IMG 20240829 WA0025

BJP : ರಾಜ್ಯದಲ್ಲಿ ಬೇಜವಾಬ್ದಾರಿ ಕಾಂಗ್ರೆಸ್ ಸರಕಾರ…!

POLATICAL STATE

ರಾಜ್ಯದಲ್ಲಿ ಬೇಜವಾಬ್ದಾರಿ ಕಾಂಗ್ರೆಸ್ ಸರಕಾರ: ವಿಜಯೇಂದ್ರ

ಬೆಂಗಳೂರು: ಮಹಿಳಾ ದೌರ್ಜನ್ಯದ ಸಂದರ್ಭದಲ್ಲೂ ರಾಜ್ಯದ ಕಾಂಗ್ರೆಸ್ ಸರಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಜನರು ಈ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇದು ಜನವಿರೋಧಿ ಸರಕಾರ ಎಂದು ಟೀಕಿಸಿದರು.

ವಿಪಕ್ಷವಾಗಿದ್ದಾಗ ಹೋರಾಟಗಳು ಅನಿವಾರ್ಯ ಎಂದ ಅವರು, ಚುನಾವಣೆ ಬಂದಾಗ ಮಾತ್ರ ಹೋರಾಟ ಮಾಡಿದರೆ ಅದು ಜನತೆಗೆ ಮಾಡಿದ ಅವಮಾನ ಮತ್ತು ಅನ್ಯಾಯ. ರಾಜ್ಯದ ಚುಕ್ಕಾಣಿ ಹಿಡಿದ ಸರಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತದೋ ಆಗ, ರಾಜ್ಯದ ಜನರ ಪರವಾಗಿ ಹೋರಾಡುವುದು ನಮ್ಮ ಕರ್ತವ್ಯ ಎಂದು ನುಡಿದರು.
ಈ ದುಷ್ಟ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ಹೆಚ್ಚಾಗಿದೆ. ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಹಗರಣ, ಮೂಡ ಹಗರಣದ ವಿರುದ್ಧ ಹೋರಾಟಗಳು ನಡೆದಿವೆÉ. ಮಹಿಳಾ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ ಮುಖ್ಯಮಂತ್ರಿ, ಗೃಹ ಸಚಿವ, ಸಚಿವರ ನಡವಳಿಕೆ ಪ್ರಮುಖವಾಗುತ್ತದೆ ಎಂದು ವಿಶ್ಲೇಷಿಸಿದರು.IMG 20240829 WA0024

ಈ ಸರಕಾರ ಬಂದ ಬಳಿಕ ಅಭಿವೃದ್ಧಿ ಆರಂಭವೇ ಆಗಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಇವರು ಚಾಲನೆಯನ್ನೇ ಕೊಟ್ಟಿಲ್ಲ ಎಂದು ಟೀಕಿಸಿದರು. ಮಹಿಳೆಯರಿಗೆ ಗೃಹಲಕ್ಷ್ಮಿ ಎಂದರು. ಲೋಕಸಭಾ ಚುನಾವಣೆ ಬಂದಿತ್ತು. ಮತದಾನಕ್ಕೆ 3-4 ದಿನಗಳ ಮೊದಲು 3 ಕಂತು ಬಿಡುಗಡೆ ಮಾಡಿದ್ದರು ಎಂದು ವಿವರಿಸಿದರು.

ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಬಂದಾಗ ಮತ್ತೆ ಕಂತು ಬಿಡುಗಡೆ ಆಗಲಿದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಬರದಿದ್ದರೆ ಗ್ಯಾರಂಟಿ ಸ್ಥಗಿತ ಎಂದು ಬೆದರಿಸಿದ್ದರು. ಉಚಿತ ಬಸ್ ಪ್ರಯಾಣದಿಂದ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಉಚಿತ ಬಸ್ ಪ್ರಯಾಣದ ಹೆಸರಿನಲ್ಲಿ ಮಹಿಳೆಯರ ಮೂಗಿಗೆ ತುಪ್ಪ ಹಚ್ಚಿದ್ದಾರೆ ಎಂದು ಟೀಕಿಸಿದರು.

ಸದಸ್ಯತ್ವ ಅಭಿಯಾನದ ಮೂಲಕ ಮಹಿಳಾ ಮೋರ್ಚಾವನ್ನು ಸದೃಢಪಡಿಸಿ ಎಂದು ಹೇಳಿದ ಅವರು, ಮಾನ್ಯ ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಹಿರಿಯರ ತಪಸ್ಸು, ಕಾರ್ಯಕರ್ತರ ಶ್ರಮ, ಅವಿರತ ಹೋರಾಟ ಕಾರಣ ಎಂದು ವಿಶ್ಲೇಷಿಸಿದರು.

ಈಚೆಗೆ ನಡೆದ ಬೆಂಗಳೂರು- ಮೈಸೂರು ಪಾದಯಾತ್ರೆ ನನಗೆ ರಾಜ್ಯಾಧ್ಯಕ್ಷನಾಗಿ ಮೊದಲ ಆಂದೋಲನ. ಮಹಿಳೆಯರು ಸೇರಿದ್ದು, ಪಾದಯಾತ್ರೆಗೆ ಹೊಸ ಹುಮ್ಮಸ್ಸನ್ನು ಮಹಿಳಾ ಮೋರ್ಚಾವೂ ನೀಡಿತ್ತು ಎಂದು ಕೃತಜ್ಞತೆ ಸಲ್ಲಿಸಿದರು.
ಪಾದಯಾತ್ರೆ ಬಗ್ಗೆ ಹಿಂದೆ ಕೇಳಿದ್ದೆವು. ಯಡಿಯೂರಪ್ಪ, ಅನಂತಕುಮಾರ್, ವಿ.ಎಸ್.ಆಚಾರ್ಯ ಮೊದಲಾದ ಹಿರಿಯರು ಇಂಥ ಹೋರಾಟದಲ್ಲಿ ಭಾಗವಹಿಸಿದ್ದರು. ಪಾದಯಾತ್ರೆ ಹೋರಾಟ ಎಂದರೆ ಯಡಿಯೂರಪ್ಪ ಅವರು ನೆನಪಾಗುತ್ತಾರೆ. ಕರ್ನಾಟಕದಲ್ಲಿ ಹೋರಾಟ ಎಂದೊಡನೆ ಯಡಿಯೂರಪ್ಪ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ ಎಂದು ವಿಶ್ಲೇಷಿಸಿದರು.IMG 20240829 WA0027

ದುಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಪಾದಯಾತ್ರೆ ಎಂದು ಪ್ರಕಟಿಸಿದಾಗ ನಮಗೂ ಆತಂಕ ಇತ್ತು. ತಯಾರಿ ಆಗಿರಲಿಲ್ಲ; 5 ದಿನಗಳಷ್ಟೇ ಬಾಕಿ ಇದ್ದವು. ಪಾದಯಾತ್ರೆ ಆಗಬೇಕೇ ಬೇಡವೇ ಎಂಬ ಗೊಂದಲವೂ ಇತ್ತು. ಕೇಂದ್ರದ ವರಿಷ್ಠರಲ್ಲೂ ಆತಂಕವಿತ್ತು. ಪಾದಯಾತ್ರೆಯು ರಾಜ್ಯದ ಚರಿತ್ರೆಯಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡತಕ್ಕಂಥ ಆಂದೋಲನ ಆಗಲಿದೆ ಎಂದು ವರಿಷ್ಠರಿಗೆ ನಾನು ತಿಳಿಸಿದ್ದೆ ಎಂದು ವಿವರಿಸಿದರು.

ಪಾದಯಾತ್ರೆಯ ಮೊದಲ ದಿನ 8ರಿಂದ 10 ಸಾವಿರ ಜನ, 2ನೇ ದಿನ 10ರಿಂದ 14-15 ಸಾವಿರ ಜನ, 3ನೇ ದಿನ 15ರಿಂದ 18 ಸಾವಿರ ಜನ ಇದ್ದರು. 4ನೇ ದಿನ ಒಂದೇ ದಿನ 25 ಸಾವಿರ ಜನ ಭಾಗಿಯಾಗಿದ್ದರು. ಒಟ್ಟಾರೆಯಾಗಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಆಡಳಿತ ಪಕ್ಷದವರು ಆತಂಕ ಪಟ್ಟುಕೊಂಡು ನಮ್ಮ ಪಾದಯಾತ್ರೆ ಶುರು ಆಗುವುದಕ್ಕೂ ಮೊದಲೇ ಜನಾಂದೋಲನ ಮಾಡಿದ್ದರು ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.IMG 20240829 WA0026

ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದಲ್ಲಿ ಇಷ್ಟು ಆತಂಕಕ್ಕೆ ಗುರಿ ಮಾಡಿದ ಸಂದರ್ಭ ಯಾವತ್ತೂ ಇರಲಿಲ್ಲ. ಪಾದಯಾತ್ರೆ ವೇಳೆ ಊಟೋಪಚಾರ, ವಸತಿ, ವೈದ್ಯಕೀಯ ಸೇರಿ ಎಲ್ಲ ವ್ಯವಸ್ಥೆಗಳು ವ್ಯವಸ್ಥಿತವಾಗಿ ನಡೆದಿವೆ ಎಂದು ತಿಳಿಸಿದರು. ಕೊನೆಯ ದಿನ 70-80 ಸಾವಿರ ಜನರು ಸೇರಿದ್ದರು. ಕೇಂದ್ರದ ಹಿರಿಯರೂ ಸಂತೋಷ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ ಜೀ, ನಡ್ಡಾ ಜೀ, ಸಂತೋಷ್ ಜೀ ಅವರು ಈಚಿನ ದಿನಗಳಲ್ಲಿ ಯಾವುದೇ ಒಂದು ಪಕ್ಷ ಇಷ್ಟು ಯಶಸ್ವಿಯಾಗಿ ಹೋರಾಟ ಮಾಡಿರಲಿಲ್ಲ ಎಂದು ಹೇಳಿದ್ದಾಗಿ ವಿವರ ನೀಡಿದರು.

ಪಾದಯಾತ್ರೆಯ ನಂತರದ ಪರಿಣಾಮ ಹೇಗಿದೆ ಎಂದರೆ ಆಟೋ, ಟ್ಯಾಕ್ಸಿ ಚಾಲಕರು ‘ಓಹ್ ವಿಜಯಣ್ಣ ಎಂದು ವಿಷ್ ಮಾಡುತ್ತಿದ್ದಾರೆ. ಇದು ಸಂತಸ ನೀಡುತ್ತಿದೆ’ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಕು. ಕೆ. ಮಂಜುಳ ಅವರು ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ನಿರ್ದಾಕ್ಷಿಣ್ಯ ಕ್ರಮ ಅಗತ್ಯ. ಆಗ ದುಷ್ಟರು, ದುರುಳರು, ಕ್ರಿಮಿಗಳು ಮನೆ ಸೇರಿಕೊಳ್ಳುತ್ತಾರೆ ಎಂದು ತಿಳಿಸಿದರು.

ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಮತ್ತು ಮಹಿಳಾ ಮೋರ್ಚಾ ರಾಜ್ಯ ಉಸ್ತುವಾರಿ ಶ್ರೀಮತಿ ಸೋನಲ್ ಬೆನ್ ಪಟೇಲ್, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಡಾ.ಶೋಭಾ, ಮಹಿಳಾ ಮೋರ್ಚಾ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.