IMG 20250725 WA0005

India : ಅರುಣಾಚಲ ಪ್ರವಾಸೋದ್ಯಮ ಬೆಳವಣಿಗೆಗೆ ಒತ್ತು….!

National - ಕನ್ನಡ

ಅರುಣಾಚಲ ಪ್ರವಾಸೋದ್ಯಮ ಬೆಳವಣಿಗೆಗೆ ಒತ್ತು: ಸಚಿವರ ನುಡಿ
ಬೆಂಗಳೂರು: “ಶಾಂತಿ ಮತ್ತು ಪ್ರವಾಸೋದ್ಯಮದ ನಡುವೆ ಅವಿನಾಭಾವ ಸಂಬಂಧವಿದ್ದು, ಪ್ರವಾಸೋದ್ಯಮಕ್ಕೆ ಅರುಣಾಚಲಪ್ರದೇಶ ಈಗ ಹೆಚ್ಚು ಒತ್ತು ನೀಡುತ್ತಿದೆ. ನಾವೀಗ ರೇಷ್ಮೆ ಮೊಟ್ಟೆಯೊಳಗೇ ಹುಳುವಿನಂತೆ ಉಳಿದುಕೊಳ್ಳದೇ ಹೊರಜಗತ್ತಿಗೆ ತೆರೆದುಕೊಳ್ಳಬೇಕಾಗಿದೆ. ಸರಕಾರವೂ ಅದನ್ನೇ ಉತ್ತೇಜಿಸುತ್ತಿದೆ” ಎಂದು ಅರುಣಾಚಲಪ್ರದೇಶದ ಪ್ರವಾಸೋದ್ಯಮ ಸಚಿವ ಪಸಂಗ್‌ ದೋರ್ಜಿ ಸೋನಾ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ಮೂರು ದಿನಗಳ ಇಂಡಿಯಾ ಇಂಟರ್‌ನ್ಯಾಷನಲ್‌ ಟ್ರಾವೆಲ್‌ ಮಾರ್ಟ್‌ (ಐಐಟಿಎಂ) ಪ್ರವಾಸೋದ್ಯಮ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಪ್ರವಾಸೋದ್ಯಮದಿಂದ ಸಂಸ್ಕೃತಿಗೆ ಉತ್ತೇಜನ ದೊರೆಯುತ್ತದೆ. ಪರಸ್ಪರ ಕಲಿಕೆಗೆ ಅವಕಾಶ ಸಿಗುತ್ತದೆ. ದೇಶದ ವಿವಿಧ ರಾಜ್ಯಗಳು ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುತ್ತ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಪೋಷಿಸುತ್ತಿದೆ. ಅರುಣಾಚಲ ಪ್ರದೇಶವೂ ಇದರಲ್ಲಿ ಹಿಂದೆ ಬೀಳಬಾರದು ಎನ್ನುವುದು ಸರಕಾರದ ಉದ್ದೇಶ” ಎಂದು ಅವರು ಹೇಳಿದರು.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಡಾ. ಆರ್‌. ರಾಜೇಂದ್ರ, ಜಂಗಲ್‌ ಲಾಡ್ಜಸ್‌ ಆಂಡ್‌ ರೆಸಾರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಸಾಂತ್‌ ಶಂಕಿನಮಠ, ಕರ್ನಾಟಕ ಟೂರಿಸಂ ಸೊಸೈಟಿ ಹಾಗೂ ಹೋಟೆಲ್‌ ಮತ್ತು ರೆಸ್ಟೋರಂಟ್‌ ಒಕ್ಕೂಟದ ಅಧ್ಯಕ್ಷರಾದ ಶ್ಯಾಮರಾಜು, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರವಾಸೋದ್ಯಮ, ಪ್ರಯಾಣ, ಆತಿಥ್ಯ ಮತ್ತು ವಿರಾಮರಜೆಗಳಿಗೆ ಸಂಬಂಧಿಸಿದ ಉದ್ಯಮಗಳನ್ನು ಒಂದೇ ಸೂರಿನಡಿ ತರುವ ಐಐಟಿಎಂ ಈ ವರ್ಷ ರಜತ ಸಂಭ್ರಮದಲ್ಲಿದೆ. ಪ್ರವಾಸಿಗರಿಗೆ ಮಾರ್ಗದರ್ಶಿಯಾಗುವ ಜೊತೆಗೆ ಐಐಟಿಎಂ ಪ್ರವಾಸೋದ್ಯಮದ ವಿವಿಧ ವಿಭಾಗಗಳ ಪ್ರತಿನಿಧಿಗಳ ನಡುವೆ ಸಂಪರ್ಕ ಕೊಂಡಿಯಂತೆಯೂ ಕೆಲಸ ಮಾಡುತ್ತಿದೆ. ಟ್ರಾವೆಲ್‌ ಏಜೆಂಟರು, ಟೂರ್‌ ಆಪರೇಟರ್‌ಗಳು, ಹೋಟೆಲ್‌ ಮತ್ತು ರೆಸಾರ್ಟ್ಸ್‌, ವಿವಿಧ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳು, ತಂತ್ರಜ್ಞಾನ ಸಂಸ್ಥೆಗಳು, ಆನ್‌ಲೈನ್‌ ಟ್ರಾವೆಲ್‌ ಪೋರ್ಟಲ್‌ಗಳು ಇತ್ಯಾದಿ ಈ ಪ್ರವಾಸಿ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ.
ಈ ಬಾರಿಯ ಮೇಳದಲ್ಲಿ 25 ರಾಜ್ಯಗಳು ಮತ್ತು 20 ಅಂತರ್‌ರಾಷ್ಟ್ರೀಯ ತಾಣಗಳ 800ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದಾರೆ. ಧಾರ್ಮಿಕ ಯಾತ್ರೆಗಳು, ಸಾಹಸ, ಸಂಸ್ಕೃತಿ, ವನ್ಯಜೀವಿ ಪ್ರವಾಸೋದ್ಯಮ ಇತ್ಯಾದಿ ವೈವಿಧ್ಯಮಯ ಕ್ಷೇತ್ರಗಳ ಪ್ರದರ್ಶಕರು ಇದರಲ್ಲಿ ಸೇರಿದ್ದಾರೆ. ಈಶಾನ್ಯ ರಾಜ್ಯಗಳ ಭಾರತೀಯ ಘೇಂಡಾಮೃಗಗಳಿಂದ, ರಾಜಸ್ತಾನದ ಉತ್ಸವಗಳು ಮತ್ತು ಕರ್ನಾಟಕದ ಪಾರಂಪರಿಕ ತಾಣಗಳವರೆಗೆ ವೈವಿಧ್ಯಮಯ ವರ್ಣಮಯ ಮಾರ್ಗದರ್ಶಿ ಮಳಿಗೆಗಳು ಇಲ್ಲಿವೆ. ಕರ್ನಾಟಕ ಪ್ರವಾಸೋದ್ಯಮಕ್ಕೆ ಒತ್ತು ನೀಡುವನಿಟ್ಟಿನಲ್ಲಿ ಮೈಸೂರು ದಸರಾ ಉತ್ಸವ ಮತ್ತು ರಾಜ್ಯದ ಸಂಸ್ಕೃತಿ ಮತ್ತು ವಾಸ್ತುಶಿಲ್ಪಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ.
ಐಐಟಿಎಂ ಆಯೋಜಿಸುವ ಸ್ಫಿಯರ್‌ ಟ್ರಾವೆಲ್‌ ಮೀಡಿಯಾದ ನಿರ್ದೇಶಕರಾದ ಸಂಜಯ್‌ ಹಖು ಅವರು ಮಾತನಾಡಿ “ಇಂಡಿಯಾ ಇಂಟರ್‌ನ್ಯಾಷನಲ್‌ ಟ್ರಾವೆಲ್‌ ಮಾರ್ಟ್‌ 2025 ಪ್ರವಾಸೋದ್ಯಮದಲ್ಲಿ ಎಲ್ಲರೂ ಎದುರು ನೋಡುವ ಅತ್ಯಂತ ಪ್ರಮುಖ ಮೇಳವಾಗಿದ್ದು, ಇದರ ಬೆಂಗಳೂರು ಆವೃತ್ತಿಗೆ ಪ್ರದರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರತೀ ಐಐಟಿಎಂ ಮೇಳವನ್ನೂ ವಿರಾಮರಜೆಗಳಿಂದ ಹೊಣೆಗಾರಿಕೆಯ ಪ್ರವಾಸೋದ್ಯಮದವರೆಗೆ ವಿವಿಧ ವಿಭಾಗಗಳ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗುತ್ತಿದೆ. ಈ ವರ್ಷ ಕೇವಲ ವೃತ್ತಿಪರ ಪ್ರವಾಸಿ ಏಜೆಂಟರು ಮಾತ್ರವಲ್ಲದೇ ವಿವಿಧ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳು, ಅಂತರ್‌ರಾಷ್ಟ್ರೀಯ ತಾಣಗಳು, ಆತಿಥ್ಯ ಕ್ಷೇತ್ರಗಳಿಂದಲೂ ಉತ್ತಮ ಸ್ಪಂದನೆ ದೊರಕಿದೆ” ಎಂದು ತಿಳಿಸಿದರು.
ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿರುವ ಐಐಟಿಎಂ ಪ್ರವಾಸೋದ್ಯಮ ಮೇಳ ಜುಲೈ 26ಕ್ಕೆ ಕೊನೆಗೊಳ್ಳಲಿದೆ. ಉಚಿತ ಪ್ರವೇಶವಾಗಿದೆ. ಆದರೆ ಭೇಟಿ ನೀಡುವವರು ಸ್ಥಳದಲ್ಲಿ ಪೂರ್ವ ನೋಂದಣಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.