*ತೆರಿಗೆ ಸಂಗ್ರಹಣೆ ಗುರಿ ಸಾಧಿಸಿ* *ಮುಖ್ಯಮಂತ್ರಿಗಳಿಂದ ಆಧಿಕಾರಿಗಳಿಗೆ ಖಡಕ್ ಸೂಚನೆ*
*334 ಹೊಸ ವಾಹನಗಳ ಲೋಕಾರ್ಪಣೆ 95 ಜನರಿಗೆ ಅನುಕಂಪದ ಆಧಾರಿತ ನೇಮಕಾತಿ ಆದೇಶ ವಿತರಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ*
ವೆಂ, ಮೇ 3 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ತೆರಿಗೆ ಸಂಗ್ರಹಿಸುವ ಇಲಾಖೆಗಳು ಸರ್ಕಾರ ನಿಗಧಿಪಡಿಸಿರುವ ತೆರಿಗೆ ಸಂಗ್ರಹಣೆಯ ಗುರಿಯನ್ನು ಸಾಧಿಸಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ. ತೆರಿಗೆ ಸಂಗ್ರಹಣೆಗೆ ಸರ್ಕಾರದಿಂದ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಆರ್ಥಿಕ ಇಲಾಖೆಯ ವತಿಯಿಂದ ವಿಧಾಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಅನುಕಂಪ ಆಧಾರಿತ ನೇಮಕಾತಿ ಆದೇಶ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಗಳು,ರಾಜ್ಯದಲ್ಲಿ ತೆರಿಗೆ ಸಂಹ್ರಹಿಸಲು ಅವಕಾಶವಿದೆ. ತೆರಿಗೆ ಹೆಚ್ಚು ಸಂಗ್ರಹಿಸಿದರೆ ರಾಜ್ಯದ ಅಭಿವೃದ್ಧಿ ಹೆಚ್ಚು ಮಾಡಲು ಸಾಧ್ಯವಾಗುತ್ತದೆ. ರಾಜ್ಯದ ಅಭಿವೃದ್ಧಿ ತೆರಿಗೆ ಸಂಗ್ರಹಣೆ ಮೇಲೆ ಅವಲಂಬಿತವಾಗಿದೆ ಎಂದರು.
ಆದಾಯ ತೆರಿಗೆ ಇಲಾಖೆಗೆ 1ಲಕ್ಷದ 21 ಸಾವಿರ ಕೋಟಿ ರೂ., ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ. ಹಾಗೂ ವಾಣಿಜ್ಯ ತೆರಿಗೆ ಇಲಾಖೆಗೆ 1 ಲಕ್ಷ 20 ಸಾವಿರ ಕೋಟಿ ರೂ.ಗಳ ಗುರಿ ನಿಗಧಿಪಡಿಸಲಾಗಿದೆ. ಈ ಗುರಿ ಯಾವುದೇ ಕಾರಣಕ್ಕೂ ತಪ್ಪಬಾರದು. ತೆರಿಗೆ ತಪ್ಪಿಸುವವರನ್ನು ಪತ್ತೆ ಹಚ್ಚಲು ಕ್ರಮಕೈಗೊಳ್ಳಲಾಗುವುದು ಎಂದರು.
ಅರ್ಥಿಕ ಇಲಾಖೆ ಪ್ರಮುಖವಾಗಿ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಕಂದಾಯ ಇಲಾಖೆ, ಮೋಟಾರು ವಾಹನಗಳ ಇಲಾಖೆ ಹೆಚ್ಚು ತೆರಿಗೆ ಕೊಡುವ ಇಲಾಖೆಗಳಾಗಿದ್ದು, ಈ ಇಲಾಖೆಗಳು ದಕ್ಷತೆ ಮತ್ತು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದರೆ ಸರ್ಕಾರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯ ಆಗುತ್ತದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗ 334 ಹೊಸ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಲೋಕಾರ್ಪಣೆ ಮಾಡಿದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಅಬಕಾರಿ ಇಲಾಖೆ ಅಭಿವೃದ್ಧಿ ಪರವಾಗಿ ಕೆಲಸ ಮಾಡದಿದ್ದರೂ ಆರ್ಥಿಕ ಪ್ರವರ್ದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಇಲಾಖೆಯು ಸುಮಾರು 35.583 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಹಲವಾರು ಅಪರಾಧದ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 1,42,240 ದಾಳಿ ನಡೆಸಿ,. 77,411 ಪ್ರಕರಣಗಳನ್ನು ದಾಖಲಾಗಿಸಿದೆ. 2,210 ವಾಹನಗಳ ಜಪ್ತಿ ಮಾಡಲಾಗಿದೆ ಎಂದರು.
ವರ್ಗಾವಣೆಯಲ್ಲಿ ಪಾರದರ್ಶಕತೆ ಇರಬೇಕೆಂದು ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಮಾಡಲಾಗುವುದು. ಇಲಾಖೆಗೆ ಹೆಚ್ಚಿನ ಶಕ್ತಿ ತುಂಬಲು ಕೆ.ಪಿ.ಎಸ್.ಸಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಕಾರ್ಯದಕ್ಷತೆಗಾಗಿ 1ಸಾವಿರ ಗೃಹರಕ್ಷಕರನ್ನು ತೆಗೆದುಕೊಳ್ಳಲಾಗುವುದು. ಇಲಾಖೆಯನ್ನು ಡಿಜಟಲೀಕರಣಗೊಳಿಸಲಾಗುವುದು. ಇಲಾಖೆಗೆ 106 ಹೊಸ ವಾಹನಗಳನ್ನು ನೀಡಿದ್ದು, ಅಧಿಕಾರಿಗಳಿಗೆ ಉತ್ತಮ ಕೆಲಸ ನಿರ್ವಹಿಸಲು ಸಹಾಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್ ಅವರು, ಆರ್ಥಿಕ ದೃಷ್ಟಿಯಿಂದ ಬೊಕ್ಕಸ ತುಂಬುವ ಅಬಕಾರಿ ಇಲಾಖೆಯು, ಡ್ರಗ್ಸ್ ದಂದೆಗೆ ಕಡಿವಾಣ ಹಾಕಬೇಕು. ನಮ್ಮ ಸಮಾಜದ ಯುವ ಪೀಳಿಗೆ ದುಶ್ಚಟಕ್ಕೆ ಬಲಿಯಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಡ್ರಗ್ಸ್ ವಿರುದ್ಧ ಸಮರ ಸಾರದಿದ್ದರೆ, ದೇಶದ ಭವಿಷ್ಯ ಕತ್ತಲಲ್ಲಿ ಮುಳುಗುತ್ತದೆ. ಪೋಲಿಸ್ ಇಲಾಖೆಗೆ ಇರುವ ಶಕ್ತಿ ಅಬಕಾರಿ ಇಲಾಖೆಗೂ ಇದೆ ಎಂದರು
ಕಾರ್ಯಕ್ರಮದಲ್ಲಿ ಕೃಷಿ ಸಚಿವ ಕೃಷ್ಣಬೈರೇಗೌಡ, ವಿಧಾನಭೆಯ ಸರ್ಕಾರಿ ಮುಖ್ಯ ಸಚೇತಕ ಅಶೋಕ್ ಮಹದೇವಪ್ಪ ಪಟ್ಟಣ್, ಮುಖ್ಯ ಮಂತ್ರಿಯವರ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ , ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು,
ಆರ್ಥಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಸರ್ಕಾರದ ಕಾರ್ಯದರ್ಶಿಗಳಾದ ಡಾ.ಪಿ.ಸಿ. ಜಾಫರ್ , ಡಾ.ಎಂ.ಟಿ ರೇಜು, ಅಬಕಾರಿ ಆಯುಕ್ತ ಆರ್.ವೆಂಕಟೇಶ ಕುಮಾರ ಹಾಗೂ ಆರ್ಥಿಕ ಇಲಾಖೆ, ಖಜಾನೆ ಇಲಾಖೆ,ವಾಣಿಜ್ಯ ತೆರಿಗೆ ಇಲಾಖೆ,ಅಬಕಾರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಅನುಕಂಪ ಆಧಾರಿತ ನೇಮಕಾತಿ ಹೊಂದಿದ ಸಿಬ್ಬಂದಿಗಳು ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.