*ಭಾರತ 3ನೇ ಆರ್ಥಿಕ ಶಕ್ತಿ ಆಗುತ್ತಿದ್ದರೆ ಕರ್ನಾಟಕ ಅಧಃಪತನದತ್ತ ಸಾಗುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ ಕಳವಳ*
*ಜಗತ್ತಿಗೆ ಸ್ಪರ್ಧೆ ನೀಡುತ್ತಿದ್ದ ಬೆಂಗಳೂರಿನ ಮೂಲಸೌಕರ್ಯ ಹಾಳಾಗಿದೆ ಎಂದ ಕೇಂದ್ರ ಸಚಿವರು*
*ರಾಜ್ಯದಲ್ಲಿ ಹುಡುಗಾಟಿಕೆ ರಾಜಕೀಯ ನಡೆಯುತ್ತಿದೆ; ಆಡಳಿತ ಹದಗೆಟ್ಟಿದೆ*
*ಅಟಲ್ ಜಯಂತಿ, ಸುಶಾಸನ ದಿನ, ಅಟಲ್ ಪುರಸ್ಕಾರ ಪ್ರದಾನ ಕಾರ್ಯಕ್ರದಲ್ಲಿ ಹೆಚ್ಡಿಕೆ ಭಾಗಿ*
ಬೆಂಗಳೂರು: ಭಾರತವು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಗತ್ತಿನ ಮೂರನೇ ಆರ್ಥಿಕ ಶಕ್ತಿ ಆಗುವತ್ತ ದಾಪುಗಾಲಿಡುತ್ತಿದೆ. ಆದರೆ, ಉತ್ತಮ ಆಡಳಿತ ಹಾಗೂ ಅಭಿವೃದ್ಧಿಗೆ ಮಾದರಿಯಾಗಿದ್ದ ಕರ್ನಾಟಕವು ಕಾಂಗ್ರೆಸ್ ಆಡಳಿತದಲ್ಲಿ ಅಧಃಪತನದತ್ತ ಸಾಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಗುರುವಾರ ಕೆಂಪೇಗೌಡ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜಯಂತಿ, ಅಟಲ್ ಪುರಸ್ಕಾರ ಪ್ರದಾನ ಹಾಗೂ ಸುಶಾಸನ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಸಚಿವರು ಮಾತನಾಡಿದರು.
ಕರ್ನಾಟಕ ಅತ್ಯತ್ತಮ ಆಡಳಿತಕ್ಕೆ ಪ್ರತೀಕವಾಗಿತ್ತು. ಅತ್ಯುತ್ತಮ ಅಭಿವೃದ್ಧಿ ಮಾದರಿ ಅಳವಡಿಸಿಕೊಂಡು ಇಡೀ ರಾಷ್ಟ್ರಕ್ಕೆ ಮೇಲ್ಪಂಕ್ತಿ ಆಗಿತ್ತು. ಆದರೆ, ಈಗಿನ ಸರ್ಕಾರದ ಕೆಟ್ಟ ಆಡಳಿತದಲ್ಲಿ ಎಲ್ಲಾ ಹೆಗ್ಗಳಿಕೆಗಳು ಹೋಗಿ ಅತ್ಯುತ್ತಮ ಎನ್ನುವುದರ ವಿರುದ್ಧ ದಿಕ್ಕಿನಲ್ಲಿ ರಾಜ್ಯವೂ ಹೋಗುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ಈಗಿನ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಸಂಪೂರ್ಣವಾಗಿ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಕರ್ನಾಟಕ ಮೇರು ಸದೃಶ ರಾಜ್ಯವಾಗಿತ್ತು. ವಾಜಪೇಯಿ ಅವರ ಸ್ಮರಣೆ ಸಂದರ್ಭದಲ್ಲಿ ಈ ಸರ್ಕಾರದ ಬಗ್ಗೆ ಮಾತಾಡಿದರೆ ನಾವು ಸಣ್ಣವರು ಆಗುತ್ತೇವೆ ಎನ್ನುವುದು ನನ್ನ ಭಾವನೆ. ಉತ್ತಮ ಆಡಳಿತದಲ್ಲಿ ಮೊದಲ ಸ್ಥಾನದಲ್ಲಿದ್ದ ರಾಜ್ಯ ಕರ್ನಾಟಕ, ಇವತ್ತು ಈ ರಾಜ್ಯಕ್ಕೆ ಏನಾಗಿದೆ? ಒಳ್ಳೆಯ ರಾಜ್ಯದಲ್ಲಿ ಹುಡುಗಾಟಿಕೆ ರಾಜಕೀಯ ನಡೆಯುತ್ತಿದೆ. ಆರೋಗ್ಯ ಶಿಕ್ಷಣ, ಕೃಷಿ, ಕಂದಾಯ ಸೇರಿ ಎಲ್ಲಾ ಇಲಾಖೆಗಳ ಆಡಳಿತ ಹದಗೆಟ್ಟು ಹೋಗಿದೆ. ಇನ್ನಾದರೂ ಜನರು ಆಲೋಚನೆ ಮಾಡಬೇಕಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಆಡಳಿತ ಎಂದರೆ ಕರ್ನಾಟಕ ಎನ್ನುವ ದಿನಗಳು ಮತ್ತೆ ಬರಬೇಕು. ಹಿಂದಿನ ಉತ್ತಮ ಆಡಳಿತ ಮತ್ತೆ ಬರಬೇಕು. ಈ ಸರಕಾರದ ಕೆಟ್ಟ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಈಗಲಾದರೂ ಆಲೋಚನೆ ಮಾಡಬೇಕು ಎಂದು ಈ ವೇದಿಕೆಯ ಮೂಲಕ ನಾನು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಐಟಿ ಬಿಟಿ ರಾಜಧಾನಿ, ಶಿಕ್ಷಣ ತಂತ್ರಜ್ಞಾನದ ಅವಾಸ್ಥಾನವಾಗಿದ್ದ ಬೆಂಗಳೂರು ನಗರದ ಮೂಲಸೌಕರ್ಯ ಪೂರ್ಣವಾಗಿ ಹಾಳಾಗಿದೆ. ಯಾರಾದರೂ ಪ್ರಾಜ್ಞರು ಉತ್ತಮ ಸಲಹೆ ಕೊಟ್ಟರೆ ಅದನ್ನು ಸ್ವೀಕಾರ ಮಾಡುವ ಮನಸ್ಥಿತಿ ಈ ಸರಕಾರಕ್ಕೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆಯೇ ಕೆಟ್ಟದಾಗಿ ಹರಿಯಬಿಡುವ ಸಂಸ್ಕೃತಿ ಇವರದು ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು. 
ರಾಜ್ಯಕ್ಕೆ ಎಲ್ಲಾ ರೀತಿಯ ಶಕ್ತಿ ಇದೆ. ಜಗತ್ತಿನ ಜತೆ ಸ್ಪರ್ಧಾತ್ಮಕವಾಗಿ ಮುನ್ನಡೆಯುವ ಸಾಮರ್ಥ್ಯವೂ ಇದೆ. ಜಗತ್ತು ಅಭಿವೃದ್ಧಿಯತ್ತ ನಾಗಾಲೋಟದಲ್ಲಿ ಸಾಗುತ್ತಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವು ಅಷ್ಟೇ ವೇಗದಲ್ಲಿ ಮುನ್ನಡೆಯುತ್ತಿತ್ತು. ಮೂರನೇ ದೈತ್ಯ ಆರ್ಥಿಕ ಶಕ್ತಿ ಆಗುವುದಕ್ಕೆ ಭಾರತ ದಾಪುಗಾಲು ಇಡುತ್ತಿದೆ. ಹೀಗಿದ್ದರೂ ಕರ್ನಾಟಕ ಯಾವ ದಿಕ್ಕಿಗೆ ಹೋಗುತ್ತಿದೆ. ಹಿಮ್ಮುಖವಾಗಿ ಚಲಿಸುತ್ತಾ ಅಧಃಪತನಕ್ಕೆ ಹೋಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
2006ರಲ್ಲಿ ನಾನು ಬಿಜೆಪಿ ಜತೆ ಸೇರಿ ಮೈತ್ರಿ ಸರಕಾರ ಮಾಡಿದ್ದೆ. ಅಂದು ವಾಜಪೇಯಿ ಅವರ ಸುಶಾಸನ ಪರಿಕಲ್ಪನೆಗೆ ಗೌರವ ತರುವ ರೀತಿಯಲ್ಲಿ ಆಡಳಿತ ಮಾಡಿದ್ದೆವು. ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ, ಪ್ರಾಮಾಣಿಕತೆ ಅಳವಡಿಸಿಕೊಂಡಿದ್ದ ಅವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದರು ಎಂದು ಕೇಂದ್ರ ಸಚಿವರು ಹೇಳಿದರು.
ವಾಜಪೇಯಿ ಅವರು ಅಜಾತಶತ್ರು, ರಾಷ್ಟ್ರಕ್ಕೆ ಸುದೀರ್ಘ ಸೇವೆ ಸಲ್ಲಿಸಿ ತಮ್ಮದೇ ಆದ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿ ಹೋಗಿದ್ದಾರೆ. ಅಂತವರ ಹೆಸರಿನಲ್ಲಿ ಶಿಕ್ಷಣ, ವಿಜ್ಞಾನ,ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂವರು ಸಾಧಕರಿಗೆ ಅಟಲ್ ಪುರಸ್ಕಾರ ನೀಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಪಕ್ಷಬೇಧ ಮರೆತು ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ ಎಂದರು ಕೇಂದ್ರ ಸಚಿವರು.
ಅಟಲ್ ಅವರು ಸಣ್ಣ ಕುಟುಂಬದಿಂದ ಬಂದವರು. ಆದರೆ, ಅವರು ಬಹಳ ಎತ್ತರಕ್ಕೆ ಏರಿದರು. ದೇಶ ಕಂಡ ಅತ್ಯಂತ ಶ್ರೇಷ್ಠ ನಾಯಕರಾಗಿ ಬೆಳೆದರು. ಆರಂಭದಲ್ಲಿ ಯಶಸ್ಸು ಕಾಣಲಿಲ್ಲ, ಹೋರಾಟ ಬಿಡಲಿಲ್ಲ. ಅವರ ಹೋರಾಟ ಸುದೀರ್ಘವಾಗಿತ್ತು. ಕೊನೆಗೂ ಯಶಸ್ಸು ಕಂಡರು ಉತ್ತಮ ಆಡಳಿತ ಕೊಟ್ಟರು. ಇಂಥ ಕಾಲದಲ್ಲಿ ಅಟಲ್ ಅವರಂಥ ನಾಯಕರು ವಿರಳ. ವಿದೇಶಾಂಗ ಸಚಿವರಾಗಿ, ಪ್ರತಿಪಕ್ಷ ನಾಯಕರಾಗಿ, ಪ್ರಧಾನಿಯಾಗಿ ಅವರ ಸಾಧನೆ ದೊಡ್ಡದು. ಎರಡು ಸ್ಥಾನದಲ್ಲಿದ್ದ ಬಿಜೆಪಿಯನ್ನು 170 ಸ್ಥಾನಗಳವರೆಗೆ ತೆಗೆದುಕೊಂಡ ಹೋದ ಧೀಮಂತ ನಾಯಕರು ಅವರು ಎಂದು ಕುಮಾರಸ್ವಾಮಿ ಅವರು ಅಟಲ್ ಅವರ ಗುಣಗಾನ ಮಾಡಿದರು.
ಲೋಕಸಭೆಯಲ್ಲಿ ಕೇವಲ ಒಂದು ಮತದಿಂದ ಅಧಿಕಾರ ಕಳೆದುಕೊಂಡು ನಂತರ ಐದು ವರ್ಷ ಆಡಳಿತಕ್ಕೆ ಜನಾದೇಶ ಪಡೆದ ವಾಜಪೇಯಿ ಅವರು; ಜನರ ನಿರೀಕ್ಷೆಗೆ ಮೀರಿ ಕೆಲಸ ಮಾಡಿದರು. ಚತುಷ್ಪಥ ಹೆದ್ದಾರಿ ಯೋಜನೆ ಜಾರಿಗೆ ತಂದು ರಾಷ್ಟ್ರದ ಮೂಲಭೂತ ಸೌಕರ್ಯಕ್ಕೆ ಭದ್ರ ಬುನಾದಿ ಹಾಕಿದವರು ಕೂಡ ವಾಜಪೇಯಿ ಅವರೇ. ಇವತ್ತು ಭಾರತದ ರಸ್ತೆಗಳು ಉತ್ತಮವಾಗಿವೆ, ಬಹುದೊಡ್ಡ ರಸ್ತೆ ಸರಪಳಿಯನ್ನು ಕಾಣುತ್ತಿದ್ದೇವೆ. ಜಾಗತಿಕ ಗುಣಮಟ್ಟದ ರಸ್ತೆಗಳು ನಮ್ಮ ದೇಶದಲ್ಲಿವೆ ಎಂದು ಕೇಂದ್ರಸ್ ಸಚಿವರು ನುಡಿದರು.
ಅಟಲ್ ಅವರ ಅತ್ಯುತ್ತಮ ಆಡಳಿತವನ್ನು ಪ್ರಧಾನಿ ನರೇಂದ್ರ ಮೋದಿ ಅನುದಿನವೂ ಸ್ಮರಿಸುವಂತೆ ಮಾಡಿ, ಅಟಲ್ ಅವರ ಜನ್ಮದಿನವನ್ನು ಸುಶಾಸನ ದಿನ ಎಂದು ಘೋಷಣೆ ಮಾಡಿದರು. ಜನರಿಗೆ ಭರವಸೆ ಕೊಡುತ್ತೇನೆ. ಮುಂದೆ ಕರ್ನಾಟಕದಲ್ಲಿ ಉತ್ತಮ ಆಡಳಿತ ಬಂದೇ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಸಮಾಜದಲ್ಲಿ ನೆಮ್ಮದಿ ಇಲ್ಲ. ಕುಟುಂಬಗಳಲ್ಲಿ ಏನಾಗುತ್ತಿದೆ ಎಂದು ನೋಡಿದರೆ ಆತಂಕ ಆಗುತ್ತದೆ. ಟೆಕ್ನಾಲಜಿ ಬೆಳೆಯುತ್ತಿದೆ, ಆರ್ಥಿಕವಾಗಿ ಶಕ್ತಿವಂತರಾಗುತ್ತಿದ್ದೇವೆ. ಬೆಳಗ್ಗೆ ಎದ್ದು ಟೀವಿ ಹಾಕುವುದಕ್ಕೆ ಭಯವಾಗುತ್ತದೆ. ಯಾರಿಗೂ ನೆಮ್ಮದಿ ಇಲ್ಲ. ನಾನು ಇದೇ ಕಾರಣಕ್ಕೆ ಶಾಲಾ ಹಂತದಲ್ಲಿಯೇ ಭಗವದ್ಗೀತೆ ಬೋಧನೆಯ ಮಾಡಬೇಕು ಎಂದು ಹೇಳಿದೆ. ಅದಕ್ಕೆ ರಾಜಕೀಯ ಬೆರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕರು ಹಾಗೂ ಗಣಿತ ವಿಭಾಗದ ಮುಖ್ಯಸ್ಥರಾದ ಪ್ರೊ. ಗೋವಿಂದನ್ ರಂಗರಾಜನ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ. ಎಸ್. ಚಂದ್ರಶೇಖರ ಶೆಟ್ಟಿ, ಬೇಸ್ ಮತ್ತು ಪ್ರಯೋಗ ಸಂಸ್ಥೆಗಳ ಸ್ಥಾಪಕರಾದ ಡಾ. ಹೆಚ್.ಎಸ್. ನಾಗರಾಜು ಅವರಿಗೆ 2025ನೇ ಸಾಲಿನ ಅಟಲ್ ಪುರಸ್ಕಾರ ಪ್ರದಾನ ಮಾಡಲಾಯಿತು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು, ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು, ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಕೃಷ್ಣೇಗೌಡ ಅವರು ಉಪಸ್ಥಿತರಿದ್ದರು.
*ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಡೋಲಾಯಮಾನ ಸ್ಥಿತಿಯಲ್ಲಿದೆ: ಬಸವರಾಜ ಬೊಮ್ಮಾಯಿ*
*ಶಿಕ್ಷಣ ರಾಜಕೀಯ ಮುಕ್ತವಾಗಬೇಕು: ಬಸವರಾಜ ಬೊಮ್ಮಾಯಿ*
ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಡೋಲಾಯಮಾನ ಸ್ಥಿತಿಯಲ್ಲಿದೆ. ರಾಜ್ಯದ ಮಕ್ಕಳ ಭವಿಷ್ಯ ಬರೆಯಬೇಕೆಂದರೆ ಎನ್ ಇಪಿ ಜಾರಿಯಾಗಬೆಕು ರಾಜಕೀಯ ಕಾರಣಕ್ಕೆ ಶಿಕ್ಷಣ ವ್ಯವಸ್ಥೆ ಹಾಳು ಮಾಡುವ ಕೆಲಸ ಆಗಬಾರದು. ಶಿಕ್ಷಣ ರಾಜಕೀಯ ಮುಕ್ತವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಅವರು ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101 ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಸುಶಾಸನ ದಿನಾಚರಣೆ ಅಟಲ್ ಪುರಸ್ಕಾರ 2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಆರು ದಶಕಗಳ ಕಾಲ ಪರಿಶುದ್ಧ ರಾಜಕಾರಣ ಮಾಡಿದ್ದರು. ಅವರ ನಡೆ ನುಡಿಯಲ್ಲಿ ವ್ಯತ್ಯಾಸ ಇರಲಿಲ್ಲ. ಅಧಿಕಾರಕ್ಜೆ ಬರುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಸುಮಾರು ನಲವತ್ತೈದು ವರ್ಷ ಹೋರಾಟ ಮಾಡಿಕೊಂಡು ಬಂದಿದ್ದರು. ಅಂತವರ ಕೈಯಲ್ಲಿ ಅಧಿಕಾರ ಬಂದಾಗ ಯಾವರೀತಿ ನಡೆಸುತ್ತಾರೆ ಎಂದು ನಿರೀಕ್ಷೆ ಇತ್ತು. ಜನನಾಯಕನ ಕೈಯಲ್ಲಿ ಅಧಿಕಾರ ಬಂದಾಗ ಹೇಗೆ ನಡೆಸುತ್ತಾರೆ ಎಂದು ವಾಜಪೇಯಿಯವರು ತೋರಿಸಿಕೊಟ್ಟರು ಎಂದು ಹೇಳಿದರು.

ಮಹಾತ್ಮಾ ಗಾಂಧಿ ರಾಮರಾಜ್ಯ ಸ್ವರಾಜ್ಯದ ಕಲ್ಪನೆ ಕೊಟ್ಟು ಹೋಗಿದ್ದಾರೆ. ವಾಜಪೇಯಿ ಅವರು ಈಗ ಬೇಕಾಗಿರುವುದು ಸುರಾಜ್ಯ ಎಂದು ಅವರು ಸುರಾಜ್ಯದ ಕಲ್ಪನೆ ಕೊಟ್ಟರು. ಎರಡನೇಯದ್ದು ಲಾಲ ಬಹಾದ್ದೂರ ಶಾಸ್ತ್ರಿ ಯವರು ಜೈ ಜವಾನ್ ಜೈ ಕಿಸಾನ್ ಅಂದರು. ಸ್ವಾತಂತ್ರ್ಯ ಬಂದ ಮೇಲೆ ದೇಶದ ವಿಭಜನೆ ಮತ್ತೆ ನಮ್ಮ ಮೇಲೆ ಯುದ್ದ ಸಾರಿದ್ದರು. ಲಾಲ್ ಬಹದ್ದೂರು ಶಾಸ್ತ್ರಿಯವರು ಜೈ ಜವಾನ್ ಜೈಕಿಸಾನ್ ಅಂದರು ಆಗ ಆಹಾರದ ಕೊರತೆ ಇತ್ತು. ಹೀಗಾಗಿ ಸೈನಿಕ ಮತ್ತು ರೈತರ ಅಗತ್ಯ ಇತ್ತು. ಇವತ್ತಿನ ಭಾರತ ಹಿಂದುಳಿಯಬಾರದು ಎಂದು ವಾಜಪೇಯಿ ಅವರು ಜೈ ವಿಜ್ಞಾನ ಎಂದರು. ಅವರ 101 ನೇ ಜಯಂತಿ ಕಾರ್ಯಕ್ರಮ ನಾಡಿರುವುದು ಅತ್ಯಂತ ಸುಸ್ತ್ಯ ಕಾರ್ಯ ಎಂದರು.
*ವಿಭಿನ್ನ ನಾಯಕ*
ಅಶ್ವತ್ಥ್ ನಾರಾಯಣ ವಿಭಿನ್ನ ವಾಗಿರುವ ರಾಜಕೀಯ ನಾಯಕ ಎಲ್ಲರೂ ಮಾಡಿರುವುದನ್ನು ಅವರು ಮಾಡುವುದಿಲ್ಲ. ಅವರು ಮಾಡಿದ್ದನ್ನು ಎಲ್ಲರೂ ಮಾಡಬೇಕೆನ್ನುತ್ತಾರೆ. ದೇಶಪ್ರೇಮ ಅವರಲ್ಲಿ ಇದೆ. ದೂರದೃಷ್ಟಿಯ ಶಿಕ್ಷಣ ಸಚಿವರು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿನಾಶಕ ವ್ಯವಸ್ಥೆ ಬಂದಿದೆ. ಅದನ್ನು ತಡೆಯಲ ಎನ್ ಇಪಿ ಜಾರಿ ಮಾಡಿದರು. ದೇಶದಲ್ಲಿ ಎನ್ ಇಪಿ ಯಾರೂ ಜಾರಿ ಮಾಡಿರಲಿಲ್ಲ. ಕರ್ನಾಟಕ ಪ್ರಥಮ ರಾಜ್ಯವಾಗಲು ಅಶ್ವತ್ಥ್ ನಾರಾಯಣ ಕಾರಣ. ಒಂದೂವರೆ ವರ್ಷ ತಜ್ಞರ ಸಮಿತಿ ಮಾಡಿ, ವಿಶ್ವ ವಿದ್ಯಾಲಯಗಳಿಗೆ ಹೋಗಿ ನಂತರ ಎನ್ ಇಪಿ ಜಾರಿಗೆ ತಂದರು. ಈ ಥರ ವ್ಯವಧಾನ ರಾಜಕೀಯ ನಾಯಕರಿಗೆ ಇರುವುದಿಲ್ಲ. ಅಶ್ವತ್ಥ್ ನಾರಾಯಣ ಅವರು ಹನ್ನೊಂದು ಹೊಸ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಲು ತೀರ್ಮಾನ ಮಾಡಿದರು. ಚಾಮರಾಜನಗರ, ಮಂಡ್ಯ, ಹಾವೇರಿ ಕೊಪ್ಪಳ ಸೇರಿ ಹನ್ನೊಂದು ಜಿಲ್ಲೆಗಳಲ್ಲಿ ಮಾಡಿದ್ದೇವೆ. ಚಾಮರಾಜನಗರದಲ್ಲಿ ವಿಶ್ವ ವಿದ್ಯಾಲಯ ಮಾಡಿದ್ದಕ್ಕೆ ಚಾಮರಾಜನಗರದ ಒಂದು ವಿದ್ಯಾರ್ಥಿನಿ ಬಂದು ನನಗೆ ಧನ್ಯವಾದ ಹೇಳಿದಳು. ಅಲ್ಲಿ ಈಗ ಸುಮಾರು ಐದು ನೂರು ವಿದ್ಯಾರ್ಥಿ ಗಳು ಪಿಜಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಬಿಳಿಯಾನೆ ಆಗಿರುವ ವಿವಿ ಗಳಿಗೆ ಕೋಟ್ಯಂತರ ರೂ ಖರ್ಚು ಮಾಡುತ್ತಿದ್ದಾರೆ. ಆದರೆ, ಹೊಸದಾಗಿ ಬಂದಿರುವ ವಿವಿಗಳಿಗೆ ಯಾವದೇ ಹಣ ಕೊಡುತ್ತಿಲ್ಲ. ಈ ಬಗ್ಗೆ ನಿಮ್ಮ ಆತ್ಮ ವುಮರ್ಶೆ ಮಾಡಿಕೊಳ್ಳಿ ಎಂದು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.
ಚಾಲುಕ್ಯರ ಆರನೇ ವಿಕ್ರಮಾದಿತ್ಯ ಆಡಳಿತ ಮಾಡುವುದು ಮತ್ತು ಆಳ್ವಿಕೆ ಮಾಡುವುದು ಬೇರೆ ಅಂತ ಹೇಳಿದ್ದಾನೆ. ಆಡಳಿತ ಮಾಡುವವರು ಆಳ್ವಿಕೆ ಮಾಡುತ್ತಿದ್ದಾರೆ. ಕಟ್ಟುವುದು ಬಹಳ ಕಷ್ಟ ಕೆಡುವುದು ಬಹಳ ಸುಲಭ. ಮೊದಲು ಯಾರ ಬಳಿ ಭೂಮಿ ಇತ್ತು ಅವರು ಜಗತ್ತನ್ನು ಆಳುತ್ತಿದ್ದರು. ನಂತರ ಯಾರ ಬಳಿ ದುಡ್ಡಿದೆ, ಬ್ರಿಟೀಷರು ಕರ್ನಾಟಕಕ್ಕಿಂತ ಸಣ್ಣ ದೇಶ 139 ದೇಶಗಳನ್ನು ಆಳಿದರು. 21 ನೆ ಶತಮಾನ ಜ್ಞಾನ ಇದ್ದವರ ಶತಮಾನ. ಪ್ರಧಾನಿ, ಸಿಎಂಗಳು ಜ್ಞಾನ ಇದ್ದವರನ್ನು ಭೇಟಿಯಾಗಲು ಬಯಸುತ್ತಾರೆ. ಮೊದಲು ಪಿಎಂಗಳು ದೆಹಲಿಗೆ ಹೋಗುತ್ತಿದ್ದರು. ಈಗ ಬೆಂಗಳೂರಿಗೆ ಬರುತ್ತಾರೆ. ಇನ್ಫಿಸಿಸ್, ವಿಪ್ರೊಗಳಿಗೆ ಭೇಟಿ ನೀಡುತ್ತಾರೆ. ನಮ್ಮ ದೇಶದ ಮಕ್ಕಳು ಇತರ ದೇಶಗಳ ಮಕ್ಕಳಿಗೆ ಪೈಪೋಟಿ ಕೊಡಲು ಕಲಿಸಬೇಕು. ಎನ್ ಇ ಪಿಯಲ್ಲಿ ಕಲಾ ವಿಷಯಗಳ ಜೊತೆಗೆ ವಿಜ್ಞಾನವನ್ನು ಕಲಿಯಲು ಅವಕಾಶ ಇದೆ. ಆದರೆ, ಎನ್ ಇಪಿ ಮುಂದುವರೆಯಲಿಲ್ಲ. ಅದಕ್ಕೆ ಪರ್ಯಾಯ ಮಾಡಲಿಲ್ಲ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಡೋಲಾಯಮಾನ ಸ್ಥಿತಿಯಲ್ಲಿದೆ. ರಾಜ್ಯದ ಮಕ್ಕಳ ಭವಿಷ್ಯ ಬರೆಯಬೇಕೆಂದರೆ ಎನ್ ಇಪಿ ಜಾರಿಯಾಗಬೆಕು ರಾಜಕೀಯ ಕಾರಣಕ್ಕೆ ಶಿಕ್ಷಣ ವ್ಯವಸ್ಥೆ ಹಾಳು ಮಾಡುವ ಕೆಲಸ ಆಗಬಾರದು. ರಾಜಕೀಯ ಮುಕ್ತವಾಗಬೇಕು ಎಂದು ಹೇಳಿದರು.
*ಶಿಕ್ಷಣ ಕ್ರಾಂತಿ ಆಗಬೇಕು*
ಹಳ್ಳಿ ಮಕ್ಕಳು ಬಹಳ ಕಷ್ಟದಲ್ಲಿ ಇದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಹಳ್ಳಿಗಳಲ್ಲಿ ಪಬ್ಕಿಕ್ ಶಾಲೆಗಳನ್ನು ಮಾಡಿದ್ದಾರೆ. ರಾಜ್ಯ ಸರ್ಕಾರ ಇನ್ನಷ್ಟು ಪಬ್ಲಿಕ್ ಶಾಲೆಗಳನ್ನು ಮಾಡಲು ಹೊರಟಿದೆ ಒಳ್ಳೆಯದು. ನಮ್ಮ ಮಕ್ಕಳಿಗೆ ಪ್ರತಿಭೆ ಕೊರತೆಯಿಲ್ಲ. ನಾನು ಸಿಎಂ ಆಗಿದ್ದಾಗ 30 ಸಾವಿರ ಶಾಲಾ ಕೊಠಡಿ ನಿರ್ಮಿಸಲು ತೀರ್ಮಾನಿಸಿ 10 ಸಾವಿರ ಕೊಠಡಿ ನಿರ್ಮಿಸಿದ್ದೇವು ಈಗ ಯೋಜನೆ ನಿಂತಿದೆ. ಕಂಠಪಾಠದ ಶಿಕ್ಷಣ ನಿಲ್ಲಬೇಕು. ಶಿಕ್ಷಣದಲ್ಲಿ ಕ್ರಾಂತಿಯಾದರೆ ದೇಶದಲ್ಲಿ ಕ್ರಾಂತಿಯಾಗುತ್ತದೆ. ಎಲ್ಲ ಶಿಕ್ಷಣವನ್ನು ನೌಕರಿಗೆ ಮಾಡುತ್ತೇವೆ ಉದ್ಯೋಗ ಅರಸುವ ಶಿಕ್ಷಣ ಬಹಳ ದಿನ ಇರುವುದಿಲ್ಲ. ಉದ್ಯೊಗ ಕೊಡುವ ಶಿಕ್ಷಣ ಆರಂಭಿಸಬೇಕು.
ವಾಜಪೇಯಿ ಅವರು ಸರ್ವ ಶಿಕ್ಷಣ ಅಭಿಯಾನ ಆರಂಭಿಸಿ ಶಾಲೆಗಳಿಗೆ ಸುಣ್ಣ ಬಣ್ಣ ಹಚ್ಚುವ ಕೆಲಸ ಮಾಡಿದರು. ಪ್ರಾಥಮಿಕ ಮಾಧ್ಯಮಿಕ ಶಿಕ್ಷಣ ರಾಜ್ಯ ಸರ್ಕಾರದ ಜವಾಬ್ದಾರಿ ಶಿಕ್ಷಣ ದುಬಾರಿಯಾಗಬಾರದು. ಕೆಂಪೇಗೌಡ ಫೌಂಡೇಶನ್ ಅವರು ಬದಲಾವಣೆಯ ಬೀಜ ಬಿತ್ತಬೇಕು. ಕೆಂಪೇಗೌಡರು ಸುಶಾನ ಮಾಡಿದ್ದರು. ಅದೇ ರೀತಿ ವಿಜಯನಗರ ಸಾಮ್ರಾಜ್ಯದಲ್ಲಿ ನಡೆಯಿತು. ರಾಜ್ಯದಲ್ಲಿ ಜನಕೇಂದ್ರಿತ ಆಡಳಿತ ನಡೆಯಬೇಕು. ಪವರ್ ಪೊಲಿಟಿಕ್ಸ್ ಬೇಡ, ಪೀಪಲ್ಸ್ ಪೊಲಿಟಿಕ್ಸ್ ಮಾಡಿ ಎಂದು ಜನ ಸಾಮನ್ಯರು ಈ ಪ್ರಶ್ನೆ ಕೇಳುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ, ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಅಧ್ಯಕ್ಷ ಡಾ. ಕೃಷ್ಣೇಗೌಡ ಹಾಜರಿದ್ದರು. ಈ ಸಂದರ್ಭದಲ್ಲಿ ಐಐಎಸ್ಸಿ ನಿರ್ದೇಶಕ ಪ್ರೊ ಗೋವಿಂದ ರಂಗರಾಜನ್, ನಿವೃತ್ತ ಕುಲಪತಿ ಡಾ ಚಂದ್ರಶೇಖರ ಶೆಟ್ಟಿ, ಬೇಸ್ ಸಂಸ್ಥೆ ಸಂಸ್ಥಾಪಕ ಡಾ. ನಾಗರಾಜ್ ಅವರಿಗೆ ಅಟಲ್ ಪುರಸ್ಕಾರ ನೀಡಿ ಗೌರವಿಸಲಾಯಿತು.
