ಕಡುಬಡ ಕುಟುಂಬಗಳಿಗೆ ದವಸ ಧಾನ್ಯ ವಿತರಣೆ
ಪಾವಗಡ: – ಶಿರಾ ರಸ್ತೆಯಲ್ಲಿ ಬೀಡು ಬಿಟ್ಟಿರುವ ಮಹಾರಾಷ್ಟ್ರದ ಔರಂಗಾಬಾದಿನಿಂದ ಚಿಕ್ಕ ಚಿಕ್ಕ ಆಟೋಗಳಲ್ಲಿ ಕಬ್ಬಿಣದ ಕೆಲಸವನ್ನು ಮಾಡುವ ಕಡುಬಡ ಕುಟುಂಬಗಳಿಗೆ ದವಸ ಧಾನ್ಯ ಹಾಗೂ ಅಡುಗೆ ಎಣ್ಣೆಯನ್ನು ವಿತರಿಸಲಾಯಿತು. ಈ ಅತ್ಯಂತ ಬಡತನದಿಂದ ಊರಿಂದ ಊರಿಗೆ ತೆರಳುತ್ತಾ ಕಬ್ಬಿಣದ ಕುಲುಮೆ ಕೆಲಸವನ್ನು ಮಾಡುತ್ತಾ ಚಿಕ್ಕ ಪುಟ್ಟ ಮಚ್ಚು, ಚಾಕು ಹಾಗೂ ಇತರ ಪರಿಕರಗಳನ್ನು ಕಾದ ಕುಲುಮೆಯಲ್ಲಿ ಕಬ್ಬಿಣದ ಸಲಾಕೆಗಳನ್ನಿತ್ತು, ಆ ಸಲಾಕೆಗಳನ್ನು ಹೆಣ್ಣು ಮಕ್ಕಳು ಅತ್ಯಂತ ತೂಕದ ಸುತ್ತಿಗೆಯಿಂದ ಬಡಿಯುತ್ತಿದ್ದರೆ ಅತ್ತ ಗಂಡಸರು ಆ ಸಲಾಕೆಯನ್ನು ತಮಗೆ ಬೇಕಾದ ರೀತಿಯಲ್ಲಿ ರೂಪುಗೊಳ್ಳುವಂತೆ ಮಾಡಿ ಕುಡುಗೋಲು, ಮಚ್ಚು, ಚಾಕುಗಳು ಇತ್ಯಾದಿಗಳನ್ನು ಮಾಡಿ ತಮ್ಮ ಜೀವನೋಪಾಯವನ್ನು ಸಾಗಿಸುತ್ತಿದ್ದಾರೆ.
ಈ ನತದೃಷ್ಟರ ಸ್ಥಿತಿಯನ್ನು ಕಂಡ ಪೂಜ್ಯ ಸ್ವಾಮಿ ಜಪಾನಂದಜೀ ರವರು ಎಲ್ಲರಿಗೂ ಮುಖಗವಸು, ದಿನಸಿ ಧಾನ್ಯಗಳ ಕಿಟ್‍ನ್ನು ವಿತರಿಸಿದರು. ಸರಿಸುಮಾರು 30 ಕುಟುಂಬಗಳು ಈ ಸಹಾಯವನ್ನು ಪಡೆದವು. ಆ ನತದೃಷ್ಟರ ಮೊಗದಲ್ಲಿ ಸಂತೋಷದ ಚಿಲುಮೆ ಬಂದಂತಾಯಿತು. ಇದೇ ಸಂದರ್ಭದಲ್ಲಿ ಮಕ್ಕಳಿಗೆಲ್ಲಾ ಶಕ್ತಿವರ್ಧಕ ಬಿಸ್ಕೆಟ್‍ಗಳನ್ನು ಹಂಚಿದರು.
ಈ ಕೊರೊನಾ19 ಕರಾಳ ದಿನಗಳಲ್ಲಿ ಸಮಾಜದ ಎಲ್ಲ ವರ್ಗಗಳಿಗೆ ಹುಡುಕಿ ಸಹಾಯಹಸ್ತವನ್ನು ನೀಡುತ್ತಿರುವ ಇನ್ಫೋಸಿಸ್ ಫೌಂಡೇಷನ್ ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡ ಮತ್ತು ಸುತ್ತಮುತ್ತಲಿನ ಮಂಗಳಮುಖಿಯರ ಮನವಿಗೆ ಸ್ಪಂದಿಸಿ ಅವರಿಗೂ ಸಹಾಯಹಸ್ತವನ್ನು ನೀಡಲಾಗಿದೆ. ಸರಿಸುಮಾರು 40 ಮಂಗಳಮುಖಿಯರಿಗೆ ದಿನಸಿ ಹಾಗೂ ಅಡುಗೆ ಎಣ್ಣೆಯ ಕಿಟ್‍ಗಳನ್ನು ನೀಡಲಾಯಿತು. ಈ ಎಲ್ಲಾ ಕಾರ್ಯಕ್ರಮದಲ್ಲಿ ಶ್ರೀ ವಿ.ಮಂಜುನಾಥ್, ಸರ್ಕಾರಿ ಸಹಾಯಕ ಅಭಿಯೋಜಕರು ಭಾಗವಹಿಸಿ ಸ್ವಾಮೀಜಿಯವರಿಗೆ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಆಶ್ರಮದ ಸಂಯೋಜಕರಾದ ಶ್ರೀ ಶ್ರೀನಿವಾಸ್, ಶ್ರೀ ಪ್ರಕಾಶ್ ನಾಯಕ್, ಶ್ರೀ ಅನಿಲ್ ಕುಮಾರ್ ಮತ್ತು ಶ್ರೀ ಮಂಜುನಾಥ್ ರವರು ಭಾಗವಹಿಸಿದ್ದರು.