IMG 20251226 WA0064

ಪಾವಗಡ : ಅದ್ದೂರಿಯಾಗಿ ನಡೆದ ಸುಬ್ರಮಣ್ಯೇಶ್ವರನ ಜಾತ್ರಾ ಮಹೋತ್ಸವ.!

DISTRICT NEWS ತುಮಕೂರು

 

ಅದ್ದೂರಿಯಾಗಿ ನಡೆದ ಸುಬ್ರಮಣ್ಯೇಶ್ವರನ ಜಾತ್ರಾ ಮಹೋತ್ಸವ.

ಪಾವಗಡ: ಅಂತ್ಯ ಸುಬ್ರಹ್ಮಣ್ಯ ಎಂದೇ ಪ್ರಖ್ಯಾತಿಗಳಿಸಿರುವ ತಾಲ್ಲೂಕಿನ ನಾಗಲಮಡಿಕೆ ಗ್ರಾಮದ ಸುಬ್ರಮಣ್ಯೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು.
ರಥೋತ್ಸವದ ಪ್ರಯುಕ್ತ ಮಹನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪ್ರಕಾರೋತ್ಸವ, ದೀಪೋತ್ಸವ ಇತ್ಯಾದಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಜಾತ್ರೆಯ ಪ್ರಯುಕ್ತ, ಸರ್ವ ಸೇವೆ, ಉತ್ಸವ, ಮುತ್ತಿನಪಲ್ಲಕ್ಕಿ, ಮಯೂರ ವಾಹನ ಉತ್ಸವ, ಅಭಿಷೇಕ, ಹೋಮ, ಹವನ ಹಂಸ ವಾಹನ ಉತ್ಸವ, ಗಜ ವಾಹನ ಉತ್ಸವ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಅನ್ನದ ರಾಶಿಯ ಮೇಲೆ ನಾಗರ ವಿಗ್ರಹವನ್ನು ಇಟ್ಟು ಶಾಸ್ತ್ರೋಕ್ತವಾಗಿ ಪೂಜೆಯನ್ನು ನಡೆಸಲಾಯಿತು

Video

.

ಶುಕ್ರವಾರ ಪುಷ್ಯ ಶುದ್ಧ ಷಷ್ಠಿ ಮಧ್ಯಾಹ್ನ 12-20 ಕ್ಕೆ ಸರಿಯಾಗಿ ಶುಭ ಅಭಿಜಿತ ಮೀನ ಲಗ್ನದಲ್ಲಿ ವಲ್ಲೀ ದೇವಸೇನಾ ಸಮೇತ ಸುಬ್ರಹ್ಮಣ್ಯೇಶ್ವರ ಬ್ರಹ್ಮ ರಥೋತ್ಸವಕ್ಕೆ ಶಾಸಕ ಹೆಚ್ ವಿ ವೆಂಕಟೇಶ್, ಮಾಜಿ ಸಚಿವ ವೆಂಕಟರಮಣಪ್ಪ, ತಾಲೂಕು ದಂಡಾಧಿಕಾರಿ ರವಿ ಮತ್ತು ಇತರೆ ಗಣ್ಯರು ಚಾಲನೆ ನೀಡಿದರು.

ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ಭಕ್ತ ಸಮೂಹ ಸುಬ್ರಹ್ಮಣ್ಯೇಶ್ವರನನ್ನು ಮನದಲ್ಲಿ ನೆನೆದು ದವಳ ಸಿಕ್ಕಿಸಿದ ಬಾಳೆಹಣ್ಣನ್ನು ರಥದ ಕಡೆ ಎಸೆದು ಸಾವಿರಾರು ಭಕ್ತರು ನಮಿಸಿದರು.

ಕ್ಷೇತ್ರದ ಇತಿಹಾಸ : ಹಿಂದೆ ನಾಗಲಮಡಿಕೆಯಲ್ಲಿ ಅನ್ನಂಭಟ್ಟರೆಂಬ ಋತ್ವಿಕರು ವಾಸವಾಗಿದ್ದರು. ಇವರು ಮನೆ ದೇವರಾದ ಕುಕ್ಕೆ ಸುಬ್ರಹ್ಮಣ್ಯ ರಥೋತ್ಸವಕ್ಕೆ ಪ್ರತೀ ವರ್ಷ ಹೋಗುತ್ತಿದ್ದರು. ವೃದ್ಧರಾದ ನಂತರ ಅನ್ನಂಭಟ್ಟರು ಕುಕ್ಕೆಗೆ ಹೋಗಲು ಹೊರಟಾಗ ರಥ ಎಳೆಯುವ ಸಮಯಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇತ್ತ ಕುಕ್ಕೆಯಲ್ಲಿ ರಥವನ್ನು ಎಳೆದರೂ ಚಲಿಸಲಿಲ್ಲ. ಆಗ ಶ್ರೀ ಸ್ವಾಮಿ ವಟು ರೂಪದಲ್ಲಿ ಕಾಣಿಸಿಕೊಂಡು ಭಕ್ತನೊಬ್ಬ ಬರುತ್ತಿದ್ದಾನೆ. ಆತ ಬಂದು ಹಗ್ಗ ಹಿಡಿದ ನಂತರ ರಥ ಚಲಿಸುತ್ತದೆ ಎಂದು ಅದೃಶ್ಯವಾಗಿದ್ದು, ನಂತರ ಅದೇ ವಟು ರೂಪದಲ್ಲಿ ಬಂದು ನೀನು ಕುಕ್ಕೆಗೆ ಇನ್ನು ಮುಂದೆ ಬರುವುದು ಬೇಡ, ನೀನಿರುವಲ್ಲಿಗೆ ನಾನು ಬರುತ್ತೇನೆ ಎಂದು ಆಶೀರ್ವದಿಸಿದರಂತೆ. ಜತೆಗೆ ಕುಕ್ಕೆ ದೇವಾಲಯದಲ್ಲಿರುವ ನಾಗಾಭರಣವನ್ನೂ ಸಹ ಕೊಡಿಸಿದರು. ಊರಿಗೆ ಬಂದ ಅನ್ನಂಭಟ್ಟರು ಉಳುಮೆ ವಾಡುವಾಗ ನೇಗಿಲ ಮುಂದೆ ಸಾಗದಂತೆ ನಿಂತಿತು. ಅಗೆದು ನೋಡಿದಾಗ ಏಳು ಹೆಡೆಯ ನಾಗರಕಲ್ಲು ಸಿಕ್ಕಿದೆ. ಅದನ್ನು ಉತ್ತರ ಪಿನಾಕಿನಿ ದಡದಲ್ಲಿ ಪ್ರತಿಷ್ಠಾಪಿಸಿದರು. ಹೀಗಾಗಿ ಸ್ಥಳಕ್ಕೆ ನಾಗಲಮಡಿಕೆ ಎಂದು ಹೆಸರು ಬಂದಿದೆ.

ಸುಬ್ರಮಣ್ಯೇಶ್ವರನಿಗೆ ಹರಕೆ ತೀರಿಸುವುದರಿಂದ ಚರ್ಮವ್ಯಾಧಿ ಮತ್ತು ಮಕ್ಕಳಿಗೆ ಕಿವಿ ಸೋರುವುದು ನಿಲ್ಲುತ್ತದೆ ಎಂಬ ನಂಬಿಕೆ ರಾಜ್ಯ ಮತ್ತು ಹೊರರಾಜ್ಯಗಳಿಂದ ಆಗಮಿಸಿರುವ ಭಕ್ತರದಾಗಿತ್ತು.

ಜಾತ್ರೆ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಂತೆ ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಕ್ರಮವಹಿಸಲಾಗಿತ್ತು.

ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ
ಅಪರಾ ಜಿಲ್ಲಾಧಿಕಾರಿಗಳಾದ ಡಾ.ತಿಪ್ಪೇಸ್ವಾಮಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪುರುಷೋತ್ತಮ್, ಡಿ. ವೈ. ಎಸ್. ಪಿ ಮಂಜುನಾಥ್, ಎ. ಸಿ ಗೋಟೂರು ಶಿವಪ್ಪ, ಪುರಸಭಾ ಮಾಜಿ ಅಧ್ಯಕ್ಷ ಪಿ ಹೆಚ್ ರಾಜೇಶ್, ಶಂಕರ್ ರೆಡ್ಡಿ, ಎನ್. ಆರ್. ಅಶ್ವಥ್ ಮತ್ತು ಇತರೆ ಮುಖಂಡರು ಭಾಗವಹಿಸಿದ್ದರು.

ವರದಿ : ಶ್ರೀನಿವಾಸಲು ಎ