IMG 20210129 WA0022

ಉಪಸಭಾಪತಿಯಾಗಿ ಎಂ. ಕೆ. ಪ್ರಾಣೇಶ್ ಆಯ್ಕೆ….!

STATE Genaral

ಜವಾಬ್ದಾರಿಯುತ ಗೌರವ ಸ್ಥಾನದಲ್ಲಿ ಕೂರಲು ಅವಕಾಶ ಮಾಡಿಕೊಟ್ಟ ಎಲ್ಲಾ ಸದಸ್ಯರಿಗೆ ಅಭಿನಂದನೆ

ಬೆಂಗಳೂರು, ಜನವರಿ 29 (ಕರ್ನಾಟಕ ವಾರ್ತೆ):  ವಿಧಾನ ಪರಿಷತ್‍ನಲ್ಲಿ ಇಂದು ನಡೆದ ಉಪಸಭಾಪತಿ ಚುನಾವಣೆಯಲ್ಲಿ 41 ಮತಗಳನ್ನು ಪಡೆಯುವ ಮೂಲಕ ಆಡಳಿತ ಪಕ್ಷದ ಸದಸ್ಯರಾದ ಎಂ.ಕೆ. ಪ್ರಾಣೇಶ್ ಉಪಸಭಾಪತಿಯಾಗಿ ಆಯ್ಕೆಯಾದರು. ವಿರೋಧವಾಗಿ 24 ಸದಸ್ಯರು ಮತ ಚಲಾಯಿಸಿದರು.
ಉಪಸಭಾಪತಿಯಾಗಿ ಆಯ್ಕೆಯಾದ ಎಂ.ಕೆ. ಪ್ರಾಣೇಶ್ ಅವರನ್ನು ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಗೃಹ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜು ಬೊಮ್ಮಾಯಿ ಮಾತನಾಡಿ, ಸಭಾಪತಿಗಳು ಇಂದು ಚುನಾವಣೆಯನ್ನು ನ್ಯಾಯಯುತವಾಗಿ ನಡೆಸಿದ್ದು, ಮುಂಬರುವ ಕಾರ್ಯಕಲಾಪಗಳಿಗೆ  ಮಾದರಿಯಾಗಿದೆ ಎಂದು ನೂತನವಾಗಿ ಆಯ್ಕೆಯಾದ ಉಪಸಭಾಪತಿಯವರನ್ನು ಅಭಿನಂದಿಸಿದರು.IMG 20210129 WA0018

ವಿಧಾನ ಪರಿಷತ್ ಸಭಾ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಚುನಾವಣೆಯನ್ನು ನಡೆಸಿದ್ದಕ್ಕಾಗಿ ಸಭಾಪತಿಗಳ ಪೀಠಕ್ಕೆ ಅಭಿನಂದನೆ ಸಲ್ಲಿಸಿದರು.
ಪ್ರತಿಪಕ್ಷದ ನಾಯಕ  ಎಸ್.ಆರ್.ಪಾಟೀಲ್ ಅವರು ಮಾತನಾಡಿ, ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸದನ ನಡೆಯಬೇಕಾಗಿರುವುದರಿಂದ, ಪ್ರತಿ ಪಕ್ಷದಿಂದ ಎಲ್ಲಾ ಸಹಕಾರ ದೊರೆಯುವುದು ಎಂದು ಹೇಳಿ ನೂತನ ಉಪಸಭಾಪತಿಗಳನ್ನು ಅಭಿನಂದಿಸಿದರು.
ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಮಾತನಾಡಿ, ಜವಾಬ್ದಾರಿಯುತ ಗೌರವ ಸ್ಥಾನದಲ್ಲಿ ಕೂರಲು ಅವಕಾಶ ಮಾಡಿಕೊಟ್ಟ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಪಕ್ಷಾತೀತವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಆತ್ಮ ಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಸದನಕ್ಕೆ ತಿಳಿಸಿದರು.