2025 ರ ಮಾರ್ಚ್ ವೇಳೆಗೆ ಜನೌಷಧಿ ಕೇಂದ್ರಗಳ ತೆರೆಯಲು ಸರ್ಕಾರದ ಗುರಿ; ಕೇಂದ್ರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ
ದೇಶಾದ್ಯಂತ ಎಲ್ಲ ಜಿಲ್ಲೆಗಳಿಗೂ ಜನೌಷಧಿ ಕೇಂದ್ರಗಳ ವಿಸ್ತರಣೆ
ಸಕಾಲದಲ್ಲಿ ಔಷಧಗಳ ವಿತರಣೆಗೆ ಪೂರೈಕೆ ಸರಣಿ ಮತ್ತು ಸಾಗಾಣೆ ಸೌಕರ್ಯವೃದ್ಧಿಗೆ ಮಾಹಿತಿ ತಂತ್ರಜ್ಞಾನ ಸಮರ್ಪಕ ಬಳಕೆ
ನವದೆಹಲಿ, ಸೆಪ್ಟಂಬರ್ 17: 2025ರ ಮಾರ್ಚ್ ವೇಳೆಗೆ ದೇಶಾದ್ಯಂತ 10 ಸಾವಿರದ 500 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ತೆರೆಯುವ ಮಹತ್ವದ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಸಾಮಾನ್ಯ ಜನರು ವಿಶೇಷವಾಗಿ ಬಡವರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಗಳನ್ನು ನೀಡುವ ಜನೌಷಧಿ ಮಳಿಗೆಗಳ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಜನರು ಔಷಧಗಳಿಗಾಗಿ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದಾರೆ. ಹಾಗಾಗಿ ಈಗ ಇರುವ 6606 ಮಳಿಗೆಗಳ ಸಂಖ್ಯೆಯನ್ನು 10500ಕ್ಕೆ ಹೆಚ್ಚಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಜನೌಷಧಿ ಕೇಂದ್ರಗಳನ್ನು ದೇಶದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು, ದೇಶದ ಪ್ರತಿಯೊಂದು ಮೂಲೆ ಮೂಲೆಗಳಲ್ಲಿರುವ ಜನರಿಗೂ ಕೈಗಟಕುವ ದರದಲ್ಲಿ ಔಷಧ ಲಭ್ಯವಾಗುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಳೆದ ಮಾರ್ಚ್ ನಿಂದ ಜೂನ್ 2020ರ ವರೆಗೆ ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನ,(ಪಿಎಂಬಿಜೆಪಿ) ಕಚ್ಚಾ ಸಾಮಗ್ರಿ ಪೂರೈಕೆ, ಎಪಿಐ ಕೊರತೆ ಸೇರಿ ಹಲವು ಸವಾಲುಗಳನ್ನು ಎದುರಿಸಿದೆ. ಪ್ರಾದೇಶಿಕ ಮತ್ತು ಕೇಂದ್ರ ಗೋದಾಮುಗಳಿಂದ ಜನೌಷಧಿ ಕೇಂದ್ರಗಳಿಗೆ ಔಷಧಗಳ ಪೂರೈಕೆಗೆ ಸಾಗಾಣೆ ಸಮಸ್ಯೆಯೂ ಉಂಟಾಗಿತ್ತು. ಇದೆಲ್ಲದರ ನಡುವೆಯೂ ಸಕಾಲದಲ್ಲಿ ಗುಣಮಟ್ಟದ ಔಷಧಗಳು ಪೂರೈಕೆಯಾಗುವಂತೆ ಮಾಡಲು ಪೂರೈಕೆ ಸರಣಿ ಬಲವರ್ಧನೆ ಮತ್ತು ಸಾರಿಗೆ ಸೌಕರ್ಯಗಳಿಗಾಗಿ ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಎಲ್ಲ ಮಳಿಗೆಗಳಲ್ಲಿ ಔಷಧ ದಾಸ್ತಾನು ಕೊರತೆ ಉಂಟಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಹೇಳಿದರು.
ಪ್ರಸ್ತುತ ನಾಲ್ಕು ಜನೌಷಧಿ ಗೋದಾಮುಗಳು ಬೆಂಗಳೂರು, ಗುರುಗ್ರಾಮ, ಚೆನ್ನೈ, ಮತ್ತು ಗುವಾಹತಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದೀಗ ಮತ್ತೆ ಎರಡು ಗೋದಾಮುಗಳನ್ನು ಪಶ್ಚಿಮ ಮತ್ತು ಕೇಂದ್ರ ಭಾರತದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಜೊತೆಗೆ ಪೂರೈಕೆ ಸರಣಿ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿತರಣೆದಾರರ ನೇಮಕಾತಿಗೂ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನ, ಅಡಿ 2020-21ರಿಂದ 2024-25ರ ಅವಧಿಗೆ 490 ಕೋಟಿ ರೂಪಾಯಿ ಬಜೆಟ್ ಬೆಂಬಲಕ್ಕೆ ಅನುಮೋದನೆ ನೀಡಲಾಗಿದೆ. ಕೋವಿಡ್ ಲಾಕ್ ಡೌನ್ ನಡುವೆಯೂ ಜನೌಷಧಿ ಕೇಂದ್ರಗಳು 2020-21ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಒಟ್ಟಾರೆ 146.59 ಕೋಟಿ ರೂ. ದಾಖಲೆಯ ವಹಿವಾಟು ನಡೆಸಿವೆ. 2019-20ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಕೇವಲ 75.48 ಕೋಟಿ ರೂ. ವಹಿವಾಟು ನಡೆಸಿದ್ದವು. ಜುಲೈನಿಂದ ಸೆಪ್ಟೆಂಬರ್ 2020ರ ವರೆಗೆ(ಸೆಪ್ಟೆಂಬರ್ 15ರ ವರೆಗೆ) ಈ ಮಳಿಗೆಗಳು 109.43 ಕೋಟಿ ರೂ. ಮೌಲ್ಯದ ಔಷಧಗಳನ್ನು ಮಾರಾಟ ಮಾಡಿವೆ. ಇದರಿಂದಾಗಿ ಸೆಪ್ಟೆಂಬರ್ 15, 2020ರ ವರೆಗೆ ಒಟ್ಟು ಮಾರಾಟ ಪ್ರಮಾಣ 256.02 ಕೋಟಿ ರೂ.ಗಳಿಗೆ ಏರಿದೆ
ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನ, ಗುಣಮಟ್ಟದ ಔಷಧಗಳ ಬೆಲೆಯನ್ನು ಗಣನೀಯವಾಗಿ ಇಳಿಕೆ ಮಾಡಿದೆ ಮತ್ತು ಅತಿ ದೊಡ್ಡ ವರ್ಗದ ಜನಸಂಖ್ಯೆಗೆ ವಿಶೇಷವಾಗಿ ಬಡವರಿಗೆ ಕೈಗೆಟಕುವ ದರದಲ್ಲಿ ಔಷಧಿಗಳನ್ನು ಪೂರೈಸುತ್ತಿವೆ.