*ರಾಜಕಾರಣಿಗಳು ರಾಜಕಾರಣ ಮಾಡಲಿ, ಧರ್ಮಾಧಿಕಾರಿಗಳು ಈ ವ್ಯಾಮೋಹ ಬಿಡಲಿ*
*ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಿಮತ*
*ಕಾಂಗ್ರೆಸ್ ಆಂತರಿಕ ಕಲಹದಲ್ಲಿ ಸ್ವಾಮೀಜಿಗಳು ಮಧ್ಯಪ್ರವೇಶ ಅಗತ್ಯ ಇಲ್ಲ ಎಂದ ಸಚಿವರು*
*ಜಾತಿ ಸಂಘರ್ಷಕ್ಕೆ ಅವಕಾಶ ಬದಿನಗಳ ಕಾಲ ಅಧಿವೇಶನ ನಡೆಸಲು ಆಗ್ರಹ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ದೀರ್ಘ ಚರ್ಚೆಯಾಗಲಿ: ಪ್ರತಿಪಕ್ಷ ನಾಯಕ ಆರ್.ಅಶೋಕ*
*ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಜಗಳ ಬಿಟ್ಟು ಬೇರೇನೂ ಆಗುವುದಿಲ
ಬೆಂಗಳೂರು: ನ 29/: ರಾಜಕಾರಣಿಗಳು ರಾಜಕಾರಣ ಮಾಡಲಿ. ಆದರೆ ಧರ್ಮಾಧಿಕಾರಿಗಳು ಯಾರೋ ಒಬ್ಬರ ಪರ ಅಭಿಪ್ರಾಯ ವ್ಯಕ್ತಪಡಿಸುವ ವ್ಯಾಮೋಹ ಬಿಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಎನ್ ಡಿಎ ಸಮನ್ವಯ ಸಮಿತಿ ಸಭೆಯ ನಂತರ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು; ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹದ ವಿಚಾರದಲ್ಲಿ ಸ್ವಾಮೀಜಿಗಳು ಮಧ್ಯ ಪ್ರವೇಶ ಮಾಡುವುದು ಅನಗತ್ಯ. ಅವರಿಗೆ ಇದರಲ್ಲಿ ಏನೂ ಕೆಲಸ ಇಲ್ಲ ಎಂದು ಅಭಿಪ್ರಾಯಪಟ್ಟರು.
ಸರ್ಕಾರದಲ್ಲಿ ನಡೆಯುತ್ತಿರುವ ಕುರ್ಚಿ ಕಲಹದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು; ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ಅಧಿಕಾರ ಹೋದಾಗ ಯಾವ ಮಠಾಧಿಪತಿಗಳ ನೆರವನ್ನು ನಾನು ಕೇಳಲಿಲ್ಲ. ರಾಜಕಾರಣಿಗಳ ಕೆಲಸವೇ ಬೇರೆ, ಸ್ವಾಮೀಜಿಗಳ ಕೆಲಸವೇ ಬೇರೆ. ಒಕ್ಕಲಿಗ ಸಮಾಜ ಅಷ್ಟೇ ಅಲ್ಲ, ಬೇರೆ ಯಾವುದೇ ಸಮಾಜದ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಜಾತಿ ಧರ್ಮಗಳ ವಿಚಾರ ಹೇಳಿಕೊಂಡು ಧಾರ್ಮಿಕ ಕ್ಷೇತ್ರಗಳನ್ನ ದುರುಪಯೋಗಪಡಿಸಿಕೊಂಡು, ರಾಜಕಾರಣ ಮಾಡೋದು ಯಾರಿಗೂ ಶೋಭೆ ತರುವುದಿಲ್ಲ ಎಂದು ಎಂದು ಕೇಂದ್ರ ಸಚಿವರು ಹೇಳಿದರು
ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಅವಕಾಶ ಇರಬಾರದು. ಅದಕ್ಕೆ ಯಾರೂ ಕಾರಣ ಆಗಬಾರದು. ನಾನು ಧರ್ಮಗುರುಗಳಿಗೆ ಮನವಿ ಮಾಡುವುದು ಇಷ್ಟೇ. ಸಮಾಜದಲ್ಲಿ ಶಾಂತಿ ನೆಮ್ಮದಿ ಮುಖ್ಯ. ಜಾತಿ ಮತ್ತು ಧರ್ಮ ಸಂಘರ್ಷ ಮಾಡಬಾರದು. ಅದು ರಾಜ್ಯಕ್ಕೆ ಒಳ್ಳೆಯದಲ್ಲ. ಕಾಂಗ್ರೆಸ್ ಪಕ್ಷದ ಕಲಹದಲ್ಲಿ ಜಾತಿ ಧರ್ಮಗಳನ್ನು ಎಳೆದು ತರೋದು ಬೇಕಾಗಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.
ರಾಜ್ಯದಲ್ಲಿ ಈಗ ದೊಡ್ಡ ಮಟ್ಟದಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ. ಇದರಿಂದ ನಷ್ಟ ರಾಜಕಾರಣ ಮಾಡುವವರಿಗೆ ಆಗುವುದಿಲ್ಲ. ರಾಜ್ಯಕ್ಕೆ ದೊಡ್ಡ ನಷ್ಟ ಆಗುತ್ತದೆ. ರಾಜ್ಯದಲ್ಲಿ ಸಮಾಜಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಇದರ ಅವಶ್ಯಕತೆ ಇಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಆಗುವ ಮುಜುಗರ ಅಲ್ಲ. ಕರ್ನಾಟಕ ಜನತೆಗೆ ಆಗುವ ಮುಜುಗರ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಈ ಸರ್ಕಾರಕ್ಕೆ ರಾಜ್ಯದ ಜನ 140 ಸ್ಥಾನ ನೀಡಿದ್ದರು. ಅಷ್ಟು ಬಹುಮತ ಕೊಟ್ಟರೂ ಜನರ ನಿರೀಕ್ಷೆ ಹುಸಿ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಇವರು ಮಾಡಿದ್ದು ಏನು? ಕುರ್ಚಿಗಾಗಿ ಕಿತ್ತಾಟ ಮಾಡುತ್ತಿದ್ದಾರೆ. ರಾಜ್ಯದ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು ಎನ್ನುವ ಪರಿಜ್ಞಾನ ಇವರಿಗೆ ಇಲ್ಲ. ನನ್ನ ಪ್ರಕಾರ ಈ ಸರ್ಕಾರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯೇ ಇಲ್ಲ ಎಂದು ಅವರು ಕಿಡಿಕಾರಿದರು.
ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಸರ್ಕಾರದ ಬಗ್ಗೆ ಸುಳ್ಳು ಹೇಳುತ್ತಿವೆ ಎಂದು ಸಿಎಂ ಹೇಳಿರುವ ಬಗ್ಗೆ ಕೆಂಡ ಕಾರಿದ ಸಚಿವ ಕುಮಾರಸ್ವಾಮಿ ಅವರು; ಸಿದ್ದರಾಮಯ್ಯ ಅವರು ಒಬ್ಬರೇ ಸತ್ಯ ಹರಿಶ್ಚಂದ್ರ. ಪಾಪ.. ಸತ್ಯ ಹರಿಶ್ಚಂದ್ರ ಕಾಡಿಗೆ ಹೋಗಬೇಕಾದರೆ ಸಿದ್ದರಾಮಯ್ಯನ ಹುಂಡಿ ಮೇಲೆ ಹೋಗಿರಬೇಕು. ಅದಕ್ಕೆ ಸಿದ್ದರಾಮಯ್ಯ ಹೀಗೆ ಹೇಳುತ್ತಿರಬಹುದು ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.
2028ರ ಕುನಾವಣೆ ತುಂಬಾ ದೂರಾ ಇದೆ. ತೇಜಸ್ವಿ ಯಾದವ್ ಬಿಹಾರದಲ್ಲಿ ಪ್ರಮಾಣ ವಚನ ದಿನಾಂಕವನ್ನೇ ನಿಗದಿ ಮಾಡಿದ್ದರು. ಆದರೆ ಅಲ್ಲಿ ಏನು ಆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅನಗತ್ಯ ಜಾತಿ ಧರ್ಮವನ್ನು ಎಳೆದುತಂದು ಜನರನ್ನು ಪರಸ್ವರ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಇದು ಆಗಬಾರದು. ಒಕ್ಕಲಿಗ, ಕುರುಬರ ಮತ್ತು ಇತರ ಸಮಾಜದ ಸ್ವಾಮೀಜಿಗಳ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯ. ಧರ್ಮ ಸಂಘರ್ಷ ಮಾಡಬಾರದು ಎಂದು ಸಚಿವರು ಹೇಳಿದರು.
ಎಲ್ಲಾ ರೀತಿಯಲ್ಲಿಯೂ ಕಾಂಗ್ರೆಸ್ ರಾಜ್ಯದಲ್ಲಿ ವಿಫಲವಾಗಿದೆ. ಜನರ ಪರವಾಗಿ ದನಿಯೆತ್ತಲಿಕ್ಕಾಗಿಯೇ ನಾವು ಇಲ್ಲಿ ಸಭೆ ಸೇರಿದ್ದೇವೆ. ಡಿಸೆಂಬರ್ 8ರಿಂದ ಬೆಳಗಾವಿ ಅಧಿವೇಶನ ನಡೆಯುತ್ತದೆ. ಎರಡು ಪಕ್ಷಗಳು ಪರಿಣಾಮಕಾರಿಯಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಿವೆ. ಬೆಂಗಳೂರಿನಿಂದ ಶಾಸಕರು ಕಾಟಾಚಾರಕ್ಕೆ ಬರುತ್ತಾರೆ ಎನ್ನುವ ಅಭಿಪ್ರಾಯ ಬೇಡ. ಉತ್ತರ ಕರ್ನಾಟಕದ ಜನ ಕಷ್ಟದಲ್ಲಿದ್ದಾರೆ. ನೆರೆ ಬಂದು ಅನೇಕ ಜಿಲ್ಲೆಗಳ ಜನರು ಕಷ್ಟಕ್ಕೆ ಸಿಲುಕಿದ್ದರು. ಆಸ್ತಿ, ಮನೆಮಠ ಕಳೆದುಕೊಂಡ ಜನರ ನೆರವಿಗೆ ರಾಜ್ಯ ಸರ್ಕಾರ ಬಂದಿಲ್ಲ. ಕೇವಲ ಕೇಂದ್ರ ಸರ್ಕಾರವನ್ನು ದೂರುವ ಕೆಲಸ ಮಾಡುತ್ತಿದೆ. ತುಂಗಭದ್ರಾ ನೀರು ಬಳಕೆ ಮಾಡುವ ರೈತರಿಗೆ ಎರಡನೇ ಬೆಳೆಗೆ ನೀರು ಬಿಡುವುದಿಲ್ಲ ಎಂದು ಹೇಳುತ್ತಿದೆ ಸರ್ಕಾರ. ಈ ವಿಷಯವನ್ನು ಎರಡು ಪಕ್ಷಗಳ ಶಾಸಕರು ಸದನದಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ ಮಾತುಗಳು:
ಈ ಬಾರಿಯ ಅಧಿವೇಶನವನ್ನು 8 ದಿನಗಳ ಬದಲು 20 ದಿನಗಳ ಕಾಲ ನಡೆಸಬೇಕು ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಅಧಿವೇಶನ ಸಂಬಂಧ ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಬಳಿಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ಕಾಲ್ತುಳಿತ ಪ್ರಕರಣ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಒಂದಾಗಿ ಕೆಲಸ ಮಾಡಿದ್ದೇವೆ. ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಎರಡೂ ಪಕ್ಷಗಳು ಕಿವಿ ಹಿಂಡುವ ಕೆಲಸ ಮಾಡಿವೆ. ಈಗ ಬೆಳಗಾವಿ ಅಧಿವೇಶನದಲ್ಲಿ ಯಾವೆಲ್ಲ ವಿಷಯಗಳನ್ನು ಪ್ರಸ್ತಾಪಿಸಬೇಕೆಂದು ಚರ್ಚಿಸಲಾಗಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಲಹೆಗಳನ್ನು ಪಡೆಯಲಾಗಿದೆ ಎಂದರು.
ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಬೇಕಿದೆ. ಆದರೆ ಕೇವಲ ಬೆಂಗಳೂರು ಸಂಬಂಧಿತ ಮಸೂದೆಗಳನ್ನು ತರುತ್ತಿದ್ದಾರೆ. ಹೀಗಾದರೆ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುವ ಅಗತ್ಯವಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಿದೆ. 8 ದಿನದ ಬದಲು 20 ದಿನಗಳ ಕಾಲ ಅಧಿವೇಶನ ನಡೆಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಕಳೆದ ಸಲ ಕೊನೆಯ ಎರಡು-ಮೂರು ದಿನ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗಿತ್ತು. ನಂತರ ಸಿಎಂ ಸಿದ್ದರಾಮಯ್ಯ ಒಂದಷ್ಟು ಭರವಸೆಗಳನ್ನು ನೀಡಿದ್ದರು. ಅದನ್ನು ಇಂದಿಗೂ ಈಡೇರಿಸಿಲ್ಲ ಎಂದರು.
ತುಂಗಭದ್ರಾ ಜಲಾಶಯದ ಗೇಟ್ ದುರಸ್ತಿಯ 12 ಕೋಟಿ ರೂ. ಬಿಲ್ ಇನ್ನೂ ಪಾವತಿಸಿಲ್ಲ. ಇದರಿಂದಾಗಿ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿದ್ದಾರೆ. ಒಟ್ಟು 32 ಗೇಟ್‌ಗಳನ್ನು ಅಳವಡಿಸಬೇಕಿದೆ. ಎರಡನೇ ಬೆಳೆಗೆ ರೈತರಿಗೆ ನೀರು ದೊರೆಯುತ್ತಿಲ್ಲ. ಎಕರೆಗೆ 25,000 ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ. ಈಗಿನ ಸನ್ನಿವೇಶ ನೋಡಿದರೆ ಮುಂದಿನ ವರ್ಷಕ್ಕೂ ನೀರು ಸಿಗುವುದಿಲ್ಲ ಎನ್ನಿಸಿದೆ. ಈ ಸರ್ಕಾರ ಉತ್ತರ ಕರ್ನಾಟಕದ ರೈತರಿಗೆ ಮೋಸ ಮಾಡಿದೆ. ಜೊತೆಗೆ ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಿಲ್ಲ. ಮೆಕ್ಕೆಜೋಳದ ಖರೀದಿ ಕೇಂದ್ರ ಆರಂಭಿಸಿಲ್ಲ. ಈ ಎಲ್ಲ ವಿಷಯಗಳನ್ನು ಮೊದಲಿಗೆ ಚರ್ಚೆ ಮಾಡಬೇಕಿದೆ. ಈ ಬಗ್ಗೆ ಎರಡೂ ಸದನದಲ್ಲಿ ಚರ್ಚಿಸಲಾಗುವುದು ಎಂದರು.
ಬಡವರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಈ ಮೂಲಕ ಗ್ಯಾರಂಟಿಗಳನ್ನು ತಪ್ಪಿಸಬಹುದು ಎಂದು ಸರ್ಕಾರ ಅಂದುಕೊಂಡಿದೆ. ಬಿಜೆಪಿ ಇದ್ದಾಗ ಬಗರ್‌ಹುಕುಂ ಸಾಗುವಳಿಗೆ ಮಂಜೂರಾತಿ ನೀಡಲಾಗಿತ್ತು. ಕಾಂಗ್ರೆಸ್ ಬಂದ ನಂತರ ಈ ಕೆಲಸ ಆಗಿಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಜೈಲುಗಳಲ್ಲಿ ಮದ್ಯ ತಯಾರಿ ಕೇಂದ್ರ ಆರಂಭವಾಗಿದೆ. ಭಯೋತ್ಪಾದಕ ಕೈದಿಗಳ ಕೈಗೆ ಮೊಬೈಲ್ ಬಂದಿದೆ. ಆದರೆ ಗೃಹಸಚಿವರು ಈ ವೀಡಿಯೋ ಸೋರಿಕೆ ಮಾಡಿದವರನ್ನು ಪತ್ತೆ ಮಾಡಲು ಪ್ರಯತ್ನಿಸಿದ್ದಾರೆ. ಇಷ್ಟು ದಿನ ಕಳ್ಳರು ದರೋಡೆ ಮಾಡುತ್ತಿದ್ದರೆ, ಈಗ ಪೊಲೀಸರೇ ದರೋಡೆಗೆ ಇಳಿದಿದ್ದಾರೆ. ಹಗಲಿನಲ್ಲೇ ರಾಜಧಾನಿಯಲ್ಲಿ 7 ಕೋಟಿ ರೂ. ದರೋಡೆಯಾಗಿದೆ ಎಂದರು.
ಸರ್ಕಾರಿ ಶಾಲೆಗಳ ದುಸ್ಥಿತಿ, ಶಿಕ್ಷಕರ ನೇಮಕ, ಬೆಂಗಳೂರಿನಲ್ಲಿ ಗುಂಡಿ ರಸ್ತೆಗಳಿಂದಾಗಿ ಜನರ ಮರಣ ಮೊದಲಾದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಪೊಲೀಸ್ ಠಾಣೆಗಳಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸುತ್ತೇವೆ ಎಂದರು.
*ಸಿಎಂ ಯಾರೆಂದು ಗೊತ್ತಿಲ್ಲ*
ಸಿಎಂ ಯಾರೆಂದು ಗೊತ್ತಾಗದೆ ಇಬ್ಬರೂ ನಾಯಕರ ನಡುವೆ ಕಾದಾಟ ಜೋರಾಗಿದೆ. ಸಿದ್ದರಾಮಯ್ಯ ಎಂದರೆ ಮಾತು ತಪ್ಪಿದವರು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಸರ್ಕಾರದಲ್ಲಿ ಎಲ್ಲರೂ ಕೆಲಸ ಮಾಡುವುದನ್ನು ಬಿಟ್ಟು ಸಿಎಂ ಯಾರೆಂದು ಚರ್ಚಿಸುತ್ತಿದ್ದಾರೆ. ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಜಗಳ ಬಿಟ್ಟು ಬೇರೇನೂ ಆಗುವುದಿಲ್ಲ. ಅಧಿಕಾರ ಹಂಚಿಕೆ ಒಪ್ಪಂದದ ಕುರಿತು ಡಿ.ಕೆ.ಶಿವಕುಮಾರ್ ನೇರವಾಗಿ ಹೇಳಿದ್ದು, ಈ ಬಗ್ಗೆ ದುರ್ಬಲ ಹೈಕಮಾಂಡ್ ಪ್ರತಿಕ್ರಿಯೆ ನೀಡುತ್ತಿಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದರು.
