IMG 20241106 WA0045

ಚನ್ಬಪಟ್ಟಣ :ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿ ಮೀರಿ ಕೆಲಸ ಮಾಡಿದ್ದೇವ….!

POLATICAL STATE

*ನಿಖಿಲ್ ಪರವಾಗಿ ಕೇಂದ್ರ ಸಚಿವ HD ಕುಮಾರಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ ಬಿರುಸಿನ ಪ್ರಚಾರ*

*ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ ಎಂದ ಬಿಎಸ್ ವೈ*

*ವರಿಷ್ಠ ನಾಯಕರ ಪ್ರಚಾರಕ್ಕೆ ಜನತೆಯಿಂದ ಅತ್ಯುತ್ತಮ ಸ್ಪಂದನೆ*

ಚನ್ನಪಟ್ಟಣ/ರಾಮನಗರ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರುಗಳು ಕ್ಷೇತ್ರದ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.

ಕ್ಷೇತ್ರದ ಅಂಬಾಡಹಳ್ಳಿ ಮತ್ತು ಸೋಗಾಲ ಗ್ರಾಮಗಳಲ್ಲಿ ಜಂಟಿ ಪ್ರಚಾರ ನಡೆಸಿದ ವರಿಷ್ಠ ನಾಯಕರಿಬ್ಬರು, ಅತ್ಯಧಿಕ ಬಹುಮತದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಜನತೆಯನ್ನು ಮನವಿ ಕೋರಿದರು.

ಈ ಸರ್ಕಾರ ನಿರಂತರವಾಗಿ ಭ್ರಷ್ಟಾಚಾರದಲ್ಲಿ ಮುಳುಗಿ ಜನರ ಹಿತವನ್ನು ಮರೆತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಬೇಕು ಎಂದು ಇಬ್ಬರೂ ನಾಯಕರು ಗುಡುಗಿದರು.

*ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ*

ಮಾಜಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿ; ಹಿಂದೆ ನಾನು ಮತ್ತು ಕುಮಾರಸ್ವಾಮಿ ಅವರು ಸೇರಿ ಸರ್ಕಾರ ಮಾಡಿ ಅತ್ಯುತ್ತಮ ಆಡಳಿತ ನೀಡಿದ್ದೆವು. ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು ಹೆಣ್ಣುಮಕ್ಕಳ ಕಲ್ಯಾಣಕ್ಕೆ ಉತ್ತಮ ಕಾರ್ಯಕ್ರಮ ಜಾರಿಗೆ ತಂದಿದ್ದೆವು. ನಿಮ್ಮ ಮನೆಯಲ್ಲಿ ಹುಟ್ಟುವ ಹೆಣ್ಣು ಮಗಳು ಹದಿನೆಂಟು ವರ್ಷ ವಯಸ್ಸಿಗೆ ಬರುವ ಹೊತ್ತಿಗೆ ಹತ್ತಾರು ಲಕ್ಷ ರೂಪಾಯಿ ಹಣ ಸಿಗುತ್ತಿತ್ತು. ಆ ಮಕ್ಕಳು ಗೌರವ, ಸ್ವಾಭಿಮಾನದಿಂದ ಬಾಳಿ ಬದುಕುವಂತಹ ಕಾರ್ಯಕ್ರಮ ಮಾಡಿದ್ದೆವು ಎಂದು ಯಡಿಯೂರಪ್ಪ ಅವರು ಹೇಳಿದರು.

ಶಾಲೆಗೆ ತೆರಳುವ ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾನು ಕುಮಾರಸ್ವಾಮಿ ಸೇರಿ ಉಚಿತ ಬೈಸಿಕಲ್ ಯೋಜನೆ ಜಾರಿ ಮಾಡಿದ್ದೆವು. ಅದು ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ. ಇದನ್ನೆಲ್ಲ ಜನತೆ ಮರೆಯಬಾರದು ಎಂದು ಬಿಎಸ್ ವೈ ಅವರು ಮನವಿ ಮಾಡಿದರು.

ಅಷ್ಟೇ ಅಲ್ಲ, ಸಂಧ್ಯಾ ಸುರಕ್ಷಾ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ನಾವಿಬ್ಬರೂ ಜಾರಿ ಮಾಡಿದ್ದೆವು. ಸಮಾಜಕ್ಕೆ ಅವೆಲ್ಲ ಉಪಯೋಗ ಆಗಿವೆ. ಕೇಂದ್ರ ಸರ್ಕಾರ ರೈತ ಕುಟುಂಬಕ್ಕೆ ಹತ್ತು ಸಾವಿರ ರೂಪಾಯಿ ಕೊಟ್ಟರೆ, ಅದಕ್ಕೆ ಆರು ಸಾವಿರ ರೂಪಾಯಿ ಸೇರಿಸಿ ಹದಿನಾರು ಸಾವಿರ ರೂಪಾಯಿ ಕೊಡುತ್ತಿದ್ದೆವು. ನಿಮ್ಮೆಲ್ಲರ ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿಮೀರಿ ಕೆಲಸ ಮಾಡಿದ್ದೇವೆ ಎಂದು ಅವರು ಹೇಳಿದರು.

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾತನಾಡಿ; ನಾವು ಅಭಿವೃದ್ದಿ ವಿಷಯ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದೇವೆ. ಅಭಿವೃದ್ಧಿಯ ಮೇಲೆ ಮತ ಕೇಳುತ್ತಿದ್ದೇವೆ. ಆದರೆ, ಕಾಂಗ್ರೆಸ್ ಪಕ್ಷ ಸಮಾಜ ಒಡೆಯುವ ದಿಕ್ಕಿನಲ್ಲಿ ಚುನಾವಣಾ ಕಣವನ್ನು ಕಲುಷಿತಗೊಳಿಸಿದೆ ಎಂದು ಆರೋಪ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಬರೀ ಸುಳ್ಳು ಪ್ರಚಾರ ಮಾಡಿಕೊಂಡು ತಿರುಗುತ್ತಿದ್ದಾರೆ. ಜೆಡಿಎಸ್ ಪಕ್ಷದಿಂದ ಟಿಕೆಟ್ ಕೊಡಲು ಸಿದ್ದ ಇದ್ದೆವು. ಕೊನೆಗೆ ಬಿಜೆಪಿ ಟಿಕೆಟ್ ಮೇಲೆ ನಿಲ್ಲುತ್ತೇನೆ ಎಂದು ಕ್ಯಾತೆ ತೆಗೆದರು. ಕೊನೆಗೆ ಬಿಜೆಪಿ ಟಿಕೆಟ್ ಕೊಡಲಿಕ್ಕೆ ಕೂಡ ನಾನು ಸಮ್ಮತಿಸಿದೆ. ಆದರೆ, ಲೋಕಸಭೆ ಚುನಾವಣೆ ವೇಳೆಯಲ್ಲೇ ಕಾಂಗ್ರೆಸ್ ನಾಯಕರ ಜತೆ, ಅದರಲ್ಲಿಯೂ ಡಿಕೆ ಬ್ರದರ್ ಗಳ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದ ಅವರು ಅಭ್ಯರ್ಥಿ ಆಯ್ಕೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಿಗಿದರು. ನಾವು ಸಮರ್ಥ ಅಭ್ಯರ್ಥಿ ಕಣಕ್ಕೆ ಇಳಿಸುವ ಉದ್ದೇಶದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಎನ್ ಡಿಎ ಅಭ್ಯರ್ಥಿಯಾಗಿ ಒಮ್ಮತವಾಗಿ ಕಣಕ್ಕೆ ಇಳಿಸಿದೆವು ಎಂದು ಮತದಾರರಿಗೆ ಕೇಂದ್ರ ಸಚಿವರು ಮನವರಿಕೆ ಮಾಡಿಕೊಟ್ಟರು.

ಮಾಜಿ ಶಾಸಕ ಅಖಂಡ ಶ್ರೀನಿವಾಸ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ರಮೇಶ್, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ಸಂಸದ ಮಲ್ಲೇಶ್ ಬಾಬು ಸೇರಿದಂತೆ ಅನೇಕ ನಾಯಕರು ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು.

**Ends**

Leave a Reply

Your email address will not be published. Required fields are marked *