚೀಲವನ್ನು ಪಡೆಯಬಹುದು. ಉತ್ಕೃಷ್ಟ ಮಟ್ಟದ ಹಾಗೂ ಗುಣಮಟ್ಟದ ಔಷಧಿಗಳನ್ನು ನೀಡಲಾಗುತ್ತಿದೆ. ಈ ಯೋಜನೆ ಇನ್ಫೋಸಿಸ್ ಫೌಂಡೇಷನ್ ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮದ ಸಹಕಾರದೊಂದಿಗೆ ನೀಡಲಾಗುತ್ತಿದೆ. ಕೋವಿಡ್ ಸೋಂಕಿತರು ಈ ವ್ಯವಸ್ಥೆಯ ಪೂರ್ಣ ಉಪಯೋಗವನ್ನು ಪಡೆದುಕೊಂಡು ನಾಡಿನ ರಕ್ಷಣೆಯನ್ನು ಮಾಡತಕ್ಕದ್ದು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೋರಿಕೊಳ್ಳುವುದೇನೆಂದರೆ ಸಾಮಾಜಿಕ ಅಂತರ, ಮುಖಗವಸು ಹಾಗೂ ಶುಚಿತ್ವವನ್ನು ಕಾಪಾಡಿಕೊಂಡಲ್ಲಿ ಕುಟುಂಬ, ಊರು, ಸಮಾಜ, ರಾಜ್ಯ ಹಾಗೂ ದೇಶ ಈ ಮಹಾಮಾರಿಯಿಂದ ದೂರವಾಗುವುದರಲ್ಲಿ ಸಂದೇಹವಿಲ್ಲ. ಯುವ ಜನತೆ ಈ ನಿಟ್ಟಿನಲ್ಲಿ ನಾಗರಿಕರಂತೆ ವರ್ತಿಸಿ ವಿವೇಚನೆಯಿಂದ ಸಮಾಜದ ರಕ್ಷಣೆಯನ್ನು ಮಾಡಬೇಕೆಂದು ಈ ಮೂಲಕ ಕೋರಿಕೊಳ್ಳುತ್ತೇವೆ. ಇಂದು ಬೆಳಿಗ್ಗೆ 10.30ಕ್ಕೆ ಪಾವಗಡದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ತಹಶೀಲ್ದಾರ್ ಶ್ರೀ ಕೆ.ಆರ್.ನಾಗರಾಜು, ಗ್ರೇಡ್2 ತಹಶೀಲ್ದಾರ್ ಶ್ರೀ ಎನ್.ಮೂರ್ತಿ, ಸರ್ಕಾರಿ ಸಹಾಯಕ ಅಭಿಯೋಜಕರಾದ ಶ್ರೀ ವಿ.ಮಂಜುನಾಥ್, ಶ್ರಿ ರಾಜಗೋಪಾಲ್, ಶ್ರೀ ಬಸವರಾಜು ಮತ್ತು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ತಿರುಪತಯ್ಯ ಮತ್ತು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಕಿರಣ್ ರವರು ಶ್ರೀ ಸ್ವಾಮಿ ಜಪಾನಂದಜೀ ರವರಿಂದ ಸೋಂಕಿತರಿಗೆ ವಿತರಿಸಲು ವಿದ್ಯುಕ್ತವಾಗಿ ಔಷಧಿಗಳನ್ನು ಸ್ವೀಕರಿಸಿದರು. *************ಪಾವಗಡದ ಕಿರಿಯ ವಕೀಲರುಗಳಿಗೆ ದಿನಸಿ ಕಿಟ್ಟುಗಳ ವಿತರಣೆ :ಇದೇ ದಿನ ಮಧ್ಯಾನ್ಹ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಲಾಕ್‍ಡೌನ್ ಪರಿಣಾಮವಾಗಿ ತೀವ್ರ ಸಂಕಷ್ಟಕ್ಕೆ ಒಳಗಾದ ತಾಲ್ಲೂಕಿನ ಆಯ್ದ ವಕೀಲರುಗಳಿಗೆ ದವಸ ಧಾನ್ಯದ ಕಿಟ್‍ನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ನ್ಯಾಯಾಧೀಶರಾದ ಶ್ರೀ ವಿ.ಹನುಮಂತಪ್ಪ ರವರು ಮಾತನಾಡಿ ಕಳೆದ ವಾರ ನಾನು ಮತ್ತು ವಕೀಲರ ಸಂಘದ ಅಧ್ಯಕ್ಷರು, ಎ.ಪಿ.ಪಿ. ಬಂದು ಶ್ರೀ ಸ್ವಾಮೀಜಿಯವರಲ್ಲಿ ವಕೀಲರ ಸಂಕಷ್ಟವನ್ನು ವಿವರಿಸಿದಾಗ ತತ್‍ಕ್ಷಣ ಸ್ವಾಮೀಜಿಯವರು ಸ್ಪಂದಿಸಿ ತಾವು ವಕೀಲರ ಸಂಕಷ್ಟದಲ್ಲಿ ಭಾಗಿಯಾಗಿ ಕೈಲಾದ ಸಹಾಯವನ್ನು ಮಾಡುವುದಾಗಿ ತಿಳಿಸಿದ್ದನ್ನು ಬಹಳ ಅಭಿಮಾನದಿಂದ ಸ್ಮರಿಸಿದರು. ಕಳೆದ ವರ್ಷವೂ ಇಂತಹುದೇ ಸಂದರ್ಭದಲ್ಲಿ ವಕೀಲರ ಸಂಕಷ್ಟಕ್ಕೆ ಸ್ಪಂದಿಸಿ ಆರ್ಥಿಕ ಸಹಾಯ ಮತ್ತು ದವಸ ಧಾನ್ಯದ ಸಹಾಯವನ್ನು ದೊರಕಿಸಿದ್ದನ್ನು ತುಂಬಾ ಕೃತಜ್ಞತೆಯಿಂದ ಸ್ಮರಿಸಿದರು. ಶ್ರೀ ಸ್ವಾಮೀಜಿಯವರ ಜೊತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬಡವರು, ಬಲ್ಲಿದರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಎಳೆ ಎಳೆಯಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನ ನ್ಯಾಯಾಧೀಶರಾದ ಶ್ರೀ ಜಗದೀಶ್ ಬಿಸೆರೊಟ್ಟಿ ರವರು ಕರ್ನಾಟಕ ಸರ್ಕಾರ ಹೊರಡಿಸಿರುವ ಲಸಿಕಾ ಕಾರ್ಯಕ್ರಮದ ಆದೇಶವನ್ನು ವಿವರಿಸಿ ಅದರಲ್ಲಿ ಆದ್ಯತೆಯ ಮೇರೆಗೆ ವಕೀಲರನ್ನು ಒಳಪಡಿಸಿರುತ್ತಾರೆ. ವಕೀಲರು ತಪ್ಪದೇ ಲಸಿಕೆಯನ್ನು ಪಡೆಯಬೇಕೆಂದು ಸೂಚಿಸಿದರು. ಅಪರ ನ್ಯಾಯಾಧೀಶರಾದ ಶ್ರೀ ಭರತ್ ವೈ ಕರಗುದರಿ ರವರು ವಕೀಲರು ತಂಡಗಳನ್ನು ರಚಿಸಿಕೊಂಡು ಪಟ್ಟಣದಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಕೊರೊನಾ ರೋಗದ ಬಗ್ಗೆ ಅರಿವು ಮೂಡಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಪ್ರೇರೇಪಿಸಬೇಕೆಂದು, ಕೋವಿಡ್ ಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕೆಂದು ಕೋರಿದರು. ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಆಂಜನೇಯಲು ರವರು ವಂದನಾರ್ಪಣೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕರಾದ ಶ್ರೀ ವಿ.ಮಂಜುನಾಥ, ಹಿರಿಯ ವಕೀಲರಾದ ಶ್ರೀ ಎಂ.ಭಗವಂತಪ್ಪ, ಶ್ರೀ ಯಜ್ಞನಾರಾಯಣ ಶರ್ಮ ರವರು ಮತ್ತು ಆಶ್ರಮದ ಹಿತೈಷಿಗಳಾದ ಶ್ರೀ ಜಿ.ಸುದೇಶ್ ಬಾಬು, ವಿವೇಕ ಬ್ರಿಗೇಡಿನ ಶ್ರೀ ಲೋಕೇಶ್ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.