*||ಶತ್ರು ಭೈರವಿ ಯಾಗ ಮಾಡಿ ನಾವು ಚುನಾವಣೆಯಲ್ಲಿ ಗೆದ್ದಿಲ್ಲ ಎಂದ ಹೆಚ್.ಡಿ.ಕುಮಾರಸ್ವಾಮಿ||*
*||ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಸಂಘಟಿತ ಪರಿಶ್ರಮ, ಜನರ ಆಶೀರ್ವಾದದಿಂದ ಗೆದ್ದಿದ್ದೇವೆ||*
*ಸಿಎಂ ಪ್ರಕಾರ ಸೂರ್ಯ ಯಾವ ಕಡೆ ಹುಟ್ಟುತ್ತಾನೋ ಗೊತ್ತಿಲ್ಲ*
ಬೆಂಗಳೂರು: ಜನರ ಆಶೀರ್ವಾದ ಹಾಗೂ ಜೆಡಿಎಸ್ ಬಿಜೆಪಿ ಪಕ್ಷಗಳ ಕಾರ್ಯಕರ್ತರ ಪರಿಶ್ರಮದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆದ್ದಿದ್ದೇವೆಯೇ ಹೊರತು, ಶತ್ರು ಭೈರವಿ ಯಾಗ ಮಾಡಿ ಅಲ್ಲ ಎಂದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರದ ವಿಜೇತ ಎನ್ ಡಿಎ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಂಡ್ಯ ಲೋಕಸಭೆ ಫಲಿತಾಂಶದ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗೆ ಭೇಟಿ ನೀಡಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ನಾವು ಯಾವುದೇ ಕುರಿ, ಮೇಕೆ, ಎಮ್ಮೆ ಕಡಿದು ಗೆದ್ದಿಲ್ಲ. ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದೇವೆ. ಈ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಕ್ಷೇತ್ರಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ ಎಂದು ಕುಮಾರಸ್ವಾಮಿ ಅವರು ತಿರುಗೇಟು ಕೊಟ್ಟರು.
*ಸಿಎಂಗೆ ತಿರುಗೇಟು ಕೊಟ್ಟ ಮಾಜಿ ಸಿಎಂ*
ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಕುಮಾರಸ್ವಾಮಿ ಸೋಲುವುದೂ ಅಷ್ಟೇ ಸತ್ಯ ಎಂದು ಮಂಡ್ಯದಲ್ಲಿ ಮುಖ್ಯಮಂತ್ರಿಗಳು ಹೇಳಿದ್ದರು. ಈಗ ಅವರ ಪ್ರಕಾರ ಸೂರ್ಯ ಹುಟ್ಟುತ್ತಾನೋ ಇಲ್ಲವೋ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕುಟುಕಿದರು ಮಾಜಿ ಮುಖ್ಯಮಂತ್ರಿಗಳು.
ಮಂಡ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಹಣದ ಹೊಳೆ ಹರಿಸಿ ಅಧಿಕಾರ ದುರುಪಯೋಗ ಮಾಡಿಕೊಂಡರು ಜನರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಪ್ರೀತಿ, ವಿಶ್ವಾಸಕ್ಕೆ ಮನ್ನಣೆ ನೀಡಿದ್ದಾರೆ. ನನಗೆ ರಾಜಕೀಯವಾಗಿ ಶಕ್ತಿ ತುಂಬಿದ ಮಂಡ್ಯ ಯಾವತ್ತೂ ನನ್ನ ಕೈ ಬಿಡಲ್ಲ, ಬಿಡುವುದೂ ಇಲ್ಲ ಎಂದು ಕುಮಾರಸ್ವಾಮಿ ಅವರು ಭಾವುಕರಾಗಿ ಹೇಳಿದರು.
ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಸಂಘಟಿತ ಶ್ರಮದಿಂದ ಅಲ್ಲಿಯೂ ನಮ್ಮ ಅಭ್ಯರ್ಥಿ ಮಲ್ಲೇಶ್ ಬಾಬು ಅವರು ಜಯ ಗಳಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದರು.
ಜನರು ನಮ್ಮನ್ನು ಆಶೀರ್ವದಿಸಿದ್ದಾರೆ. ಅವರು ಇಟ್ಟಿರುವ ನಂಬಿಕೆಯನ್ನು ಹುಸಿ ಮಾಡುವುದಿಲ್ಲ. ನಾಡಿನ ಅಭಿವೃದ್ಧಿಗಾಗಿ ಮೋದಿ ಅವರ ಜತೆಗೂಡಿ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.
*ಮೋದಿ ಅವರ ಪಾತ್ರ ದೊಡ್ಡದು*
ರಾಜ್ಯದಲ್ಲಿ ಮೈತ್ರಿಕೂಟಕ್ಕೆ ಜನರು ಮನ್ನಣೆ ನೀಡಿದ್ದಾರೆ. ಜೆಡಿಎಸ್ ಬಿಜೆಪಿ ಪಕ್ಷಗಳ ಕಾರ್ಯಕರ್ತರು, ಮುಖಂಡರು ಅವಿರತವಾಗಿ ಕೆಲಸ ಮಾಡಿದ್ದಾರೆ. ನಮ್ಮನ್ನು ಬೆಂಬಲಿಸಿದ ಮತದಾರರಿಗೆ ಹಾಗೂ ಬಿಜೆಪಿ, ಜೆಡಿಎಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೋದಿಯವರು ಕಳೆದ ಎರಡೂವರೆ ತಿಂಗಳು ಶ್ರಮವಹಿಸಿ ಗೆಲುವಿಗೆ ಶ್ರಮಿಸಿದ್ದಾರೆ. ಇಡೀ ದೇಶವನ್ನು ಸುತ್ತಿದ್ದಾರೆ. ಎನ್ ಡಿಎ ಸಾಧನೆಯಲ್ಲಿ ಅವರ ಪಾತ್ರ ದೊಡ್ಡದು ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಎಕ್ಸಿಟ್ ಪೋಲ್ ನಲ್ಲಿ ಬಂದ ಸಮೀಕ್ಷೆಗಳು ಸ್ಪಲ್ಪ ಏರುಪೇರಾಗಿದೆ. ಕಾಂಗ್ರೆಸ್ ನ ಅಪಪ್ರಚಾರ ಇದಕ್ಕೆ ಕಾರಣ. ಕಾಣದ ಕೈಗಳ ಕುತಂತ್ರ ಕೂಡ ಕೆಲಸ ಮಾಡಿದೆ. ಗೆಲುವಿನ ಸಂಖ್ಯೆ ಕಡಿಮೆ ಆಗಲು ಕೆಲವು ಶಕ್ತಿಗಳು ಕೆಲಸ ಮಾಡಿವೆ. ಈ ಬಗ್ಗೆ ಯಾರನ್ನೂ ದೂರಲು ಹೋಗಲ್ಲ ಎಂದು ಅವರು ಹೇಳಿದರು.
ನಾನು ನೂರಾ ಮೂವತ್ತಾರು ಸ್ಥಾನ ಗೆದ್ದಿದ್ದೀನಿ. ಜೆಡಿಎಸ್ ಕೇವಲ ಹತ್ತೊಂಬತ್ತು ಸ್ಥಾನ ಮಾತ್ರ ಗೆದ್ದಿದೆ ಎಂಬ ದುರಂಹಕಾರದ ಮಾತುಗಳನ್ನು ಆಡಿದ್ದರು ಒಬ್ಬರು. ಅದಕ್ಕೆ ಉತ್ತರವಾಗಿ ಈ ಫಲಿತಾಂಶ ಬಂದಿದೆ. ಬೆಂಗಜೂರು ಗ್ರಾಮಾಂತರ, ಮಂಡ್ಯ, ಕೋಲಾರ ಕ್ಷೇತ್ರಗಳ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮೈತ್ರಿಕೂಟದ ಪರವಾಗಿ ಮತ ಹಾಕಿರುವ ಪ್ರತಿಯೊಬ್ಬರಿಗೂ ವಂದಿಸುತ್ತೇನೆ ಎಂದರು ಅವರು.
ಎಲ್ಲಾ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಹಣದ ಹೊಳೆ ಹರಿಸಿದರು. ಅದರಿಂದ ಕೆಲ ಕ್ಷೇತ್ರಗಳಲ್ಲಿ ನಮಗೆ ಹಿನ್ನೆಡೆ ಆಗಿದೆ. ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ಸಿಗೆ ಇಷ್ಟು ಸ್ಥಾನ ಬಂದಿದೆ ಎಂದು ನಾನಂತು ಹೇಳಲ್ಲ. ನಮ್ಮ ಮೈತ್ರಿ ಯನ್ನು ಜನ ಒಪ್ಪಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಜೆಡಿಎಸ್ ಮಹಿಳಾ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಮೊದಲಾದವರು ಉಪಸ್ಥಿತರಿದ್ದರು.