20240703 221336

BJP : ಮೂಡಾ’ ಹಗರಣ- ಸಿಬಿಐ ತನಿಖೆ ಗೆ‌ ಆಗ್ರಹ…!

POLATICAL STATE

 

ಮೂಡಾ’ ಹಗರಣ- ಸಿಬಿಐ ತನಿಖೆ, ಮುಖ್ಯಮಂತ್ರಿ ರಾಜೀನಾಮೆ ನೀಡಲು ವಿಜಯೇಂದ್ರ ಆಗ್ರಹ

ಬೆಂಗಳೂರು: ಮೈಸೂರಿನ ‘ಮೂಡಾ’ ಹಗರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ಆಗಲೇಬೇಕು. ಇದು ಸಿಎಂ, ಸಚಿವರ ಬುಡಕ್ಕೆ ಬರಲಿದೆ. ಮುಖ್ಯಮಂತ್ರಿಗಳ ಮುಖವಾಡವೂ ಕಳಚಿಬಿದ್ದಿದ್ದು, ಮುಖ್ಯಮಂತ್ರಿಗಳೂ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಒತ್ತಾಯಿಸಿದರು.
ನಗರದಲ್ಲಿ ಇಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಮತ್ತು ಮೈಸೂರಿನ ಮೂಡಾ ಅವ್ಯವಹಾರವನ್ನು ಖಂಡಿಸಿ ಇಂದು ಸಿಎಂ ಮನೆಗೆ ಮುತ್ತಿಗೆ ಹಾಕಲೆಂದು ಕುಮಾರಕೃಪಾ ವಸತಿಗೃಹದಿಂದ ಹೊರಟ ವೇಳೆ ಜನಪ್ರತಿನಿಧಿಗಳನ್ನು ಬಂಧಿಸಲಾಯಿತು. ಇದೇ ಸಂದರ್ಭದಲ್ಲಿ ವಿಜಯೇಂದ್ರ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಭಂಡ ಕಾಂಗ್ರೆಸ್ ಸರಕಾರದ ಬಣ್ಣ ಬಯಲಾಗಿದೆ. ದಿನಕ್ಕೊಂದು ಹಗರಣ ಇವತ್ತು ಬಯಲಿಗೆ ಬರುತ್ತಿದೆ. ವಾಲ್ಮೀಕಿ ನಿಗಮದ್ದು ನೂರಾರು ಕೋಟಿಯ ಹಗರಣ. ಮುಖ್ಯಮಂತ್ರಿಗಳ ಜಿಲ್ಲೆ ಮೈಸೂರಿನ ‘ಮೂಡಾ’ದಲ್ಲಿ ಅವರ ಗಮನಕ್ಕೆ ಬರದೆ ಅಷ್ಟು ದೊಡ್ಡ ಹಗರಣ ಆಗುವುದು ಹೇಗೆ ಸಾಧ್ಯ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಮುಖ್ಯಮಂತ್ರಿಗಳ ಧರ್ಮಪತ್ನಿಗೆ 15 ನಿವೇಶನಗಳನ್ನು ಕೊಟ್ಟಿದ್ದಾರೆ. ಸಚಿವ ಬೈರತಿ ಸುರೇಶ್ ಅವರು ಮೈಸೂರಿಗೆ ಹೋಗಿ ಅಧಿಕಾರಿಗಳ ವರ್ಗಾವಣೆ ಮಾಡಿ, ಹಗರಣಕ್ಕೆ ಸಂಬಂಧಿಸಿದ ಕಡತಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಬಂದಿದ್ದಾರೆ. ಈ ಹಗರಣ ಮುಚ್ಚಿಹಾಕುವ ಸಂಪೂರ್ಣ ಪ್ರಯತ್ನ ನಡೆದಿದೆ ಎಂದು ಆಕ್ಷೇಪಿಸಿದರು. ಸುರೇಶ್ ಅವರು ಕಡತಗಳ ಜೊತೆ ಬಂದಿದ್ದು, ಅವುಗಳನ್ನು ತಿದ್ದುವ ಕೆಲಸ ಆಗಲಿದೆ ಎಂದು ಆರೋಪಿಸಿದರು. ತನಿಖೆ ಆಗುವವರೆಗೆ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ವಿಧಾನಸಭಾ ಚುನಾವಣೆ ವೇಳೆ ಭ್ರಷ್ಟಾಚಾರರಹಿತ ಆಡಳಿತ ಕೊಡುವುದಾಗಿ ಭಾಷಣ ಮಾಡಿದ್ದರು. ಮತ್ತೊಂದೆಡೆ ವಿನಯ್ ಕುಲಕರ್ಣಿ ಅವರೂ ಸಚಿವರ ಮೇಲೆ ಆರೋಪ ಮಾಡಿದ್ದಾರೆ. ಹಲವಾರು ಹಗರಣಗಳು ನಡೆದಿವೆ. ಒಂದೆಡೆ ಬೆಲೆ ಏರಿಕೆ, ಇನ್ನೊಂದೆಡೆ ಹಗಲುದರೋಡೆಯಲ್ಲಿ ರಾಜ್ಯ ಸರಕಾರ ನಿರತವಾಗಿದೆ ಎಂದು ಟೀಕಿಸಿದರು.

ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿಲ್ಲವೇಕೆ?
ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಮೂಡಾ) 4 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಹಗರಣ ಬಯಲಿಗೆ ಬಂದಿದೆ. ಸಚಿವ ಬೈರತಿ ಸುರೇಶ್ ಅವರು ಅಧಿಕಾರಿಗಳನ್ನು ಅಮಾನತು ಮಾಡದೆ, ವರ್ಗಾವಣೆ ಮಾಡಿ, ಕಡತಗಳನ್ನು ಒಯ್ದಿದ್ದಾರೆ. ಸಾವಿರಾರು ಕೋಟಿ ಹಗರಣದ ಕುರಿತು ಜಿಲ್ಲಾಧಿಕಾರಿಗಳು ಆರೇಳು ತಿಂಗಳ ಹಿಂದೆ ವರದಿ ನೀಡಿದ್ದರು. ಹಗರಣದ ವಿಚಾರ ಗೊತ್ತಿದ್ದರೂ ಸಹ ಇದನ್ನು ಮುಚ್ಚಿಟ್ಟಿದ್ದರು ಎಂದ ವಿಜಯೇಂದ್ರ ಅವರು, ನಿಮಗೆ ತಾಕತ್ತಿದ್ದರೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಿತ್ತು ಎಂದು ಸವಾಲು ಹಾಕಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಶಾಸಕರ ಜೊತೆಗೂಡಿ ಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟರೆ ನಮ್ಮ ಹಕ್ಕನ್ನು ಮೊಟಕುಗೊಳಿಸಲು ಸರಕಾರ ಮುಂದಾಗಿದೆ. ಇವರ ಭ್ರಷ್ಟಾಚಾರವನ್ನು ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ವಿಷಯವನ್ನು ಇಟ್ಟುಕೊಂಡು ರಾಜ್ಯಾದ್ಯಂತ ಹೋರಾಟ ಮಾಡಲಿದ್ದೇವೆ ಎಂದು ಪ್ರಕಟಿಸಿದರು. ಅಧಿವೇಶನದ ಸಂದರ್ಭದಲ್ಲಿ ಸದನದ ಒಳಗೆ ಮತ್ತು ಹೊರಗಡೆ ಹೋರಾಟ ಮುಂದುವರೆಸಲಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ಸಿಗರು ಚುನಾವಣೆ ವೇಳೆ ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಲ್ಲದೆ, ಭ್ರಷ್ಟಾಚಾರರಹಿತ ಆಡಳಿತ ಕೊಡುವುದಾಗಿ ರಾಜ್ಯದ ಜನತೆಗೆ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ. ಇವರು ಹಗಲುದರೋಡೆಗೆ ಇಳಿದು ಜನರಿಗೆ ಮೋಸ ಮಾಡಿದ್ದಾರೆ ಎಂದು ಟೀಕಿಸಿದರು. ವಾಲ್ಮೀಕಿ ನಿಗಮದ ಹಗರಣದಲ್ಲಿ ಹಣ ಕೊಳ್ಳೆ ಹೊಡೆದು ಲೋಕಸಭಾ ಚುನಾವಣೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು