ಬೆಂಗಳೂರಿನಲ್ಲಿ ಸಾವಿರಾರು ಜನರಿಗೆ ಉದ್ಯೋಗ ಕೊಡುವ ಮೊಬೈಲ್ ತಯಾರಿಕಾ ಘಟಕ
ದುರ್ಬಲ ಆರ್ಥಿಕತೆಯಿಂದ ಸದೃಢ ಆರ್ಥಿಕ
ಶಕ್ತಿಯಾಗಿ ಭಾರತ- ಅಶ್ವಿನಿ ವೈಷ್ಣವ್
ಬೆಂಗಳೂರು: ವೈಯಕ್ತಿಕ ಆದಾಯ ತೆರಿಗೆ ದರದ ಬದಲಾವಣೆ ಕುರಿತು ಮಧ್ಯಮ ವರ್ಗವು ಬೇಡಿಕೆ ಇಡುತ್ತ ಬಂದಿತ್ತು. 12 ಲಕ್ಷ ವಾರ್ಷಿಕ ಆದಾಯಕ್ಕೆ ತೆರಿಗೆ ಇಲ್ಲ ಎಂಬ ಪ್ರಮುಖ ನಿರ್ಧಾರವನ್ನು ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ಕೈಗೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 60 ವರ್ಷಗಳ ಬಳಿಕ ಎನ್‍ಡಿಎ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಪಡೆದಿದೆ. ಮೊದಲ ಮತ್ತು ಎರಡನೇ ಅಧಿಕಾರದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಜೀ ಅವರು ಮಾಡಿದ ಉತ್ತಮ ಕಾರ್ಯಗಳೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.
ದೇಶದ ಉತ್ತರ- ದಕ್ಷಿಣ, ಪೂರ್ವ ಪಶ್ಚಿಮದಲ್ಲಿ ಈ ಬದಲಾವಣೆಗಳನ್ನು ಜನತೆ ನೋಡಿದ್ದಾರೆ. 60-70 ವರ್ಷಗಳಲ್ಲಿ ನೋಡದಷ್ಟು ಉತ್ತಮ ಅಭಿವೃದ್ಧಿ ಕಾರ್ಯಗಳು ಕಳೆದ 10 ವರ್ಷದಲ್ಲಿ ಕಾಣುತ್ತಿವೆ ಎಂದು ಜನರು ಹೇಳುತ್ತಿದ್ದಾರೆ ಎಂದು ವಿವರಿಸಿದರು. ಇದೆಲ್ಲದಕ್ಕೂ ಬಿಜೆಪಿ ಸರಕಾರದ ಕೆಲಸ, ಎನ್‍ಡಿಎ ಚಿಂತನೆ ಮತ್ತು ಪ್ರಧಾನಿ ಮೋದಿಯವರ ದೂರದೃಷ್ಟಿ ಕಾರಣ ಎಂದು ತಿಳಿಸಿದರು.
ಮಧ್ಯಮ ವರ್ಗಗಳಿಗೆ ನೆರವಾಗುವ ಮೆಟ್ರೋ, ಹೊಸ ವಿಮಾನನಿಲ್ದಾಣಗಳು, 10 ವರ್ಷಗಳಲ್ಲಿ 390 ಹೊಸ ವಿಶ್ವವಿದ್ಯಾಲಯಗಳ ನಿರ್ಮಾಣ, ಹೊಸ ಐಐಟಿ, ಐಐಎಂಗಳಿಂದ ಜೀವನದಲ್ಲಿ ಮಹತ್ವದ ಬದಲಾವಣೆ ಸಾಧ್ಯವಾಗಿದೆ. ಬುದ್ಧಿಮತ್ತೆ, ತಾಂತ್ರಿಕತೆ, ಉದ್ಯಮಶೀಲತೆ ಇದ್ದರೂ 2014ರಲ್ಲಿ ನಮ್ಮ ದೇಶವನ್ನು ದುರ್ಬಲವಾದ 5 ಆರ್ಥಿಕ ದೇಶಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿತ್ತು. ಈಗ ಎಲ್ಲ ದೊಡ್ಡ ದೇಶಗಳಲ್ಲಿ ನಮ್ಮ ದೇಶವು ಆರ್ಥಿಕ ಕ್ಷೇತ್ರದಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿ ಆರೋಗ್ಯಕರ ದೇಶವಾಗಿ ಪರಿಗಣಿಸಲ್ಪಟ್ಟಿದೆ ಎಂದು ವಿವರಿಸಿದರು.
ಸುಮಾರು 50 ಲಕ್ಷ ಕೋಟಿಯ ದೇಶದ ಬಜೆಟ್ ನಮ್ಮದಾಗಿದ್ದು, ಆರ್ಥಿಕ ಕ್ಷೇತ್ರದ ಕೊರತೆಯು ಶೇ 4.8ರಷ್ಟಿದ್ದು, ಅದು ಶೇ 4ಕ್ಕೆ ತಲುಪುತ್ತಿದೆ ಎಂದು ವಿವರ ನೀಡಿದರು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅದು ಶೇ 7ರಷ್ಟಿದ್ದು, ನಾವು ಆರೋಗ್ಯಕರ ಸ್ಥಿತಿಯಲ್ಲಿದ್ದೇವೆ ಎಂದು ವಿಶ್ಲೇಷಿಸಿದರು. ದೆವೋಸ್‍ಗೆ ನಾನು ಈಚೆಗೆ ಭೇಟಿ ಕೊಟ್ಟಿದ್ದೆ. ನಮ್ಮ ಪ್ರಧಾನಿಯವರ ಆರ್ಥಿಕ ಕ್ಷೇತ್ರದ ಕುರಿತ ಚಿಂತನೆಗಳನ್ನು ಕೇಳಿದ ಐಎಂಎಫ್ ಮುಖ್ಯಸ್ಥರು ಅಚ್ಚರಿ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.
10 ವರ್ಷಗಳ ಹಿಂದೆ ರೈತರ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿದ್ದವು. ಈಗ ಅತ್ಯುತ್ತಮ ಎಂಎಸ್‍ಪಿ (ಬೆಂಬಲ ಬೆಲೆ) ಲಭಿಸುತ್ತಿದೆ. 10 ವರ್ಷಗಳ ಹಿಂದಿನ ದರದ 3 ಪಟ್ಟು ಹೆಚ್ಚು ಎಂಎಸ್‍ಪಿ ಈಗ ಕೊಡುತ್ತಿದ್ದು, ಉತ್ಪಾದಕತೆ, ಕೃಷಿ ತಂತ್ರಜ್ಞಾನಕ್ಕೆ ಒತ್ತು ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಎಂಎಸ್‍ಎಂಇಗಳ ಸ್ಥಿತಿಯೂ ಗರಿಷ್ಠ ಸುಧಾರಿಸಿದೆ. ಕೋವಿಡ್ ಅವಧಿಯ ನಡುವೆಯೂ ಉತ್ತಮ ಸಾಲ ವ್ಯವಸ್ಥೆ, ದೊಡ್ಡ ಕೈಗಾರಿಕೆಗಳಿಂದ ಬೆಂಬಲದಿಂದ ಎಂಎಸ್‍ಎಂಇಗಳೂ ಉತ್ತಮ ಸ್ಥಿತಿಯಲ್ಲಿವೆ. ಬೆಲೆ ಏರಿಕೆ ನಿಯಂತ್ರಣದಲ್ಲಿದೆ. ನಾವು ಭವಿಷ್ಯದಲ್ಲಿ ಬೆಲೆ ಏರಿಕೆ ನಿಯಂತ್ರಣದಲ್ಲಿ ಇಟ್ಟುಕೊಂಡು ಶೇ 6ರಿಂದ 8ರಷ್ಟು ಬೆಳವಣಿಗೆ ದರವನ್ನು ಕಾಪಾಡುವ ಸ್ಥಿತಿಯಲ್ಲಿದ್ದೇವೆ ಎಂದು ವಿಶ್ವಾಸದೊಂದಿಗೆ ಹೇಳುವ ದೇಶ ನಮ್ಮದಾಗಿದೆ ಎಂದು ವಿಶ್ಲೇಷಿಸಿದರು.
ಕಡಿಮೆ ಆದಾಯ, ಮಧ್ಯಮ ಆದಾಯದ ಕುಟುಂಬಗಳಿಗೆ ಆದ್ಯತೆ ನೀಡುವ ಕೆಲಸವನ್ನು ಪ್ರಧಾನಿ ಮತ್ತು ಕೇಂದ್ರ ಹಣಕಾಸು ಸಚಿವರು ಮಾಡಿದ್ದಾರೆ. 12 ಲಕ್ಷ ಆದಾಯಕ್ಕೆ ತೆರಿಗೆ ಇಲ್ಲ ಎಂಬುದು ವೇತನದಾರರಿಗೆ ದೊಡ್ಡ ಕೊಡುಗೆ ಎಂದು ತಿಳಿಸಿದರು. 10 ವರ್ಷಗಳ ಹಿಂದೆ ಸುಮಾರು 2.5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಇದ್ದರೆ, ಅದು ಈಗ 15 ಲಕ್ಷ ಕೋಟಿಗೆ ಏರಿದೆ ಎಂದು ವಿವರಿಸಿದರು.
ಹೊಸ ಬಂಡವಾಳ ಹೂಡಿಕೆ ಎಂದರೆ ಹೊಸ ಉದ್ಯೋಗ ಸೃಷ್ಟಿ, ಬೆಳವಣಿಗೆಗೆ ಅವಕಾಶ ಎಂದ ಅವರು, ಬೆಂಗಳೂರು ಹೊಸ ಏರ್‍ಪೋರ್ಟ್ ಟರ್ಮಿನಲ್ ಪಡೆದರೆ, ಹೆಚ್ಚು ಜನರು ಅಲ್ಲಿ ಕೆಲಸ ಮಾಡುವಂತಾಗುತ್ತದೆ. ಹೆಚ್ಚು ಅಂಗಡಿಗಳಿಗೆ ಅವಕಾಶ ಲಭಿಸುತ್ತದೆ. ಹೊಸ ರೈಲ್ವೆ ನಿಲ್ದಾಣ ನಿರ್ಮಾಣವಾದರೆ, ಹೆಚ್ಚು ಉದ್ಯೋಗ ಲಭಿಸುವುದು ಸಹಜ ಎಂದು ತಿಳಿಸಿದರು.
ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕ್ಷೇತ್ರವಾದ ಎಂಎಸ್‍ಎಂಇಯನ್ನು ಬೆಳವಣಿಗೆಯ ಹೊಸ ಎಂಜಿನ್ ಎಂದೇ ಪರಿಗಣಿಸಲಾಗಿದೆ. ಎಂಎಸ್‍ಎಂಇಗಳು ಅಗತ್ಯ ಬಂಡವಾಳ ಹೊಂದಲು ಆದ್ಯತೆ ಕೊಡಲಾಗಿದೆ. ಭಾರತವು ಪ್ರಮುಖ ಸೇವಾ ಕ್ಷೇತ್ರದ ದೇಶವಾಗಿದೆ. ದೊಡ್ಡ ಪ್ರಮಾಣದ ಐ.ಟಿ. ಸರ್ವಿಸಸ್ ಹೊಂದಿದ ಬೆಂಗಳೂರು ಇದಕ್ಕೆ ಸಮರ್ಥ ಉದಾಹರಣೆ ಎಂದರು.
10 ವರ್ಷಗಳ ಹಿಂದೆ ಮೇಕ್ ಇನ್ ಇಂಡಿಯ ಯೋಜನೆ ಜಾರಿಯಾಗಿದ್ದು, ನಾವು ಇದೀಗ ಗರಿಷ್ಠ ಪ್ರಮಾಣದ ಮೊಬೈಲ್ ಉತ್ಪಾದಿಸುವ ದೇಶವಾಗಿದ್ದೇವೆ. ರಕ್ಷಣಾ ಸಾಮಗ್ರಿ ಉತ್ಪಾದನೆಯಲ್ಲೂ ದೇಶದ ಕೊಡುಗೆ ಗಮನಾರ್ಹ; ಸೆಮಿ ಕಂಡಕ್ಟರ್ ಉತ್ಪಾದನೆಯೂ ಆರಂಭವಾಗಿದೆ ಎಂದರು.
ಬೆಂಗಳೂರಿನಲ್ಲಿ 40ರಿಂದ 50 ಸಾವಿರ ಜನರಿಗೆ ಉದ್ಯೋಗ ಕೊಡುವ ಮೊಬೈಲ್ ತಯಾರಿಕಾ ಘಟಕ ಆರಂಭವಾಗಲಿದೆ. ಮುಂದಿನ ಬಾರಿ ಬಂದಾಗ ಅಲ್ಲಿಗೆ ಭೇಟಿ ಕೊಡುವೆ ಎಂದು ತಿಳಿಸಿದರು.
ಉದ್ಯೋಗಾಧಾರಿತ ಕೈಗಾರಿಕೆಗಳಿಗೆ ಒತ್ತು ಕೊಡುವ ಪ್ರಮುಖ ಪ್ರಕಟಣೆಯೂ ಈ ಬಾರಿ ಬಜೆಟ್‍ನಲ್ಲಿ ಹೊರಬಿದ್ದಿದೆ ಎಂದರು. ಆಟಿಕೆ, ಆಹಾರ ಸಂಸ್ಕರಣೆ, ಚಪ್ಪಲಿ ಉತ್ಪಾದನೆ ಮೊದಲಾದವುಗಳಿಗೆ ಈ ಬಜೆಟ್ ಬೆಂಬಲ- ಆದ್ಯತೆ ಕೊಡಲಿದೆ ಎಂದು ವಿವರಿಸಿದರು.
ತಂತ್ರಜ್ಞಾನಕ್ಕೆ ಗರಿಷ್ಠ ಫೋಕಸ್ ಇರುವ ಬಜೆಟ್ ಇದು. ಡೀಪ್‍ಟೆಕ್ ಸ್ಟಾರ್ಟಪ್‍ಗಳಿಗೆ ನಿಧಿ ನೀಡುವ ಘೋಷಣೆಯಿಂದ ಬೆಂಗಳೂರು ಹೆಚ್ಚಿನ ಪ್ರಯೋಜನ ಪಡೆಯಲಿದೆ ಎಂದರು. ‘ನಮಸ್ಕಾರ ಹೇಗೆ ಇದ್ದೀರಿ’ ಎಂದು ಕನ್ನಡದಲ್ಲೇ ಮಾತನಾಡಿದ ಅವರು ಪತ್ರಿಕಾಗೋಷ್ಠಿ ಆರಂಭಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಬೆಂಗಳೂರು ಉತ್ತರ ಸಂಸದರು ಮತ್ತು ಕೇಂದ್ರದ ಸಚಿವರಾದ ಕು. ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್.ಮಂಜುನಾಥ್ ಮತ್ತು ಬೆಂಗಳೂರು ದಕ್ಷಿಣ ಸಂಸದ ಹಾಗೂ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.