ನಿಡಗಲ್ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟನೆ…!
ಪಾವಗಡ : ಸ್ವಾಸ್ಥ್ಯ ದೇಹದಲ್ಲಿ ಸ್ವಾಸ್ಥ್ಯ ಮನಸ್ಸು ಎಂಬಂತೆ, ಯಾರ ದೇಹ ಸದೃಢವಾಗಿರುತ್ತದೆಯೋ ಅಂತಹವರ ಮನಸ್ಸು ಸಹ ಸದೃಢವಾಗಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕರ ಆವರಣದಲ್ಲಿ ಏರ್ಪಡಿಸಿದ್ದ ನಿಡಗಲ್ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಹ ಮತ್ತು ಮನಸ್ಸು ಒಂದೇ ನಾಣಿದ ಎರಡು ಮುಖಗಳಿದ್ದಂತೆ, ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿಡಲು ಶಿಕ್ಷಣದ ಜೊತೆ ಕ್ರೀಡೆ ಅತ್ಯವಶ್ಯಕವೆಂದರು.
ಅಜ್ಞಾನವೆಂಬ ಕತ್ತಲನ್ನು ತೊರೆದು, ಜ್ಞಾನವೆಂಬ ಬೆಳಕನ್ನು ನೀಡಲು ಸನ್ನದ್ಧರಾದವರು ಯಾರಾದರೂ ಇದ್ದರೆ ಅದು ಸೂರ್ಯ ಮತ್ತು ಶಿಕ್ಷಕರೆಂದು ತಿಳಿಸಿದರು.
ಶಾಲೆಯಲ್ಲಿ ಕೆಲ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ಕೆಲ ವಿದ್ಯಾರ್ಥಿಗಳು ಕ್ರೀಡೆ ಮತ್ತು ಇತರೆ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ.
ಶಿಕ್ಷಕರಾದವರು ಆ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ತರಬೇತಿ ನೀಡಿದರೆ ಅಂತಹ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವೆಂದರು.
ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, ಸೋಲೇ ಗೆಲುವಿಗೆ ಸೋಪಾನವೆಂದು, ಸೋಲೇ ಗೆಲುವಿಗೆ ಮೆಟ್ಟಿಲುಗಳೆಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ಬಂದವರು ಯಾವುದೇ ಪೂರ್ವಗ್ರಹ ಪೀಡಿತರಾಗಿ ತೀರ್ಪನ್ನು ನೀಡದೆ ವಿದ್ಯಾರ್ಥಿಗಳ ಉತ್ತಮ ಪ್ರದರ್ಶನವನ್ನು ನೋಡಿ ತೀರ್ಪು ನೀಡಬೇಕೆಂದು ಕಿವಿ ಮಾತನ್ನು ತಿಳಿಸಿದರು.
ಕ್ರೀಡಾಕೂಟಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ತಲುಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ನಾಗೇಂದ್ರ, ಈಸಿಯು ರಂಗನಾಥ್, ವೇಣುಗೋಪಾಲ್ ರೆಡ್ಡಿ, ಪಿಇ ಓ ವಿಜಯ್ ಕುಮಾರ್, ಸಿದ್ದೇಶ್ವರ, ಮಾಲತಿ, ಮಾರಣ್ಣ, ಲಕ್ಷ್ಮೀನಾರಾಯಣ,ರಾಮ ನಾಯ್ಕ, ರಾಮಯ್ಯ ಮುಂತಾದ ದೈಹಿಕ ಶಿಕ್ಷಕರು ಮತ್ತು ಕ್ರೀಡಾಪಟುಗಳು ಹಾಜರಿದ್ದರು.
ವರದಿ: ಶ್ರೀನಿವಾಸಲು ಎ
