IMG 20240607 WA0032 scaled

ಕಾಂಗ್ರೆಸ್ : ರಾಜ್ಯ ಹಾಗೂ ಜನರ ಧ್ವನಿಯಾಗಿ ಕೆಲಸ ಮಾಡಲು, ಮತ ಹಾಕದವರ ಮನ ಗೆಲ್ಲಲು ಸಲಹೆ….!

POLATICAL STATE

*ರಾಜ್ಯ ಹಾಗೂ ಜನರ ಧ್ವನಿಯಾಗಿ ಕೆಲಸ ಮಾಡಲು, ಮತ ಹಾಕದವರ ಮನಗೆಲ್ಲಲು ರಾಹುಲ್ ಗಾಂಧಿ ಸಲಹೆ: ಡಿಸಿಎಂ ಡಿ.ಕೆ. ಶಿವಕುಮಾರ್*

*ಬೆಂಗಳೂರು, ಜೂನ್ 07 : *“ನೂತನ ಸಂಸದರು ಜನರ ಧ್ವನಿಯಾಗಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ಮಲತಾಯಿ ಧೋರಣೆ ವಿರುದ್ಧ ಧ್ವನಿ ಎತ್ತಬೇಕು. ಯಾರೆಲ್ಲ ಕಾಂಗ್ರೆಸ್ ಗೆ ಮತ ಹಾಕದವರ ಮನ ಗೆಲ್ಲಬೇಕು ಎಂದು ರಾಹುಲ್ ಗಾಂಧಿ ಅವರು ಸಲಹೆ ನೀಡಿದರು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ರಾಹುಲ್ ಗಾಂಧಿ ಅವರ ಭೇಟಿ ಬಳಿಕ ಶಾಂಗ್ರಿಲಾ ಹೊಟೇಲ್ ನಲ್ಲಿ ಶಿವಕುಮಾರ್ ಅವರು ಶುಕ್ರವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;

“ರಾಹುಲ್ ಗಾಂಧಿ ಅವರು ಕರ್ನಾಟಕದ 28 ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಜತೆ ಚರ್ಚೆ ಮಾಡಿದರು. ಲೋಕಸಭೆಗೆ ಆಯ್ಕೆಯಾದ 9 ಸಂಸದರಿಗೆ ಅಭಿನಂದನೆ ಸಲ್ಲಿಸಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ಮೊದಲ ಬಾರಿಗೆ ಗೆದ್ದವರು ಕ್ಷೇತ್ರದಿಂದ ದೂರ ಉಳಿಯಬಾರದು. ಬೆಂಗಳೂರು ಹಾಗೂ ದೆಹಲಿಗಿಂತ ಹೆಚ್ಚಾಗಿ ಕ್ಷೇತ್ರದ ಜನರ ಸಂಪರ್ಕದಲ್ಲಿ ಇರಬೇಕು. ನಮ್ಮದೇ ಸರ್ಕಾರ ರಾಜ್ಯದಲ್ಲಿದ್ದು, ಅದರ ನೆರವು ಪಡೆದು ಜನರ ಪರವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಈ ಹಿಂದೆ ಇದ್ದ ಸಂಸದರ ಪೈಕಿ ಒಬ್ಬರ ಹೊರತಾಗಿ ಉಳಿದವರು ರಾಜ್ಯದ ಪರವಾಗಿ ಧ್ವನಿ ಎತ್ತಲಿಲ್ಲ. ತೆರಿಗೆ ಅನ್ಯಾಯ, ಕಳಸಾ ಬಂಡೂರಿ, ಮೇಕೆದಾಟು, ಭದ್ರ ಮೇಲ್ದಂಡೆ ಯೋಜನೆ ಅನುದಾನ, ಹಣಕಾಸು ಆಯೋಗದ ಅನುದಾನ, ಫೆರಿಫೆರಲ್ ರಿಂಗ್ ರಸ್ತೆ ಸೇರಿದಂತೆ ರಾಜ್ಯಕ್ಕೆ ಬರಬೇಕಾದ ಅನುದಾನ ಹಾಗೂ ಯೋಜನೆಗಳು ಹಾಗೂ ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಧ್ವನಿ ಎತ್ತಬೇಕು. ರಾಜ್ಯಕ್ಕೆ ಹಾಗೂ ಮತದಾರರಿಗೆ ನ್ಯಾಯ ಒದಗಿಸಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದರು.

ಪರಾಭವಗೊಂಡ ಅಭ್ಯರ್ಥಿಗಳಿಗೂ ಧೈರ್ಯ ತುಂಬಿದ ರಾಹುಲ್ ಗಾಂಧಿ ಅವರು, ನೀವು ಸೋತರೂ ಜನರ ಮಧ್ಯೆ ಇರಬೇಕು ಹಾಗೂ ನಮಗೆ ಮತ ನೀಡದವರ ಹೃದಯ ಗೆಲ್ಲಬೇಕು ಎಂದು ರಾಹುಲ್ ಗಾಂಧಿ ಅವರು ನಮಗೆ ಮಾರ್ಗದರ್ಶನ ನೀಡಿದ್ದಾರೆ.

ನಂತರ ಕೆಲ ಸಚಿವರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ಅವರು, ಸಚಿವರ ಕ್ಷೇತ್ರದಲ್ಲಿ ಚುನಾವಣೆ ಫಲಿತಾಂಶ ಏನಾಯಿತು ಎಂದು ಚರ್ಚೆ ಮಾಡಿದರು. ರಾಜ್ಯದಲ್ಲಿ ಇನ್ನು 5-6 ಸೀಟುಗಳ ನಿರೀಕ್ಷೆ ಇತ್ತು. ಎಲ್ಲರ ಮೇಲೂ ಹೊಣೆಗಾರಿಕೆ ಇರಬೇಕು. ಎಲ್ಲೆಲ್ಲಿ ಹಿನ್ನಡೆಯಾಗಿದೆ ಅಲ್ಲಿ ಸರಿಪಡಿಸಿಕೊಳ್ಳಬೇಕು. ಮತ್ತೆ ಜನರ ಬಳಿಗೆ ಹೋಗಬೇಕು ಎಂದು ಜವಾಬ್ದಾರಿ ನೀಡಿದ್ದಾರೆ.

ಇನ್ನು ಎಲ್ಲ ನಾಯಕರ ಜತೆ ಚರ್ಚೆ ಮಾಡಿ ಕಾರ್ಯಸೂಚಿ ಸಿದ್ಧಪಡಿಸುವಂತೆ ನನಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ. ಇನ್ನು ಶನಿವಾರ (ಜೂನ್ 8) ನಡೆಯಲಿರುವ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಗೆ ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದು, ಈ ಸಭೆಯಿಂದ ಮರಳಿದ ನಂತರ ಮುಂದಿನ ವಾರ ನಮ್ಮ ನಾಯಕರ ಜತೆ ಚರ್ಚೆ ಮಾಡುತ್ತೇವೆ. ಕಲ್ಯಾಣ ಕರ್ನಾಟಕ ನಮಗೆ ಶಕ್ತಿಯಾಗಿದ್ದು, ಖರ್ಗೆ ಅವರು 371ಜೆ ಮೂಲಕ ನಮಗೆ ಶಕ್ತಿ ತುಂಬಿದ್ದು ಅದರಿಂದ 5ಕ್ಕೆ 5 ಕ್ಷೇತ್ರ ಗೆದ್ದಿದ್ದೇವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕಾರ್ಯಯೋಜನೆ ರೂಪಿಸುತ್ತೇವೆ.IMG 20240607 WA0027

*ಕಾನೂನಿಗೆ ಗೌರವಕೊಟ್ಟು ರಾಹುಲ್ ಗಾಂಧಿ ವಿಚಾರಣೆಗೆ ಹಾಜರು:*

ರಾಹುಲ್ ಗಾಂಧಿ ಅವರು ನ್ಯಾಯಾಲಯ ಹಾಗೂ ಕಾನೂನಿಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗಿದ್ದಾರೆ. ಬಿಜೆಪಿ ನಾಯಕರಾದ ಯತ್ನಾಳ್ ಅವರೇ ಸಿಎಂ ಹುದ್ದೆಗೆ 2,500 ಕೋಟಿ ಹಾಗೂ ಮಾಧ್ಯಮಗಳಲ್ಲಿ ಬಂದಿದ್ದ ವರದಿ ಅನುಸಾರ ಸರ್ಕಾರಿ ಹುದ್ದೆಗೆ ಹಿಂದಿನ ಸರ್ಕಾರದ ರೇಟ್ ಕಾರ್ಡ್ ಅನ್ನು ಜಾಹೀರಾತು ರೂಪದಲ್ಲಿ ಕೊಟ್ಟಿದ್ದೆವು. ಈ ವಿಚಾರದಲ್ಲಿ ರಾಹುಲ್ ಗಾಂಧಿ ಅವರಿಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಆದರೂ ಉದ್ದೇಶಪೂರ್ವಕವಾಗಿ ಅವರನ್ನು ಎಳೆದುತರಲಾಗಿದೆ.

ಬಿಜೆಪಿಯವರಲ್ಲಿ ದ್ವೇಷ ಹಾಗೂ ಸೇಡು ತುಂಬಿ ತುಳುಕುತ್ತಿದೆ. ಹೀಗಾಗಿ ಸುಳ್ಳು ಪ್ರಕರಣ ದಾಖಲಿಸಿದ್ದು, ಅದಕ್ಕೆ ಈ ಪ್ರಕರಣವೇ ಉದಾಹರಣೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಆಗಮಿಸಿ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಡಿ.ಕೆ. ಸುರೇಶ್ ಅವರು ಜಾಮೀನು ನೀಡಿದ್ದಾರೆ. ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬಂದು ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು.

*ಪರಿಷತ್ ಚುನಾವಣೆಯಲ್ಲಿ 3 ಕ್ಷೇತ್ರ ಗೆಲುವು:*

ಆರು ವಿಧಾನ ಪರಿಷತ್ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದು, ಅವರಿಗೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.

*ಪ್ರಶ್ನೋತ್ತರ:*

ಸಚಿವರ ಕ್ಷೇತ್ರಗಳಲ್ಲೇ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ ಕೊಡಿಸಲು ಆಗಿಲ್ಲ. ಈ ವಿಚಾರ ಸಭೆಯಲ್ಲಿ ಚರ್ಚೆಯಾಯಿತೇ ಎಂದು ಕೇಳಿದಾಗ, “ರಾಹುಲ್ ಗಾಂಧಿ ಅವರು ಈ ವಿಚಾರವಾಗಿ ಎಲ್ಲಾ ಸಚಿವರ ಜತೆ ಚರ್ಚೆ ಮಾಡಿದ್ದಾರೆ. ಚುನಾವಣೆ ಫಲಿತಾಂಶದ ಬಗ್ಗೆ ಹೈಕಮಾಂಡ್ ನಾಯಕರು ವರದಿ ಕೇಳಿದ್ದು, ನಾವು ಎಲ್ಲಾ ನಾಯಕರ ಜತೆ ಚರ್ಚೆ ಮಾಡಿ ವರದಿ ಸಲ್ಲಿಸುತ್ತೇವೆ” ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆಯಾಯಿತೇ ಎಂದು ಕೇಳಿದಾಗ, “ಅದರ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಚುನಾವಣೆ ಪ್ರಕ್ರಿಯೆ, ಫಲಿತಾಂಶ ಹಾಗೂ ಭವಿಷ್ಯದ ಕಾರ್ಯಯೋಜನೆ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ” ಎಂದರು.

ರಾಹುಲ್ ಗಾಂಧಿ ಸಿಎಂ ರಾಜೀನಾಮೆ ಪಡೆಯಲು ಬಂದಿದ್ದಾರಾ ಎಂಬ ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಮೊದಲು ಅವರ ಪಕ್ಷದ ಬಗ್ಗೆ ಮಾತನಾಡಲಿ. ನಿಗಮ ಮಂಡಳಿಗಳಲ್ಲಿ ಹಣ ದುರುಪಯೋಗ ಪ್ರಕರಣ ಈ ಹಿಂದೆಯೂ ಆಗಿದೆ. ಈಗ ಆತ್ಮಹತ್ಯೆಯಿಂದಾಗಿ ಪ್ರಕರಣ ಈಚೆ ಬಂದಿದೆ. ಬಿಜೆಪಿ ಅವಧಿಯಲ್ಲಿನ ಪ್ರಕರಣಗಳು ಇವೆ. ಸಚಿವರು ಈಗಾಗಲೇ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರವಾಗಬಾರದು ಎಂದು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ನಾನು ಹಾಗೂ ಮುಖ್ಯಮಂತ್ರಿಗಳು ಈ ಬಗ್ಗೆ ಸಚಿವರ ಜತೆ ಚರ್ಚೆ ಮಾಡಿದ್ದು, ಅವರು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಯಾವುದೇ ತನಿಖೆ ಬೇಕಾದರೂ ನಡೆಯಲಿ ಎಂದು ತಿಳಿಸಿದ್ದಾರೆ” ಎಂದರು.

ಸಿಬಿಐ ತನಿಖೆ ಆಗ್ರಹಿಸುವ ಬಗ್ಗೆ ಕೇಳಿದಾಗ, “ಈ ಪ್ರಕರಣವನ್ನು ನಾವು ಸಿಬಿಐಗೆ ವಹಿಸುವ ಪ್ರಶ್ನೆಯಿಲ್ಲ. ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಅಕ್ರಮ ನಡೆದರೆ ರಾಜ್ಯ ಸರ್ಕಾರದ ಅನುಮತಿ ಇಲ್ಲದಿದ್ದರೂ ತನಿಖೆ ನಡೆಸಲು ಸಿಬಿಐಗೆ ಅವಕಾಶವಿದೆ. ನಾವು ಅವರ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದ್ದೇವೆ” ಎಂದರು.

ಜೆಡಿಯು ಹಾಗೂ ಟಿಡಿಪಿ ವಿಶೇಷ ಸ್ಥಾನಮಾನ ವಿಚಾರವಾಗಿ ಬೇಡಿಕೆ ಇಟ್ಟಿದ್ದು, ಇಂಡಿಯಾ ಮೈತ್ರಿಕೂಟ ಅವರ ಬೇಡಿಕೆಗೆ ಒಪ್ಪಿಗೆ ನೀಡುವುದೇ ಎಂದು ಕೇಳಿದಾಗ, “ಕಾಂಗ್ರೆಸ್ ಪಕ್ಷ ಈಗಾಗಲೇ ಆಂಧ್ರ ಪ್ರದೇಶದಲ್ಲಿ ನಾವು ಅಧಿಕಾರಕ್ಕೆ ಬಂದರೆ ವಿಶೇಷ ಸ್ಥಾನಮಾನ ನೀಡುವುದಾಗಿ ಘೋಷಣೆ ಮಾಡಿದ್ದೆವು. ನಾವು ಕೊಟ್ಟಿರುವ ಮಾತಿಗೆ ನಾವು ಬದ್ಧರಾಗಿರುತ್ತೇವೆ. ಈಗ ಎನ್ ಡಿಎ ಸರ್ಕಾರ ರಚನೆಗೆ ಮುಂದಾಗಿದ್ದು, ಅವರು ಯಾವ ತೀರ್ಮಾನ ಮಾಡುತ್ತಾರೊ ಮಾಡಲಿ” ಎಂದರು.

ರಾಹುಲ್ ಗಾಂಧಿ ಅವರು 2 ಕ್ಷೇತ್ರದಲ್ಲಿ ಗೆದ್ದಿದ್ದು, ಯಾವ ಕ್ಷೇತ್ರ ಉಳಿಸಿಕೊಳ್ಳುತ್ತಾರೆ ಎಂದು ಕೇಳಿದಾಗ, “ಅವರು ಆ ಕ್ಷೇತ್ರದ ಜನರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಈ ತೀರ್ಮಾನ ಕೈಗೊಳ್ಳಲು ಇನ್ನು 10 ದಿನಗಳ ಕಾಲಾವಕಾಶವಿದೆ” ಎಂದು ತಿಳಿಸಿದರು.

ಪರಿಷತ್ ಚುನಾವಣೆಯಲ್ಲಿ ಹಣ ಹಂಚಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಪರಿಷತ್ತಿನ ಆರು ಸ್ಥಾನಗಳ ಪೈಕಿ ನಾವು ಕೇವಲ 1 ಸ್ಥಾನ ಹೊಂದಿದ್ದೆವು. ಈಗ ನಾವು ಮೂರು ಕ್ಷೇತ್ರ ಗೆದ್ದಿದ್ದೇವೆ. ಅವರು ಗೆದ್ದಿರುವ ಮೂರು ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡಿ ಗೆದ್ದಿದ್ದಾರಾ? ಯಡಿಯೂರಪ್ಪನವರು 28 ಲೋಕಸಭಾ ಕ್ಷೇತ್ರವನ್ನು ಗೆದ್ದು ಬಿಜೆಪಿ ನಾಯಕರ ಜೇಬಿಗೆ ಹಾಕುವುದಾಗಿ ಹೇಳಿದ್ದರಲ್ಲವೇ ಅದೇ ರೀತಿ ನಾವು ಪರಿಷತ್ತಿನ ಆರೂ ಸ್ಥಾನ ಗೆಲ್ಲುತ್ತೇವೆ ಎಂದಿದ್ದೆವು. ಅದರಲ್ಲಿ ಮೂರು ಸ್ಥಾನ ಗೆದ್ದಿದ್ದೇವೆ” ಎಂದು ತಿರುಗೇಟು ನೀಡಿದರು.

IMG 20240607 WA0024

ಮೈತ್ರಿ ಮೂಲಕ ಒಕ್ಕಲಿಗ ಹಾಗೂ ಲಿಂಗಾಯತ ಮತಗಳು ಒಗ್ಗೂಡಿವೆಯೇ ಎಂದು ಕೇಳಿದಾಗ, “ಕಾಂಗ್ರೆಸ್ ವಿರೋಧಿ ಮತಗಳು ಒಂದಾಗಲಿವೆ ಎಂಬ ನಿರೀಕ್ಷೆ ಇತ್ತು” ಎಂದರು.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿ.ಕೆ. ಸುರೇಶ್ ಅವರ ಸ್ಪರ್ಧೆ ವಿಚಾರವಾಗಿ ಕೇಳಿದಾಗ, “ನಾವು ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಆಲೋಚನೆ ಮಾಡಿಲ್ಲ. ನಾವು ಇನ್ನು ಸೋಲಿನ ದುಃಖದಿಂದ ಹೊರಬಂದಿಲ್ಲ. ಸಧ್ಯಕ್ಕೆ ಆ ಕ್ಷೇತ್ರದ ಜನ ನಮಗೆ ಕೊಟ್ಟಿರುವ ಮುನ್ನಡೆಗೆ ಧನ್ಯವಾದ ಅರ್ಪಿಸುತ್ತೇನೆ. ಸುರೇಶ್ ಅವರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಆತುರವಿಲ್ಲ. ಅಲ್ಲಿ ಅನೇಕ ಕಾರ್ಯಕರ್ತರಿದ್ದು, ಮುಂದೆ ನೋಡೋಣ” ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಿಮ್ಮ ತಂತ್ರಗಾರಿಕೆ ವಿಫಲವಾಗಿದ್ದೇಕೆ ಎಂಬ ವಿಚಾರವಾಗಿ ಕೇಳಿದಾಗ, “ನಾನು ಅತಿಯಾದ ಆತ್ಮವಿಶ್ವಾಸದಲ್ಲಿದ್ದೆ. ನಾನು ರಾಜ್ಯ ಸುತ್ತಬೇಕಾದ ಕಾರಣ ಹೆಚ್ಚು ಸಮಯ ಮೀಸಲಿಡಲು ಆಗಿಲ್ಲ. ಇದು ನನ್ನ ವೈಯಕ್ತಿಕ ಸೋಲು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಅವರು ಕೂಡ ವಿವಾದರಹಿತ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಉತ್ತಮ ತಂತ್ರಗಾರಿಕೆ ಮಾಡಿದ್ದಾರೆ. ದಳದಲ್ಲಿ ನಿಂತರೆ ಮತ ಬರುವುದಿಲ್ಲ ಎಂದು ಬಿಜೆಪಿಯಿಂದ ಟಿಕೆಟ್ ನೀಡಲಾಯಿತು. ನಮ್ಮ ಅಭ್ಯರ್ಥಿ ವಿರುದ್ಧ ಆಡಳಿತ ವಿರೋಧಿ ಅಲೆ ಇರಲಿಲ್ಲ. ಸೋಲು ಸೋಲೇ ಅದನ್ನು ಒಪ್ಪಿಕೊಳ್ಳುತ್ತೇವೆ. ಕನಕಪುರದಲ್ಲಿ 50-60 ಸಾವಿರ ಮುನ್ನಡೆ ಪಡೆಯುವ ನಿರೀಕ್ಷೆಯಿತ್ತು. ಮಾಗಡಿ, ಕುಣಿಗಲ್, ರಾಮನಗರದಲ್ಲಿ ನಮಗೆ ಮತ ಬಂದಿವೆ. ನಮಗೆ ಪೆಟ್ಟು ಬಿದ್ದಿದ್ದು ನಗರ ಪ್ರದೇಶದಲ್ಲಿ” ಎಂದರು.

ದೇವೇಗೌಡರ ಕುಟುಂಬದ ವಿರುದ್ಧ ನಿಮ್ಮ ಮುಂದಿನ ತಂತ್ರಗಾರಿಕೆ ಏನು ಎಂದು ಕೇಳಿದಾಗ, “ಈ ಹಿಂದೆ ದೇವೇಗೌಡರು, ಕುಮಾರಸ್ವಾಮಿ, ಅನಿತಕ್ಕ, ನಿಖಿಲ್ ಎಲ್ಲರೂ ಸೋತಿದ್ದರು. ಈಗ ಸುರೇಶ್ ಸೋತಿದ್ದಾರೆ ಅಷ್ಟೇ” ಎಂದರು.

ಇವಿಎಂ ಕಾರ್ಯದಕ್ಷತೆ ಬಗ್ಗೆ ಪ್ರಶ್ನೆ ಮಾಡಿದಾಗ, “ಇವಿಎಂ ವಿಚಾರವಾಗಿ ನನಗೂ ಕೆಲವು ಅನುಮಾನಗಳಿವೆ. ಈಗ ನಾನು ಆ ಬಗ್ಗೆ ಮಾತನಾಡುವುದಿಲ್ಲ. ನಾನು ಕೆಲವು ಅಂಕಿ ಅಂಶ ಕಲೆಹಾಕುತ್ತಿದ್ದು, ದಾಖಲೆ ಸಿಕ್ಕ ಬಳಿಕ ನಾನು ಈ ವಿಚಾರವಾಗಿ ಚರ್ಚೆ ಮಾಡುತ್ತೇನೆ” ಎಂದರು.

ಎನ್ ಡಿಎ ಮೈತ್ರಿ ಪಕ್ಷಗಳು ಬೇಡಿಕೆ ಹೆಚ್ಚುತ್ತಿದ್ದು, ಮೋದಿ ಅವರು ಪ್ರಧಾನಮಂತ್ರಿಗಳಾಗಿ ಎಷ್ಟು ವರ್ಷ ಇರುತ್ತಾರೆ ಎಂದು ಕೇಳಿದಾಗ, “ಒಂದು ಸಂಸದ ಸ್ಥಾನ ಗೆದ್ದವರೇ ನಮ್ಮ ಕ್ಷೇತ್ರಕ್ಕೆ ಇಂತಹ ಸೌಲಭ್ಯಬೇಕು ಎಂದು ಕೇಳುತ್ತಾರೆ. ಸರ್ಕಾರ ರಚಿಸಲು ಬೆಂಬಲಿಸುವವರು ಕೇಳುವುದರಲ್ಲಿ ತಪ್ಪಿಲ್ಲ. ಎಲ್ಲರೂ ಸಿಂಹಪಾಲು ಬೇಕು ಎಂದು ಕೇಳುತ್ತಾರೆ. ರಾಜಕೀಯದಲ್ಲಿ ಅವರು ತಮ್ಮ ಸಂಖ್ಯೆ ಅನುಸಾರ ಬೇಡಿಕೆ ಇಡುತ್ತಾರೆ” ಎಂದರು.

ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರಾಗುತ್ತಾರಾ ಎಂದು ಕೇಳಿದಾಗ, “ಇಡೀ ದೇಶ ರಾಹುಲ್ ಗಾಂಧಿ ಅವರನ್ನು ಕೇವಲ ವಿರೋಧ ಪಕ್ಷದ ನಾಯಕ ಮಾತ್ರವಲ್ಲ ಪ್ರಧಾನಮಂತ್ರಿಯಾಗಿ ನೋಡಲು ಬಯಸುತ್ತಿದೆ. ಸಧ್ಯಕ್ಕೆ ಅವರು ವಿರೋಧ ಪಕ್ಷದ ನಾಯಕರಾಗಲಿ ಎಂದು ಬಯಸುತ್ತಿದ್ದೇವೆ” ಎಂದರು.