//ಆತ್ಮಸಾಕ್ಷಿ @ ಅಡ್ಡಮತದ ಜನಕ ಕಾಂಗ್ರೆಸ್: ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ//
ನೀಲಂ ಸಂಜೀವ ರೆಡ್ಡಿ ಪ್ರಕರಣ ಉಲ್ಲೇಖಿಸಿ ಕಾಂಗ್ರೆಸ್ ಅನ್ನು ಕುಟುಕಿದ ಮಾಜಿ ಮುಖ್ಯಮಂತ್ರಿ
ನಮ್ಮ ಶಾಸಕರಿಗೆ ಧಮ್ಕಿ ಹಾಕಿ ಆಮಿಷ ಒಡ್ಡಿದ್ದ ಕಾಂಗ್ರೆಸ್ ನಾಯಕರು; ಹೆಚ್ಡಿಕೆ ಗಂಭೀರ ಆರೋಪ
ಬೆಂಗಳೂರು: ಚುನಾವಣೆ ವ್ಯವಸ್ಥೆಯಲ್ಲಿ ಅಡ್ಡ ಮತದಾನಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ ಎಂದು ಟೀಕಾಪ್ರಹಾರ ನಡೆಸಿದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು; ದೇಶ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷ ದೊಡ್ಡ ಕಳಂಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡ ಮತದಾನ ಮಾಡಿಸಿದ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು; ಆತ್ಮಸಾಕ್ಷಿ ಮತದಿಂದ ಅಲ್ಲ, ಅಡ್ಡ ಮತದಾನದಿಂದ ಕಾಂಗ್ರೆಸ್ ಪಕ್ಷವು ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಇದು ಪ್ರಜಾಪ್ರಭುತ್ವ, ಸಂವಿಧಾನ ಎಂದೆಲ್ಲ ಭಜನೆ ಮಾಡುವ ಪಕ್ಷ ಮಾಡುವ ಕೆಲಸವೇ ಎಂದು ಕೇಳಿದರು.
ಆತ್ಮಸಾಕ್ಷಿ ಮತ ಎಂದರೆ ಅಡ್ಡಮತ:
ಆತ್ಮಸಾಕ್ಷಿ ಮತ ಎನ್ನುವ ಪದವನ್ನು ದೇಶದಲ್ಲಿ ಮೊದಲು ಹುಟ್ಟು ಹಾಕಿದ್ದೇ ಕಾಂಗ್ರೆಸ್. ಆತ್ಮಸಾಕ್ಷಿ ಮತ ಎಂದರೆ ಅಡ್ಡಮತ ಎಂದೇ ಅರ್ಥ. 1969ರಲ್ಲಿ ಅಂದಿನ ಪ್ರಧಾನಿಗಳಾದ ಇಂದಿರಾಗಾಂಧಿ ಅವರು ತಮ್ಮ ಕೈಗೊಂಬೆ ರಾಷ್ಟ್ರಪತಿ ಬೇಕೆಂದು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವರೆಡ್ಡಿ ಅವರ ವಿರುದ್ಧ ವಿ.ವಿ.ಗಿರಿ ಅವರನ್ನು ಕಣಕ್ಕೆ ಇಳಿಸಿ ಆತ್ಮಸಾಕ್ಷಿ ಮತ ಹಾಕುವಂತೆ ಕರೆ ನೀಡಿದ್ದರು. ಅಂದು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವರೆಡ್ಡಿ ಅವರು ಆತ್ಮಸಾಕ್ಷಿ ಅಲಿಯಾಸ್ ಅಡ್ಡಮತಗಳಿಂದ ಸೋತರು. ಅಡ್ಡಮತ ಪರಿಕಲ್ಪನೆಯ ಜನಕನೇ ಕಾಂಗ್ರೆಸ್ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ನಾವು ಮತ್ತಷ್ಟು ಗಟ್ಟಿಯಾಗಿದ್ದೇವೆ:
ರಾಜ್ಯಸಭೆ ಚುನಾವಣೆಯ ಮೂಲಕ ಜೆಡಿಎಸ್-ಬಿಜೆಪಿ ಮೈತ್ರಿ ಮತ್ತಷ್ಟು ಬಲವಾಗಿದೆ. ಪ್ರಜಾಪ್ರಭುತ್ವ ದ್ರೋಹಿಗಳು, ಸಂವಿಧಾನ ದ್ರೋಹಿಗಳು ಯಾರು? ಎಂಬುದು ಜಗಾಜ್ಜಾಹೀರಾಗಿದೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಹಾರಿ ಅಲ್ಲಿ ಅಧಿಕಾರ ಅನುಭವಿಸಿದವರು ಈಗ ಅದೇ ಬಿಜೆಪಿಗೆ ಟೋಪಿ ಹಾಕಿ ಅಡ್ಡ ಮತದಾನ ಮಾಡಿ ದ್ರೋಹ ಎಸಗಿದ್ದಾರೆ. ಅವರು ಏಳೆಂಟು ತಿಂಗಳಿಂದ ಏನೇನು ಮಾಡುತ್ತಿದ್ದರು ಎಂದು ಮಾಧ್ಯಮಗಳೇ ತೋರಿಸಿವೆ. ಇದರಿಂದ ಬಿಜೆಪಿಗೇನೂ ಶಾಕ್ ಆಗಿಲ್ಲ, ನನಗೂ ಆಗಿಲ್ಲ. ಈ ಚುನಾವಣೆ ಇರಲಿ, ಲೋಕಸಭೆ ಚುನಾವಣೆಯಲ್ಲಿ ಅಸಲಿ ಆಟವಿದೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಜೆಡಿಎಸ್ ಪಕ್ಷದ 19 ಶಾಸಕರು ಒಟ್ಟಾಗಿದ್ದೇವೆ. ಎಲ್ಲರೂ ಬಂದು ಮೈತ್ರಿಕೂಟದ ಅಭ್ಯರ್ಥಿ ಡಿ.ಕುಪೇಂದ್ರ ರೆಡ್ಡಿ ಅವರಿಗೆ ಮತ ಹಾಕಿದ್ದಾರೆ. ನಮ್ಮ ಶಾಸಕರನ್ನು ಸೆಳೆಯುವ ಕಾಂಗ್ರೆಸ್ ತಂತ್ರ ಫಲಿಸಲಿಲ್ಲ ಎಂದು ಅವರು ಹೇಳಿದರು.
ಅಷ್ಟೇ ಅಲ್ಲದೆ, ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ನಮ್ಮ ಅಭ್ಯರ್ಥಿಯನ್ನು ಹೆದರಿಸುವ, ಅವರ ವಿರುದ್ಧ FIR ಹಾಕಿಸುವ ರಣಹೇಡಿ ಕೆಲಸವನ್ನೂ ಮಾಡಿದ್ದಾರೆ. ಜತೆಗೆ, ಈ ಸರಕಾರ ಬಂದಾಗಿನಿಂದ ಜೆಡಿಎಸ್ ಪಕ್ಷದ 12 ಕ್ಕೂ ಹೆಚ್ಚು ಶಾಸಕರು ತಮ್ಮ ಕಡೆ ಬಂದು ಬಿಟ್ಟಿದ್ದಾರೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದರು. ನಮ್ಮ ಶಾಸಕರು ಕ್ಷೇತ್ರದ ಕೆಲಸಕ್ಕಾಗಿ ಪತ್ರ ತೆಗೆದುಕೊಂಡು ಹೋದರೆ, “ನೋಡಿ ನೀವು ಈಗ ಹದಿಮೂರನೇಯವರು. ನಮ್ಮ ಪಕ್ಷಕ್ಕೆ ಬಂದರೆ ನಿಮ್ಮ ಕೆಲಸಗಳೆಲ್ಲಾ ಆಗುತ್ತವೆ. ಆಲೋಚನೆ ಮಾಡಿ” ಎಂದು ಕಳೆದ ಏಳು ತಿಂಗಳಿಂದ ಆಮಿಷ ಒಡ್ದುತ್ತಲೇ ಇದ್ದಾರೆ ಎನ್ನುವುದು ಜಗಜ್ಜಾಹೀರು ಆಗಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ಮೈತ್ರಿ ಅಭ್ಯರ್ಥಿ ಡಿ.ಕುಪೇಂದ್ರ ರೆಡ್ಡಿ ಅವರಿಗೆ ಮತ ಹಾಕಿದ ಎರಡೂ ಪಕ್ಷಗಳ ಶಾಸಕರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸಿದ ಮಾಜಿ ಮುಖ್ಯಮಂತ್ರಿಗಳು; ಕಾಂಗ್ರೆಸ್ ಪಕ್ಷದ ಧಮ್ಕಿ ರಾಜಕಾರಣವನ್ನು ನಮ್ಮ ಶಾಸಕರು ಸಡ್ಡು ಹೊಡೆದು ನಿಂತಿದ್ದಾರೆ. ಅವರು ಒಡ್ಡಿದ್ದ ಆಮಿಷಗಳನ್ನು ಕಾಲ ಕಸದಂತೆ ತಿರಸ್ಕರಿಸಿದ್ದಾರೆ ಎಂದು ಹೇಳಿದರು.
ಶಾಸಕ ಶರಣುಗೌಡ ಕಂದಕೂರ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ ಅವರು; ಕಂದಕೂರ ಕುಟುಂಬ ಕಳೆದ ನಲವತ್ತು ವರ್ಷಗಳಿಂದ ಪಕ್ಷಕ್ಕೆ ನಿಷ್ಠವಾಗಿದೆ. ನಾಗನಗೌಡ ಕಂದಕೂರ ಅವರು ದೇವೆಗೌಡರ ಒಡನಾಡಿ. ಅವರಿಬ್ಬರ ಸಂಬಂಧ ಎಂಥದ್ದು ಎನ್ನುವುದು ಎಲ್ಲರಿಗೂ ಗೊತ್ತಿದೆ. ಶರಣುಗೌಡ ಕಂದಕೂರ ನನ್ನದು ತಂದೆ ಮಗನ ಬಾಂಧವ್ಯ. ಅವರ ಮನಸ್ಸು ನನಗೆ ಗೊತ್ತಿಲ್ಲವೇ? ಎಂದರು.