IMG 20251226 WA0026

ದಾವಣಗೆರೆ : ಶಾಮನೂರು ಶಿವಶಂಕರಪ್ಪ: ಶಿವಗಣಾರಾಧನೆ ಮತ್ತು ನುಡಿನಮನ ಕಾರ್ಯಕ್ರಮ

Genaral STATE

*ಶಾಮನೂರು ಶಿವಶಂಕರಪ್ಪನವರ ನಿಧನದಿಂದ ನಾಡಿಗೆ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟ*

*ಅವರೊಬ್ಬ ಜಾತ್ಯಾತೀತ ಹಾಗೂ ಜನಪ್ರಿಯ ನಾಯಕ*

*ಎಲ್ಲ ರಾಜಕೀಯ ಪಕ್ಷದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಅಜಾತಶತ್ರು*

*ಕಷ್ಟದಲ್ಲಿರುವವರಿಗೆ ಸದಾ ನೆರವಾಗುವ ಅವರ ಬದುಕು ಸಾರ್ಥಕ- ಮುಖ್ಯಮಂತ್ರಿ ಸಿದ್ದರಾಮಯ್ಯ*

ದಾವಣಗೆರೆ, ಡಿಸೆಂಬರ್ 26: ಜಾತ್ಯಾತೀತ ಹಾಗೂ ಜನಪ್ರಿಯ ನಾಯಕರೆನಿಸಿದ್ದ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ನಾಡಿಗೆ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮಾಜಿ ಸಚಿವ ದಿ.ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

*ಇಳಿವಯಸ್ಸಿನಲ್ಲಿಯೂ ಅತ್ಯಂತ ಕ್ರೀಯಾಶೀಲ*

ಶಾಮನೂರು ಶಿವಶಂಕರಪ್ಪ ಅವರು ದೇಶ ಕಂಡಂತಹ ಹಿರಿಯ ಶಾಸಕ, ಮಾಜಿ ಮಂತ್ರಿ ಹಾಗೂ ದಾವಣಗೆರೆಯ ನಗರಸಭೆ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಖಜಾಂಚಿಯಾಗೀ ಸುಧೀರ್ಘ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅವರ ಜನ್ಮದಿನಾಚರಣೆಯಲ್ಲಿ ಹಾಗೂ ದಾಲ್ ಮಿಲ್ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದು, ಶ್ರೀಯುತರು ಶತಾಯುಷಿಗಳಾಗುತ್ತಾರೆ ಎಂಬ ನಂಬಿಕೆಯಿತ್ತು. ಅವರ ಅಗಲಿಕೆಯಿಂದ ನಾಡಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ. ತಮ್ಮ ಇಳಿವಯಸ್ಸಿನಲ್ಲಿಯೂ ಅತ್ಯಂತ ಕ್ರೀಯಾಶೀಲರಾಗಿದ್ದರು ಎಂದರು.

ವೀರಶೈವ ಮಹಾಸಭಾದ ರಾಷ್ಟ್ರಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆನು. ಬಿಜಾಪುರದ ಅಕ್ಕಮಹಾದೇವಿ ಮಹಿಳಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಜಗದ್ಗುರು ಬಸವಣ್ಣನವರ ಛಾಯಾಚಿತ್ರ ಕಡ್ಡಾಯಗೊಳಿಸುವ ತೀರ್ಮಾನವನ್ನು ಅಭಿನಂದಿಸಲು ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

*ಜನಮನ್ನಣೆಗೆ ಪಾತ್ರರಾಗಿದ್ದ ನಾಯಕ*

ಅವರೊಬ್ಬ ಜಾತ್ಯಾತೀತ ಹಾಗೂ ಜನಪ್ರಿಯ ನಾಯಕ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಪ್ರಬಲವಿಲ್ಲದಿದ್ದರೂ, ಆ ಕ್ಷೇತ್ರದಲ್ಲಿ ಜನಮನ್ನಣೆಗೆ ಪಾತ್ರರಾಗಿದ್ದರಲ್ಲದೇ, ಆರು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದರು. ಸದಾ ಚೈತನ್ಯಶೀಲರಾಗಿದ್ದ ಶಾಮನೂರು ಶಿವಶಂಕರಪ್ಪನವರು ಮುಂದಿನ ಚುನಾವಣೆಯಲ್ಲಿಯೂ ಭಾಗವಹಿಸುವ ಹುರುಪನ್ನು ತೋರಿದ್ದರು. ಎಲ್ಲ ರಾಜಕೀಯ ಪಕ್ಷದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಅಜಾತಶತ್ರುವಾಗಿದ್ದರು ಎಂದರು.

*ಕೊಡುಗೈದಾನಿ*

ಬಡವರು, ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಲು ಟ್ರಸ್ಟ್ ಮೂಲಕ ನೆರವಾಗುವ ಕೊಡುಗೈದಾನಿಯಾಗಿದ್ದರು. ಪ್ರತಿಯೊಬ್ಬರಿಗೂ ಹುಟ್ಟು ಆಕಸ್ಮಿಕ, ಆದರೆ ಸಾವು ಖಚಿತ, ಈ ನಡುವಿನ ಪಯಣದಲ್ಲಿ ಬದುಕಿನ ಸಾರ್ಥಕತೆ ಕಂಡುಕೊಳ್ಳುವುದು ಮುಖ್ಯ. ದು:ಖದಲ್ಲಿರುವವರಿಗೆ ಸದಾ ನೆರವಾಗುವ ಅವರ ಬದುಕು ನಿಜಕ್ಕೂ ಸಾರ್ಥಕ ಎಂದರು.

*ಬಾಪೂಜಿ ವಿದ್ಯಾಸಂಸ್ಥೆ ಮೂಲಕ ಶೈಕ್ಷಣಿಕ ಕ್ರಾಂತಿ*

ಕೇವಲ ಜವಳಿ ಕೇಂದ್ರವಾಗಿದ್ದ ದಾವಣಗೆರೆಯನ್ನು ವಿದ್ಯಾಕಾಶಿ ಮಾಡಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಬಾಪೂಜಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಸಹಸ್ರಾರು ಬದುಕಿಗೆ ದಾರಿದೀಪವಾಗಿದ್ದರು. ಉದ್ಯಮಿಯಾಗೀ, ಕೈಗಾರಿಕೋದ್ಯಮಿಯಾಗೀ, ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾಗಿ, ರಾಜಕಾರಣಿಯಾಗಿ ಸುದೀರ್ಘ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಮಹಾನ್ ಚೇತನ ಶಾಮನೂರು ಶಿವಶಂಕರಪ್ಪನವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬವರ್ಗ ಹಾಗೂ ಅಭಿಮಾನಿವರ್ಗಕ್ಕೆ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಕಾರ್ಯಕ್ರಮ ದ Video

*ಶಾಮನೂರು ಶಿವಶಂಕರಪ್ಪ ಅವರ ಆದರ್ಶಗಳನ್ನು ಎಲ್ಲರೂ ಪಾಲನೆ ಮಾಡೋಣ: ಬಸವರಾಜ ಬೊಮ್ಮಾಯಿ*

ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಕರ್ನಾಟಕಕ್ಕೆ ಆದರ್ಶಮಯ ಜೀವನ ಬಿಟ್ಟು ಹೋಗಿದ್ದಾರೆ‌ ಅವರ ಆದರ್ಶಗಳನ್ನು ಎಲ್ಲರೂ ಪಾಲನೆ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ನುಡಿನಮನ ಸಲ್ಲಿಸಿದರು.

ದಾವಣಗೆರೆಯಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಸಚಿವರು, ಶಾಸಕರಾಗಿದ್ದ ಲಿಂಗೈಕ್ಯ ಡಾ. ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.

ಶಾಮನೂರು ಶಿವಶಂಕರಪ್ಪ ಅವರು ಬಸವಣ್ಣನವರ ಕಾಯಕ ನಿಷ್ಠೆ ಮತ್ತು ದಾಸೋಹ ನಡೆಸಿಕೊಟ್ಟವರು. ಅವರಿಗೆ ಸಮಯ ಪ್ರಜ್ಞೆ ಸ್ಥಿತ ಪ್ರಜ್ಞೆ ಇದ್ದಿದ್ದರಿಂದ ವ್ಯಾಪಾರದಲ್ಲೂ ಯಶಸ್ವಿಯಾದರು. ಸಾಮಜಿಕ ಮತ್ತು ರಾಜಕೀಯ ರಂಗದಲ್ಲೂ ಯಶಸ್ಸಿ ಆಗಿದ್ದಾರೆ. ಬಾಪೂಜಿ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಖ್ಯಾತಿ ಶಾಮನೂರು ಅವರಿಗಿದೆ. ಅದರಲ್ಲಿ ನೂರಾರು ಜನರಿಗೆ ಉದ್ಯೋಗ ಲಕ್ಷಾಂತರ ಜನರಿಗೆ ಆರೊಗ್ಯ ಭಾಗ್ಯ ಕೊಟ್ಟಿದ್ದಾರೆ. ಶಿವಶಂಕರಪ್ಪ ಅವರು ಲೆಕ್ಕದಲ್ಲಿ ಬಹಳ ಪಕ್ಕಾ ಇದ್ದರು.

ಯಾರಿಗಾದರೂ ಏನಾದರು ಕೊಡುವುದಿದ್ದರೆ ನೆನಪು ಮಾಡಿ ಕೊಡುತ್ತಿದ್ದರು. ತೆಗೆದುಕೊಳ್ಳುವುದಿದ್ದರೆ ಅಷ್ಟೇ ನೆನಪು ಮಾಡಿ ತೆಗೆದುಕೊಳ್ಳುತ್ತಿದ್ದರು. ಅವರು ವಯಸ್ಸಿಗೆ ಮೀರಿ ಸ್ನೇಹ ಬೆಳೆಸಿದ್ದರು. ನಾವು ವಯಸ್ಸಿನಲ್ಲಿ ಸಣ್ಣವರಿದ್ದರೂ ಮನಸ್ಸು ಬಿಚ್ಚಿ ಮಾತನಾಡುವ ವಾತಾವರಣ ನಿರ್ಮಾಣ ಮಾಡುತ್ತಿದ್ದರು.

ಅವರಿಗೆ ಹಾಸ್ಯ ಪ್ರಜ್ಞೆ ಬಹಳ ಇತ್ತು. ಜೀವನ ಉತ್ಸಾಹವನ್ನು ಸದಾಕಾಲ ಜೀವಂತ ಇಟ್ಟಿದ್ದರು. ಅವರ ಬದುಕು ಪೂರ್ಣಮಯ ಬದುಕು. ಅವರ ಬದುಕು ದಾವಣಗೆರೆಗೆ ಮಾತ್ರ ಸೀಮಿತ ಅಲ್ಲ ಇಡೀ ಕರ್ನಾಟಕಕ್ಕೆ ಆದರ್ಶಮಯ ಜೀವನ ಬಿಟ್ಟು ಹೋಗಿದ್ದಾರೆ‌ ಅವರ ಆದರ್ಶಗಳನ್ನು ಪಾಲನೆ ಮಾಡೋಣ ಎಂದು ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಶ್ರೀಗಳಾದ ಪ್ರಸನ್ನ ರೇಣುಕ ವೀರಸೋಮೇಶ್ವರ ಜಗದ್ಗುರುಗಳು, ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳು, ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಗಳು, ದಾವಣಗೆರೆ ಅನುಭವ ಮಂಟಪದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಗಳು, ತರಳಬಾಳು ಶ್ರೀಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಲಿಂಗಾಯತ ಪಂಚಮಶಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಸಚಿವರು ಮತ್ತಿತರರು ಉಪಸ್ಥಿತರಿದ್ದರು.